ರಕುಲ್ ಪ್ರೀತ್ ಸಿಂಗ್ ಮದುವೆ ಎಲ್ಲಿ? ಯಾವಾಗ? ವರನ ಹಿನ್ನೆಲೆ ಏನು?

|

Updated on: Feb 11, 2024 | 6:16 PM

Rakul Preet Sing: ಕನ್ನಡ ಸಿನಿಮಾ ಮೂಲಕ ನಟನೆಗೆ ಕಾಲಿಟ್ಟ ರಕುಲ್ ಪ್ರೀತ್ ಸಿಂಗ್ ಈಗ ತೆಲುಗು, ತಮಿಳಿನ ಬಲು ಬೇಡಿಕೆಯ ನಟಿ. ರಕುಲ್ ಇದೀಗ ತಮ್ಮ ಬಾಯ್​ಫ್ರೆಂಡ್ ಜೊತೆ ವಿವಾಹವಾಗುತ್ತಿದ್ದು, ಮದುವೆ ಕುರಿತಾದ ಆಸಕ್ತಿಕರ ವಿಷಯಗಳು ಇಲ್ಲಿವೆ.

ರಕುಲ್ ಪ್ರೀತ್ ಸಿಂಗ್ ಮದುವೆ ಎಲ್ಲಿ? ಯಾವಾಗ? ವರನ ಹಿನ್ನೆಲೆ ಏನು?
Follow us on

ಕನ್ನಡ ಸಿನಿಮಾ (Sandalwood) ಮೂಲಕ ನಟನೆಗೆ ಎಂಟ್ರಿ ಕೊಟ್ಟ ರಕುಲ್ ಪ್ರೀತ್ ಸಿಂಗ್ (Rakul Preet Singh) ತೆಲುಗು, ತಮಿಳು ಹಾಗೂ ಬಾಲಿವುಡ್​ನಲ್ಲಿ ದೊಡ್ಡ ಹೆಸರು ಗಳಿಸಿದ್ದಾರೆ. 2009 ರಲ್ಲಿ ಬಿಡುಗಡೆ ಆದ ‘ಗಿಲ್ಲಿ’ ಸಿನಿಮಾ ಮೂಲಕ ರಕುಲ್ ಪ್ರೀತ್ ಸಿಂಗ್ ಚಿತ್ರರಂಗಕ್ಕೆ ಎಂಟ್ರಿ ನೀಡಿದರು. ಅದಾದ ಬಳಿಕ ತೆಲುಗಿನಲ್ಲಿ ಸಣ್ಣ ಪುಟ್ಟ ಸಿನಿಮಾಗಳಲ್ಲಿ ನಟಿಸುತ್ತಾ ಬಂದ ರಕುಲ್ ಬಳಿಕ ರಾಮ್ ಚರಣ್, ಜೂ ಎನ್​ಟಿಆರ್, ತಮಿಳಿನಲ್ಲಿ ಸೂರ್ಯ, ಕಾರ್ತಿ ಇನ್ನೂ ಹಲವಾರು ಸ್ಟಾರ್ ನಟರೊಟ್ಟಿಗೆ ನಟಿಸಿದ್ದಾರೆ. ಇದೀಗ ರಕುಲ್ ಪ್ರೀತ್ ಸಿಂಗ್ ತಮ್ಮ ಬಹುಕಾಲದ ಗೆಳೆಯ ಜಾಕಿ ಬಗ್ನಾನಿಯನ್ನು ವಿವಾಹವಾಗುತ್ತಿದ್ದಾರೆ. ಇಲ್ಲಿದೆ ರಕುಲ್ ಮದುವೆ ಬಗ್ಗೆ ಮಾಹಿತಿ.

ರಕುಲ್ ಪ್ರೀತ್ ಸಿಂಗ್ ಮದುವೆ ಫೆಬ್ರವರಿ 21ರಂದು ಆಪ್ತ ಗೆಳೆಯರು, ಬಂಧುಗಳ ಸಮ್ಮುಖದಲ್ಲಿ ನಡೆಯಲಿದೆ. ಬಾಲಿವುಡ್ ನಟ ನಟಿಯರು ವಿದೇಶದಲ್ಲಿ ಅಥವಾ ಜೈಪುರ, ಜೈಸ್ಮೆಲ್ಲರ್​ಗಳಲ್ಲಿ ಮದುವೆಯಾದರೆ ರಕುಲ್ ಪ್ರೀತ್ ಸಿಂಗ್ ಮಾತ್ರ ಗೋವಾನಲ್ಲಿ ವಿವಾಹವಾಗುತ್ತಿದ್ದಾರೆ. ಈಗಾಗಲೆ ಮದುವೆ ತಯಾರಿಗಳು ಮುಗಿದ್ದು ರಕುಲ್ ಹಾಗೂ ಜಾಕಿ ಬಗ್ನಾನಿ ಅತಿಥಿಗಳನ್ನು ಮದುವೆಗೆ ಆಹ್ವಾನಿಸುತ್ತಿದ್ದಾರೆ.

ರಕುಲ್-ಜಾಕಿ ಡೆಸ್ಟಿನೇಷನ್ ವೆಡ್ಡಿಂಗ್ ಆಗುತ್ತಿದ್ದು, ರಕುಲ್​ರ ಮದುವೆ ಉಡುಗೆಯನ್ನು ಮನೀಷ್ ಮಲ್ಹೋತ್ರಾ ತರುಣ್ ತಲ್ಲಿಯಾನಿ ಅವರುಗಳು ವಿನ್ಯಾಸ ಮಾಡಲಿದ್ದಾರೆ. ಸಬ್ಯಸಾಚಿ ಬ್ರ್ಯಾಂಡ್​ನ ಉಡುಗೆಗಳನ್ನು ಸಹ ಮದುವೆಯ ವಿವಿಧ ಸಂದರ್ಭಗಳಲ್ಲಿ ರಕುಲ್ ಹಾಗೂ ಜಾಕಿ ಬಗ್ನಾನಿ ಧರಿಸಲಿದ್ದಾರೆ. ಇವರ ಮದುವೆಯ ಊಟದ ಮೆನ್ಯೂ ಸಹ ಸಖತ್ ಭಿನ್ನವಾಗಿರಲಿದೆಯಂತೆ.

ಇದನ್ನೂ ಓದಿ:ಮದುವೆ ಸಂಭ್ರಮದಲ್ಲಿ ರಕುಲ್ ಪ್ರೀತ್ ಸಿಂಗ್, ಗೆಳತಿಯರೊಟ್ಟಿಗೆ ಬ್ಯಾಚುಲರ್ ಪಾರ್ಟಿ

ಇನ್ನು ರಕುಲ್ ಪ್ರೀತ್ ಸಿಂಗ್ ಮದುವೆಯಾಗುತ್ತಿರುವ ಜಾಕಿ ಬಗ್ನಾನಿ, ಸ್ವತಃ ನಟ ಹಾಗೂ ನಿರ್ಮಾಪಕ ಆಗಿದ್ದಾರೆ. 2009ರಲ್ಲಿ ನಾಯಕ ನಟನಾಗಿ ಎಂಟ್ರಿ ನೀಡಿದ ಜಾಕಿ ಬಗ್ನಾನಿ 2018ರ ವರೆಗೆ ಹಲವು ಸಿನಿಮಾಗಳಲ್ಲಿ ನಟಿಸಿದರು. ಆದರೆ ಜಾಕಿಗೆ ದೊಡ್ಡ ಯಶಸ್ಸು ಸಿಗಲಿಲ್ಲ. 2018ರ ಬಳಿಕ ಸಿನಿಮಾಗಳಲ್ಲಿ ನಟಿಸುವುದನ್ನು ಬಿಟ್ಟ ಜಾಕಿ, ಸಿನಿಮಾ ನಿರ್ಮಾಣದ ಕಡೆಗೆ ಹೆಚ್ಚು ಗಮನ ಹರಿಸಿದರು. 2016ರ ‘ಸರಬ್ಜಿತ್’ ಸಿನಿಮಾ ಮೂಲಕ ಸಿನಿಮಾ ನಿರ್ಮಾಣ ಪ್ರಾರಂಭಿಸಿದ ಜಾಕಿ ಬಗ್ನಾನಿ ಈ ವರೆಗೆ 10 ಸಿನಿಮಾಗಳನ್ನು ನಿರ್ಮಿಸಿದ್ದು, ಅವರ ನಿರ್ಮಾಣದ ಮೂರು ಸಿನಿಮಾಗಳು ಬಿಡುಗಡೆಗೆ ರೆಡಿಯಾಗಿವೆ. ಬಾಲಿವುಡ್​ನ ದೊಡ್ಡ-ದೊಡ್ಡ ಸ್ಟಾರ್ ನಟರ ಸಿನಿಮಾಗಳನ್ನು ಜಾಕಿ ನಿರ್ಮಿಸಿದ್ದಾರೆ.

ರಕುಲ್ ಪ್ರೀತ್ ಸಿಂಗ್ ಈಗಲೂ ತೆಲುಗು, ತಮಿಳು ಹಾಗೂ ಹಿಂದಿ ಸಿನಿಮಾ ರಂಗದಲ್ಲಿ ಬ್ಯುಸಿಯಾಗಿದ್ದಾರೆ. ರಕುಲ್ ನಟನೆಯ ತಮಿಳು ಸಿನಿಮಾ ‘ಅಲಯಾನ್’ ಇತ್ತೀಚೆಗಷ್ಟೆ ಬಿಡುಗಡೆ ಆಗಿ ಹಿಟ್ ಎನಿಸಿಕೊಂಡಿದೆ. ಕಮಲ್ ಹಾಸನ್ ಜೊತೆಗೆ ‘ಇಂಡಿಯನ್ 2’ ಸಿನಿಮಾದಲ್ಲಿ ರಕುಲ್ ನಟಿಸುತ್ತಿದ್ದಾರೆ. ಹಿಂದಿಯ ‘ಮೇರಿ ವೈಫ್ ಕಾ ರೀಮೇಕ್’ ಹೆಸರಿನ ಸಿನಿಮಾದಲ್ಲಿಯೂ ಸಹ ರಕುಲ್ ಪ್ರೀತ್ ಸಿಂಗ್ ನಟಿಸುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ