ನಟಿ ರಕುಲ್ ಪ್ರೀತ್ ಸಿಂಗ್ (Rakul Preet Singh) ಮತ್ತು ನಿರ್ಮಾಪಕ ಜಾಕಿ ಭಗ್ನಾನಿ ಫೆಬ್ರವರಿ 21ರಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಈ ಮೊದಲು ವಿದೇಶದಲ್ಲಿ ಇವರು ಡೆಸ್ಟಿನೇಶನ್ ವೆಡ್ಡಿಂಗ್ ಆಗಲು ನಿರ್ಧರಿಸಿದ್ದರು. ಆದರೆ ಅದೇ ಸಮಯಕ್ಕೆ ಮದುವೆ ಸ್ಥಳವನ್ನು ಬದಲಾಯಿಸಿ ಗೋವಾದ ಐಷಾರಾಮಿ ಹೋಟೆಲ್‌ನಲ್ಲಿ ಮದುವೆಯಾಗುವ ನಿರ್ಧಾರಕ್ಕೆ ಇವರು ಬಂದಿದ್ದಾರೆ. ರಕುಲ್ ಮತ್ತು ಜಾಕಿ ದಕ್ಷಿಣ ಗೋವಾದ ಐಟಿಸಿ ಗ್ರ್ಯಾಂಡ್ ಹೋಟೆಲ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಕೆಲವೇ ಅತಿಥಿಗಳು ಮತ್ತು ಕುಟುಂಬದವರು ಈ ಮದುವೆಗೆ ಹಾಜರಿ ಹಾಕುತ್ತಿದ್ದಾರೆ. ಈ ಹೋಟೆಲ್ ಬಾಡಿಗೆ ಅನೇಕರಿಗೆ ಅಚ್ಚರಿ ತಂದಿದೆ.
ಐಟಿಸಿ ಗ್ರ್ಯಾಂಡ್ ಹೋಟೆಲ್‌ನಲ್ಲಿ ಬರೋಬ್ಬರಿ 246 ರೂಂಗಳು ಇವೆ. ಇದು ಐಷಾರಾಮಿ ಹೋಟೆಲ್. 45 ಎಕರೆ ಭೂಮಿಯಲ್ಲಿ ಹರಡಿರುವ ಈ ಹೋಟೆಲ್ ಅತ್ಯಂತ ಶಾಂತ ಪ್ರದೇಶದಲ್ಲಿದೆ. ಜಾಕಿ ಮತ್ತು ರಕುಲ್ ಈ ಹೋಟೆಲ್ ಆಯ್ಕೆ ಮಾಡಿದ ಬಳಿಕ ಅದರ ಬಗ್ಗೆ ತಿಳಿಯುವ ಕುತೂಹಲ ಅನೇಕರಿಗೆ ಮೂಡಿದೆ.
‘ಮೇಕ್ ಮೈ ಟ್ರಿಪ್’ ಪ್ರಕಾರ ಗೋವಾದ ಐಟಿಸಿ ಗ್ರ್ಯಾಂಡ್ ಹೋಟೆಲ್‌ನಲ್ಲಿ ಪ್ರತಿ ರೂಂನ ಬೆಲೆ ಒಂದು ರಾತ್ರಿಗೆ 19 ಸಾವಿರ ರೂಪಾಯಿ ಇಂದ ಆರಂಭ ಆಗಿ 75 ಸಾವಿರ ರೂಪಾಯಿವರೆಗೆ ಇದೆ. ಇದರ ಜೊತೆಗೆ ಒಂದಷ್ಟು ತೆರಿಗೆಗಳನ್ನು ಕೂಡ ಇದು ಒಳಗೊಂಡಿದೆ. ಗೋವಾದ ಈ ಹೋಟೆಲ್‌ನಲ್ಲಿ ಮದುವೆಗೆ ಎಲ್ಲಾ ಸಿದ್ಧತೆಗಳನ್ನು ಏರ್ಪಡಿಸಲಾಗಿದೆ. ಮೂರು ದಿನಗಳ ಕಾಲ ಗೋವಾದಲ್ಲಿ ಮದುವೆ ನಡೆಯಲಿದೆ.
ಫೆಬ್ರವರಿ 19ರಿಂದ ವಿವಾಹ ಪೂರ್ವ ಕಾರ್ಯಕ್ರಮಗಳು ಪ್ರಾರಂಭವಾಗಲಿವೆ. ಈ ಮದುವೆ ಸಂಪೂರ್ಣ ಪರಿಸರ ಸ್ನೇಹಿಯಾಗಿ ಇರಲಿದೆ. ರಕುಲ್ ಮತ್ತು ಜಾಕಿ ಯಾವುದೇ ಅತಿಥಿಗೆ ಪ್ರಿಂಟ್ ಮಾಡಿದ ಮದುವೆ ಪ್ರಮಾಣಪತ್ರವನ್ನು ನೀಡಿಲ್ಲ. ಎಲ್ಲವೂ ಡಿಜಿಟಲ್ ಇನ್ವಿಟೇಷನ್ ಆಗಿದೆ. ಅದೇ ರೀತಿ ಮದುವೆ ಸ್ಥಳದಲ್ಲಿ ಪಟಾಕಿ ಸಿಡಿಸುವುದಿಲ್ಲ ಎಂದು ಈವೆಂಟ್ ಮ್ಯಾನೇಜರ್ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಅವರು ಅನೇಕರಿಗೆ ಮಾದರಿ ಆಗಿದ್ದಾರೆ.
ರಕುಲ್ ಪ್ರೀತ್ ಸಿಂಗ್ ಮತ್ತು ಜಾಕಿ ಹಲವು ವರ್ಷಗಳಿಂದ ಒಟ್ಟಾಗಿ ಸಮಯ ಕಳೆಯುತ್ತಿದ್ದಾರೆ. ಇಬ್ಬರೂ ವಿವಿಧ ಪಾರ್ಟಿಗಳು ಮತ್ತು ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಲಾಕ್‌ಡೌನ್ ಸಮಯದಲ್ಲಿ ಇಬ್ಬರೂ ಒಟ್ಟಿಗೆ ಇದ್ದರು ಎನ್ನಲಾಗಿದೆ.
ಇದನ್ನೂ ಓದಿ: ಒಂದು ಒಳ್ಳೆಯ ಕಾರಣಕ್ಕೆ ಮದುವೆಯಲ್ಲಿ ಆ ಪದ್ಧತಿಯೇ ಬೇಡ ಎಂದ ರಕುಲ್ ಪ್ರೀತ್ ಸಿಂಗ್
ರಕುಲ್ ಪ್ರೀತ್ ಸಿಂಗ್ ಕನ್ನಡದ ‘ಗಿಲ್ಲಿ’ ಚಿತ್ರದಿಂದ ಬಣ್ಣದ ಬದುಕು ಆರಂಭಿಸಿದರು. ನಂತರ ಹಿಂದಿ, ತೆಲುಗು ಭಾಷೆಗಳಲ್ಲಿ ನಟಿಸಿ ಅವರು ಫೇಮಸ್ ಆಗಿದ್ದಾರೆ. ಅವರ ಅಭಿಮಾನಿ ಬಳಗ ದಿನ ಕಳೆದಂತೆ ಹಿರಿದಾಗುತ್ತಲೇ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:42 pm, Thu, 15 February 24