ಜನಪ್ರಿಯ ನಟಿ ರಕುಲ್ ಪ್ರೀತ್ ಸಿಂಗ್ (Rakul Preet Singh) ಅವರು ಇತ್ತೀಚೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಫೆಬ್ರವರಿ 21ರಂದು ನಟ-ನಿರ್ಮಾಪಕ ಜಾಕಿ ಭಗ್ನಾನಿ (Jackky Bhagnani) ಜೊತೆ ಅವರ ಮದುವೆ ನಡೆಯಿತು. ಗೋವಾದಲ್ಲಿ ನಡೆದ ಈ ವಿವಾಹ ಸಮಾರಂಭಕ್ಕೆ ನೂರಾರು ಸೆಲೆಬ್ರಿಟಿಗಳು ಹಾಜರಿ ಹಾಕಿದ್ದರು. ವಿಶೇಷ ಏನೆಂದರೆ, ತಮ್ಮ ಮದುವೆಗೆ ಬಂದ ಪ್ರತಿ ಅತಿಥಿಯ ಹೆಸರಿನಲ್ಲಿ ರಕುಲ್ ಪ್ರೀತ್ ಸಿಂಗ್ ಹಾಗೂ ಜಾಕಿ ಭಗ್ನಾನಿ ಅವರು ಒಂದೊಂದು ಗಿಡ ನೆಟ್ಟಿದ್ದಾರೆ. ಆ ಮೂಲಕ ಅವರು ಎಲ್ಲರಿಗೂ ಮಾದರಿ ಆಗಿದ್ದಾರೆ. ಈ ದಂಪತಿ ಮಾಡಿದ ಪುಣ್ಯದ ಕೆಲಸವನ್ನು ಅಭಿಮಾನಿಗಳು ಶ್ಲಾಘಿಸಿದ್ದಾರೆ.
ರಕುಲ್ ಪ್ರೀತ್ ಸಿಂಗ್ ಮತ್ತು ಜಾಕಿ ಭಗ್ನಾನಿ ಅವರು ಬಹುಕಾಲದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಗೋವಾದಲ್ಲಿ ಫೆ.21ರಂದು ಸಪ್ತಪದಿ ತುಳಿಯುವ ಮೂಲಕ ತಮ್ಮ ಪ್ರೀತಿಯನ್ನು ಅವರು ಇನ್ನೊಂದು ಹಂತಕ್ಕೆ ತೆಗೆದುಕೊಂಡು ಹೋದರು. ಈ ಜೋಡಿಯ ಮದುವೆಗೆ 520 ಮಂದಿ ಸಾಕ್ಷಿ ಆಗಿದ್ದರು. ಹಾಗಾಗಿ ತಮ್ಮ ಮದುವೆ ಬಂದ 520 ಜನರ ಹೆಸರಿನಲ್ಲಿ ಅವರು ಸಸಿ ನೆಟ್ಟಿದ್ದಾರೆ.
ಅಷ್ಟಕ್ಕೂ ರಕುಲ್ ಪ್ರೀತ್ ಸಿಂಗ್ ಹಾಗೂ ಜಾಕಿ ಭಗ್ನಾನಿ ಅವರು ಈ ರೀತಿ ಮಾಡಿದ್ದು ಯಾಕೆ? ಅದರ ಹಿಂದೆ ಮಹತ್ವವಾದ ಕಾರಣ ಇದೆ. ದೊಡ್ಡ ದೊಡ್ಡ ಸಮಾರಂಭಗಳು ನಡೆದಾಗ ಪರಿಸರಕ್ಕೆ ಒಂದಲ್ಲ ಒಂದು ರೀತಿಯಲ್ಲಿ ಹಾನಿ ಆಗುತ್ತದೆ. ಸೆಲೆಬ್ರಿಟಿಗಳ ಮದುವೆ ಎಂದರೆ ಅದು ಅದ್ದೂರಿ ಆಗಿರುತ್ತದೆ. ಈ ಸಮಾರಂಭದಿಂದ ಪರಿಸರಕ್ಕೆ ಆದ ಹಾನಿಯನ್ನು ಕಡಿಮೆ ಮಾಡುವ ಉದ್ದೇಶದಿಂದ ರಕುಲ್ ಪ್ರೀತ್ ಸಿಂಗ್ ಮತ್ತು ಜಾಕಿ ಭಗ್ನಾನಿ ಅವರು 520 ಗಿಡಗಳನ್ನು ನೆಟ್ಟಿದ್ದಾರೆ.
ಇದನ್ನೂ ಓದಿ: ರಕುಲ್ ಪ್ರೀತ್ ಸಿಂಗ್ ಧರಸಿರುವ ಈ ಹೊಳೆಯುವ ಉಡುಪಿನ ಬೆಲೆ ಎಷ್ಟು ಲಕ್ಷ ಅಂದಾಜಿಸಿ
ಗಿಡ ನೆಟ್ಟ ಬಳಿಕ ಅದರ ಪ್ರಮಾಣ ಪತ್ರವನ್ನು ಪ್ರತಿ ಅತಿಥಿಗೂ ಕಳಿಸಿಕೊಡಲಾಗಿದೆ. ಈ ದಂಪತಿಯ ವಿವಾಹಕ್ಕೆ ಬಂದಿದ್ದ ನಟಿ ಪ್ರಗ್ಯಾ ಜೈಸ್ವಾಲ್ ಅವರಿಗೂ ಈ ಪ್ರಮಾಣ ಪತ್ರ ತಲುಪಿದೆ. ಅದನ್ನು ಅವರು ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಶೇರ್ ಮಾಡಿಕೊಂಡು ರಕುಲ್ ಪ್ರೀತ್ ಸಿಂಗ್ ಹಾಗೂ ಜಾಕಿ ಭಗ್ನಾನಿ ಅವರನ್ನು ಹೊಗಳಿದ್ದಾರೆ. ‘ಎಂಥಾ ಸುಂದರವಾದ ಮತ್ತು ಸ್ಫೂರ್ತಿದಾಯಕ ಕೆಲಸ’ ಎಂದು ಅವರು ಮೆಚ್ಚುಗೆ ಸೂಚಿಸಿದ್ದಾರೆ. ಈ ಪ್ರಮಾಣಪತ್ರ ವೈರಲ್ ಆಗಿದೆ. ಇದೇ ರೀತಿ ಎಲ್ಲರೂ ಪರಿಸರದ ಕಾಳಜಿ ತೋರಿಸಲಿ ಎಂದು ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ. ಇತ್ತೀಚೆಗೆ ನಟಿ ಜೂಹಿ ಚಾವ್ಲಾ ಅವರು ತಮ್ಮ ಮಗಳ ಹುಟ್ಟುಹಬ್ಬದ ದಿನ 1000 ಗಿಡಗಳನ್ನು ನೆಟ್ಟಿದ್ದು ಕೂಡ ಸುದ್ದಿ ಆಗಿತ್ತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.