‘ನಾನು ಕಚ್ಚಿದ್ದಲ್ಲ, ನನ್ನ ಡ್ರೈವರ್ ಕಚ್ಚಿದ್ದು..’; ಹಾವಿನ ಕಾರ್ಟೂನ್ ಮೂಲಕ ಸಲ್ಮಾನ್ ಕಾಲೆಳೆದ ರಾಮ್ ಗೋಪಾಲ್ ವರ್ಮಾ
Salman Khan | Ram Gopal Varma: ಇತ್ತೀಚೆಗೆ ಸಲ್ಮಾನ್ ಖಾನ್ ಹಾವಿನ ಕೈಯಲ್ಲಿ ಕಚ್ಚಿಸಿಕೊಂಡಿದ್ದು ದೊಡ್ಡ ಸುದ್ದಿಯಾಗಿತ್ತು. ಈ ಘಟನೆಯನ್ನು ಉಲ್ಲೇಖಿಸಿ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಸಲ್ಮಾನ್ ಕಾಲೆಳೆದಿದ್ದಾರೆ.
ಚಿತ್ರ ನಿರ್ದೇಶಕ ರಾಮ್ ಗೋಪಾಲ್ ವರ್ಮಾ (Ram Gopal Varma) ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟಿವ್. ವರ್ತಮಾನದ ಘಟನೆಗಳಿಗೆ ಅವರು ತಮ್ಮದೇ ವಿಧಾನದಲ್ಲಿ ಪ್ರತಿಕ್ರಿಯಿಸುತ್ತಿರುತ್ತಾರೆ. ಇದರಿಂದ ವಿವಾದಗಳನ್ನೂ ಮೈಮೇಲೆ ಎಳೆದುಕೊಳ್ಳುತ್ತಾರೆ. ಆದರೆ ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ತಮಗನಿಸಿದ್ದನ್ನು ಹೇಳುವ ಛಾತಿ ಅವರಿಗೆ ಸಿದ್ಧಿಸಿದೆ. ಇತ್ತೀಚೆಗೆ ಅಂದರೆ ಡಿಸೆಂಬರ್ 25ರಂದು ನಟ ಸಲ್ಮಾನ್ ಖಾನ್ಗೆ (Salman Khan) ಹಾವು ಕಚ್ಚಿದ್ದು ದೊಡ್ಡ ಸುದ್ದಿಯಾಗಿತ್ತು. ಸಲ್ಮಾನ್ಗೆ ಫಾರ್ಮ್ಹೌಸ್ನಲ್ಲಿ (Farmhouse) ಹಾವು ಕಚ್ಚಿದ ಪರಿಣಾಮ ಅವರು ಆಸ್ಪತ್ರೆಗೂ ದಾಖಲಾಗಿದ್ದರು. ಹುಟ್ಟುಹಬ್ಬಕ್ಕೆ ಕೇವಲ ಎರಡು ದಿನಗಳಿರುವಾಗ ಘಟನೆ ನಡೆದಿದ್ದು, ಅವರ ಅಭಿಮಾನಿಗಳಿಗೆ ಆತಂಕ ತಂದಿತ್ತು. ನಂತರ ಡಿಸೆಂಬರ್ 27ರಂದು ಸಲ್ಮಾನ್ ಜನ್ಮದಿನದ ಸಂದರ್ಭದಲ್ಲಿ ಮಾತನಾಡಿ ಆ ದಿನ ಏನಾಗಿತ್ತು ಎಂಬುದನ್ನೆಲ್ಲಾ ಎಳೆಎಳೆಯಾಗಿ ತೆರೆದಿಟ್ಟಿದ್ದರು. ಅಲ್ಲದೇ ತಾವೀಗ ಕ್ಷೇಮ ಎಂದೂ ಹೇಳಿ ಪ್ರಕರಣಕ್ಕೆ ತೆರೆ ಎಳೆದಿದ್ದರು. ಆದರೆ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಈ ಘಟನೆಗೆ ತುಸು ತಡವಾಗಿ ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.
ಟ್ವಿಟರ್ನಲ್ಲಿ ಆರ್ಜಿವಿ ಮೀಮ್ ಒಂದನ್ನು ಹಂಚಿಕೊಂಡಿದ್ದು, ಅದನ್ನು ನೋಡಿದ ನೆಟ್ಟಿಗರು ಆರ್ಜಿವಿ ಕಾಲೆಳೆದ ರೀತಿಗೆ ಬಿದ್ದುಬಿದ್ದು ನಕ್ಕಿದ್ದಾರೆ. ರಾಮ್ ಗೋಪಾಲ್ ವರ್ಮಾ ಹೆಚ್ಚೇನೂ ಬರೆದಿಲ್ಲ, ಕೇವಲ ಒಂದು ಕಾರ್ಟೂನ್ ಹಂಚಿಕೊಂಡಿದ್ದಾರೆ. ಅದರಲ್ಲಿ ಹಾವೊಂದು ನ್ಯಾಯಾಲಯದ ಕಟೆಕಟೆಯಲ್ಲಿದೆ. ಅದು ‘ಕಚ್ಚಿರೋದು ನಾನಲ್ಲ.. ನನ್ನ ಡ್ರೈವರ್..’’ ಎಂದು ವಾದ ಮಂಡಿಸುತ್ತಿರುವಂತೆ ಕಾರ್ಟೂನ್ ರಚಿಸಲಾಗಿದೆ.
ಈ ಕಾರ್ಟೂನ್ 2002ರ ಸೆಪ್ಟೆಂಬರ್ನಲ್ಲಿ ಸಲ್ಮಾನ್ರ ಹಿಟ್ ಆಂಡ್ ರನ್ ಪ್ರಕರಣವನ್ನು ಹಿನ್ನೆಲೆಯಾಗಿಟ್ಟು ರಚಿಸಲಾಗಿದೆ. ಕುಡಿದು ವಾಹನ ಚಲಾಯಿಸುತ್ತಾ ವಾಹನ ಚಲಾಯಿಸಿ ಒಬ್ಬರ ಮರಣಕ್ಕೆ ಹಾಗೂ ಹಲವರ ನೋವಿಗೆ ಘಟನೆ ಕಾರಣವಾಗಿತ್ತು. ಇದರಲ್ಲಿ ಸಲ್ಮಾನ್ಗೆ ಐದು ವರ್ಷ ಜೈಲು ಶಿಕ್ಷೆಯನ್ನೂ ನೀಡಲಾಗಿತ್ತು. ಅಂತಿಮವಾಗಿ ಆಗ ಕಾರು ಚಲಾಯಿಸುತ್ತಿದ್ದದ್ದು ಸಲ್ಮಾನ್ ಡ್ರೈವರ್ ಎಂದು ಸಾಬೀತಾಗಿ, ಸಲ್ಮಾನ್ ಬಚಾವಾಗಿದ್ದರು. ಈ ಘಟನೆಯನ್ನು ಹಿನ್ನೆಲೆಯಾಗಿಟ್ಟು ಕಾರ್ಟೂನ್ ರಚಿಸಿದ್ದನ್ನು ಹಂಚಿಕೊಂಡಿರುವ ರಾಮ್ ಗೋಪಾಲ್ ವರ್ಮಾ, ಸಲ್ಮಾನ್ ಖಾನ್ ಕಾಲೆಳೆದಿದ್ದಾರೆ.
ಆರ್ಜಿವಿ ಹಂಚಿಕೊಂಡ ಕಾರ್ಟೂನ್ ಇಲ್ಲಿದೆ:
— Ram Gopal Varma (@RGVzoomin) December 29, 2021
ಚಿತ್ರಗಳ ವಿಷಯಕ್ಕೆ ಬಂದರೆ ಸಲ್ಮಾನ್ ಕಡೆಯದಾಗಿ ಕಾಣಿಸಿಕೊಂಡಿದ್ದು ‘ಅಂತಿಮ್: ದಿ ಫೈನಲ್ ಟ್ರುಥ್’ ಚಿತ್ರದಲ್ಲಿ. ಮಹೇಶ್ ಮಾಂಜ್ರೇಕರ್ ನಿರ್ದೇಶನದ ಈ ಚಿತ್ರದಲ್ಲಿ ಸಲ್ಮಾನ್ ಸೋದರಿ ಅರ್ಪಿತಾ ಅವರ ಪತಿ ಆಯುಷ್ ಶರ್ಮಾ ಖಳನಾಯಕನಾಗಿ ಕಾಣಿಸಿಕೊಂಡಿದ್ದರು. ರವಿ ಬಸ್ರೂರ್ ಸಂಗೀತ ನೀಡಿದ್ದ ಈ ಚಿತ್ರ ನಿರೀಕ್ಷೆ ಹುಟ್ಟುಹಾಕಿದ್ದರೂ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿಯಾಗಲಿಲ್ಲ.
ಸಲ್ಮಾನ್ ಸದ್ಯ ‘ಟೈಗರ್ 3’ ಚಿತ್ರದಲ್ಲಿ ಕತ್ರಿನಾ ಕೈಫ್ ಜತೆ ಕಾಣಿಸಿಕೊಳ್ಳುತ್ತಿದ್ದಾರೆ. ನಂತರ ‘ಕಿಕ್’ ಚಿತ್ರದ ಮುಂದುವರೆದ ಭಾಗದಲ್ಲಿ ಜಾಕ್ವೆಲಿನ್ ಫೆರ್ನಾಂಡಿಸ್ ಜತೆ ಬಣ್ಣಹಚ್ಚಲಿದ್ದಾರೆ. ಪ್ರಸ್ತುತ ರಿಯಾಲಿಟಿ ಶೋ ಬಿಗ್ ಬಾಸ್ 15ನ್ನು ನಡೆಸಿಕೊಡುತ್ತಿದ್ದಾರೆ.
ಇದನ್ನೂ ಓದಿ:
ಕಳೆದ ವರ್ಷ ತೆರೆಗೆ ಬಂದ ಕನ್ನಡದ ಸೂಪರ್ ಹಿಟ್ ಚಿತ್ರಗಳು ಇವು
ಇನ್ನೂ ಐದು ಬಯೋಪಿಕ್ನಲ್ಲಿ ನಟಿಸಲಿದ್ದಾರೆ ರಣವೀರ್ ಸಿಂಗ್? ‘83’ ಚಿತ್ರದಿಂದ ಬದಲಾಯ್ತು ಅದೃಷ್ಟ
Published On - 11:17 am, Sat, 1 January 22