ಪೂನಂ ಪಾಂಡೆ ಮಾಡಿದ್ದು ಸರಿ ಎಂದು ಬೆಂಬಲಕ್ಕೆ ನಿಂತ ರಾಮ್​ ಗೋಪಾಲ್​ ವರ್ಮಾ

ತಮ್ಮದೇ ಸಾವಿನ ಬಗ್ಗೆ ಫೇಕ್​ ನ್ಯೂಸ್​ ಹರಡಿಸಿದ್ದ ನಟಿ ಪೂನಂ ಪಾಂಡೆ ವಿರುದ್ಧ ಕೋಟ್ಯಂತರ ಜನರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಆದರೆ ನಿರ್ದೇಶಕ ರಾಮ್ ಗೋಪಾಲ್​ ವರ್ಮಾ ಅವರು ಪೂನಂ ಪಾಂಡೆ ಪರವಾಗಿ ಬ್ಯಾಟ್​ ಬೀಸಿದ್ದಾರೆ. ಈ ನಟಿ ಮಾಡಿದ್ದು ಸರಿ ಎಂದು ಅವರು ಬೆನ್ನು ತಟ್ಟಿದ್ದಾರೆ. ಅಲ್ಲದೇ ಪೂನಂ ಪಾಂಡೆಗೆ ಅವರು ದೀರ್ಘ ಆಯಸ್ಸು ಸಿಗಲಿ ಎಂದು ಶುಭ ಕೋರಿದ್ದಾರೆ.

ಪೂನಂ ಪಾಂಡೆ ಮಾಡಿದ್ದು ಸರಿ ಎಂದು ಬೆಂಬಲಕ್ಕೆ ನಿಂತ ರಾಮ್​ ಗೋಪಾಲ್​ ವರ್ಮಾ
ರಾಮ್​ ಗೋಪಾಲ್​ ವರ್ಮಾ, ಪೂನಂ ಪಾಂಡೆ

Updated on: Feb 04, 2024 | 9:10 AM

ನಿರ್ದೇಶಕ ರಾಮ್​ ಗೋಪಾಲ್​ ವರ್ಮಾ (Ram Gopal Varma) ಯಾವಾಗಲೂ ಡಿಫರೆಂಟ್​ ಆಗಿ ಆಲೋಚನೆ ಮಾಡುತ್ತಾರೆ. ಸದ್ಯಕ್ಕೆ ಎಲ್ಲರೂ ಪೂನಂ ಪಾಂಡೆಗೆ (Poonam Pandey) ಹಿಡಿಶಾಪ ಹಾಕುತ್ತಿದ್ದಾರೆ. ಆದರೆ ರಾಮ್​ ಗೋಪಾಲ್​ ವರ್ಮಾ ಮಾತ್ರ ಪೂನಂ ಪಾಂಡೆಗೆ ಬೆಂಬಲ ಸೂಚಿಸುತ್ತಿದ್ದಾರೆ. ಗರ್ಭಕಂಠದ ಕ್ಯಾನ್ಸರ್​ (Cervical Cancer) ಬಗ್ಗೆ ಜಾಗೃತಿ ಮೂಡಿಸಲು ಸುಳ್ಳು ಸುದ್ದಿ ಹಬ್ಬಿಸಿದ ನಟಿಯ ಹುಚ್ಚು ಸಾಹಸವನ್ನು ಆರ್​ಜಿವಿ ಶ್ಲಾಘಿಸಿದ್ದಾರೆ. ಈ ಬಗ್ಗೆ ಅವರು ಟ್ವೀಟ್​ ಮಾಡಿ, ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಜೊತೆಗೆ ಪೂನಂ ಪಾಂಡೆಯ ಇನ್​ಸ್ಟಾಗ್ರಾಮ್​ ಪೋಸ್ಟ್​ ಅನ್ನು ಕೂಡ ರಾಮ್​ ಗೋಪಾಲ್​ ವರ್ಮಾ ಹಂಚಿಕೊಂಡಿದ್ದಾರೆ. ಇದಕ್ಕೆ ಜನರು ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ.

‘ಹೇ ಪೂನಂ ಪಾಂಡೆ… ಈ ಒಂದು ಕಾರಣಕ್ಕಾಗಿ ನೀವು ಇಟ್ಟಿರುವ ಹೆಜ್ಜೆಗೆ ಎಲ್ಲರಿಂದ ಕೆಲವು ಟೀಕೆಗಳು ಬರಬಹುದು. ಆದರೆ, ಸಾವಿನ ಸುಳ್ಳು ಸುದ್ದಿ ಮೂಲಕ ನೀವು ಮೂಡಿಸಿದ ಜಾಗೃತಿ ಮತ್ತು ಮಾಡಿದ ಸಾಧನೆಯನ್ನು ಯಾರೂ ಪ್ರಶ್ನಿಸಲು ಸಾಧ್ಯವಿಲ್ಲ. ಎಲ್ಲ ಕಡೆಗಳಲ್ಲೂ ಈಗ ಗರ್ಭಕಂಠದ ಕ್ಯಾನ್ಸರ್​ ಬಗ್ಗೆ ಚರ್ಚೆ ಹೆಚ್ಚಾಗಿದೆ. ನಿಮ್ಮಂತೆಯೇ ನಿಮ್ಮ ಆತ್ಮ ಕೂಡ ಸುಂದರವಾಗಿದೆ. ನಿಮಗೆ ಖುಷಿಯ ಜೊತೆ ದೀರ್ಘ ಆಯಸ್ಸು ಸಿಗಲಿ’ ಎಂದು ರಾಮ್​ ಗೋಪಾಲ್​ ವರ್ಮಾ ಹಾರೈಸಿದ್ದಾರೆ.

ಘಟನೆಯ ಹಿನ್ನೆಲೆ:

ಗರ್ಭಕಂಠದ ಕ್ಯಾನ್ಸರ್​ನಿಂದ ಪೂನಂ ಪಾಂಡೆ ಅವರು ಫೆಬ್ರವರಿ 2ರಂದು ನಿಧನರಾದರು ಎಂದು ಫೇಕ್​ ನ್ಯೂಸ್​ ಹರಡಿತು. ಸ್ವತಃ ಪೂನಂ ಪಾಂಡೆ ಅವರ ಸೋಶಿಯಲ್​ ಮೀಡಿಯಾ ಖಾತೆಯಲ್ಲಿ ಈ ಬಗ್ಗೆ ಸುದ್ದಿ ಪ್ರಕಟ ಮಾಡಿದ್ದರಿಂದ ಎಲ್ಲರೂ ಇದನ್ನು ನಿಜವೆಂದು ನಂಬಿದ್ದರು. ಅದರ ನಡುವೆ ಅನೇಕ ಪ್ರಶ್ನೆಗಳು ಹುಟ್ಟಿಕೊಂಡಿದ್ದವು. ಮೂರು ದಿನಗಳ ಹಿಂದೆ ಆರಾಮಾಗಿ ಓಡಾಡಿಕೊಂಡಿದ್ದ ಪೂನಂ ಪಾಂಡೆ ಅಚಾನಕ್​ ಆಗಿ ಸತ್ತರು ಎಂದರೆ ಅದರಲ್ಲಿ ಏನೋ ಅನುಮಾನ ಇದೆ ಎಂದು ಹಲವು ಕಮೆಂಟ್​ ಮಾಡಿದರು.

ಇದನ್ನೂ ಓದಿ: ಸುಳ್ಳು ಸುದ್ದಿಯಲ್ಲೂ ದಾಖಲೆ ಬರೆದ ಪೂನಂ ಪಾಂಡೆ; ಇಲ್ಲಿದೆ ವಿವರ..

‘ನಾನು ಬದುಕಿದ್ದೇನೆ’:

ಸುಳ್ಳು ಸುದ್ದಿ ಹರಡಿಸಿ 24 ಗಂಟೆ ಕಳೆದ ಬಳಿಕ ಸ್ವತಃ ಪೂನಂ ಪಾಂಡೆ ಅವರು ವಿಡಿಯೋ ಮೂಲಕ ಪ್ರತ್ಯಕ್ಷ ಆದರು. ‘ನಾನು ಬದುಕಿದ್ದೇನೆ’ ಎಂದು ಅವರು ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದರು. ಗರ್ಭಕಂಠದ ಕ್ಯಾನ್ಸರ್​ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ತಾವು ಫೇಕ್​ ನ್ಯೂಸ್​ ಹರಡಿದ್ದಾಗಿ ಅವರು ಹೇಳಿದ್ದಾರೆ. ಅಲ್ಲದೇ, ತಮ್ಮ ಕೆಲಸವನ್ನು ಅವರು ಸಮರ್ಥಿಸಿಕೊಂಡಿದ್ದಾರೆ. ನಟಿಯ ಈ ನಡೆಗೆ ಅನೇಕರಿಂದ ಟೀಕೆ ವ್ಯಕ್ತವಾಗಿದೆ. ಕೆಲವು ಕಡೆಗಳಲ್ಲಿ ಕೇಸ್​ ಕೂಡ ದಾಖಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us