ಇನ್ಮುಂದೆ ಕಂಡಕಂಡಲ್ಲಿ ಕಾಣಿಸಿಕೊಳ್ಳಲ್ಲ ಈ ಸೆಲೆಬ್ರಿಟಿಗಳು; ಕಾರಣ ಏನು?

ಬಿಗ್​ ಬಜೆಟ್​ ಸಿನಿಮಾಗಳು ಸೆಟ್ಟೇರಿದ ಬಳಿಕ ಕಲಾವಿದರ ಲುಕ್​ ರಿವೀಲ್​ ಆಗದಂತೆ ನೋಡಿಕೊಳ್ಳಲು ಸಿನಿಮಾ ತಂಡದವರು ಸಖತ್​ ಕಾಳಜಿ ವಹಿಸುತ್ತಾರೆ. ಈಗ ನಿತೇಶ್​ ತಿವಾರಿ ನಿರ್ದೇಶನದ ‘ರಾಮಾಯಣ’ ಸಿನಿಮಾ ತಂಡ ಕೂಡ ಈ ಬಗ್ಗೆ ಗಮನ ಹರಿಸುತ್ತಿದೆ. ಏಪ್ರಿಲ್​ನಲ್ಲಿ ರಾಮ ನವಮಿ ಪ್ರಯುಕ್ತ ಈ ಚಿತ್ರ ಸೆಟ್ಟೇರುವ ನಿರೀಕ್ಷೆ ಇದೆ.

ಇನ್ಮುಂದೆ ಕಂಡಕಂಡಲ್ಲಿ ಕಾಣಿಸಿಕೊಳ್ಳಲ್ಲ ಈ ಸೆಲೆಬ್ರಿಟಿಗಳು; ಕಾರಣ ಏನು?
ಸಾಯಿ ಪಲ್ಲವಿ, ರಣಬೀರ್​ ಕಪೂರ್​

Updated on: Mar 24, 2024 | 4:30 PM

ಬಾಲಿವುಡ್​ನಲ್ಲಿ ಸಿದ್ಧವಾಗಲಿರುವ ‘ರಾಮಾಯಣ’ (Ramayana) ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಈ ಸಿನಿಮಾದಲ್ಲಿ ರಣಬೀರ್​ ಕಪೂರ್​ (Ranbir Kapoor) ಅವರು ರಾಮನಾಗಿ ನಟಿಸಲಿದ್ದಾರೆ. ಸಾಯಿ ಪಲ್ಲವಿ (Sai Pallavi) ಅವರು ಸೀತೆಯಾಗಿ ಕಾಣಿಸಿಕೊಳ್ಳಲಿದ್ದಾರೆ. ರಾವಣನ ಪಾತ್ರಕ್ಕೆ ಯಶ್​ ಜೊತೆ ಮಾತುಕಥೆ ನಡೆಯುತ್ತಿದೆ ಎಂದು ಹೇಳಲಾಗಿದೆ. ಆದರೆ ಈ ಸುದ್ದಿ ಇನ್ನೂ ಅಧಿಕೃತವಾಗಿಲ್ಲ. ನಿತೇಶ್ ತಿವಾರಿ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಲಿದ್ದಾರೆ. ಶೂಟಿಂಗ್​ ಆರಂಭ ಆಗುವುದಕ್ಕೂ ಮುನ್ನ ಈ ಸಿನಿಮಾದ ಪ್ರಮುಖ ಕಲಾವಿದರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದನ್ನು ಕಡಿಮೆ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.

‘ದಂಗಲ್​’ ಖ್ಯಾತಿಯ ನಿರ್ದೇಶಕ ನಿತೇಶ್​ ತಿವಾರಿ ಅವರು ‘ರಾಮಾಯಣ’ ಸಿನಿಮಾಗೆ ನಿರ್ದೇಶನ ಮಾಡಲಿರುವುದರಿಂದ ಸಿನಿಪ್ರಿಯರಿಗೆ ಭರವಸೆ ಮೂಡಿದೆ. ಪೌರಾಣಿಕ ಕಥೆ ಆಧಾರಿತ ಸಿನಿಮಾ ಮಾಡಿ ಜನರನ್ನು ಮೆಚ್ಚಿಸುವುದು ಸುಲಭವಲ್ಲ. ಈ ಮೊದಲು ‘ಆದಿಪುರುಷ್​’ ಸಿನಿಮಾ ಮಾಡಿ ನಿರ್ದೇಶಕ ಓಂ ರಾವುತ್​ ಟ್ರೋಲ್​ಗೆ ಒಳಗಾಗಿದ್ದರು. ಈಗ ನಿತೇಶ್​ ತಿವಾರಿ ಅವರು ಯಾವ ರೀತಿ ಈ ಸಿನಿಮಾವನ್ನು ಕಟ್ಟಿಕೊಡಲಿದ್ದಾರೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ.

ಇದನ್ನೂ ಓದಿ: ಜಪಾನ್​​ನಲ್ಲಿ ಸಾಯಿ ಪಲ್ಲವಿ ಪಾರ್ಟಿ, ವಿಡಿಯೋ ವೈರಲ್

ಕಲಾವಿದರ ಲುಕ್​ ಬಹಿರಂಗ ಆಗದಂತೆ ನೋಡಿಕೊಳ್ಳಲು ಚಿತ್ರತಂಡದವರು ಸಖತ್​ ಕಾಳಜಿ ವಹಿಸುತ್ತಾರೆ. ಈಗ ‘ರಾಮಾಯಣ’ ಸಿನಿಮಾ ತಂಡ ಕೂಡ ಇದರ ಬಗ್ಗೆ ಗಮನ ಹರಿಸುತ್ತಿದೆ. ರಾಮನಾಗಿ ಕಾಣಿಸಿಕೊಳ್ಳಲಿರುವ ರಣಬೀರ್​ ಕಪೂರ್​, ಸೀತೆಯ ಪಾತ್ರ ಮಾಡಲಿರುವ ಸಾಯಿ ಪಲ್ಲವಿ ಸೇರಿದಂತೆ ಅನೇಕ ಕಲಾವಿದರು ಇನ್ಮುಂದೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದನ್ನು ನಿಲ್ಲಿಸಬೇಕು ಎಂದು ನಿರ್ದೇಶಕ ನಿತೇಶ್ ತಿವಾರಿ ಅವರು ಸೂಚಿಸಿದ್ದಾರೆ ಎಂದು ಕೆಲವು ಮಾಧ್ಯಮಗಳಲ್ಲಿ ಸುದ್ದಿ ಆಗಿದೆ.

ಇದನ್ನೂ ಓದಿ: ಸಾಯಿ ಪಲ್ಲವಿ ಜೊತೆ ಆಮಿರ್​ ಖಾನ್​ ಮಗನ ಸುತ್ತಾಟ; ಫೋಟೋ ವೈರಲ್​

ಈ ಬಹುನಿರೀಕ್ಷಿತ ಸಿನಿಮಾದ ಚಿತ್ರೀಕರಣ ಶೀಘ್ರದಲ್ಲೇ ಆರಂಭ ಆಗಲಿದೆ. ಏಪ್ರಿಲ್​ ತಿಂಗಳಲ್ಲಿ ರಾಮ ನವಮಿಯ ಪ್ರಯುಕ್ತ ಈ ಸಿನಿಮಾ ಸೆಟ್ಟೇರುವ ನಿರೀಕ್ಷೆ ಇದೆ. ಆಗ ಪಾತ್ರವರ್ಗದ ಬಗ್ಗೆ ನಿಖರ ಮಾಹಿತಿ ಸಿಗಲಿದೆ. ರಾಮಾಯಣದ ಕಥೆಯಲ್ಲಿ ಹಲವು ಪ್ರಮುಖ ಪಾತ್ರಗಳು ಇವೆ. ಅದಕ್ಕಾಗಿ ಹಲವು ಕಲಾವಿದರ ಜೊತೆ ಮಾತುಕತೆ ನಡೆಯುತ್ತಿದೆ. ಬಾಬಿ ಡಿಯೋಲ್​, ಅಮಿತಾಭ್​ ಬಚ್ಚನ್​, ರಕುಲ್​ ಪ್ರೀತ್​ ಸಿಂಗ್​, ಸನ್ನಿ ಡಿಯೋಲ್​ ಮುಂತಾದವರ ಹೆಸರುಗಳು ಕೇಳಿಬರುತ್ತಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.