ರಣ್ಬೀರ್ ಕಪೂರ್ (Ranbir Kapoor) ಹಾಗೂ ಆಲಿಯಾ ಭಟ್ (Alia Bhatt) ಭಾರತದ ನಂಬರ್ 1 ತಾರಾ ದಂಪತಿ. ಬಾಲಿವುಡ್ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆವ ನಟಿ ಆಲಿಯಾ ಭಟ್, ರಣ್ಬೀರ್ ಕಪೂರ್ ಸಹ ಬಾಲಿವುಡ್ ಟಾಪ್ ಐದು ಸೂಪರ್ ಸ್ಟಾರ್ಗಳಲ್ಲಿ ಒಬ್ಬರು. ಎರಡು ವರ್ಷಗಳ ಹಿಂದೆ ಈ ಜೋಡಿ ವಿವಾಹವಾಗಿದ್ದು ಇವರಿಗೆ ಮುದ್ದಾದ ಮಗುವೊಂದು ಜನಿಸಿದೆ. ವೃತ್ತಿ ಜೀವನದಲ್ಲಿ ಉತ್ತುಂಗದಲ್ಲಿರುವ ಈ ಜೋಡಿ ಇದೀಗ ಸ್ವಂತ ಮನೆಯೊಂದರ ನಿರ್ಮಾಣದಲ್ಲಿ ತೊಡಗಿದ್ದು, ಈ ಮನೆಗೆ ಭಾರಿ ಮೊತ್ತದ ಹೂಡಿಕೆಯನ್ನು ಆಲಿಯಾ ಹಾಗೂ ರಣ್ಬೀರ್ ಕಪೂರ್ ಮಾಡುತ್ತಿದ್ದಾರೆ. ಈ ಮನೆ ನಿರ್ಮಾಣವಾದ ಬಳಿಕ ಬಾಲಿವುಡ್ ಸೆಲೆಬ್ರಿಟಿಗಳ ಪೈಕಿ ಅತ್ಯಂತ ದುಬಾರಿ ಮನೆ ಹೊಂದಿದವರಾಗಲಿದ್ದಾರೆ ಆಲಿಯಾ ಹಾಗೂ ರಣ್ಬೀರ್.
ಮುಂಬೈನ ಬಾಂದ್ರಾನಲ್ಲಿ ಐಶಾರಾಮಿ ಮನೆಯನ್ನು ಆಲಿಯಾ ಭಟ್ ಹಾಗೂ ರಣ್ಬೀರ್ ಕಪೂರ್ ನಿರ್ಮಾಣ ಮಾಡುತ್ತಿದ್ದಾರೆ. ಈ ಮನೆಗೆ ಬರೋಬ್ಬರಿ 250 ಕೋಟಿ ರೂಪಾಯಿ ಹೂಡಿಕೆಯನ್ನು ಈ ತಾರಾ ಜೋಡಿ ಮಾಡಿದ್ದಾರೆ. ಶಾರುಖ್ ಖಾನ್ರ ಜನಪ್ರಿಯ ಮನೆ ಮನ್ನತ್ ಹಾಗೂ ಅಮಿತಾಬ್ ಬಚ್ಚನ್ರ ಜಲ್ಸಾ ಮನೆಗಿಂತಲೂ ದುಬಾರಿಯಾದ ಹೆಚ್ಚು ಐಶಾರಾಮಿ ಆದ ಮನೆ ಇದಾಗಲಿದೆ. ಮನೆಯ ನಿರ್ಮಾಣ ಕಾರ್ಯ ಕಳೆದ ಒಂದು ವರ್ಷದಿಂದ ಚಾಲ್ತಿಯಲ್ಲಿದೆ. ಇನ್ನು ಕೆಲವೇ ತಿಂಗಳಲ್ಲಿ ಮನೆಯ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ.
ಇದನ್ನೂ ಓದಿ:ಆಲಿಯಾ ಭಟ್ ಒಳ್ಳೆಯ ನಟಿ ಮಾತ್ರವಲ್ಲ, ಒಳ್ಳೆಯ ಉದ್ಯಮಿ ಸಹ ಹೌದು
ಐದು ಮಹಡಿಗಳನ್ನು ಒಳಗೊಂಡಿರುವ ಮನೆ ಇದಾಗಿದ್ದು, ಪಾರ್ಕಿಂಗ್, ಕಚೇರಿ, ನವೀನ ತಂತ್ರಜ್ಞಾನ ಹೊಂದಿರುವ ಸ್ವಿಮ್ಮೀಂಗ್ ಪೂಲ್, ಪಾರ್ಟಿ ಏರಿಯಾ, ಹಲವು ಬೆಡ್ರೂಂಗಳು, ತಂತ್ರಜ್ಞಾನ ಆಧರಿತ ಭದ್ರತೆ, ಸಿಬ್ಬಂದಿಗೆ ಪ್ರತ್ಯೇಕ ಕೊಠಡಿಗಳು, ಖಾಸಗಿ ಥಿಯೇಟರ್, ಗಾರ್ಡನ್ ಏರಿಯಾ, ಬಾಲ್ಕನಿ ಇನ್ನೂ ಹಲವು ಐಶಾರಾಮಿ ಅನುಕೂಲಗಳನ್ನು ಈ ಮನೆ ಒಳಗೊಂಡಿರಲಿದೆ. ಬಾಲಿವುಡ್ ಸೆಲೆಬ್ರಿಟಿ ಹೊಂದಿರುವ ಅತ್ಯಂತ ದುಬಾರಿ ಹಾಗೂ ಅತ್ಯಂತ ಐಶಾರಾಮಿ ಮನೆ ಇದಾಗಿರಲಿದೆ. ಅಂದಹಾಗೆ ಈ ಮನೆಯನ್ನು ರಣ್ಬೀರ್ ಹಾಗೂ ಆಲಿಯಾ ಅವರುಗಳು ಪುತ್ರಿ ರಾಹಾ ಹೆಸರಿಗೆ ಮಾಡಿದ್ದಾರಂತೆ. ಮನೆಗೆ ಮಗಳ ಹೆಸರನ್ನೇ ಇಡಲಿದ್ದಾರಂತೆ.
ರಣ್ಬೀರ್ ಕಪೂರ್ ಪ್ರಸ್ತುತ ರಾಮಾಯಣ ಸಿನಿಮಾನಲ್ಲಿ ನಟಿಸಲು ತಯಾರಾಗುತ್ತಿದ್ದಾರೆ. ಅದಾದ ಬಳಿಕ ‘ಅನಿಮಲ್ 2’ ಸಿನಿಮಾನಲ್ಲಿ ನಟಿಸಲಿದ್ದಾರೆ. ಸಂಜಯ್ ಲೀಲಾ ಬನ್ಸಾಲಿಯ ಸಿನಿಮಾಕ್ಕೂ ಎಸ್ ಎಂದಿದ್ದಾರೆ. ಸಂಜಯ್ರ ಸಿನಿಮಾನಲ್ಲಿ ರಣ್ಬೀರ್ ಜೊತೆಗೆ ಆಲಿಯಾ ಸಹ ನಟಿಸಲಿದ್ದಾರೆ. ಅದಾದ ಬಳಿಕ ‘ಬ್ರಹ್ಮಾಸ್ತ್ರ’ ಸಿನಿಮಾನಲ್ಲಿ ರಣ್ಬೀರ್ ನಟಿಸಲಿದ್ದಾರೆ. ಆಲಿಯಾ ಭಟ್ ಸಹ ಸಖತ್ ಬ್ಯುಸಿಯಾಗಿದ್ದು, ‘ಜಿಗ್ರಾ’ ಹೆಸರಿನ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಹಾಲಿವುಡ್ ಸಿನಿಮಾ ಒಂದರ ಅವಕಾಶವೂ ಆಲಿಯಾ ಬಳಿ ಇದೆ. ಅದಾದ ಬಳಿಕ ಸಂಜಯ್ ಲೀಲಾ ಬನ್ಸಾಲಿ ಸಿನಿಮಾನಲ್ಲಿ ನಟಿಸಲಿದ್ದಾರೆ. ದಕ್ಷಿಣ ಭಾರತದ ಮತ್ತೊಂದು ಸಿನಿಮಾವನ್ನು ಸಹ ಆಲಿಯಾ ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ