ಬಾಲಿವುಡ್ನಲ್ಲಿ ತಯಾರಾಗುತ್ತಿರುವ ‘ರಾಮಾಯಣ’ (Ramayana) ಸಿನಿಮಾದ ಮೇಲೆ ದೊಡ್ಡ ಮಟ್ಟದ ನಿರೀಕ್ಷೆ ಮನೆ ಮಾಡಿದೆ. ಈ ಸಿನಿಮಾದಲ್ಲಿ ರಣಬೀರ್ ಕಪೂರ್ (Ranbir Kapoor) ಅವರು ರಾಮನಾಗಿ ನಟಿಸುತ್ತಿದ್ದಾರೆ. ಸೀತೆಯ ಪಾತ್ರಕ್ಕೆ ಸಾಯಿ ಪಲ್ಲವಿ ಅವರು ಬಣ್ಣ ಹಚ್ಚುತ್ತಿದ್ದಾರೆ. ಕೆಲವೇ ದಿನಗಳ ಹಿಂದೆ ‘ರಾಮಾಯಣ’ ಸಿನಿಮಾದ ಶೂಟಿಂಗ್ ಆರಂಭ ಆಗಿತ್ತು. ಅಲ್ಲದೇ, ಚಿತ್ರೀಕರಣದ ಸೆಟ್ನಿಂದ ಕೆಲವು ಫೋಟೋಗಳು ಲೀಕ್ ಆಗಿದ್ದವು. ಈಗ ಒಂದು ಬೇಸರದ ಸುದ್ದಿ ಕೇಳಿಬಂದಿದೆ. ಈ ಸಿನಿಮಾದ ಶೂಟಿಂಗ್ ನಿಂತಿದೆ. ನಿರ್ಮಾಪಕರು ಕಾಪಿರೈಟ್ (Copyright) ನಿಯಮವನ್ನು ಉಲ್ಲಂಘನೆ ಮಾಡಿರುವುದೇ ಇದಕ್ಕೆ ಕಾರಣ ಎನ್ನಲಾಗಿದೆ.
ನಿತೇಶ್ ತಿವಾರಿ ಅವರು ‘ರಾಮಾಯಣ’ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಕೆಲವೇ ದಿನಗಳ ಹಿಂದೆ ಈ ಸಿನಿಮಾ ತಂಡಕ್ಕೆ ‘ಅಲ್ಲು ಮಂಟೇನಾ ಮೀಡಿಯಾ ವೆಂಚರ್ಸ್ ಎಲ್ಎಲ್ಪಿ’ ಕಂಪನಿಯು ನೋಟಿಸ್ ಕಳಿಸಿತ್ತು. ಅದರ ಅನ್ವಯ ‘ರಾಮಾಯಣ’ ಸಿನಿಮಾದ ನಿರ್ಮಾಪಕರು ಈ ಕಂಪನಿಯ ಜೊತೆ ಮಾಡಿಕೊಂಡ ಒಪ್ಪಂದದ ಪ್ರಕಾರ ಸ್ಕ್ರಿಪ್ಟ್ಗೆ ಸಂಬಂಧಿಸಿದ ಕೆಲವು ಹಕ್ಕುಗಳನ್ನು ಖರೀದಿಸಬೇಕಿತ್ತು. ಆ ಪ್ರಕ್ರಿಯೆ ಪೂರ್ಣಗೊಳ್ಳದ ಕಾರಣ ನೋಟಿಸ್ ಕಳಿಸಲಾಗಿತ್ತು.
‘ರಾಮಾಯಣ’ ಚಿತ್ರತಂಡಕ್ಕೆ ನೋಟಿಸ್ ಬಂದ ನಂತರವೂ ಕೆಲವು ದಿನಗಳ ಕಾಲ ಶೂಟಿಂಗ್ ಮುಂದುವರಿಸಲಾಯಿತು. ಆದರೆ ಕಳೆದ ವಾರದಿಂದ ಶೂಟಿಂಗ್ ನಿಲ್ಲಿಸಲಾಗಿದೆ. ಕಾನೂನಿನ ತೊಡಕುಗಳು ಬಗೆಹರಿದ ನಂತರವೇ ಶೂಟಿಂಗ್ ಮುಂದುವರಿಸಲು ತೀರ್ಮಾನಿಸಲಾಗಿದೆ ಅಂತ ಮೂಲಗಳು ಹೇಳಿರುವುದಾಗಿ ಬಾಲಿವುಡ್ ಹಂಗಾಮಾ ವರದಿ ಮಾಡಿದೆ.
ಇದನ್ನೂ ಓದಿ: ‘ರಾಮಾಯಣ’ ಸಿನಿಮಾಕ್ಕೆ ಹತ್ತು ಪಟ್ಟು ಹೆಚ್ಚು ಸಂಭಾವನೆ ಪಡೆದ ಸಾಯಿ ಪಲ್ಲವಿ
ಈ ಸಿನಿಮಾದಲ್ಲಿ ಅನೇಕ ಸ್ಟಾರ್ ಕಲಾವಿದರ ನಟಿಸುತ್ತಿದ್ದಾರೆ. ಶೂಟಿಂಗ್ಗೆ ಸಂಬಂಧಿಸಿದಂತೆ ಈ ಮೊದಲೇ ಡೇಟ್ಸ್ ಬಗ್ಗೆ ಮಾತುಕಥೆ ಆಗಿರುತ್ತದೆ. ಆದರೆ ಈಗ ಚಿತ್ರೀಕರಣ ನಿಂತಿರುವುದರಿಂದ ಎಲ್ಲ ಡೇಟ್ಸ್ ಬದಲಾವಣೆ ಆಗಲಿದೆ. ಇದರಿಂದ ಕಲಾವಿದರಿಗೆ ಮತ್ತು ಚಿತ್ರದ ನಿರ್ಮಾಪಕರಿಗೆ ಖಂಡಿತಾ ತೊಂದರೆ ಆಗಲಿದೆ. ರಣಬೀರ್ ಕಪೂರ್, ಸಾಯಿ ಪಲ್ಲವಿ, ಯಶ್, ಸನ್ನಿ ಡಿಯೋಲ್ ಮುಂತಾದವರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.