‘ರಾಮಾಯಣ’ ಸಿನಿಮಾ: ರಣ್ಬೀರ್-ಸಾಯಿ ಪಲ್ಲವಿ ಫೋಟೊ ಲೀಕ್
ರಾಮಾಯಣ ಆಧರಿಸಿದ ಸಿನಿಮಾದಲ್ಲಿ ರಾಮನ ಪಾತ್ರದಲ್ಲಿ ರಣ್ಬೀರ್ ಹಾಗೂ ಸೀತಾ ಮಾತೆಯ ಪಾತ್ರದಲ್ಲಿ ಸಾಯಿ ಪಲ್ಲವಿ ನಟಿಸುತ್ತಿದ್ದಾರೆ. ಸಿನಿಮಾ ಸೆಟ್ನ ಚಿತ್ರವೊಂದು ಲೀಕ್ ಆಗಿದ್ದು ವೈರಲ್ ಆಗುತ್ತಿದೆ.
ಪ್ರಭಾಸ್ (Prabhas) ನಟಿಸಿದ್ದ ರಾಮಾಯಣ ಕತೆ ಆಧರಿಸಿದ್ದ ‘ಆದಿಪುರುಷ್’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಸೋಲು ಕಂಡಿದೆ. ಮಾತ್ರವಲ್ಲ, ‘ಆದಿಪುರುಷ್’ ಸಿನಿಮಾದಲ್ಲಿ ರಾಮಾಯಣಕ್ಕೆ ಅಪಮಾನ ಮಾಡಲಾಗಿದೆ ಎಂಬ ಆರೋಪವೂ ಎದುರಾಗಿತ್ತು. ಹಲವು ಕಡೆ ದೂರುಗಳು ಸಹ ದಾಖಲಾದವು. ನ್ಯಾಯಾಲಯ ಸಹ ಸಿನಿಮಾದ ನಿರ್ದೇಶಕರು, ನಿರ್ಮಾಪಕರ ಬಗ್ಗೆ ಅಸಮಾಧಾನ ಹೊರಹಾಕಿತು. ಆದರೆ ಇದನ್ನೆಲ್ಲ ನಿರ್ಲಕ್ಷಿಸಿ ರಾಮಾಯಣ ಆಧರಿಸಿದ ಮತ್ತೊಂದು ಭಾರಿ ಬಜೆಟ್ ಸಿನಿಮಾದ ನಿರ್ಮಾಣ ಆರಂಭವಾಗಿದೆ. ಸಿನಿಮಾದಲ್ಲಿ ರಣ್ಬೀರ್ ಕಪೂರ್ ರಾಮನಾಗಿ ನಟಿಸುತ್ತಿದ್ದು, ಸಾಯಿ ಪಲ್ಲವಿ ಸೀತೆಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಿನಿಮಾದ ಬಗ್ಗೆ ಹೆಚ್ಚಿನ ಸುದ್ದಿಗಳನ್ನು ಚಿತ್ರರಂಗ ಬಿಟ್ಟುಕೊಟ್ಟಿರಲಿಲ್ಲ ಆದರೆ ಈಗ ಚಿತ್ರೀಕರಣದ ಫೊಟೊ ಒಂದು ಲೀಕ್ ಆಗಿ ವೈರಲ್ ಆಗಿದೆ.
ಶ್ರೀಮರಾಮನ ವೇಷದಲ್ಲಿರುವ ರಣ್ಬೀರ್ ಕಪೂರ್ ಹಾಗೂ ಸೀತಾ ಮಾತೆಯ ವೇಷದಲ್ಲಿರುವ ಸಾಯಿ ಪಲ್ಲವಿ ಚಿತ್ರೀಕರಣದಲ್ಲಿ ಪಾಲ್ಗೊಂಡಿರುವ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಅರಮನೆಯ ಸೆಟ್ನ ಮುಂದೆ ರಾಮ-ಸೀತೆ ಪಾತ್ರಧಾರಿಗಳು (ರಣ್ಬೀರ್-ಸಾಯಿ ಪಲ್ಲವಿ) ಓಡಾಡುತ್ತಿರುವ ದೃಶ್ಯದ ಚಿತ್ರ ವೈರಲ್ ಆಗಿದೆ. ರಣ್ಬೀರ್ ಕಪೂರ್, ಪಾತ್ರಕ್ಕಾಗಿ ತೂಕ ಇಳಿಸಿಕೊಂಡಿರುವುದು ಚಿತ್ರದಿಂದ ಗೊತ್ತಾಗುತ್ತಿದೆ. ಇನ್ನು ನಟಿ ಸಾಯಿ ಸಹ ಸೀತೆಯ ಪಾತ್ರಕ್ಕೆ ಚೆನ್ನಾಗಿ ಒಪ್ಪುತ್ತಿದ್ದಾರೆ. ಸಹಜ ಸೌಂದರ್ಯದಿಂದ ಅವರು ಗಮನ ಸೆಳೆಯುತ್ತಿದ್ದಾರೆ. ಸಿನಿಮಾದಲ್ಲಿ ಲಾರಾ ದತ್ತ ಕೈಕೆಯಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹನುಮಂತನ ಪಾತ್ರದಲ್ಲಿ ಸನ್ನಿ ಡಿಯೋಲ್ ನಟಿಸಲಿದ್ದಾರೆ.
ಇದನ್ನೂ ಓದಿ:ಅಬ್ಬಬ್ಬಾ… ‘ರಾಮಾಯಣ’ ಸಿನಿಮಾ ಬಜೆಟ್ ಬರೋಬ್ಬರಿ 835 ಕೋಟಿ ರೂಪಾಯಿ?
ರಾಮಾಯಣ ಆಧರಿಸಿದ ಈ ಸಿನಿಮಾ ಭಾರತದ ಈವರೆಗಿನ ಅತಿ ದೊಡ್ಡ ಬಜೆಟ್ ಸಿನಿಮಾ ಆಗಿರಲಿ ಎನ್ನಲಾಗುತ್ತಿದೆ. ಸಿನಿಮಾವನ್ನು ವಿಶೇಷ ತಂತ್ರಜ್ಞಾನವನ್ನು ಬಳಸಿ ಚಿತ್ರೀಕರಣ ಮಾಡಲಾಗುತ್ತಿದೆ. ಚಿತ್ರೀಕರಣಕ್ಕೆ ಮುಂಚೆ ಈ ಸಿನಿಮಾದ ಮುಖ್ಯ ನಟ-ನಟಿಯರಿಗೆ ವಿಶೇಷ ತರಬೇತಿಗಳನ್ನು ಸಹ ಕೊಡಿಸಲಾಗಿದೆ. ಈ ಸಿನಿಮಾದಲ್ಲಿ ನಟ ಯಶ್ ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿತ್ತು. ಆದರೆ ಆ ಸುದ್ದಿ ಖಚಿತವಾಗಿಲ್ಲ. ಕೆಲವು ಮೂಲಗಳ ಪ್ರಕಾರ ಈ ಸಿನಿಮಾಕ್ಕೆ ಯಶ್ ಸಹ ನಿರ್ಮಾಪಕರಾಗಿದ್ದಾರೆ ಎನ್ನಲಾಗುತ್ತಿದೆ.
ಸಿನಿಮಾವನ್ನು ಬಾಲಿವುಡ್ನ ಜನಪ್ರಿಯ ನಿರ್ದೇಶಕ ನಿತೇಶ್ ತಿವಾರಿ ನಿರ್ದೇಶನ ಮಾಡುತ್ತಿದ್ದಾರೆ ಸಿನಿಮಾಕ್ಕೆ ಬಂಡವಾಳ ಹೂಡುತ್ತಿರುವುದು ನಮಿತ್ ಮಲ್ಹೋತ್ರಾ. ಈ ಸಿನಿಮಾ ಎರಡು ಭಾಗಗಳಲ್ಲಿ ಬಿಡುಗಡೆ ಆಗಲಿದೆ. ಮೊದಲ ಭಾಗಕ್ಕೆ 850 ಕೋಟಿ ರೂಪಾಯಿ ಬಂಡವಾಳ ಹೂಡಲಾಗುತ್ತಿದೆ. ಈ ಸಿನಿಮಾಕ್ಕೆ ಹಾಲಿವುಡ್ನ ಹಲವು ತಂತ್ರಜ್ಞರು ಕೆಲಸ ಮಾಡಲಿದ್ದಾರೆ. ಸಿನಿಮಾದ ಪೋಸ್ಟ್ ಪ್ರೊಡಕ್ಷನ್ಗೆ ಎರಡು ಒಂದು ವರ್ಷ ಮೀಸಲಿಡಲಾಗಿದೆ. ಸಿನಿಮಾದ ಚಿತ್ರೀಕರಣಕ್ಕೆ ಒಂದು ವರ್ಷ ಮೀಸಲಿಡಲಾಗಿದೆ. ಸಿನಿಮಾ 2027ರ ಅಕ್ಟೋಬರ್ ತಿಂಗಳಲ್ಲಿ ತೆರೆಗೆ ಬರಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ