ಅಪ್ಪ ಸತ್ತಾಗ ಅಳಲೇ ಇಲ್ಲ, ನೆನಪು ಮಾಡಿಕೊಂಡ ರಣ್​ಬೀರ್ ಕಪೂರ್

|

Updated on: Jul 28, 2024 | 8:49 AM

ರಣ್​ಬೀರ್ ಕಪೂರ್ ತಂದೆ ರಿಷಿ ಕಪೂರ್ ದೊಡ್ಡ ನಟ. ಕೋಟ್ಯಂತರ ಅಭಿಮಾನಿಗಳನ್ನು ರಿಷಿ ಕಪೂರ್ ಹೊಂದಿದ್ದರು. ಅವರು ನಿಧನ ಹೊಂದಿದಾಗ ಕೋಟ್ಯಂತರ ಜನ ಕಣ್ಣೀರು ಹಾಕಿದ್ದರು. ಆದರೆ ಸ್ವತಃ ರಣ್​ಬೀರ್ ಕಪೂರ್ ಅತ್ತಿರಲಿಲ್ಲವಂತೆ.

ಅಪ್ಪ ಸತ್ತಾಗ ಅಳಲೇ ಇಲ್ಲ, ನೆನಪು ಮಾಡಿಕೊಂಡ ರಣ್​ಬೀರ್ ಕಪೂರ್
Follow us on

ಬಾಲಿವುಡ್​ ಸ್ಟಾರ್ ನಟ ರಣ್​ಬೀರ್ ಕಪೂರ್, ‘ಬ್ರಹ್ಮಾಸ್ತ್ರ’, ‘ಅನಿಮಲ್’ ಸಿನಿಮಾಗಳ ಮೂಲಕ ಒಂದರ ಹಿಂದೊಂದು ಹಿಟ್ ನೀಡಿರುವ ರಣ್​ಬೀರ್ ಕಪೂರ್ ಇದೀಗ ‘ರಾಮಾಯಣ’ ಸಿನಿಮಾದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅದರ ಜೊತೆಗೆ ಸಂಜಯ್ ಲೀಲಾ ಬನ್ಸಾಲಿಯ ಸಿನಿಮಾದಲ್ಲಿಯೂ ನಟಿಸಲಿದ್ದಾರೆ. ಭಾರತದ ಸೂಪರ್ ಸ್ಟಾರ್​ಗಳ ಪಟ್ಟಿಗೆ ಸೇರ್ಪಡೆ ಆಗಿರುವ ನಟ ರಣ್​ಬೀರ್ ಕಪೂರ್ ಇತ್ತೀಚೆಗಿನ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ತಮ್ಮ ತಂದೆ, ಖ್ಯಾತ ನಟ ರಿಷಿ ಕಪೂರ್ ನಿಧನ ಹೊಂದಿದಾಗ ತಾವು ಒಂದು ಹನಿ ಕಣ್ಣೀರು ಸಹ ಹಾಕಲಿಲ್ಲ ಎಂದು ಹೇಳಿದ್ದಾರೆ.

ಝಿರೋಧಾ ಸಹ ಸಂಸ್ಥಾಪಕ ನಿಖಿಲ್ ಕಾಮತ್ ಜೊತೆಗಿನ ಸಂದರ್ಶನದಲ್ಲಿ ಮಾತನಾಡಿರುವ ನಟ ರಣ್​ಬೀರ್ ಕಪೂರ್, ‘ನನ್ನ ತಂದೆ ಸತ್ತಾಗ ನನಗೆ ಒಂದು ರೀತಿಯ ಪ್ಯಾನಿಕ್ ಅಟ್ಯಾಕ್ ಆಗಿಬಿಟ್ಟಿತು. ನನಗೆ ನೆನಪಿದೆ. ವೈದ್ಯರು ಮಾಹಿತಿ ತಿಳಿಸಿದಾಗ ನನಗೆ ಏನು ಮಾಡಬೇಕು ಎಂಬುದು ಸಹ ತಿಳಿಯಲಿಲ್ಲ. ನನಗೆ ಏನು ಹೇಳಬೇಕು ಎಂಬುದು ಸಹ ತಿಳಿಯಲಿಲ್ಲ. ಒಂದು ರೀತಿಯ ಪ್ಯಾನಿಕ್ ಅಟ್ಯಾಕ್ ಆಗಿಬಿಟ್ಟಿತು. ಆದರೆ ನಾನು ದುಃಖಿಸಿದೆ ಎಂದು ನಾನು ಹೇಳಲಾರೆ’ ಎಂದಿದ್ದಾರೆ ರಣ್​ಬೀರ್ ಕಪೂರ್.

ರಣ್​ಬೀರ್ ಕಪೂರ್ ತಂದೆ ರಿಷಿ ಕಪೂರ್, ಬಾಲಿವುಡ್​ನ ಬಹುಖ್ಯಾತ ನಟರು. ಅವರು ನಿಧನರಾದಾಗ ಕಣ್ಣೀರು ಹಾಕಿದ ಕೋಟ್ಯಂತರ ಅಭಿಮಾನಿಗಳಿದ್ದರು. ಆದರೆ ಸ್ವತಃ ಅವರ ಮಗ ರಣ್​ಬೀರ್ ಕಪೂರ್ ಕಣ್ಣೀರು ಹಾಕಲಿಲ್ಲ. ಅದಕ್ಕೆ ಮುಖ್ಯ ಕಾರಣವೆಂದರೆ ರಿಷಿ ಕಪೂರ್ ಬಹಳ ಸಿಡುಕಿನ ವ್ಯಕ್ತಿ. ಮಕ್ಕಳು, ಪತ್ನಿ ಮೇಲೆ ಜಗಳವಾಡದ ದಿನವೇ ಇರಲಿಲ್ಲವಂತೆ. ಸಿಡುಕೆಂದರೆ ಮಹಾ ಸಿಡುಕು. ಇದೇ ಕಾರಣಕ್ಕೆ ರಣ್​ಬೀರ್ ಕಪೂರ್, ತಂದೆ ರಿಷಿ ಕಪೂರ್ ಅವರಿಂದ ದೂರವೇ ಬೆಳೆದರಂತೆ. ಇಬ್ಬರ ನಡುವೆ ದೊಡ್ಡ ಅಂತರವೇ ಇತ್ತು’ ಎಂಬುದನ್ನು ಸಹ ರಣ್​ಬೀರ್ ಕಪೂರ್ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ:‘ರಾಮಾಯಣ’ ಸಿನಿಮಾ, ರಣ್​ಬೀರ್ ಕಪೂರ್ ಅಲ್ಲ, ಯಶ್ ‘ನಾಯಕ’

ಅದೇ ಸಂದರ್ಶನದಲ್ಲಿ ತಮ್ಮ ಕೆಲವು ಸಮಸ್ಯೆಗಳ ಬಗ್ಗೆಯೂ ನಟ ರಣ್​ಬೀರ್ ಕಪೂರ್ ಮಾತನಾಡಿದ್ದಾರೆ. ತಮ್ಮನ್ನು ಜನ ‘ಪ್ಲೇಬಾಯ್’ ರೀತಿಯಾಗಿ ನೋಡಿದ್ದು, ತಮ್ಮನ್ನು ಲೇಡೀಸ್ ಮ್ಯಾನ್, ಚಾಣಾಕ್ಷ ಮೋಸಗಾರನಂತೆ ನೋಡಿದ್ದರ ಬಗ್ಗೆ ಬೇಸರವನ್ನು ಸಹ ಹೇಳಿಕೊಂಡಿದ್ದಾರೆ. ತಂದೆಯ ನಿಧನಕ್ಕೆ ಮುನ್ನ ಥೆರಪಿಸ್ಟ್​ರಿಂದ ಚಿಕಿತ್ಸೆ ತೆಗೆದುಕೊಳ್ಳಲು ಯತ್ನಿಸಿದ್ದು ಅದು ಯಶಸ್ವಿ ಆಗಲಿಲ್ಲವೆಂದು ಸಹ ಹೇಳಿಕೊಂಡಿದ್ದಾರೆ. ಅಲ್ಲದೆ ರಣ್​ಬೀರ್ ಕಪೂರ್ ತಾವು ಸಿಗರೇಟಿನ ಚಟಕ್ಕೆ ತುತ್ತಾಗಿದ್ದಾಗಿಯೂ ಆದರೆ ತಮಗೆ ಮಗಳು ಜನಿಸಿದ ಬಳಿಕ ಸಿಗರೇಟನ್ನು ಬಿಟ್ಟು ಬಿಟ್ಟಿದ್ದಾಗಿಯೂ ಹೇಳಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ