AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕ್ಷಮಿಸಿ, ಅನಿಮಲ್ ರೀತಿಯ ಸಿನಿಮಾ ಮತ್ತೆ ಮಾಡಲ್ಲ’: ರಣಬೀರ್ ಕಪೂರ್​ ಹೀಗೆ ಹೇಳಿದ್ದೇಕೆ?

‘ಅನಿಮಲ್​’ ಸಿನಿಮಾದ ಕಥೆಯನ್ನು ಮೊದಲ ಬಾರಿಗೆ ಕೇಳಿದಾಗ ತಮಗೆ ಭಯ ಆಗಿತ್ತು ಎಂದು ನಟ ರಣಬೀರ್​ ಕಪೂರ್​ ಹೇಳಿದ್ದಾರೆ. ಈ ಸಿನಿಮಾಗೆ ಎದುರಾದ ಎಲ್ಲ ಬಗೆಯ ಟೀಕೆಗಳ ಬಗ್ಗೆ ಅವರು ಇಷ್ಟು ದಿನ ಸೈಲೆಂಟ್​ ಆಗಿದ್ದರು. ಈಗ ಅವರು ಈ ಬಗ್ಗೆ ಮೌನ ಮುರಿದಿದ್ದಾರೆ. ಸಿನಿಮಾ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಚಿತ್ರರಂಗದವರಿಗೆ ತಮ್ಮ ಉತ್ತರ ಏನಾಗಿತ್ತು ಎಂಬುದನ್ನು ರಣಬೀರ್ ಕಪೂರ್​ ತಿಳಿಸಿದ್ದಾರೆ.

‘ಕ್ಷಮಿಸಿ, ಅನಿಮಲ್ ರೀತಿಯ ಸಿನಿಮಾ ಮತ್ತೆ ಮಾಡಲ್ಲ’: ರಣಬೀರ್ ಕಪೂರ್​ ಹೀಗೆ ಹೇಳಿದ್ದೇಕೆ?
ರಣಬೀರ್​ ಕಪೂರ್​
ಮದನ್​ ಕುಮಾರ್​
|

Updated on: Jul 27, 2024 | 9:11 PM

Share

2023ರಲ್ಲಿ ತೆರೆಕಂಡು ಅತಿ ಹೆಚ್ಚು ಚರ್ಚೆಗೆ ಒಳಗಾದ ಸಿನಿಮಾ ‘ಅನಿಮಲ್​’. ಈ ಸಿನಿಮಾದ ಮೂಲಕ ರಣಬೀರ್​ ಕಪೂರ್​ ಅವರಿಗೆ ದೊಡ್ಡ ಗೆಲುವು ಸಿಕ್ಕಿತು ಎಂಬುದು ನಿಜ. ಅದರ ಜೊತೆಗೆ ಕೆಲವರಿಂದ ಕಟು ಟೀಕೆ ಕೂಡ ವ್ಯಕ್ತವಾಯಿತು. ಒಂದು ವರ್ಗದ ಜನರು ಈ ಸಿನಿಮಾವನ್ನು ಸಿಕ್ಕಾಪಟ್ಟೆ ತೆಗಳಿದರು. ಹಾಗಿದ್ದರೂ ಕೂಡ ಬಾಕ್ಸ್​ ಆಫೀಸ್​ನಲ್ಲಿ ಈ ಸಿನಿಮಾ 900 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್​ ಮಾಡಿತು. ತಮ್ಮ ಬಗ್ಗೆ ಮತ್ತು ಒಟ್ಟಾರೆ ಈ ಸಿನಿಮಾದ ಬಗ್ಗೆ ಕೇಳಿಬಂದ ವಿಮರ್ಶೆಗಳಿಗೆ ಇದೇ ಮೊದಲ ಬಾರಿಗೆ ರಣಬೀರ್​ ಕಪೂರ್​ ಅವರು ಮಾತನಾಡಿದ್ದಾರೆ.

ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ರಣಬೀರ್​ ಕಪೂರ್​ ಅವರು ಕೆಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ‘ಅನಿಮಲ್​’ ಸಿನಿಮಾ ನೋಡಿದ ಜನರು ಮೆಚ್ಚುಗೆ ಸೂಚಿಸಿದರೆ, ಚಿತ್ರರಂಗದ ಒಳಗಿನ ಕೆಲವರು ಅಸಮಾಧಾನ ವ್ಯಕ್ತಪಡಿಸಿದರು. ಅಂಥವರಿಗೆ ರಣಬೀರ್​ ಕಪೂರ್​ ಅವರು ತಮ್ಮದೇ ರೀತಿಯಲ್ಲಿ ಪ್ರತಿಕ್ರಿಯಿಸಿದ್ದರು. ಆ ಬಗ್ಗೆ ಅವರು ಸಂದರ್ಶನದಲ್ಲಿ ವಿವರಿಸಿದ್ದಾರೆ.

‘ಚಿತ್ರರಂಗದ ಅನೇಕರು ಈ ಸಿನಿಮಾದಿಂದ ತಮಗೆ ನಿರಾಸೆ ಆಯಿತು ಅಂತ ಹೇಳಿದರು. ನಾನು ಅವರ ಬಳಿ ಕ್ಷಮೆ ಕೇಳಿದೆ. ಕ್ಷಮಿಸಿ, ಇನ್ಮುಂದೆ ಇಂಥ ಸಿನಿಮಾ ಮಾಡುವುದಿಲ್ಲ ಅಂತ ಹೇಳಿದೆ. ಹಾಗಂತ ನಾನು ಅವರ ಮಾತನ್ನು ನಿಜಕ್ಕೂ ಒಪ್ಪಿಕೊಂಡಿಲ್ಲ. ಯಾಕೆಂದರೆ, ನಾನು ಈಗ ಯಾರೊಂದಿಗೂ ವಾದ ಮಾಡಲು ಇಷ್ಟವಿಲ್ಲದ ಹಂತದಲ್ಲಿ ಇದ್ದೇನೆ. ಒಂದು ವೇಳೆ ನಿಮಗೆ ನನ್ನ ಕೆಲಸ ಇಷ್ಟ ಆಗಿಲ್ಲ ಎಂದರೆ ನಿಮ್ಮ ಬಳಿ ಕ್ಷಮೆ ಕೇಳುತ್ತೇನೆ. ಮುಂದಿನ ಬಾರಿ ಇನ್ನಷ್ಟು ಕಷ್ಟಪಟ್ಟು ಕೆಲಸ ಮಾಡುವೆ ಅಂತ ಹೇಳುತ್ತೇನೆ’ ಎಂದಿದ್ದಾರೆ ರಣಬೀರ್​ ಕಪೂರ್​.

ಇದನ್ನೂ ಓದಿ: ರಣಬೀರ್​ ಕಪೂರ್​ ಎದುರಲ್ಲೇ ಅಶ್ಲೀಲವಾಗಿ ಬೈಯ್ದ ಫೋಟೋಗ್ರಾಫರ್​; ವಿಡಿಯೋ ವೈರಲ್​

‘ಅನಿಮಲ್​’ ಸಿನಿಮಾಗೆ ಸಂದೀಪ್​ ರೆಡ್ಡಿ ವಂಗಾ ಅವರು ನಿರ್ದೇಶನ ಮಾಡಿದ್ದಾರೆ. ರಣಬೀರ್​ ಕಪೂರ್​ಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ಅಭಿನಯಸಿದ್ದಾರೆ. ತೃಪ್ತಿ ದಿಮ್ರಿ ಅವರು ಬೋಲ್ಡ್​ ಪಾತ್ರ ಮಾಡಿ ಗಮನ ಸೆಳೆದಿದ್ದಾರೆ. ಬಾಲಿವುಡ್ ನಟ ಬಾಬಿ ಡಿಯೋಲ್​ ಅವರು ನೆಗೆಟಿವ್​ ಪಾತ್ರ ಮಾಡಿ ಹೊಸ ಇನ್ನಿಂಗ್ಸ್​ ಆರಂಭಿಸಿದ್ದಾರೆ. ಈ ಸಿನಿಮಾಗೆ ಸೀಕ್ವೆಲ್​ ಕೂಡ ಬರಲಿದೆ. ಆ ಬಗ್ಗೆ ಜನರಿಗೆ ನಿರೀಕ್ಷೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.