‘ರಾಮಾಯಣ’ ಸಿನಿಮಾ, ರಣ್ಬೀರ್ ಕಪೂರ್ ಅಲ್ಲ, ಯಶ್ ‘ನಾಯಕ’
ರಣ್ಬೀರ್ ಕಪೂರ್ ನಾಯಕನಾಗಿ ನಟಿಸುತ್ತಿರುವ ‘ರಾಮಾಯಣ’ ಸಿನಿಮಾದ ಚಿತ್ರೀಕರಣ ಚಾಲ್ತಿಯಲ್ಲಿದ್ದು, ಇದೇ ಸಿನಿಮಾದಲ್ಲಿ ನಟಿಸುತ್ತಿರುವ ನಟರೊಬ್ಬರು ಸಿನಿಮಾ ಬಗ್ಗೆ ದೊಡ್ಡ ಅಪ್ಡೇಟ್ ಬಿಟ್ಟುಕೊಟ್ಟಿದ್ದಾರೆ. ಸಿನಿಮಾದಲ್ಲಿ ನಾಯಕ ರಣ್ಬೀರ್ ಅಲ್ಲ ಬದಲಿಗೆ ಯಶ್ ಅಂತೆ!
‘ರಾಮಾಯಣ’ ಕುರಿತ ದೊಡ್ಡ ಪ್ರಾಜೆಕ್ಟ್ ಒಂದು ಹಿಂದಿಯಲ್ಲಿ ಈಗಾಗಲೇ ಸೆಟ್ಟೇರಿದೆ. ಶ್ರೀರಾಮನ ಪಾತ್ರದಲ್ಲಿ ರಣ್ಬೀರ್ ಕಪೂರ್ ನಟಿಸುತ್ತಿದ್ದರೆ ಸೀತೆಯ ಪಾತ್ರದಲ್ಲಿ ಸಾಯಿ ಪಲ್ಲವಿ ನಟಿಸುತ್ತಿದ್ದಾರೆ. ರಣ್ಬೀರ್ ಹಾಗೂ ಸಾಯಿ ಪಲ್ಲವಿ ರಾಮ-ಸೀತೆಯ ಪಾತ್ರದಲ್ಲಿರುವ ಕೆಲವು ಚಿತ್ರಗಳು ಸಹ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು. ಈ ಸಿನಿಮಾದ ರಾವಣನ ಪಾತ್ರದಲ್ಲಿ ಯಶ್ ನಟಿಸಲಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಈವರೆಗೆ ಹೊರಬಿದ್ದಿರಲಿಲ್ಲ. ಆದರೆ ಇದೀಗ ಸುದ್ದಿ ಅಧಿಕೃತವಾಗಿದೆ. ಮಾತ್ರವಲ್ಲ ಈ ಸಿನಿಮಾದಲ್ಲಿ ಯಶ್ ಅವರದ್ದೇ ಪ್ರಧಾನ ಪಾತ್ರ ಎನ್ನಲಾಗಿದೆ.
‘ರಾಮಾಯಣ’ ಸಿನಿಮಾದಲ್ಲಿ ನಟಿಸುತ್ತಿರುವ ನಟ ಆದಿತ್ಯ ದೇಶ್ಮುಖ್ ಸಂದರ್ಶನವೊಂದರಲ್ಲಿ, ‘ರಾಮಾಯಣ’ ಸಿನಿಮಾದ ಬಗ್ಗೆ ಮಾತನಾಡಿದ್ದು, ಸಿನಿಮಾದ ರಾವಣನ ಪಾತ್ರದಲ್ಲಿ ಯಶ್ ನಟಿಸುತ್ತಿರುವುದಾಗಿ ಖಾತ್ರಿಪಡಿಸಿದ್ದಾರೆ. ಮಾತ್ರವಲ್ಲದೆ ಈಗ ನಿರ್ಮಾಣವಾಗುತ್ತಿರುವ ‘ರಾಮಾಯಣ’ ಸಿನಿಮಾ ರಾಮನ ದೃಷ್ಟಿಕೋನದಿಂದ ಅಲ್ಲ ಬದಲಿಗೆ ರಾವಣನ ದೃಷ್ಟಿಕೋನದಲ್ಲಿ ಕತೆ ನಿರೂಪಣೆಯಾಗಲಿದೆ’ ಎಂದಿದ್ದಾರೆ.
ಇದನ್ನೂ ಓದಿ:ಯಶ್ ಜತೆ ನಿರ್ದೇಶಕ ಅಟ್ಲಿ ಮಾತುಕತೆ ವಿಡಿಯೋ ವೈರಲ್; ನೆಟ್ಟಿಗರದ್ದು ಬಗೆಬಗೆ ಲೆಕ್ಕಾಚಾರ
ಈಗ ನಿರ್ಮಾಣವಾಗುತ್ತಿರುವ ರಾಮಾಯಣದಲ್ಲಿ ರಾವಣ ಕೇವಲ ‘ವಿಲನ್’ ಮಾತ್ರವಲ್ಲ ಇಡೀ ರಾಮಾಯಣವನ್ನೇ ರಾವಣನ ದೃಷ್ಟಿಕೋನದಲ್ಲಿ ನೋಡುವ ಪ್ರಯತ್ನ ಮಾಡಲಾಗುತ್ತಿದೆ ಎಂಬುದು ಖಾತ್ರಿಯಾಗಿದೆ. ಅಲ್ಲಿಗೆ ಈ ರಾಮಾಯಣದಲ್ಲಿ ರಾವಣ ‘ನಾಯಕ’ ಆಗಲಿದ್ದಾನೆ ಎಂದು ನಿರೀಕ್ಷಿಸಬಹುದು. ರಾವಣನ ಪಾತ್ರಕ್ಕೆ ‘ಸ್ಕೋಪ್’ ಇರುವ ಕಾರಣಕ್ಕೆ ಯಶ್ ಅಂಥಹಾ ಸ್ಟಾರ್ ಅನ್ನು ಆ ಪಾತ್ರಕ್ಕೆ ನಿರ್ದೇಶಕ ಆರಿಸಿದ್ದಾರೆ ಎಂಬ ಬಗ್ಗೆ ಮೊದಲಿನಿಂದಲೂ ಚರ್ಚೆ ಇತ್ತು. ಈಗ ಅದು ನಿಜವಾಗಿದೆ.
‘ರಾಮಾಯಣ’ ಸಿನಿಮಾವನ್ನು ನಿತೇಶ್ ತಿವಾರಿ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾಕ್ಕೆ ಮಧು ಮಂಟೇನಾ ಮತ್ತು ಅಲ್ಲು ಅರವಿಂದ್ ಬಂಡವಾಳ ಹೂಡುತ್ತಿದ್ದಾರೆ. ಮಾತ್ರವಲ್ಲದೆ ಈ ಸಿನಿಮಾಕ್ಕೆ ಯಶ್ ಸಹ ಬಂಡವಾಳ ಹೂಡಿದ್ದಾರೆ ಎನ್ನಲಾಗುತ್ತಿದೆ. ರಣ್ಬೀರ್ ಕಪೂರ್, ಸಾಯಿ ಪಲ್ಲವಿ, ಯಶ್ ಜೊತೆಗೆ ಇನ್ನೂ ಕೆಲವು ಜನಪ್ರಿಯ ನಟರು ಸಿನಿಮಾದಲ್ಲಿ ನಟಿಸಲಿದ್ದಾರೆ. ಸಿನಿಮಾದ ಚಿತ್ರೀಕರಣ ಈಗಾಗಲೇ ಚಾಲ್ತಿಯಲ್ಲಿದ್ದು, ಸಿನಿಮಾ 2025 ರಲ್ಲಿ ತೆರೆಗೆ ಬರಲಿದೆ. ‘ರಾಮಾಯಣ’ ಸಿನಿಮಾದ ಜೊತೆಗೆ ಯಶ್ ತಮ್ಮ ‘ಟಾಕ್ಸಿಕ್’ ಸಿನಿಮಾದ ಚಿತ್ರೀಕರಣದಲ್ಲಿಯೂ ಬ್ಯುಸಿಯಾಗಿದ್ದಾರೆ. ಆ ಸಿನಿಮಾ ಸಹ 2025 ರಲ್ಲಿಯೇ ತೆರೆಗೆ ಬರಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ