ನಟ ರಣಬೀರ್ ಕಪೂರ್ (Ranbir Kapoor) ಅವರು ಇತ್ತೀಚೆಗೆ ಒಂದು ಮುಜುಗರದ ಸನ್ನಿವೇಶ ಎದುರಿಸಿದ್ದಾರೆ. ಗುಜರಾಜ್ನ ಸೂರತ್ನಲ್ಲಿ ಆಭರಣದ ಮಳಿಗೆಯನ್ನು ಉದ್ಘಾಟಿಸಲು ರಣಬೀರ್ ಕಪೂರ್ ತೆರೆಳಿದ್ದರು. ಅವರ ಫೋಟೋ ಕ್ಲಿಕ್ಕಿಸಲು ಬಂದ ಪಾಪರಾಜಿಯೊಬ್ಬನು (Paparazzi) ಅಶ್ಲೀಲ ಪದಗಳಿಂದ ಬೈಯ್ದಿದ್ದಾನೆ. ಅದನ್ನು ಕೇಳಿಸಿಕೊಂಡು ರಣಬೀರ್ ಕಪೂರ್ಗೆ ಶಾಕ್ ಆಗಿದೆ. ಬಹಳ ಅಚ್ಚರಿಯಿಂದ ಅವರು ಫೋಟೋಗ್ರಾಫರ್ ಕಡೆಗೆ ನೋಡಿದ್ದಾರೆ. ‘ಏನು ನಡೆಯುತ್ತಿದೆ ಇಲ್ಲಿ?’ ಎಂದು ಪ್ರಶ್ನಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿದೆ.
ರಣಬೀರ್ ಕಪೂರ್ ಅವರ ಫೋಟೋಗಳನ್ನು ಕ್ಲಿಕ್ಕಿಸಬೇಕು ಎಂಬುದು ಪಾಪರಾಜಿಗಳ ತವಕ. ಜನಜಂಗುಳಿ ಇದ್ದಿದ್ದರಿಂದ ಸರಿಯಾದ ಫೋಟೋಗಳು ಸಿಗದೇ ಇರಬಹುದು. ಈ ಸಂದರ್ಭದಲ್ಲಿ ತಾಳ್ಮೆ ಕಳೆದುಕೊಂಡ ಫೋಟೋಗ್ರಾಫರ್ ಒಬ್ಬನು ಕೆಟ್ಟ ಭಾಷೆ ಬಳಸಿ ಕೂಗಾಡಿದ್ದಾನೆ. ಆತ ಆ ಮಾತನ್ನು ರಣಬೀರ್ ಕಪೂರ್ಗೆ ಹೇಳಿದ್ದಾ ಅಥವಾ ಅಲ್ಲಿದ್ದ ಜನರ ಪೈಕಿ ಯಾರೋ ಒಬ್ಬರಿಗೆ ಹೇಳಿದ್ದಾ ಎಂಬುದು ಖಚಿತವಾಗಿಲ್ಲ.
ಒಟ್ಟಿನಲ್ಲಿ ಆ ಫೋಟೋಗ್ರಾಫರ್ ಬಳಸಿದ ಅಶ್ಲೀಲ ಭಾಷೆ ಕೇಳಿ ರಣಬೀರ್ ಕಪೂರ್ ಅವರಿಗೆ ಕೋಪ ಬಂದಿದೆ. ಆದರೂ ಅವರು ಆ ಸಂದರ್ಭದಲ್ಲಿ ತಾಳ್ಮೆ ಕಳೆದುಕೊಂಡಿಲ್ಲ. ಅಸಹನೆಯಿಂದ ಲುಕ್ ಕೊಟ್ಟು ಅಲ್ಲಿಂದ ತೆರಳಿದ್ದಾರೆ. ಪಾಪರಾಜಿಗಳ ಅನಾಗರಿಕ ವರ್ತನೆಗೆ ಸೋಶಿಯಲ್ ಮೀಡಿಯಾದಲ್ಲಿ ಖಂಡನೆ ವ್ಯಕ್ತವಾಗುತ್ತಿದೆ. ಕೆಟ್ಟದಾಗಿ ಮಾತನಾಡಿದ ಪಾಪಾರಾಜಿಗೆ ಅನೇಕರು ಕಮೆಂಟ್ ಮೂಲಕ ಕ್ಲಾಸ್ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ: ‘ರಾಮಾಯಣ’ ಸಿನಿಮಾಗಾಗಿ ಹಳ್ಳಿಗೆ ಹೋಗಿ ತರಬೇತಿ ಪಡೆಯುತ್ತಿರುವ ರಣಬೀರ್ ಕಪೂರ್
ರಣಬೀರ್ ಕಪೂರ್ ಅವರು ಈಗ ರಾಮಾಯಣ ಸಿನಿಮಾದಲ್ಲಿ ಬ್ಯುಸಿ ಆಗಿದ್ದಾರೆ. ‘ಅನಿಮಲ್’ ಸಿನಿಮಾದ ಭಾರಿ ಯಶಸ್ಸಿನ ಬಳಿಕ ಅವರಿಗೆ ಈ ಅವಕಾಶ ಸಿಕ್ಕಿದೆ. ಈ ಸಿನಿಮಾದಲ್ಲಿ ಅವರಿಗೆ ಜೋಡಿಯಾಗಿ ಸಾಯಿ ಪಲ್ಲವಿ ನಟಿಸುತ್ತಿದ್ದಾರೆ. ‘ದಂಗಲ್’ ಖ್ಯಾತಿಯ ನಿರ್ದೇಶಕ ನಿತೇಶ್ ತಿವಾರಿ ಅವರು ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಚಿತ್ರೀಕರಣದ ಸೆಟ್ನಿಂದ ಕೆಲವು ಫೋಟೋಗಳು ಲೀಕ್ ಆಗಿವೆ. ಆ ಮೂಲಕ ಸಿನಿಮಾ ಮೇಲಿನ ಹೈಪ್ ಹೆಚ್ಚಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.