ನಟ ರಣಬೀರ್ ಕಪೂರ್ (Ranbir Kapoor) ಅವರು ಆಲಿಯಾ ಭಟ್ ಅವರನ್ನು ಮದುವೆಯಾಗಿ ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ. ಅವರಿಗೆ ಹೆಣ್ಣುಮಗು ಜನಿಸಿದ್ದು, ರಹಾ ಎಂದು ನಾಮಕರಣ ಮಾಡಿದ್ದಾರೆ. ಆಲಿಯಾ ಭಟ್ ಅವರನ್ನು ಲವ್ ಮಾಡಿ ಮದುವೆ ಆಗುವುದಕ್ಕೂ ಮೊದಲು ರಣಬೀರ್ ಅವರು ಹಲವು ಬ್ರೇಕಪ್ ಮಾಡಿಕೊಂಡಿದ್ದರು. ಈ ಪೈಕಿ ಕತ್ರಿನಾ ಕೈಫ್ ಹಾಗೂ ದೀಪಿಕಾ ಪಡುಕೋಣೆ (Deepika Padukone) ಜೊತೆಗಿನ ಪ್ರೇಮ್ ಕಹಾನಿ ಹೆಚ್ಚು ಹೈಲೈಟ್ ಆಗಿತ್ತು. ಈಗ ರಣಬೀರ್ ಕಪೂರ್ ಅವರು ಸಂಬಂಧಗಳ ಬಗ್ಗೆ ಹಾಗೂ ಬ್ರೇಕಪ್ ಬಗ್ಗೆ ಮಾತನಾಡಿದ್ದಾರೆ. ಲವ್ ರಂಜನ್ ನಿರ್ದೇಶನದ ‘ತು ಜೂಟಿ ಮೈ ಮಕ್ಕಾರ್’ ಚಿತ್ರದಲ್ಲಿ ಶ್ರದ್ಧಾ ಕಪೂರ್ಗೆ ಜೊತೆಯಾಗಿ ರಣಬೀರ್ ನಟಿಸಿದ್ದು, ಈ ಚಿತ್ರದ ಪ್ರಚಾರದ ವೇಳೆ ಲವ್-ಬ್ರೇಕಪ್ ಬಗ್ಗೆ ಮಾತನಾಡಿದ್ದಾರೆ.
ರಣಬೀರ್ ಕಪೂರ್ ಅವರು ಮೊದಲು ದೀಪಿಕಾ ಪಡುಕೋಣೆ ಜೊತೆ ಪ್ರೀತಿಯಲ್ಲಿದ್ದರು. ಆ ಬಳಿಕ ರಣಬೀರ್ಗೆ ಕತ್ರಿನಾ ಕೈಫ್ ಭೇಟಿ ಆಯಿತು. ದೀಪಿಕಾನ ಬಿಟ್ಟು ಕತ್ರಿನಾ ಜೊತೆ ರಣಬೀರ್ ಸುತ್ತಾಡೋಕೆ ಶುರು ಮಾಡಿದರು. ಕೊನೆಗೆ ಕತ್ರಿನಾ ಜೊತೆಗಿನ ಸಂಬಂಧವೂ ಕೊನೆ ಆಯಿತು. ಹೀಗೆ ಸಾಲು ಸಾಲು ಬ್ರೇಕಪ್ಗಳನ್ನು ಅವರು ಮಾಡಿಕೊಂಡಿದ್ದಾರೆ. ‘ತು ಜೂಟಿ ಮೈ ಮಕ್ಕಾರ್’ ಚಿತ್ರದಲ್ಲಿ ಕಥಾ ನಾಯಕ-ಕಥಾ ನಾಯಕಿ ಮಧ್ಯೆ ಸಾಕಷ್ಟು ಸುಳ್ಳು ಬಂದು ಹೋಗುತ್ತದೆ ಎಂಬುದು ಟ್ರೇಲರ್ನಲ್ಲಿ ಗೊತ್ತಾಗಿದೆ. ಹೀಗಾಗಿ, ಈ ಸಿನಿಮಾ ಪ್ರಚಾರದ ವೇಳೆ ಅವರು ರಿಲೇಶನ್ಶಿಪ್ ಬಗ್ಗೆ ಮಾತನಾಡಿದ್ದಾರೆ.
ಪ್ರತಿ ವ್ಯಕ್ತಿಗೆ ಒಂದಲ್ಲಾ ಒಂದು ಸಂದರ್ಭದಲ್ಲಿ ಬ್ರೇಕಪ್ ಫೀಲ್ ಆಗುತ್ತದೆ ಅನ್ನೋದು ರಣಬೀರ್ ಅಭಿಪ್ರಾಯ. ‘ನಮ್ಮ ಹೃದಯ ತುಂಬಾ ದುರ್ಬಲವಾದದ್ದು. ಕೆಲವರಿಗೆ ಬ್ರೇಕಪ್ ಬಗ್ಗೆ ಮಾತನಾಡಲು ಕಷ್ಟವಾಗುತ್ತದೆ. ಆಪ್ತವಾಗಿರುವ ಜನರೊಂದಿಗೂ ಕೆಲವರು ಏನನ್ನೂ ಹಂಚಿಕೊಳ್ಳುವುದಿಲ್ಲ. ನಿಮ್ಮ ಹೃದಯ ಹಲವು ಬಾರಿ ಛಿದ್ರ ಆಗಿರಬಹುದು. ಜನರಿಗೆ ಅದರ ಬಗ್ಗೆ ತಿಳಿದಿರುವುದಿಲ್ಲ’ ಎಂದು ಬಿಬಿಸಿಗೆ ನೀಡಿದ ಸಂದರ್ಶನದಲ್ಲಿ ಅವರು ಹೇಳಿದ್ದಾರೆ.
ಇದನ್ನೂ ಓದಿ: ಮೆಸ್ಸಿ ಫಿಫಾ ವಿಶ್ವಕಪ್ ಗೆದ್ದಿದ್ದನ್ನು ಸಂಭ್ರಮಿಸಿದ ರಣಬೀರ್ ಕಪೂರ್-ಆಲಿಯಾ ಭಟ್; ನಡೆಯಿತು ಭರ್ಜರಿ ಪಾರ್ಟಿ
ಸಂಬಂಧಗಳಲ್ಲಿ ಸುಳ್ಳು ಹೇಳಬೇಕೋ ಅಥವಾ ಬೇಡವೋ ಎನ್ನುವ ಪ್ರಶ್ನೆ ಅನೇಕರದ್ದು. ಈ ಬಗ್ಗೆಯೂ ರಣಬೀರ್ ಮಾತನಾಡಿದ್ದಾರೆ. ‘ಸಂಬಂಧಗಳ ವಿಚಾರದಲ್ಲಿ ಹೆಚ್ಚು ಎಚ್ಚರಿಕೆಯಿಂದ ವರ್ತಿಸಬೇಕು. ಕೇವಲ ಲವರ್ ವಿಚಾರದಲ್ಲಿ ಮಾತ್ರವಲ್ಲ ಪೋಷಕರು ಹಾಗೂ ಸ್ನೇಹಿತರ ಜೊತೆಗೂ ಆಗಿರಬಹುದು. ಕೆಲವೊಮ್ಮೆ ಸುಳ್ಳಿಗಿಂತ ಸತ್ಯ ಹೆಚ್ಚು ಹಾನಿ ಮಾಡುತ್ತದೆ. ಹೀಗಾಗಿ ಕೆಲವೊಮ್ಮೆ ಸುಳ್ಳು ಒಳ್ಳೆಯದು. ಅದರಿಂದ ಸಂಬಂಧಗಳು ಉಳಿಯುತ್ತವೆ’ ಎಂದು ರಣಬೀರ್ ಕಪೂರ್ ಹೇಳಿಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ