‘ರಾಮಾಯಣ’ ರಿಲೀಸ್ ದಿನಾಂಕದ ಕುತೂಹಲಕ್ಕೆ ತೆರೆ? ಚಿತ್ರತಂಡದ ಪ್ಲ್ಯಾನ್ ಬಹಿರಂಗ

‘ರಾಮಾಯಣ’ ಸಿನಿಮಾ ಈ ವರ್ಷ ದೀಪಾವಳಿ ಸಂದರ್ಭದಲ್ಲಿ ಬಿಡುಗಡೆ ಆಗಲಿದೆ ಎಂಬುದು ತಿಳಿದಿದ್ದರೂ ಕೂಡ ನಿರ್ದಿಷ್ಟ ದಿನಾಂಕದ ಬಗ್ಗೆ ಮಾಹಿತಿ ಸಿಕ್ಕಿರಲಿಲ್ಲ. ಹಾಗಾಗಿ ಅಭಿಮಾನಿಗಳಿಗೆ ಕೊಂಚ ಗೊಂದಲ ಇತ್ತು. ಈಗ ಆ ಬಗ್ಗೆ ಮಾಧ್ಯಮಗಳಲ್ಲಿ ವರದಿ ಪ್ರಕಟ ಆಗಿದೆ. ಚಿತ್ರತಂಡದ ರಿಲೀಸ್ ಪ್ಲ್ಯಾನ್ ಬಗ್ಗೆ ಒಂದಷ್ಟು ವಿಷಯ ತಿಳಿದುಬಂದಿದೆ.

‘ರಾಮಾಯಣ’ ರಿಲೀಸ್ ದಿನಾಂಕದ ಕುತೂಹಲಕ್ಕೆ ತೆರೆ? ಚಿತ್ರತಂಡದ ಪ್ಲ್ಯಾನ್ ಬಹಿರಂಗ
Yash

Updated on: Aug 05, 2026 | 10:42 PM

ಸಾಕಷ್ಟು ನಿರೀಕ್ಷೆ ಮೂಡಿಸಿರುವ ‘ರಾಮಾಯಣ’ (Ramayana) ಸಿನಿಮಾದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ಸದ್ದು ಮಾಡಿತ್ತು. ಈ ಚಿತ್ರವು ದೀಪಾವಳಿ ಹಬ್ಬದಂದು ಬಿಡುಗಡೆಯಾಗಲಿದೆ ಎಂದು ಟ್ರೇಲರ್‌ನಲ್ಲಿ ಹೇಳಲಾಗಿತ್ತಾದರೂ, ನಿಖರವಾದ ದಿನಾಂಕವನ್ನು (Ramayana  Release Date) ಬಹಿರಂಗಪಡಿಸಿರಲಿಲ್ಲ. ಇದರಿಂದಾಗಿ ಸಿನಿಮಾ ನವೆಂಬರ್ 8ರ ದೀಪಾವಳಿಯಂದೇ ಬರುತ್ತದೋ ಅಥವಾ ನವೆಂಬರ್ 6ರ ಶುಕ್ರವಾರವೇ ತೆರೆಕಾಣುತ್ತದೋ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮನೆಮಾಡಿತ್ತು. ಅದಕ್ಕೆ ಈಗ ಉತ್ತರ ಸಿಕ್ಕಿದೆ.

ವರದಿಗಳ ಪ್ರಕಾರ, ‘ರಾಮಾಯಣ’ ಚಿತ್ರವು ನವೆಂಬರ್ 6ರ ಶುಕ್ರವಾರದಂದು ವಿಶ್ವದಾದ್ಯಂತ ಏಕಕಾಲಕ್ಕೆ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. ಇದರ ಹಿಂದೆ ಚಿತ್ರತಂಡದ ಲೆಕ್ಕಾಚಾರ ಇದೆ. ರಿಲೀಸ್ ದಿನಾಂಕದ ಬಗ್ಗೆ ಚಿತ್ರತಂಡದ ಮೂಲಗಳು ಮಾಹಿತಿ ನೀಡಿರುವುದಾಗಿ ‘ಬಾಲಿವುಡ್ ಹಂಗಾಮಾ’ ವರದಿ ಮಾಡಿದೆ.

ಸಾಮಾನ್ಯವಾಗಿ ದೀಪಾವಳಿ ಹಬ್ಬಕ್ಕೂ ಮುಂಚಿನ ದಿನಗಳಲ್ಲಿ ಸಿನಿಮಾ ಬಿಡುಗಡೆಯಾದರೆ ಗಲ್ಲಾಪೆಟ್ಟಿಗೆಯಲ್ಲಿ ಕೊಂಚ ಮಂದಗತಿಯ ಬಿಸಿನೆಸ್ ಕಾಣುತ್ತವೆ. ಆದರೆ ‘ರಾಮಾಯಣ’ ಚಿತ್ರದ ಮೇಲಿರುವ ಅಪಾರ ನಿರೀಕ್ಷೆಯಿಂದಾಗಿ ಈ ಸಿನಿಮಾ ಮೊದಲ ದಿನವೇ ದಾಖಲೆ ಮಟ್ಟದ ಗಳಿಕೆ ಕಾಣಲಿದೆ ಎಂದು ಟ್ರೇಡ್ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಈ ಸಿನಿಮಾ ನವೆಂಬರ್ 6ರಂದು ಬಿಡುಗಡೆ ಆದರೂ ಕೂಡ ನವೆಂಬರ್ 9ರ ಸೋಮವಾರದಿಂದ ಕಲೆಕ್ಷನ್ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಈ ಬಹುನಿರೀಕ್ಷಿತ ಚಿತ್ರವನ್ನು ಭಾರತದಲ್ಲಿ ‘ಧರ್ಮ ಪ್ರೊಡಕ್ಷನ್ಸ್’ ಸಂಸ್ಥೆ ವಿತರಣೆ ಮಾಡುತ್ತಿದ್ದರೆ, ವಿದೇಶಗಳಲ್ಲಿ ‘ಸೋನಿ ಪಿಕ್ಚರ್ಸ್’ ವಿತರಣೆಯ ಹಕ್ಕನ್ನು ಪಡೆದುಕೊಂಡಿದೆ. ಇನ್ನು ಚಿತ್ರದ ಎರಡೂ ಭಾಗಗಳ ಮ್ಯೂಸಿಕ್ ರೈಟ್ಸ್ ಅನ್ನು ‘ಟಿ-ಸಿರೀಸ್’ ಸಂಸ್ಥೆಯು ಬರೋಬ್ಬರಿ 75 ಕೋಟಿ ರೂಪಾಯಿಗೆ ಖರೀದಿಸಿದೆ.

ಇದನ್ನೂ ಓದಿ: ‘ರಾಮಾಯಣ’ ಸಿನಿಮಾ ಬಿಡುಗಡೆಗೂ ಮುನ್ನ ಬರಲಿದೆ ರಾಮಾಯಣ್ ಧಾರಾವಾಹಿ ಕುರಿತು ಸಾಕ್ಷ್ಯಚಿತ್ರ

‘ದಂಗಲ್’ ಖ್ಯಾತಿಯ ನಿತೇಶ್ ತಿವಾರಿ ನಿರ್ದೇಶನದ ಈ ದೃಶ್ಯಕಾವ್ಯವನ್ನು ನಮಿತ್ ಮಲ್ಹೋತ್ರಾ ನಿರ್ಮಿಸುತ್ತಿದ್ದಾರೆ. ಚಿತ್ರದಲ್ಲಿ ಶ್ರೀರಾಮನಾಗಿ ರಣಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ, ರಾವಣನಾಗಿ ರಾಕಿಂಗ್ ಸ್ಟಾರ್ ಯಶ್, ಹನುಮಂತನಾಗಿ ಸನ್ನಿ ಡಿಯೋಲ್ ಹಾಗೂ ಲಕ್ಷ್ಮಣನಾಗಿ ರವಿ ದುಬೆ ಅಭಿನಯಿಸುತ್ತಿದ್ದಾರೆ. ಎ.ಆರ್. ರೆಹಮಾನ್ ಮತ್ತು ಹಾನ್ಸ್ ಜಿಮ್ಮರ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us