ರಣವೀರ್ ಸಿಂಗ್, ಆದಿತ್ಯ ಚೋಪ್ರಾ ರಹಸ್ಯ ಸಭೆ; ಹಳೇ ಮುನಿಸು ಮರೆತು ಒಂದಾದ ಗುರು-ಶಿಷ್ಯ

ಒಂದಷ್ಟು ವಿಚಾರಗಳಿಂದಾಗಿ ರಣವೀರ್ ಸಿಂಗ್ ಮತ್ತು ಆದಿತ್ಯ ಚೋಪ್ರಾ ನಡುವೆ ಕಿರಿಕ್ ಆಗಿತ್ತು. ಈಗ ಅವರಿಬ್ಬರು ಸಂಧಾನ ಮಾಡಿಕೊಂಡಿದ್ದಾರೆ. ‘ಯಶ್ ರಾಜ್ ಫಿಲ್ಮ್ಸ್’ ಕಚೇರಿಯಲ್ಲಿ ಅವರು ಗೌಪ್ಯವಾಗಿ ಸಭೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಶೀಘ್ರದಲ್ಲೇ ಹೊಸ ಸಿನಿಮಾ ಘೋಷಿಸುವ ಸಾಧ್ಯತೆ ದಟ್ಟವಾಗಿದೆ.

ರಣವೀರ್ ಸಿಂಗ್, ಆದಿತ್ಯ ಚೋಪ್ರಾ ರಹಸ್ಯ ಸಭೆ; ಹಳೇ ಮುನಿಸು ಮರೆತು ಒಂದಾದ ಗುರು-ಶಿಷ್ಯ
Ranveer Singh, Aditya Chopra

Updated on: May 17, 2026 | 11:26 AM

ಬಾಲಿವುಡ್‌ನ ಎನರ್ಜಿಟಿಕ್ ಸ್ಟಾರ್ ರಣವೀರ್ ಸಿಂಗ್ (Ranveer Singh) ಸದ್ಯ ಯಶಸ್ಸಿನ ಉತ್ತುಂಗದಲ್ಲಿದ್ದಾರೆ. ಬ್ಯಾಕ್-ಟು-ಬ್ಯಾಕ್ ಎರಡು ಭರ್ಜರಿ ಹಿಟ್ ಸಿನಿಮಾಗಳನ್ನು ನೀಡುವ ಮೂಲಕ ಕೇವಲ ನಾಲ್ಕೇ ತಿಂಗಳಲ್ಲಿ ಬಾಕ್ಸ್ ಆಫೀಸ್ ಸುಲ್ತಾನ್ ಆಗಿ ಹೊರಹೊಮ್ಮಿದ್ದಾರೆ. ಸದ್ಯ ಬಾಲಿವುಡ್‌ನ ಪ್ರಮುಖ ನಿರ್ಮಾಪಕರು, ನಿರ್ದೇಶಕರು ಮತ್ತು ದೊಡ್ಡ ಬ್ರ್ಯಾಂಡ್‌ಗಳ ಮೊದಲ ಆಯ್ಕೆಯಾಗಿರುವ ರಣವೀರ್ ಸಿಂಗ್, ಇತ್ತೀಚೆಗಷ್ಟೇ ತಮಗೆ ಚಿತ್ರರಂಗದಲ್ಲಿ ಮೊದಲ ಬ್ರೇಕ್ ನೀಡಿದ್ದ ಖ್ಯಾತ ನಿರ್ಮಾಪಕ ಆದಿತ್ಯ ಚೋಪ್ರಾ (Aditya Chopra) ಅವರನ್ನು ರಹಸ್ಯವಾಗಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಯಶ್ ರಾಜ್ ಫಿಲ್ಮ್ಸ್ ಕಚೇರಿಯಲ್ಲಿ ನಡೆದ ಗೌಪ್ಯ ಸಭೆಯು ಬಾಲಿವುಡ್ ಅಂಗಳದಲ್ಲಿ ಭಾರಿ ಕುತೂಹಲ ಮೂಡಿಸಿದೆ. ಮೂಲಗಳ ಪ್ರಕಾರ, ರಣವೀರ್ ಸಿಂಗ್ ಅವರ ಇತ್ತೀಚಿನ ಬಿಗ್ ಹಿಟ್ ಸಿನಿಮಾ ‘ಧುರಂಧರ್’ ಸಾಧಿಸಿದ ಅಭೂತಪೂರ್ವ ಯಶಸ್ಸು ಆದಿತ್ಯ ಚೋಪ್ರಾಗೆ ವೈಯಕ್ತಿಕವಾಗಿ ತುಂಬಾ ಸಂತೋಷ ತಂದಿದೆ. ಏಕೆಂದರೆ, ರಣವೀರ್ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿ, ಅವರು ಇಂದು ಈ ಮಟ್ಟಕ್ಕೆ ಬೆಳೆಯಲು ಬಲವಾದ ಅಡಿಪಾಯ ಹಾಕಿಕೊಟ್ಟಿದ್ದೇ ಆದಿತ್ಯ ಚೋಪ್ರಾ.

ಕಳೆದ ಕೆಲವು ವರ್ಷಗಳಿಂದ ಇಬ್ಬರ ನಡುವೆ ಇದ್ದ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಈ ಸಭೆಯಲ್ಲಿ ಬಗೆಹರಿಸಿಕೊಂಡಿದ್ದಾರೆ ಎನ್ನಲಾಗಿದೆ. ಇಬ್ಬರೂ ಪರಸ್ಪರ ಆಲಂಗಿಸಿಕೊಂಡಿದ್ದಾರೆ. ಈ ಸುದೀರ್ಘ ಸಭೆಯಲ್ಲಿ ಇಬ್ಬರ ಭವಿಷ್ಯದ ಯೋಜನೆಗಳು, ‘ಧುರಂಧರ್’ ಸಿನಿಮಾದ ಭಾರಿ ಯಶಸ್ಸು ಹಾಗೂ ಮುಂದೆ ಜೊತೆಯಾಗಿ ಕೆಲಸ ಮಾಡುವ ಕುರಿತು ಸುದೀರ್ಘ ಚರ್ಚೆ ನಡೆದಿದೆ.

ಈ ರಹಸ್ಯ ಸಭೆಯಲ್ಲಿ ಆದಿತ್ಯ ಚೋಪ್ರಾ ಮತ್ತು ರಣವೀರ್ ಸಿಂಗ್ ದೊಡ್ಡ ಮಟ್ಟದ ಸಿನಿಮಾವೊಂದಕ್ಕಾಗಿ ಕೈಜೋಡಿಸಲು ಆಸಕ್ತಿ ತೋರಿಸಿದ್ದಾರೆ. ಮುಂಬರುವ 6 ತಿಂಗಳ ಒಳಗಾಗಿ ರಣವೀರ್ ಸಿಂಗ್‌ಗಾಗಿ ಒಂದು ಭರ್ಜರಿ ಕಥೆಯನ್ನು ಸಿದ್ಧಪಡಿಸಿಕೊಂಡು ಬರುವುದಾಗಿ ಆದಿತ್ಯ ಚೋಪ್ರಾ ಭರವಸೆ ನೀಡಿದ್ದಾರೆ. ರಣವೀರ್ ಕೂಡ ಈ ಖ್ಯಾತ ನಿರ್ದೇಶಕ-ನಿರ್ಮಾಪಕನ ಕಥೆ ಕೇಳಲು ಕಾತುರರಾಗಿದ್ದಾರೆ. ರಣವೀರ್ ಸಿಂಗ್ ಅವರಿಗೆ ವೈಆರ್‌ಎಫ್ ಬ್ಯಾನರ್‌ಗೆ ಮರಳುವುದು ತವರು ಮನೆಗೆ ಮರಳಿದಷ್ಟೇ ವಿಶೇಷವಾಗಿದೆ.

ಇದನ್ನೂ ಓದಿ: ಮತ್ತೆ ಒಂದಾದ ‘ಧುರಂಧರ್’ ಜೋಡಿ; ಆದಿತ್ಯ ಧಾರ್ ಹೊಸ ಚಿತ್ರಕ್ಕೆ ರಣವೀರ್ ಹೀರೋ

ರಣವೀರ್ ಸಿಂಗ್ ಸದ್ಯ ಮತ್ತೊಂದು ದೊಡ್ಡ ಸಾಹಸಕ್ಕೆ ಕೈಹಾಕಿದ್ದಾರೆ. ಪ್ರಸಿದ್ಧ ಲೇಖಕ ಅಮಿಶ್ ತ್ರಿಪಾಠಿ ಅವರ ಬೆಸ್ಟ್ ಸೆಲ್ಲರ್ ಕಾದಂಬರಿ ‘ಇಮ್ಮಾರ್ಟಲ್ಸ್ ಆಫ್ ಮೆಲುಹಾ’ ಹಕ್ಕುಗಳನ್ನು ರಣವೀರ್ ಪಡೆದುಕೊಂಡಿದ್ದು, ಸದ್ಯ ಇದು ಸ್ಕ್ರಿಪ್ಟಿಂಗ್ ಹಂತದಲ್ಲಿದೆ. ಒಟ್ಟಿನಲ್ಲಿ, ಯಶ್ ರಾಜ್ ಫಿಲ್ಮ್ಸ್ ಮತ್ತು ರಣವೀರ್ ಸಿಂಗ್ ಕಾಂಬಿನೇಷನ್ ಮತ್ತೆ ಒಂದಾಗುತ್ತಿರುವುದು ಅಭಿಮಾನಿಗಳಲ್ಲಿ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us