‘ಧುರಂಧರ್ 2’ ಬಗ್ಗೆ ಶಾರುಖ್ ಖಾನ್​ ಮೌನ: ಆದರೂ ರಣವೀರ್ ಸಿಂಗ್ ಜೊತೆ ಪಾರ್ಟಿ

‘ಧುರಂಧರ್ 2’ ಬಗ್ಗೆ ಅನೇಕ ಸೆಲೆಬ್ರಿಟಿಗಳು ಹೊಗಳಿದ್ದರೂ ಕೂಡ ಶಾರುಖ್ ಖಾನ್ ಮೌನ ತಾಳಿದ್ದಾರೆ. ರಣವೀರ್ ಸಿಂಗ್ ಬಗ್ಗೆ ಅವರಿಗೆ ಅಸಮಾಧಾನ ಇರಬಹುದಾ ಎಂಬ ಅನುಮಾನ ಹಲವರಿಗೆ ಮೂಡಿತ್ತು. ಆದರೆ ಈಗ ಶಾರುಖ್ ಮತ್ತು ರಣವೀರ್ ಸಿಂಗ್ ಒಟ್ಟಿಗೆ ಪಾರ್ಟಿ ಮಾಡಿ, ಅನುಮಾನಕ್ಕೆ ತೆರೆ ಎಳೆದಿದ್ದಾರೆ.

‘ಧುರಂಧರ್ 2’ ಬಗ್ಗೆ ಶಾರುಖ್ ಖಾನ್​ ಮೌನ: ಆದರೂ ರಣವೀರ್ ಸಿಂಗ್ ಜೊತೆ ಪಾರ್ಟಿ
Birthday Party Viral Photo
Image Credit source: Bollywood Street Snap

Updated on: Mar 30, 2026 | 3:37 PM

ಬಾಲಿವುಡ್ ಅಂಗಳದಲ್ಲಿ ಈಗ ಎಲ್ಲಿ ನೋಡಿದರೂ ನಟ ರಣವೀರ್ ಸಿಂಗ್ (Ranveer Singh) ಅವರದ್ದೇ ಹವಾ. ಆದಿತ್ಯ ಧರ್ ನಿರ್ದೇಶನದ ‘ಧುರಂಧರ್ 2’ (Dhurandhar 2) ಚಿತ್ರದ ಭರ್ಜರಿ ಯಶಸ್ಸಿನಿಂದ ರಣವೀರ್ ಸಿಂಗ್ ಅವರು ಸೆನ್ಸೇಷನ್ ಸೃಷ್ಟಿ ಮಾಡಿದ್ದಾರೆ. ಆದರೆ, ಈ ಯಶಸ್ಸಿನ ನಡುವೆಯೂ ಒಂದು ಸಣ್ಣ ಅಸಮಾಧಾನ ಅಭಿಮಾನಿಗಳಲ್ಲಿ ಮನೆಮಾಡಿತ್ತು. ಅದೇನೆಂದರೆ, ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್ (Shah Rukh Khan) ಅವರು ರಣವೀರ್ ಅವರ ಈ ದೊಡ್ಡ ಸಾಧನೆಯ ಬಗ್ಗೆ ಯಾಕೆ ಮೌನವಾಗಿದ್ದಾರೆ ಎಂಬುದು. ಈಗ ಆ ಎಲ್ಲಾ ಪ್ರಶ್ನೆಗಳಿಗೆ ಮತ್ತು ಅಭಿಮಾನಿಗಳ ವದಂತಿಗಳಿಗೆ ಒಂದು ಫೋಟೋ ಉತ್ತರ ನೀಡಿದೆ.

ಇತ್ತೀಚೆಗೆ ಖ್ಯಾತ ಉದ್ಯಮಿ ಮೋಹಿತ್ ಕಾಂಬೋಜ್ ಅವರ ಪುತ್ರಿ ಮಿಷ್ಕಾ ಕಾಂಬೋಜ್ ಅವರ ಅದ್ದೂರಿ ಹುಟ್ಟುಹಬ್ಬದ ಪಾರ್ಟಿ ಮುಂಬೈನಲ್ಲಿ ನಡೆಯಿತು. ಈ ಸಂಭ್ರಮಕ್ಕೆ ಸಂಜಯ್ ದತ್, ರಣವೀರ್ ಸಿಂಗ್, ಶಾರುಖ್ ಖಾನ್ ಸೇರಿದಂತೆ ಬಾಲಿವುಡ್‌ನ ಘಟಾನುಘಟಿಗಳು ಹಾಜರಾಗಿದ್ದರು. ಈ ಪಾರ್ಟಿಯ ಹಲವು ವಿಡಿಯೋ ಮತ್ತು ಫೋಟೋಗಳು ಈಗ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಸದ್ಯ ಇಂಟರ್ನೆಟ್‌ನಲ್ಲಿ ಸಖತ್ ಸದ್ದು ಮಾಡುತ್ತಿರುವುದು ಶಾರುಖ್ ಖಾನ್ ಮತ್ತು ರಣವೀರ್ ಸಿಂಗ್ ಒಟ್ಟಿಗೆ ಇರುವ ಫೋಟೋ. ಈ ಫೋಟೋದಲ್ಲಿ ಇಬ್ಬರೂ ನಟರು ನಗುಮೊಗದಿಂದ ಪೋಸ್ ನೀಡಿದ್ದು, ಅವರ ಜೊತೆಗೆ ನಟಿ ಶಿಲ್ಪಾ ಶೆಟ್ಟಿ ಕೂಡ ಕಾಣಿಸಿಕೊಂಡಿದ್ದಾರೆ. ಫೋಟೋ ನೋಡಿದ ಅಭಿಮಾನಿಗಳು, ‘ಇಬ್ಬರ ನಡುವೆ ಯಾವುದೇ ಅಸಮಾಧಾನವಿಲ್ಲ. ಕಿಂಗ್ ಖಾನ್ ಯಾವಾಗಲೂ ರಣವೀರ್ ಅವರನ್ನು ಬೆಂಬಲಿಸುತ್ತಾರೆ’ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

‘ಧುರಂಧರ್ 2’ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಬರೆಯುತ್ತಿದ್ದರೂ ಕೂಡ ಶಾರುಖ್ ಖಾನ್, ಸಲ್ಮಾನ್ ಖಾನ್ ಅಥವಾ ಆಮೀರ್ ಖಾನ್ ಅವರು ಬಹಿರಂಗವಾಗಿ ಚಿತ್ರದ ಬಗ್ಗೆ ಪೋಸ್ಟ್ ಮಾಡಿಲ್ಲ ಎಂದು ನೆಟ್ಟಿಗರು ಟೀಕಿಸುತ್ತಿದ್ದರು. ಅವರಿಗೆ ರಣವೀರ್ ಸಿಂಗ್ ಬಗ್ಗೆ ಏನಾದರೂ ಅಸಮಾಧಾನ ಇರಬಹುದಾ ಎಂಬ ಅನುಮಾನ ಮೂಡಿತ್ತು. ಆದರೆ, ಈ ವೈರಲ್ ಫೋಟೋದಿಂದಾಗಿ ಎಲ್ಲ ಅನುಮಾನಕ್ಕೆ ತೆರೆಬಿದ್ದಿದೆ.

ಇದನ್ನೂ ಓದಿ: ‘ಶಾರುಖ್ ಖಾನ್ ಬಳಿ ನಾನು ಲಂಚ ಕೇಳಿಲ್ಲ’: ಬಾಂಬೆ ಹೈಕೋರ್ಟ್‌ನಲ್ಲಿ ಸಮೀರ್ ವಾಂಖೆಡೆ ವಾದ

‘ಧುರಂಧರ್ 2’ ಚಿತ್ರವು ವಿಶ್ವಾದ್ಯಂತ 1300 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಮಾಡಿದೆ. ಈ ಸಿನಿಮಾ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಇದನ್ನು ಬಿಜೆಪಿ ಪರವಾದ ಪ್ರೊಪಗಾಂಡ ಸಿನಿಮಾ ಎಂದು ಟೀಕಿಸಿದ್ದಾರೆ. ಆದರೆ ರಿಷಬ್ ಶೆಟ್ಟಿ, ರಜನಿಕಾಂತ್, ಶಿವರಾಜ್​ಕುಮಾರ್ ಮುಂತಾದ ಸೆಲೆಬ್ರಿಟಿಗಳು ಈ ಚಿತ್ರವನ್ನು ಹೊಗಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us