ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ‘83’ ಚಿತ್ರ (83 Movie) ಕೂಡ ಮುಂಚೂಣಿಯಲ್ಲಿದೆ. ರಣವೀರ್ ಸಿಂಗ್ (Ranveer Singh) ಮುಖ್ಯಭೂಮಿಕೆ ನಿಭಾಯಿಸಿರುವ ಈ ಚಿತ್ರವನ್ನು ಕರ್ನಾಟಕದಲ್ಲಿ ಕಿಚ್ಚ ಸುದೀಪ್ (Kichcha Sudeep) ಅವರು ರಿಲೀಸ್ ಮಾಡುತ್ತಿದ್ದಾರೆ. ಕಬೀರ್ ಖಾನ್ ನಿರ್ದೇಶನ ಮಾಡಿರುವ ‘83’ ಚಿತ್ರ ಹಲವು ಕಾರಣಗಳಿಂದಾಗಿ ನಿರೀಕ್ಷೆ ಮೂಡಿಸಿದೆ. 1983ರ ಕ್ರಿಕೆಟ್ ವಿಶ್ವಕಪ್ನಲ್ಲಿ (1983 World Cup) ಭಾರತ ತಂಡ ಗೆಲುವು ಸಾಧಿಸಿದ ಘಟನೆಯನ್ನೇ ಆಧರಿಸಿ ಈ ಸಿನಿಮಾ ತಯಾರಾಗಿದೆ. ಡಿ.24ರಂದು ಅದ್ದೂರಿಯಾಗಿ ‘83’ ಬಿಡುಗಡೆ ಆಗುತ್ತಿದೆ. ರಿಲೀಸ್ ದಿನಾಂಕ ಹತ್ತಿರ ಆಗುತ್ತಿರುವ ಸಮಯದಲ್ಲಿ ಚಿತ್ರದ ಬಗೆಗಿನ ಹಲವು ಇಂಟರೆಸ್ಟಿಂಗ್ ವಿಷಯಗಳು ಹೊರಬರುತ್ತಿವೆ. ಅಚ್ಚರಿ ಎಂದರೆ ಈ ಸಿನಿಮಾದ ನಿರ್ಮಾಪಕರು ಕಥೆಗಾಗಿ ಬಹುಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ.
1983ರ ವಿಶ್ವಕಪ್ ವೇಳೆ ಏನೆಲ್ಲ ನಡೆಯಿತು ಎಂಬುದಕ್ಕೆ ಈಗ ಸೂಕ್ತ ದಾಖಲೆಗಳಿಲ್ಲ. ಈ ಘಟನೆಗಳಿಗೆ ಸಂಬಂಧಿಸಿದಂತೆ ವಿಡಿಯೋಗಳು ಕೂಡ ಹೆಚ್ಚು ಲಭ್ಯವಿಲ್ಲ. ಹಾಗಾಗಿ ಅಂದು ಭಾರತ ತಂಡದಲ್ಲಿ ಇದ್ದ ಆಟಗಾರರನ್ನೇ ಮಾತನಾಡಿಸಿ ವಿವರಗಳನ್ನು ಕಲೆ ಹಾಕಬೇಕಾಯಿತು. ಆ ವಿವರಗಳನ್ನು ಪಡೆಯಲು ‘83’ ನಿರ್ಮಾಪಕರು ಕೋಟ್ಯಂತರ ರೂಪಾಯಿ ವೆಚ್ಚ ಮಾಡಿದ್ದಾರೆ. ಟೀಮ್ನಲ್ಲಿದ್ದ ಎಲ್ಲ ಆಟಗಾರರಿಗೂ ಸೇರಿ ಒಟ್ಟು 15 ಕೋಟಿ ರೂ.ಗಳನ್ನು ನೀಡಲಾಗಿದೆ. ಅದರಲ್ಲಿ ಕ್ಯಾಪ್ಟನ್ ಕಪಿಲ್ ದೇವ್ ಅವರಿಗೆ ಬರೋಬ್ಬರಿ 5 ಕೋಟಿ ಕೊಡಲಾಗಿದೆ. ದೀಪಿಕಾ ಪಡುಕೋಣೆ, ಕಬೀರ್ ಖಾನ್, ವಿಷ್ಣು ವರ್ಧನ್ ಇಂದುರಿ, ಸಾಜಿದ್ ನಾಡಿಯದ್ವಾಲ, ಫಾಂಟಮ್ ಫಿಲ್ಮ್ಸ್ ಹಾಗೂ 83 ಫಿಲ್ಮ್ ಲಿಮಿಟೆಡ್ ಮೂಲಕ ಈ ಚಿತ್ರ ನಿರ್ಮಾಣ ಆಗಿದೆ.
ಕಿಚ್ಚ ಸುದೀಪ್ ಅವರು ಈ ಸಿನಿಮಾ ಬಗ್ಗೆ ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಆ ಬಗ್ಗೆ ಅವರು ಈಗಾಗಲೇ ಅನೇಕ ಬಾರಿ ಮಾತನಾಡಿದ್ದಾರೆ. ‘1983ರ ವಿಶ್ವಕಪ್ ಬಗ್ಗೆ ಮಾತನಾಡಲು ಹಲವು ವಿಚಾರಗಳಿವೆ. ಅದರಲ್ಲೊಂದು ಕಥೆ ಇದೆ ಅಂತ ಒಂದು ತಂಡ ನಂಬಿದೆ. ಆ ಕಥೆ ಮಹತ್ವದ್ದಾಗಲಿದೆ ಎಂಬ ನಂಬಿಕೆ ಆ ತಂಡಕ್ಕೆ ಇದೆ. ಆ ನಂಬಿಕೆಯೇ ನನಗೆ ಒಂದು ಅದ್ಭುತ ಕಥೆಯಂತೆ ಕಾಣಿಸುತ್ತಿದೆ. ಒಬ್ಬ ಕ್ರಿಕೆಟ್ ಪ್ರೇಮಿಯಾಗಿ, ಭಾರತೀಯನಾಗಿ ಥಿಯೇಟರ್ನಲ್ಲಿ ಈ ಚಿತ್ರವನ್ನು ನೋಡಿ ಎಂಜಾಯ್ ಮಾಡಲು ಬಯಸುತ್ತೇನೆ. ಇಂಥ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದಕ್ಕಾಗಿ ನಿರ್ದೇಶಕ ಕಬೀರ್ ಖಾನ್ ಮತ್ತು ಇಡೀ ತಂಡಕ್ಕೆ ನನ್ನ ಅಭಿನಂದನೆಗಳು. ಭಾರತ ವಿಶ್ವಕಪ್ ಗೆದ್ದಾಗ ಎಷ್ಟು ಖುಷಿ ಆಗಿತ್ತೋ ಅದೇ ರೀತಿ ಈ ಸಿನಿಮಾ ತೆರೆಕಾಣುತ್ತಿರುವುದಕ್ಕೆ ಖುಷಿ ಆಗುತ್ತಿದೆ’ ಎಂದು ಸುದೀಪ್ ಹೇಳಿದ್ದಾರೆ.
ಇದನ್ನೂ ಓದಿ:
‘83’ ಸಿನಿಮಾ ವೇದಿಕೆಯಲ್ಲಿ ರಣವೀರ್ ಸಿಂಗ್ಗೆ ಕನ್ನಡ ಡೈಲಾಗ್ ಹೇಳಿಕೊಟ್ಟ ಕಿಚ್ಚ ಸುದೀಪ್
ಒಂದೇ ವೇದಿಕೆ ಮೇಲೆ ಸುದೀಪ್, ರಣವೀರ್, ಕಪಿಲ್ ದೇವ್; ‘83’ ಸುದ್ದಿಗೋಷ್ಠಿ ನೋಡಲು ಇಲ್ಲಿ ಕ್ಲಿಕ್ ಮಾಡಿ