ನಟ ರಣವೀರ್ ಸಿಂಗ್ (Ranveer Singh) ಅವರು ಬಾಲಿವುಡ್ನಲ್ಲಿ ಬೇಡಿಕೆಯ ನಟ ಆಗಿದ್ದಾರೆ. ಒಂದು ಕಾಲದಲ್ಲಿ ‘ಪದ್ಮಾವತ್’, ‘ಬಾಜಿರಾವ್ ಮಸ್ತಾನಿ’ ಮುಂತಾದ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ ಅವರು ಇತ್ತೀಚೆಗೆ ಕೊಂಚ ಸೊರಗಿದ್ದಾರೆ ಎಂಬುದು ಕೂಡ ನಿಜ. ಬಾಕ್ಸ್ ಆಫೀಸ್ನಲ್ಲಿ ಅವರ ಸಿನಿಮಾಗಳು ನಿರೀಕ್ಷಿತ ಮಟ್ಟದಲ್ಲಿ ಕಲೆಕ್ಷನ್ ಮಾಡುತ್ತಿಲ್ಲ. ಸಮಾಧಾನಕರ ಸಂಗತಿ ಏನೆಂದರೆ ಅವರು ನಟಿಸಿರುವ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ (Rocky Aur Rani Ki Prem Kahani) ಸಿನಿಮಾ ಅರ್ಧ ಶತಕ ಬಾರಿಸಿದೆ. ಅಂದರೆ, ಈ ಸಿನಿಮಾದ ಕಲೆಕ್ಷನ್ 50 ಕೋಟಿ ರೂಪಾಯಿ ದಾಟಿದೆ. ಕರಣ್ ಜೋಹರ್ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ರಣವೀರ್ ಸಿಂಗ್ಗೆ ಜೋಡಿಯಾಗಿ ಆಲಿಯಾ ಭಟ್ (Alia Bhatt) ನಟಿಸಿದ್ದಾರೆ. ಮುಂದಿನ ದಿನಗಳಲ್ಲಿ ಈ ಚಿತ್ರ ಎಷ್ಟು ಕಲೆಕ್ಷನ್ ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಜುಲೈ 28ರಂದು ಬಿಡುಗಡೆಯಾದ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾ ಮೊದಲ ದಿನ 11.10 ಕೋಟಿ ರೂಪಾಯಿ ಗಳಿಸಿತ್ತು. ಎರಡನೇ ದಿನ ಕಲೆಕ್ಷನ್ ಹೆಚ್ಚಿತು. ಅಂದು ಈ ಚಿತ್ರ 16.05 ಕೋಟಿ ರೂಪಾಯಿ ಬಾಚಿಕೊಂಡಿತು. ಭಾನುವಾರ (ಜುಲೈ 30) ಕೂಡ ಉತ್ತಮವಾಗಿಯೇ (18.75 ಕೋಟಿ ರೂಪಾಯಿ) ಕಮಾಯಿ ಆಯಿತು. ಆದರೆ ಸೋಮವಾರ ಈ ಸಿನಿಮಾದ ಗಳಿಕೆ ಗಣನೀಯವಾಗಿ ಕುಸಿದಿದೆ. ಮೂಲಗಳ ಪ್ರಕಾರ ಸೋಮವಾರ ಕೇವಲ 7 ಕೋಟಿ ರೂಪಾಯಿ ಆಗಿದೆ. ಅಲ್ಲಿಗೆ, 4 ದಿನಕ್ಕೆ 50 ಕೋಟಿ ರೂಪಾಯಿ ಗಡಿ ದಾಟುವಲ್ಲಿ ಈ ಸಿನಿಮಾ ಯಶಸ್ವಿಯಾಗಿದೆ.
ಇದನ್ನೂ ಓದಿ: ‘ಒಂದು ಎಚ್ಚರಿಕೆ ಕೊಟ್ಟಿದ್ದರೆ ಚೆನ್ನಾಗಿರುತ್ತಿತ್ತು’; ದೀಪಿಕಾ ಪಡುಕೋಣೆ ಹಾಟ್ ಅವತಾರಕ್ಕೆ ದಂಗಾದ ಪತಿ ರಣವೀರ್ ಸಿಂಗ್
ವಾರದ ದಿನಗಳಲ್ಲಿ ಎಷ್ಟು ಕಲೆಕ್ಷನ್ ಆಗುತ್ತದೆ ಎಂಬುದು ಬಹಳ ಮುಖ್ಯವಾಗುತ್ತದೆ. ಸೋಮವಾರ (ಜುಲೈ 31) ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾದ ಕಲೆಕ್ಷನ್ ಕುಸಿದಿದೆ. ಮಂಗಳವಾರದ ಗಳಿಕೆ ಇನ್ನೂ ಕಡಿಮೆ ಅಗುವ ಸಾಧ್ಯತೆ ಇದೆ. ಇನ್ನು, ಚಿತ್ರಮಂದಿರಗಳಲ್ಲಿ ‘ಆಪನ್ಹೈಮರ್’, ‘ಬಾರ್ಬಿ’ ಮುಂತಾದ ಸಿನಿಮಾಗಳು ಪೈಪೋಟಿ ನೀಡುತ್ತಿವೆ. ದಕ್ಷಿಣ ಭಾರತದಲ್ಲಿ ‘ಕೌಸಲ್ಯ ಸುಪ್ರಜಾ ರಾಮ’, ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’, ‘ಆಚಾರ್ ಆ್ಯಂಡ್ ಕೋ’, ‘ಬೇಬಿ’ ಮುಂತಾದ ಚಿತ್ರಗಳು ಚೆನ್ನಾಗಿ ಪ್ರದರ್ಶನ ಕಾಣುತ್ತಿವೆ. ಹಾಗಾಗಿ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಚಿತ್ರಕ್ಕೆ ಕೊಂಚ ಹಿನ್ನಡೆ ಆಗಿದೆ.
ಬಹುವರ್ಷಗಳ ಬಳಿಕ ಕರಣ್ ಜೋಹರ್ ಅವರು ನಿರ್ದೇಶನ ಮಾಡಿದ ಸಿನಿಮಾ ಎಂಬ ಕಾರಣಕ್ಕಾಗಿ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಚಿತ್ರದ ಮೇಲೆ ಹೈಪ್ ಸೃಷ್ಟಿ ಆಗಿತ್ತು. ಆಲಿಯಾ ಭಟ್ ಮತ್ತು ರಣವೀರ್ ಸಿಂಗ್ ಅವರು ಜೋಡಿಯಾಗಿ ನಟಿಸಿದ್ದರಿಂದ ನಿರೀಕ್ಷೆ ಹೆಚ್ಚಿತ್ತು. ಬಿಗ್ ಬಜೆಟ್ನಲ್ಲಿ ಈ ಸಿನಿಮಾ ಮೂಡಿಬಂದಿದೆ. ಅಂಥ ಬಿಗ್ ಬಜೆಟ್ ಚಿತ್ರಕ್ಕೆ ಈಗ ಆಗಿರುವ ಕಲೆಕ್ಷನ್ ಆಶಾದಾಯಕವಲ್ಲ ಎನ್ನಬಹುದು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.