ರಣ್ವೀರ್-ದೀಪಿಕಾ ವಿಚ್ಛೇದನ ಗಾಳಿ ಸುದ್ದಿಯ ತಣ್ಣಗಾಗಿಸಿದ ಉಂಗುರ
ರಣ್ವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ತಮ್ಮ ಮದುವೆಯ ಚಿತ್ರಗಳನ್ನು ಇನ್ಸ್ಟಾಗ್ರಾಂನಿಂದ ಡಿಲೀಟ್ ಮಾಡಿದ್ದರು. ಇದು ಇವರಿಬ್ಬರ ದಾಂಪತ್ಯದಲ್ಲಿ ಬಿರುಕು ಮೂಡಿರುವ ಅನುಮಾನ ಹುಟ್ಟಿಸಿತ್ತು. ಆದರೆ ಈಗ ಸ್ಪಷ್ಟನೆ ದೊರೆತಿದೆ.
ರಣ್ವೀರ್ ಸಿಂಗ್ (Ranveer Singh) ಹಾಗೂ ದೀಪಿಕಾ ಪಡುಕೋಣೆ (Deepika Padukone) ಬಾಲಿವುಡ್ನ ಕ್ಯೂಟ್ ಜೋಡಿಗಳಲ್ಲಿ ಒಂದು. ಇತ್ತೀಚೆಗಷ್ಟೆ ದೀಪಿಕಾ ಪಡುಕೋಣೆ ಗರ್ಭಿಣಿಯಾಗಿರುವ ಸಿಹಿ ಸುದ್ದಿ ಕೊಟ್ಟಿದ್ದರು. ದಾಂಪತ್ಯದ ಸವಿ ಅನುಭವಿಸುತ್ತಿದ್ದ ರಣ್ವೀರ್-ದೀಪಿಕಾ ಪೋಷಕರಾಗಲು ರೆಡಿಯಾಗಿದ್ದ ಸಮಯದಲ್ಲಿಯೇ ಇಬ್ಬರ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಗಾಳಿ ಸುದ್ದಿ ಹರಿದಾಡಲು ಆರಂಭವಾಗಿತ್ತು. ಅದಕ್ಕೆ ಕಾರಣವಾಗಿದ್ದು ರಣ್ವೀರ್ ಹಾಗೂ ದೀಪಿಕಾರ ಇನ್ಸ್ಟಾಗ್ರಾಂ. ಇಬ್ಬರೂ ಸಹ ತಮ್ಮ ಮದುವೆಯ ಚಿತ್ರಗಳನ್ನು ಇನ್ಸ್ಟಾಗ್ರಾಂನಿಂದ ಡಿಲೀಟ್ ಮಾಡಿದ್ದರು. ಈ ನಡೆ, ಇಬ್ಬರ ನಡುವಿನ ದಾಂಪತ್ಯದಲ್ಲಿ ಬಿರುಕು ಮೂಡಿದಿಯೇ ಎಂಬ ಅನುಮಾನ ಹುಟ್ಟಿಸಿತ್ತು.
ಆದರೆ ಈಗ ಆ ಅನುಮಾನಕ್ಕೆ ಸ್ವತಃ ರಣ್ವೀರ್ ಸಿಂಗ್ ಅಂತ್ಯ ಹಾಡಿದ್ದಾರೆ. ನಿನ್ನೆಯಷ್ಟೆ ರಣ್ವೀರ್ ಸಿಂಗ್ ಆಭರಣ ಮಳಿಗೆಯೊಂದರ ಉದ್ಘಾಟನೆಯಲ್ಲಿ ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ ಮಾತನಾಡುತ್ತಾ ತಮಗೆ ಇಷ್ಟವಾದ ಆಭರಣಗಳ ಬಗ್ಗೆಯೂ ಮಾತನಾಡಿದರು. ಈ ವೇಳೆ ಪತ್ನಿ ದೀಪಿಕಾ ಪಡುಕೋಣೆ ಬಗ್ಗೆ ಮಾತನಾಡಿ, ‘ದೀಪಿಕಾ ನನಗೆ ಮದುವೆ ಹಾಗೂ ನಿಶ್ಚಿತಾರ್ಥದಲ್ಲಿ ಕೊಟ್ಟ ಉಂಗುರ ನನ್ನ ಪಾಲಿನ ಅತ್ಯಂತ ಅಮೂಲ್ಯವಾದ ಆಭರಣ’ ಎಂದು ಹೇಳಿದ್ದಾರೆ. ಮಾತ್ರವಲ್ಲದೆ ತಾವು ಮದುವೆಯ ಉಂಗುರವನ್ನು ಸದಾ ಧರಿಸುವುದಾಗಿ ಹೇಳಿ ಉಂಗುರವನ್ನು ತೋರಿಸಿದ್ದಾರೆ ಸಹ.
ಅದೇ ಕಾರ್ಯಕ್ರಮದಲ್ಲಿ ತಮ್ಮ ತಾಯಿಯ ವಜ್ರದ ಕಿವಿಯೋಲೆ ಹಾಗೂ ನನ್ನ ಅಜ್ಜಿಯ ಮುತ್ತಿನ ಹಾರದೊಂದಿಗೆ ಸಹ ನನಗೆ ವಿಶೇಷ ಪ್ರೀತಿಯಿದೆ’ ಎಂದು ರಣ್ವೀರ್ ಸಿಂಗ್ ಹೇಳಿಕೊಂಡಿದ್ದಾರೆ. ತಾವು ಸಹ ಕೆಲವು ಆಭರಣಗಳನ್ನು ಧರಿಸುವುದಾಗಿ, ಕೆಲವು ಆಭರಣಗಳೊಟ್ಟಿಗೆ ಭಾವನಾತ್ಮಕ ಬಂಧವನ್ನು ಹೊಂದಿರುವುದಾಗಿಯೂ ರಣ್ವೀರ್ ಸಿಂಗ್ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ:ಬೆಂಗಳೂರಿನಲ್ಲಿಯೇ ಮಗುವಿಗೆ ಜನ್ಮ ನೀಡಲಿದ್ದಾರೆ ದೀಪಿಕಾ ಪಡುಕೋಣೆ
ಕೆಲವು ದಿನಗಳ ಹಿಂದಷ್ಟೆ ರಣ್ವೀರ್ ಸಿಂಗ್ ತಮ್ಮ ಇನ್ಸ್ಟಾಗ್ರಾಂನಿಂದ ತಮ್ಮ ಹಾಗೂ ದೀಪಿಕಾ ಪಡುಕೋಣೆಯ ಮದುವೆಯ ಚಿತ್ರಗಳನ್ನು ತೆಗೆದು ಹಾಕಿದ್ದರು. ಅದಾದ ಕೆಲವೇ ದಿನಕ್ಕೆ ದೀಪಿಕಾ ಪಡುಕೋಣೆ ಸಹ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿದ್ದ ತಮ್ಮ ಮದುವೆಯ ಚಿತ್ರಗಳನ್ನು ತೆಗೆದು ಹಾಕಿದ್ದರು. ಇದರಿಂದಾಗಿ ಈ ಇಬ್ಬರ ದಾಂಪತ್ಯದಲ್ಲಿ ಬಿರುಕು ಮೂಡಿದೆಯೇ ಎಂಬ ಅನುಮಾನ ಉದ್ಭವವಾಗಿತ್ತು. ಆದರೆ ಈಗ ರಣ್ವೀರ್ ಸಿಂಗ್ ಪತ್ನಿ ದೀಪಿಕಾ ಬಗ್ಗೆ ಭಾವುಕವಾಗಿ ಮಾತನಾಡುವ ಮೂಲಕ ಅನುಮಾನಗಳಿಗೆ ತೆರೆ ಎಳೆದಿದ್ದಾರೆ. ರಣ್ವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ 2018 ರ ನವೆಂಬರ್ ತಿಂಗಳಲ್ಲಿ ವಿವಾಹವಾದರು. ಇದೀಗ ರಣ್ವೀರ್ ಹಾಗೂ ದೀಪಿಕಾ ಪೋಷಕರಾಗುತ್ತಿದ್ದಾರೆ.
ದೀಪಿಕಾ ಪಡುಕೋಣೆ ಹಾಗೂ ರಣ್ವೀರ್ ಸಿಂಗ್ ಇಬ್ಬರೂ ಸಹ ಬಾಲಿವುಡ್ನ ಅತ್ಯಂತ ಬ್ಯುಸಿ ನಟ-ನಟಿಯರಾಗಿದ್ದಾರೆ. ರಣ್ವೀರ್ ನಟಿಸಿದ್ದ ಕೊನೆಯ ಸಿನಿಮಾ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸೂಪರ್ ಹಿಟ್ ಆಗಿದೆ. ಇದೀಗ ‘ಸಿಂಘಂ ಅಗೇನ್’ ಸಿನಿಮಾನಲ್ಲಿ ರಣ್ವೀರ್ ನಟಿಸುತ್ತಿದ್ದಾರೆ. ತಮಿಳಿನ ಶಂಕರ್ ನಿರ್ದೇಶಿಸಲಿರುವ ‘ಅನ್ನಿಯನ್’ ಹಿಂದಿ ರೀಮೇಕ್ನಲ್ಲಿಯೂ ರಣ್ವೀರ್ ನಟಿಸಲಿದ್ದಾರೆ. ಇನ್ನು ದೀಪಿಕಾ ಪಡುಕೋಣೆ ಪ್ರಭಾಸ್ ನಟನೆಯ ‘ಕಲ್ಕಿ’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ದೀಪಿಕಾರ ಪಾತ್ರದ ಚಿತ್ರೀಕರಣ ಈಗಾಗಲೇ ಮುಗಿದಿದೆ ಎನ್ನಲಾಗುತ್ತಿದೆ. ಜೊತೆಗೆ ಪತಿ ರಣ್ವೀರ್ ಸಿಂಗ್ ನಾಯಕರಾಗಿರುವ ‘ಸಿಂಘಂ ಅಗೇನ್’ ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ