
ಬಾಲಿವುಡ್ ಅಂಗಳದಲ್ಲಿ ಈಗ ‘ಡಾನ್ 3’ ಸಿನಿಮಾ (Don 3 Movie) ಮತ್ತು ನಟ ರಣವೀರ್ ಸಿಂಗ್ ಸುತ್ತಲಿನ ವಿವಾದವೇ ದೊಡ್ಡ ಚರ್ಚೆಯ ವಿಷಯವಾಗಿದೆ ಎಂಬುದು ಗೊತ್ತೇ ಇದೆ. ಕೇವಲ ಸಂಭಾವನೆ ಅಥವಾ ಸ್ಕ್ರಿಪ್ಟ್ ಭಿನ್ನಾಭಿಪ್ರಾಯದಿಂದ ಆರಂಭವಾದ ಈ ಜಗಳ, ಈಗ ಕಾನೂನು ಮತ್ತು ಚಿತ್ರರಂಗದ ಸಂಘಟನೆಗಳ ಮಟ್ಟಕ್ಕೆ ಹೋಗಿ ತಲುಪಿದೆ. ನಟ ರಣವೀರ್ ಸಿಂಗ್ ವಿರುದ್ಧ ಫೆಡರೇಷನ್ ಆಫ್ ವೆಸ್ಟರ್ನ್ ಇಂಡಿಯಾ ಸಿನಿ ಎಂಪ್ಲಾಯೀಸ್ ಅಸಹಕಾರದ ಆದೇಶ ಹೊರಡಿಸಿದ್ದು, ಚಿತ್ರರಂಗದಲ್ಲಿ ಸಂಚಲನ ಮೂಡಿಸಿದೆ. ಈ ಇಡೀ ವಿವಾದದ ಬೆನ್ನಲ್ಲೇ, ಬಾಲಿವುಡ್‌ನ ವಿವಾದಿತ ಹಾಗೂ ನೇರ ನುಡಿಯ ನಟಿ ಕಂಗನಾ ರಣಾವತ್ ಅವರು ರಣವೀರ್ ಸಿಂಗ್ ಬೆಂಬಲಕ್ಕೆ ನಿಂತಿದ್ದಾರೆ.
ತಮ್ಮ ಮುಂಬರುವ ‘ಭಾರತ್ ಭಾಗ್ಯ ವಿಧಾತಾ’ ಚಿತ್ರದ ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ಮಾತನಾಡಿದ ಕಂಗನಾ, ರಣವೀರ್ ಸಿಂಗ್ ಮೇಲಿನ ಬ್ಯಾನ್ ಕುರಿತು ಪ್ರತಿಕ್ರಿಯಿಸಿದರು. ‘ಬದುಕಿನಲ್ಲಿ ನಮ್ಮ ಅರ್ಹತೆ ಮತ್ತು ಸ್ಥಾನಮಾನ ಬೆಳೆದಂತೆ ಶತ್ರುಗಳ ಸಂಖ್ಯೆಯೂ ಹೆಚ್ಚಾಗುವುದು ಸಹಜ. ರಣವೀರ್ ಸಿಂಗ್ ತಮಗೆ ಇಷ್ಟೊಂದು ಜನ ವಿರೋಧಿಗಳಿದ್ದಾರೆ ಎಂದರೆ ತಮ್ಮ ಯೋಗ್ಯತೆ ಎಷ್ಟು ದೊಡ್ಡದಿದೆ ಎಂದು ಯೋಚಿಸಬೇಕು. ಇದು ಒಳ್ಳೆಯದೇ. ಜೀವನದಲ್ಲಿ ಮುಂದೆ ಸಾಗುವಾಗ ಇಂತಹ ಹತ್ತಾರು ಅಡೆತಡೆಗಳು ಬರುತ್ತವೆ. ರಸ್ತೆ ಯಾವಾಗಲೂ ಸರಳವಾಗಿರಲು ಸಾಧ್ಯವಿಲ್ಲ. ನನ್ನ ಜೀವನದಲ್ಲೂ ಇಂತಹ ಘಟನೆಗಳು ತುಂಬಾ ನಡೆದಿವೆ. ಆದರೆ ನೋಡಿ, ಇವತ್ತು ನಾನು ಚೆನ್ನಾಗಿಯೇ ಇದ್ದೇನೆ, ನನ್ನ ಸಿನಿಮಾಗಳೂ ಓಡುತ್ತಿವೆ. ಇದರಿಂದ ಏನೂ ಫರಕ್ ಬೀಳಲ್ಲ (ಬದಲಾವಣೆ ಆಗಲ್ಲ). ಕಾಲಕ್ರಮೇಣ ಎಲ್ಲವೂ ಸರಿಯಾಗುತ್ತದೆ,’ ಎಂದು ಕಂಗನಾ ರಣವೀರ್‌ಗೆ ಧೈರ್ಯ ತುಂಬಿದ್ದಾರೆ.
‘ಡಾನ್ 3’ ಚಿತ್ರದಿಂದ ರಣವೀರ್ ಸಿಂಗ್ ಅವರು ದಿಢೀರನೆ ಹೊರನಡೆದಿದ್ದೇ ಈ ಎಲ್ಲಾ ರಾದ್ಧಾಂತಕ್ಕೆ ಕಾರಣ. ಮೇ 25 ರಂದು FWICE ಸಂಘಟನೆಯು ರಣವೀರ್ ವಿರುದ್ಧ ಅಸಹಕಾರದ ನಿರ್ದೇಶನವನ್ನು ಜಾರಿಗೊಳಿಸಿತು. ಸಿನಿಮಾ ಸಂಸ್ಥೆಯ ಪ್ರಕಾರ, ಚಿತ್ರದಿಂದ ಹೊರನಡೆಯುವ ಮುನ್ನ ರಣವೀರ್ ತಮ್ಮ ಕಡೆಯ ವಿವರಣೆ ನೀಡಲು ಖುದ್ದಾಗಿ ಹಾಜರಾಗಬೇಕಿತ್ತು. ಆದರೆ ಸಂಘಟನೆ ನೀಡಿದ ಹಲವು ನೋಟಿಸ್‌ಗಳಿಗೆ ರಣವೀರ್ ಯಾವುದೇ ಪ್ರತಿಕ್ರಿಯೆ ನೀಡದ ಕಾರಣ ಈ ಕಠಿಣ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಮತ್ತೊಂದೆಡೆ, ‘ಡಾನ್ 3’ ಚಿತ್ರದ ನಿರ್ಮಾಪಕ ಫರ್ಹಾನ್ ಅಖ್ತರ್ ಅವರ ‘ಎಕ್ಸೆಲ್ ಎಂಟರ್‌ಟೈನ್‌ಮೆಂಟ್’ ಸಂಸ್ಥೆಯು, ರಣವೀರ್ ಸಿನಿಮಾದಲ್ಲಿದ್ದಾರೆ ಎಂಬ ಕಾರಣಕ್ಕೆ ಪ್ರೀ-ಪ್ರೊಡಕ್ಷನ್ ಕೆಲಸಗಳಿಗಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿತ್ತು. ಈಗ ನಟ ಅರ್ಧದಲ್ಲೇ ಕೈಕೊಟ್ಟಿರುವುದರಿಂದ ತಮಗೆ ನಷ್ಟವಾಗಿದೆ ಎಂದು ಆರೋಪಿಸಿ, 45 ಕೋಟಿ ರೂ. ಪರಿಹಾರ ನೀಡುವಂತೆ ರಣವೀರ್‌ಗೆ ಬೇಡಿಕೆ ಇಟ್ಟಿದೆ.
ಇದನ್ನೂ ಓದಿ: ‘ಡಾನ್ 3’ ಮಾತ್ರವಲ್ಲ, ನಿಂತು ಹೋದ ರಣ್ವೀರ್ ಸಿಂಗ್ ಸಿನಿಮಾಗಳಿವು
ಕೆಲವು ದಿನಗಳ ಹಿಂದಷ್ಟೇ ‘ಡಾನ್ 3’ ಚಿತ್ರದ ಸ್ಕ್ರಿಪ್ಟ್ ಬದಲಾವಣೆ ಹಾಗೂ ಸಂಭಾವನೆ ವಿಚಾರದಲ್ಲಿ ರಣವೀರ್ ಮತ್ತು ನಿರ್ದೇಶಕ ಫರ್ಹಾನ್ ಅಖ್ತರ್ ನಡುವೆ ತೀವ್ರ ಭಿನ್ನಾಭಿಪ್ರಾಯ ಮೂಡಿತ್ತು. ರಣವೀರ್ ಸಿಂಗ್ ಭಾರಿ ಮೊತ್ತದ ಸಂಭಾವನೆ ಮತ್ತು ಚಿತ್ರದ ಲಾಭದಲ್ಲಿ ಪಾಲು ಕೇಳಿದ್ದರು ಎನ್ನಲಾಗಿದೆ. ಆದರೆ ರಣವೀರ್ ಅವರ ಇತ್ತೀಚಿನ ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಸರಣಿ ಸೋಲು ಕಂಡಿದ್ದರಿಂದ ನಿರ್ಮಾಪಕರು ಅಷ್ಟು ದೊಡ್ಡ ಮೊತ್ತ ನೀಡಲು ಒಪ್ಪಲಿಲ್ಲ. ಮಾತುಕತೆ ಮುರಿದುಬಿದ್ದಾಗ ರಣವೀರ್ ಚಿತ್ರದಿಂದ ಹೊರನಡೆದರು. ಇದೇ ಈಗ ದೊಡ್ಡ ಮಟ್ಟದ ವಿವಾದವಾಗಿ ರೂಪಾಂತರಗೊಂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.