ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರಿಗೆ ಹಿಂದಿ ಚಿತ್ರರಂಗದಲ್ಲಿ ಸಖತ್ ಡಿಮ್ಯಾಂಡ್ ಸೃಷ್ಟಿ ಆಗಿದೆ. ಅವರ ಮೊದಲ ಬಾಲಿವುಡ್ ಸಿನಿಮಾ ‘ಗುಡ್ ಬೈ’ ನಿರೀಕ್ಷಿತ ಮಟ್ಟದಲ್ಲಿ ಗಳಿಕೆ ಮಾಡಲಿಲ್ಲ. ಈಗ ಎರಡನೇ ಸಿನಿಮಾ ‘ಮಿಷನ್ ಮಜ್ನು’ ಬಿಡುಗಡೆಗೆ ಸಜ್ಜಾಗಿದೆ. ಜನವರಿ 20ರಂದು ನೆಟ್ಫ್ಲಿಕ್ಸ್ ಮೂಲಕ ಈ ಚಿತ್ರ ವೀಕ್ಷಣೆಗೆ ಲಭ್ಯವಾಗಲಿದೆ. ಅದಕ್ಕೂ ಮುನ್ನ ರಶ್ಮಿಕಾ ಮಂದಣ್ಣ ಅವರ ಬಹುನಿರೀಕ್ಷಿತ ‘ಅನಿಮಲ್’ (Animal Movie) ಚಿತ್ರತಂಡದಿಂದಲೂ ಒಂದು ಸರ್ಪ್ರೈಸ್ ಸಿಗುತ್ತಿದೆ. ಅದು ಕೂಡ ಡಿಸೆಂಬರ್ 31ರ ಮಧ್ಯರಾತ್ರಿ! ಹೌದು, 2022ರ ವರ್ಷಕ್ಕೆ ವಿದಾಯ ಹೇಳಿ, ಹೊಸ ವರ್ಷವನ್ನು ಸ್ವಾಗತಿಸುವಂತಹ ಸಮಯಕ್ಕೆ ಸರಿಯಾಗಿ ‘ಅನಿಮಲ್’ ಚಿತ್ರದಿಂದ ಫಸ್ಟ್ ಲುಕ್ (Animal Movie First Look) ರಿಲೀಸ್ ಆಗಲಿದೆ. ಈ ಸುದ್ದಿ ಕೇಳಿ ರಶ್ಮಿಕಾ ಮಂದಣ್ಣ ಅಭಿಮಾನಿಗಳು ಎಗ್ಸೈಟ್ ಆಗಿದ್ದಾರೆ.
ದಕ್ಷಿಣ ಭಾರತದ ಅನೇಕ ಸ್ಟಾರ್ ಕಲಾವಿದರ ಜೊತೆ ರಶ್ಮಿಕಾ ಮಂದಣ್ಣ ಅವರು ತೆರೆ ಹಂಚಿಕೊಂಡಿದ್ದಾಗಿದೆ. ಬಾಲಿವುಡ್ನಲ್ಲೂ ಅವರಿಗೆ ಅಂಥ ಅವಕಾಶ ಬ್ಯಾಕ್ ಟು ಬ್ಯಾಕ್ ಸಿಗುತ್ತಿದೆ. ‘ಗುಡ್ ಬೈ’ ಚಿತ್ರದಲ್ಲಿ ಅಮಿತಾಭ್ ಬಚ್ಚನ್ ಮತ್ತು ‘ಮಿಷನ್ ಮಜ್ನು’ ಸಿನಿಮಾದಲ್ಲಿ ಸಿದ್ದಾರ್ಥ್ ಮಲ್ಹೋತ್ರ ಜೊತೆ ನಟಿಸಿದ ಬಳಿಕ ‘ಅನಿಮಲ್’ ಸಿನಿಮಾದಲ್ಲಿ ರಣಬೀರ್ ಕಪೂರ್ ಜೊತೆ ರಶ್ಮಿಕಾ ತೆರೆ ಹಂಚಿಕೊಳ್ಳುತ್ತಿದ್ದಾರೆ. ಈ ಚಿತ್ರದ ಫಸ್ಟ್ ಲುಕ್ ನೋಡಲು ಫ್ಯಾನ್ಸ್ ಕಾದಿದ್ದಾರೆ.
‘ಅರ್ಜುನ್ ರೆಡ್ಡಿ’ ಸಿನಿಮಾ ಖ್ಯಾತಿಯ ಸಂದೀಪ್ ರೆಡ್ಡಿ ವಂಗ ಅವರು ‘ಅನಿಮಲ್’ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಕಥಾನಾಯಕನನ್ನು ರೊಮ್ಯಾಂಟಿಕ್ ಆಗಿಯೂ, ಸಖತ್ ರಗಡ್ ಆಗಿಯೂ ತೋರಿಸುವಲ್ಲಿ ಅವರು ಪಳಗಿದ್ದಾರೆ. ಹಾಗಾಗಿ ಈ ಸಿನಿಮಾದಲ್ಲಿ ರಣಬೀರ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ಅವರ ಲುಕ್ ಹೇಗಿರಬಹುದು ಎಂಬ ಕೌತುಕ ಮೂಡಿದೆ. 2023ರ ಆಗಸ್ಟ್ 11ರಂದು ‘ಅನಿಮಲ್’ ರಿಲೀಸ್ ಆಗಲಿದೆ.
ಒಂದೆಡೆ ರಶ್ಮಿಕಾ ಮಂದಣ್ಣ ಅವರು ಬಾಲಿವುಡ್ನಲ್ಲಿ ಅವಕಾಶ ಗಿಟ್ಟಿಸುತ್ತಿದ್ದಾರೆ. ಇನ್ನೊಂದೆಡೆ ದಕ್ಷಿಣ ಭಾರತದಲ್ಲಿ ಅವರಿಗೆ ಟ್ರೋಲ್ ಕಾಟ ಹೆಚ್ಚಿದೆ. ‘ರೊಮ್ಯಾಂಟಿಕ್ ಹಾಡುಗಳ ವಿಚಾರದಲ್ಲಿ ಹಿಂದಿ ಚಿತ್ರರಂಗವೇ ಬೆಸ್ಟ್’ ಎಂದು ಇತ್ತೀಚೆಗೆ ಅವರು ನೀಡಿದ ಹೇಳಿಕೆಯಿಂದ ಅವರು ಅನೇಕರ ವಿರೋಧ ಕಟ್ಟಿಕೊಳ್ಳುವಂತೆ ಆಗಿದೆ.
ಇದನ್ನೂ ಓದಿ: Rashmika Mandanna: ‘ರೊಮ್ಯಾಂಟಿಕ್ ಹಾಡುಗಳಲ್ಲಿ ದಕ್ಷಿಣಕ್ಕಿಂತ ಬಾಲಿವುಡ್ ಬೆಸ್ಟ್’ ಎಂದ ರಶ್ಮಿಕಾ; ಟ್ರೋಲ್ ಶುರು
ರಶ್ಮಿಕಾ ಮಂದಣ್ಣ ಅವರು ಕಾಲಿವುಡ್ನಲ್ಲಿ ದಳಪತಿ ವಿಜಯ್ ಜೊತೆ ತೆರೆಹಂಚಿಕೊಂಡಿರುವ ‘ವಾರಿಸು’ ಸಿನಿಮಾ 2023ರ ಜನವರಿ 12ರಂದು ಬಿಡುಗಡೆ ಆಗಲಿದೆ. ಆ ಚಿತ್ರದ ಮೇಲೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:07 pm, Fri, 30 December 22