Vivek Agnihotri: ವಿವೇಕ್ ಅಗ್ನಿಹೋತ್ರಿಗೆ ಅಶ್ಲೀಲ ಸಂದೇಶ: ಸ್ಕ್ರೀನ್ ಶಾಟ್ ಸಮೇತ ಬಯಲಿಗೆ ಎಳೆದ ನಿರ್ದೇಶಕ
Vivek Agnihotri Troll: ವಿವೇಕ್ ಅಗ್ನಿಹೋತ್ರಿ ಅವರಿಗೆ ಅಶ್ಲೀಲವಾದ ಸಂದೇಶಗಳು ಬರಲು ಆರಂಭಿಸಿವೆ. ಕೆಟ್ಟ ಭಾಷೆಯಲ್ಲಿ ನಿಂದಿಸಿದ ಮೆಸೇಜ್ಗಳನ್ನು ಅವರು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.
ನಿರ್ದೇಶಕ ವಿವೇಕ್ ಅಗ್ನಿಹೋತ್ರಿ (Vivek Agnihotri) ಅವರು ಆಗಾಗ ವಿವಾದ ಮಾಡಿಕೊಳ್ಳುತ್ತಲೇ ಇದ್ದಾರೆ. ನೇರ ನಡೆ-ನುಡಿಯಿಂದಾಗಿ ಅವರು ಅನೇಕರ ನಿಷ್ಠುರ ಕಟ್ಟಿಕೊಂಡಿದ್ದಾರೆ. ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ (The Kashmir Files) ಸೂಪರ್ ಹಿಟ್ ಆದ ಬಳಿಕ ಅವರ ಜನಪ್ರಿಯತೆ ಹೆಚ್ಚಾಯಿತು. ಅದರ ಜೊತೆಗೆ ಕಿರಿಕ್ಗಳೂ ಜಾಸ್ತಿ ಆದವು. ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಅವರ ಪರ ವಹಿಸಿಕೊಂಡ ಮಾತನಾಡುತ್ತಾರೆ. ಇನ್ನು ಕೆಲವರು ಹಿಗ್ಗಾಮುಗ್ಗಾ ಟ್ರೋಲ್ (Vivek Agnihotri Troll) ಮಾಡುತ್ತಾರೆ. ಆದರೆ ಎಲ್ಲದಕ್ಕೂ ಒಂದು ಮಿತಿ ಇರಬೇಕು. ತೀರಾ ಕೆಳಮಟ್ಟಕ್ಕೆ ಇಳಿದು ತೇಜೋವದೆ ಮಾಡುವಂತಹ ಘಟನೆಗಳು ಈಗ ನಡೆದಿವೆ. ವಿವೇಕ್ ಅಗ್ನಿಹೋತ್ರಿ ಅವರಿಗೆ ಕಿಡಿಗೇಡಿಗಳು ಅಶ್ಲೀಲ ಸಂದೇಶಗಳನ್ನು ಕಳಿಸಿದ್ದಾರೆ. ಅದರ ಸ್ಕ್ರೀನ್ ಶಾಟ್ಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಶಾರುಖ್ ಖಾನ್ ನಟನೆಯ ‘ಬೇಷರಂ ರಂಗ್..’ ಹಾಡಿನ ಬಗ್ಗೆ ವಿವೇಕ್ ಅಗ್ನಿಹೋತ್ರಿ ಅವರು ಇತ್ತೀಚೆಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಅದರ ಬೆನ್ನಲೇ ಅವರಿಗೆ ಅಶ್ಲೀಲವಾದ ಸಂದೇಶಗಳು ಬರಲು ಆರಂಭಿಸಿವೆ. ತಮ್ಮನ್ನು ಕೆಟ್ಟ ಭಾಷೆಯಲ್ಲಿ ನಿಂದಿಸಿದ ಮೆಸೇಜ್ಗಳನ್ನು ವಿವೇಕ್ ಅಗ್ನಿಹೋತ್ರಿ ಅವರು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: Vivek Agnihotri: ಶಾರುಖ್ ನಟನೆಯ ‘ಬೇಷರಂ ರಂಗ್’ ಹಾಡು ನೋಡಿ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ ವಿವೇಕ್ ಅಗ್ನಿಹೋತ್ರಿ
ಶಾರುಖ್ ಖಾನ್ ಅವರ ಫೋಟೋವನ್ನು ಡಿಪಿ ಮಾಡಿಕೊಂಡಿರುವ ನೆಟ್ಟಿಗರ ಸೋಶಿಯಲ್ ಮೀಡಿಯಾ ಖಾತೆಗಳಿಂದ ಈ ರೀತಿಯ ಅಶ್ಲೀಲ ಸಂದೇಶಗಳು ಬಂದಿವೆ. ಹಾಗಾಗಿ ಪರೋಕ್ಷವಾಗಿ ಶಾರುಖ್ ಖಾನ್ ಅವರಿಗೆ ವಿವೇಕ್ ಅಗ್ನಿಹೋತ್ರಿ ತಿವಿದಿದ್ದಾರೆ. ‘ಬಾದ್ಷಾ ಹೇಳಿದ್ದು ನಿಜ. ಸೋಶಿಯಲ್ ಮೀಡಿಯಾದಲ್ಲಿ ನೆಗೆಟಿವಿಟಿ ಇದೆ. ಆದರೆ ನಾವು ಪಾಸಿಟಿವ್ ಆಗಿದ್ದೇವೆ’ ಎಂದು ವಿವೇಕ್ ಅಗ್ನಿಹೋತ್ರಿ ಅವರು ಟ್ವೀಟ್ ಮಾಡಿದ್ದಾರೆ.
Badshah was right. There is negativity on social media. (But we are positive). pic.twitter.com/1tU6cTGsnx
— Vivek Ranjan Agnihotri (@vivekagnihotri) December 31, 2022
ಕೊಲ್ಕತ್ತಾ ಸಿನಿಮೋತ್ಸವದ ಉದ್ಘಾಟನಾ ಸಮಾರಂಭಕ್ಕೆ ಶಾರುಖ್ ಖಾನ್ ಅವರು ಅತಿಥಿಯಾಗಿ ಹೋಗಿದ್ದರು. ಆ ಸಂದರ್ಭದಲ್ಲಿ ಅವರು ಸೋಶಿಯಲ್ ಮೀಡಿಯಾದ ನೆಗೆಟಿವಿಟಿ ಬಗ್ಗೆ ಮಾತನಾಡಿದ್ದರು. ಅದನ್ನೇ ಈಗ ವಿವೇಕ್ ಅಗ್ನಿಹೋತ್ರಿ ಅವರು ಪುನಃ ಪ್ರಸ್ತಾಪಿಸಿ, ಸ್ಕ್ರೀನ್ ಶಾಟ್ಸ್ ಹಂಚಿಕೊಂಡಿದ್ದಾರೆ.
‘ದಿ ವ್ಯಾಕ್ಸಿನ್ ವಾರ್’ ಶೂಟಿಂಗ್ ಶುರು:
ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರು ‘ದಿ ವ್ಯಾಕ್ಸಿನ್ ವಾರ್’ ಸಿನಿಮಾ ಸಿನಿಮಾದ ಕೆಲಸಗಳಿಗೆ ಚಾಲನೆ ನೀಡಿದ್ದಾರೆ. ಕೊರೊನಾ ಹಾವಳಿ ಸಂದರ್ಭದಲ್ಲಿ ಭಾರತದ ಜನತೆ ಲಸಿಕೆ ಪಡೆದಿದ್ದರ ಹಿಂದಿನ ಕಹಾನಿಯನ್ನು ಇಟ್ಟುಕೊಂಡು ಈ ಸಿನಿಮಾ ಮಾಡಲಾಗುತ್ತಿದೆ. ಇದು ಮೋದಿ ಸರ್ಕಾರದ ಪರವಾಗಿ ಪ್ರಚಾರ ಮಾಡುವ ಉದ್ದೇಶದಿಂದ ತಯಾರಾಗುತ್ತಿರುವ ಸಿನಿಮಾ ಎಂದು ಅನೇಕರು ಕಾಲೆಳೆಯುತ್ತಿದ್ದಾರೆ.
ಇದನ್ನೂ ಓದಿ: The Vaccine War: ವಿವೇಕ್ ಅಗ್ನಿಹೋತ್ರಿ ಹೊಸ ಚಿತ್ರದ ಕೆಲಸ ಶುರು; ಇದು 2024ರ ಚುನಾವಣೆಗೆ ಪ್ರಚಾರ ಎಂದ ನೆಟ್ಟಿಗರು
ವಿವಾದಗಳ ಕಾರಣದಿಂದ ವಿವೇಕ್ ಅಗ್ನಿಹೋತ್ರಿ ಅವರಿಗೆ ಅನೇಕರು ಬೆದರಿಕೆ ಹಾಕಿದ್ದಾರೆ. ಹಾಗಾಗಿ ಅವರಿಗೆ ವೈ ಕೆಟಗರಿ ಭದ್ರತೆ ನೀಡಲಾಗಿದೆ. ಈ ವಿಚಾರವಾಗಿಯೂ ಅನೇಕರು ಅವರನ್ನು ಟ್ರೋಲ್ ಮಾಡುತ್ತಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:35 pm, Sat, 31 December 22