ನಟಿ ರಮ್ಯಾ ಅವರು ನಟನೆಯಿಂದ ದೂರ ಉಳಿದುಕೊಂಡು ತುಂಬ ಕಾಲ ಆಗಿದೆ. ಆದರೂ ಅವರು ಚಿತ್ರರಂಗದ ಜೊತೆ ನಂಟು ಇಟ್ಟುಕೊಂಡಿದ್ದಾರೆ. ಇತ್ತೀಚೆಗಂತೂ ಅನೇಕ ಸಿನಿಮಾಗಳ ಬಗ್ಗೆ ಅವರು ಆಸಕ್ತಿ ತೋರಿಸುತ್ತಿದ್ದಾರೆ. ಇತ್ತೀಚೆಗೆ ಡಾಲಿ ಧನಂಜಯ ನಟನೆಯ ‘ರತ್ನನ್ ಪ್ರಪಂಚ’ ಸಿನಿಮಾ ಟ್ರೇಲರ್ ನೋಡಿ ಅವರು ಸಖತ್ ಇಷ್ಟಪಟ್ಟಿದ್ದರು. ಈ ವಿಚಾರ ಧನಂಜಯ ಅವರಿಗೆ ಖುಷಿ ನೀಡಿದೆ. ಅಲ್ಲದೆ, ಈ ಬಗ್ಗೆ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಇತ್ತೀಚೆಗೆ ಅಮೇಜಾನ್ ಪ್ರೈಮ್ನಲ್ಲಿ ‘ರತ್ನನ್ ಪ್ರಪಂಚ’ ಸಿನಿಮಾದ ಟ್ರೇಲರ್ ರಿಲೀಸ್ ಆಗಿತ್ತು. ಇದನ್ನು ನೋಡಿ ರಮ್ಯಾ ಇಷ್ಟಪಟ್ಟಿದ್ದರು. ಅಲ್ಲದೆ, ‘ನನಗೆ ನಗು ನಿಲ್ಲಿಸಲು ಸಾಧ್ಯವಾಗುತ್ತಿಲ್ಲ. ಈ ಸಿನಿಮಾ ನೋಡಲು ಕಾಯುತ್ತಿದ್ದೇನೆ. ಧನಂಜಯ ಸೂಪರ್. ಅನು ಪ್ರಭಾಕರ್, ವೈನಿಧಿ ಜಗದೀಶ್, ಉಮಾಶ್ರೀ, ಶ್ರುತಿ, ಅಚ್ಯುತ್ ಕುಮಾರ್ ಇವರೆಲ್ಲ ಅದ್ಭುತ ಕಲಾವಿದರು. ನಿರ್ಮಾಪಕರಾದ ಕಾರ್ತಿಕ್ ಮತ್ತು ಯೋಗಿ ಜಿ. ರಾಜ್ಗೆ ಗೆಲುವು’ ಎಂದು ರಮ್ಯಾ ಬರೆದುಕೊಂಡಿದ್ದರು.
ಈ ಬಗ್ಗೆ ಧನಂಜಯ ಅವರು ಟಿವಿ9 ಕನ್ನಡದ ಜತೆ ಮಾತನಾಡಿದ್ದಾರೆ. ‘ರಮ್ಯಾ ಅವರು ಸಿನಿಮಾ ಮಾಡದೇ ದೂರ ಇರಬಹುದು. ಆದರೆ, ಅವರು ಕನ್ನಡ ಚಿತ್ರರಂಗದಿಂದ ಯಾವಾಗಲೂ ದೂರವಾಗಿಲ್ಲ. ಯಾವುದೇ ಕಲಾವಿದರಾದರೂ ಸಿನಿಮಾದಿಂದ ದೂರವಾಗೋಕೆ ಸಾಧ್ಯವೇ ಇಲ್ಲ. ಅವರು ರಾಜಕೀಯ ಹಾಗೂ ಬದುಕಲ್ಲಿ ಎಷ್ಟೇ ಬ್ಯುಸಿ ಆಗಿರಬಹುದು. ಆದರೆ, ನಮ್ಮ ಜತೆ ಸದಾ ಇದಾರೆ. ರಮ್ಯಾ ನಮ್ಮ ಸಿನಿಮಾ ನೋಡಿ ವಿಶ್ ಮಾಡಿದ್ದು ತುಂಬಾನೇ ಖುಷಿ ಇದೆ. ನಾನು ಅವರ ದೊಡ್ಡ ಅಭಿಮಾನಿ. ಅವರ ಜತೆ ಕೆಲಸ ಮಾಡಬೇಕು. ವಿಶ್ ಮಾಡೋದು ಮಾತ್ರವಲ್ಲ, ನಮ್ಮ ಜತೆ ಸಿನಿಮಾ ಮಾಡಬೇಕು’ ಎಂದು ಅವರು ಮನವಿ ಮಾಡಿದರು.
‘ರತ್ನನ್ ಪ್ರಪಂಚ’ ಚಿತ್ರಕ್ಕೆ ರೋಹಿತ್ ಪದಕಿ ನಿರ್ದೇಶನ ಮಾಡಿದ್ದಾರೆ. ಅಜನೀಶ್ ಬಿ. ಲೋಕನಾಥ್ ಸಂಗೀತ ನಿರ್ದೇಶನ, ಶ್ರೀಶ ಕುದುವಳ್ಳಿ ಛಾಯಾಗ್ರಹಣ, ದೀಪು ಎಸ್. ಕುಮಾರ್ ಸಂಕಲನ ಮಾಡಿದ್ದಾರೆ. ಅಮೇಜಾನ್ ಪ್ರೈಂ ವಿಡಿಯೋ ಮೂಲಕ ಅ.22ರಂದು ‘ರತ್ನನ್ ಪ್ರಪಂಚ’ ಬಿಡುಗಡೆ ಆಗಲಿದೆ.