‘ಕೆಜಿಎಫ್ 2’ ಸಿನಿಮಾದಲ್ಲಿ (KGF Chapter 2) ರಮಿಕಾ ಸೇನ್ ಆಗಿ ಮಿಂಚಿದ್ದಾರೆ ರವೀನಾ ಟಂಡನ್ (Raveena Tandon). ಹಲವು ವರ್ಷಗಳ ಬಳಿಕ ಅವರು ಕನ್ನಡ ಫಿಲ್ಮ್ ಇಂಡಸ್ಟ್ರಿಗೆ ಕಂಬ್ಯಾಕ್ ಮಾಡಿದ್ದಾರೆ. ರವೀನಾ ಚಿತ್ರರಂಗಕ್ಕೆ ಬಂದು 30 ವರ್ಷಗಳು ಕಳೆದಿವೆ. ನಿರ್ದೇಶಕ ರವಿ ಟಂಡನ್ ಅವರ ಮಗಳು ರವೀನಾ. ಆದಾಗ್ಯೂ ಸಾಕಷ್ಟು ಕಷ್ಟಗಳನ್ನು ಎದುರಿಸಿದ್ದಾರೆ ಅವರು. ಸಿನಿಮಾ ಹಿನ್ನೆಲೆಯಿಂದ ಬಂದರೂ ಅವರಿಗೆ ಹೂವಿನ ಹಾದಿ ಸಿಗಲಿಲ್ಲ. ಈ ಬಗ್ಗೆ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಅವರ ಆರಂಭದ ದಿನಗಳು ಎಷ್ಟು ಕಷ್ಟವಾಗಿದ್ದವು ಎನ್ನುವುದನ್ನು ರವೀನಾ ವಿವರಿಸಿದ್ದಾರೆ.
1991ರಲ್ಲಿ ತೆರೆಗೆ ಬಂದ ‘ಪತ್ತರ್ ಕೆ ಫೂಲ್’ ಚಿತ್ರ ರವೀನಾ ಅವರ ಮೊದಲ ಸಿನಿಮಾ. 30 ವರ್ಷಗಳ ಕಾಲ ಅವರು ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರು ಆರಂಭದಲ್ಲಿ ಸಾಕಷ್ಟು ಜವಾಬ್ದಾರಿಗಳನ್ನು ತೆಗೆದುಕೊಂಡಿದ್ದರು. ಸ್ಟುಡಿಯೋ ನೆಲವನ್ನು ಅವರು ಸ್ವಚ್ಛ ಮಾಡುತ್ತಿದ್ದರು. ಅವರು ಪಟ್ಟ ಕಷ್ಟಗಳು ಹಲವು. ಈ ಬಗ್ಗೆ ರವೀನಾ ಈಗ ಮಾಹಿತಿ ಹಂಚಿಕೊಂಡಿದ್ದಾರೆ. ಮಿಡ್-ಡೇಗೆ ನೀಡಿದ ಸಂದರ್ಶನದಲ್ಲಿ ರವೀನಾ ಈ ವಿಚಾರವನ್ನು ಹೇಳಿಕೊಂಡಿದ್ದಾರೆ.
‘ನಾನು ಸ್ಟುಡಿಯೋ ಫ್ಲೋರ್‌ಗಳನ್ನು ಶುಚಿಗೊಳಿಸುವುದರಿಂದ ಹಿಡಿದು, ಅಲ್ಲಿ ವಾಂತಿಯನ್ನು ಒರೆಸುವವರೆಗೆ ಎಲ್ಲಾ ಕೆಲಸವನ್ನು ಮಾಡಿದ್ದೇನೆ. ಪ್ರಹ್ಲಾದ್ ಕಕ್ಕರ್ಗೆ ಸಹಾಯಕಳಾಗಿ ಇದ್ದೆ. ನಾನು ಒಂದಿಲ್ಲೊಂದು ವಿಚಾರದಲ್ಲಿ ಸಿನಿಮಾ ಇಂಡಸ್ಟ್ರಿಯಲ್ಲೇ ಇದ್ದೆ. ನಾನು ನಟಿ ಆಗುತ್ತೇನೆ ಎಂದು ಯೋಚಿಸುತ್ತಲೇ ಬೆಳೆದವಳು ಅಲ್ಲ’ ಎಂದಿದ್ದಾರೆ ರವೀನಾ.
ರವೀನಾ ಟಂಡನ್ ಅವರು 1999ರಲ್ಲಿ ತೆರೆಗೆ ಬಂದ ಕನ್ನಡದ ‘ಉಪೇಂದ್ರ’ ಸಿನಿಮಾದಲ್ಲಿ ನಟಿಸಿದ್ದರು. ಇದಾದ ನಂತರ ಅವರು ಸ್ಯಾಂಡಲ್ವುಡ್ಗೆ ಮರಳಿರಲಿಲ್ಲ. ‘ಕೆಜಿಎಫ್: ಚಾಪ್ಟರ್ 2’ ಚಿತ್ರದಿಂದ ಅವರು ಕನ್ನಡಕ್ಕೆ ಕಂಬ್ಯಾಕ್ ಮಾಡಿದ್ದಾರೆ. ಈ ಸಿನಿಮಾದಲ್ಲಿ ಪ್ರಧಾನಿ ರಮಿಕಾ ಸೇನ್ ಆಗಿ ಕಾಣಿಸಿಕೊಂಡಿದ್ದಾರೆ. ಇಂಟರ್ವಲ್ ನಂತರದಲ್ಲಿ ಬರುವ ಈ ಪಾತ್ರ ಇಡೀ ಚಿತ್ರದಲ್ಲಿ ತುಂಬಾನೇ ಮಹತ್ವ ಪಡೆದುಕೊಂಡಿದೆ. ಅವರ ಪಾತ್ರಕ್ಕೆ ಎಲ್ಲರೂ ಉಘೇ ಎನ್ನುತ್ತಿದ್ದಾರೆ.
‘ಕೆಜಿಎಫ್ 2’ ಸಿನಿಮಾ ಹಿಂದಿಗೂ ಡಬ್ ಆಗಿ ತೆರೆಕಂಡಿದ್ದು, ಉತ್ತರ ಭಾರತದಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಮಾಸ್ ಪ್ರೇಕ್ಷಕರು ಮುಗಿಬಿದ್ದು ಸಿನಿಮಾವನ್ನು ನೋಡುತ್ತಿದ್ದಾರೆ. ರವೀನಾ ಟಂಡನ್ ಅವರ ಪಾತ್ರ ತೆರೆ ಮೇಲೆ ಬಂದಾಗ ಅವರ ಫ್ಯಾನ್ಸ್ ಹುಚ್ಚೆದ್ದು ಕುಣಿದಿದ್ದಾರೆ. ಅಷ್ಟೇ ಅಲ್ಲ, ಕೆಲವರು ಥಿಯೇಟರ್ ಪರದೆಗೆ ದುಡ್ಡು ಎಸೆದಿದ್ದಾರೆ. ಅಭಿಮಾನಿಗಳು ನಾಣ್ಯಗಳನ್ನು ಎಸೆಯುತ್ತಿರುವ ವಿಡಿಯೋವನ್ನು ರವೀನಾ ಟಂಡನ್ ಶೇರ್ ಮಾಡಿಕೊಂಡಿದ್ದಾರೆ.
‘ತುಂಬ ಸಮಯದ ಬಳಿಕ ಜನರು ನಾಣ್ಯ ಎಸೆಯುವುದನ್ನು ನೋಡುತ್ತಿದ್ದೇನೆ’ ಎಂದು ಅವರು ಈ ವಿಡಿಯೋಗೆ ಕ್ಯಾಪ್ಷನ್ ನೀಡಿದ್ದಾರೆ. ರವೀನಾ ಟಂಡನ್ ಹಂಚಿಕೊಂಡಿರುವ ವಿಡಿಯೋದಲ್ಲಿ ‘ಕೆಜಿಎಫ್: ಚಾಪ್ಟರ್ 2’ ಸಿನಿಮಾದ ಮೇಕಿಂಗ್ ತುಣುಕುಗಳು ಕೂಡ ಇವೆ.
ಇದನ್ನೂ ಓದಿ: ಆರ್ಆರ್ಆರ್ ಸಿನಿಮಾ ಮಾಡಿರದ ದಾಖಲೆ ಮಾಡಿದ ‘ಕೆಜಿಎಫ್ 2’ ಸಿನಿಮಾ; ಏನದು?