ಕಿರಿಕ್​ ಮಾಡಿಕೊಂಡ ‘ಕಿಲಾಡಿ’: ರವಿ ತೇಜ ಚಿತ್ರಕ್ಕೆ ಬಾಲಿವುಡ್ ಮಂದಿಯಿಂದ ಎದುರಾಯ್ತು ವಿರೋಧ

| Updated By: ಮದನ್​ ಕುಮಾರ್​

Updated on: Feb 13, 2022 | 10:06 AM

ರವಿ ತೇಜ ನಟನೆಯ ‘ಕಿಲಾಡಿ’ ಸಿನಿಮಾದ ಶೀರ್ಷಿಕೆ ಬದಲಾಗಬೇಕು ಎಂದು ಬಾಲಿವುಡ್​ ನಿರ್ಮಾಪಕ ರತನ್​ ಜೈನ್ ಆಗ್ರಹಿಸಿದ್ದಾರೆ.​ ಅಲ್ಲದೇ ಅವರು ನ್ಯಾಯಾಲಯದ ಮೆಟ್ಟಿಲು ಏರಿದ್ದಾರೆ.

ಕಿರಿಕ್​ ಮಾಡಿಕೊಂಡ ‘ಕಿಲಾಡಿ’: ರವಿ ತೇಜ ಚಿತ್ರಕ್ಕೆ ಬಾಲಿವುಡ್ ಮಂದಿಯಿಂದ ಎದುರಾಯ್ತು ವಿರೋಧ
ರವಿ ತೇಜ
Follow us on

ಟಾಲಿವುಡ್​ನ ಸ್ಟಾರ್​​ ನಟ ರವಿ ತೇಜ (Ravi Teja) ಅಭಿನಯದ ‘ಕಿಲಾಡಿ’ ಚಿತ್ರ ಬಿಡುಗಡೆ ಆಗಿದೆ. ಫೆ.11ರಂದು ತೆರೆಕಂಡ ಈ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ರವಿ ತೇಜ ಜೊತೆ ಡಿಂಪಲ್​ ಹಯಾತಿ, ಮೀನಾಕ್ಷಿ ಚೌಧರಿ ಮುಂತಾದವರು ನಟಿಸಿದ್ದಾರೆ. ತೆಲುಗಿನಲ್ಲಿ ತಯಾರಾಗಿರುವ ಈ ಸಿನಿಮಾ ಇತರೆ ಭಾಷೆಗಳಿಗೆ ಡಬ್​ ಆಗಿ ಬಿಡುಗಡೆ ಆಗಿದೆ. ಟ್ರೇಲರ್​ ಮೂಲಕ ಗಮನ ಸೆಳೆದ ‘ಕಿಲಾಡಿ’  (Khiladi Movie) ಸಿನಿಮಾವನ್ನು ನೋಡಲು ರವಿ ತೇಜ ಫ್ಯಾನ್ಸ್​ ಚಿತ್ರಮಂದಿರಕ್ಕೆ ಮುಗಿಬಿದ್ದಿದ್ದಾರೆ. ಈ ಸಿನಿಮಾ ರಿಲೀಸ್​ ಆದ ಬಳಿಕ ಒಂದು ಹೊಸ ಕಿರಿಕ್​ ಎದುರಾಗಿದೆ. ಚಿತ್ರದ ಟೈಟಲ್​ ಬಗ್ಗೆ ಬಾಲಿವುಡ್​ ನಿರ್ಮಾಪಕರು ಆಕ್ಷೇಪ ಎತ್ತಿದ್ದಾರೆ. ‘ಕಿಲಾಡಿ’ ಶೀರ್ಷಿಕೆಯಲ್ಲಿ ಈ ಮೊದಲೇ ಅಕ್ಷಯ್​ ಕುಮಾರ್​ (Akshay Kumar) ಸಿನಿಮಾ ಮಾಡಿ ಗೆದ್ದಿದ್ದಾರೆ. ಅದರ ಸೀಕ್ವೆಲ್​ಗಳು ಕೂಡ ಬಂದಿವೆ. ಈಗ ರವಿ ತೇಜ ಸಿನಿಮಾ ಕೂಡ ಅದೇ ಟೈಟಲ್​ ಬಳಸಿಕೊಂಡಿರುವುದುಕ್ಕೆ ಬಾಲಿವುಡ್​ ನಿರ್ಮಾಪಕ ರತನ್​ ಜೈನ್​ ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಅವರು ನ್ಯಾಯಾಲಯದ ಮೆಟ್ಟಿಲು ಏರಿದ್ದಾರೆ. ರವಿ ತೇಜ ನಟನೆಯ ‘ಕಿಲಾಡಿ’ ಸಿನಿಮಾದ ಶೀರ್ಷಿಕೆ ಬದಲಾಗಬೇಕು ಎಂದು ಅವರು ಆಗ್ರಹಿಸಿದ್ದಾರೆ.

ದಕ್ಷಿಣ ಭಾರತದ ಸಿನಿಮಾಗಳು ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗಲು ಆರಂಭಿಸಿದ ಬಳಿಕ ಈ ಸಮಸ್ಯೆ ಶುರುವಾಗಿದೆ. ಆಯಾ ರಾಜ್ಯಗಳ ಚಲನಚಿತ್ರ ಮಂಡಳಿಗಳಲ್ಲಿ ಶೀರ್ಷಿಕೆ ನೋಂದಣಿ ಮಾಡಿಕೊಳ್ಳುವ ದಕ್ಷಿಣ ಭಾರತದ ಸಿನಿಮಾಗಳು ನಂತರ ಹಿಂದಿಗೂ ಡಬ್​ ಆಗಿ ಉತ್ತರ ಭಾರತದ ರಾಜ್ಯಗಳಲ್ಲಿ ತೆರೆ ಕಾಣುತ್ತವೆ. ಆಗ ಹಿಂದಿ ಸಿನಿಮಾಗಳ ಟೈಟಲ್​ ಜೊತೆ ಕ್ಲ್ಯಾಶ್​ ಆಗುತ್ತದೆ ಎಂದು ಬಾಲಿವುಡ್​ ನಿರ್ಮಾಪಕರು ಹೇಳಿದ್ದಾರೆ. ‘ಕಿಲಾಡಿ’ ವಿಚಾರದಲ್ಲಿ ಹಾಗೆಯೇ ಆಗಿದೆ.

‘ಟ್ರೇಡ್​ ಮಾರ್ಕ್​ ಕಾಯ್ದೆ ಅಡಿಯಲ್ಲಿ ನಾವು ‘ಕಿಲಾಡಿ’ ಎಂಬ ಶೀರ್ಷಿಕೆಯನ್ನು ನೋಂದಾಯಿಸಿದ್ದೇವೆ. ಈಗ ರವಿ ತೇಜ ಮಾಡಿರುವ ಸಿನಿಮಾದಿಂದ ಮೂಲ ‘ಕಿಲಾಡಿ’ ಚಿತ್ರದ ಪ್ರತಿಷ್ಠೆಗೆ ಧಕ್ಕೆ ಆಗುತ್ತದೆ. ಹಾಗಾಗಿ ಈ ಸಿನಿಮಾದ ಶೀರ್ಷಿಕೆ ಬದಲಾಗಬೇಕು ಹಾಗೂ ಅದರ ಒಟಿಟಿ ರಿಲೀಸ್​ಗೆ ತಡೆ ನೀಡಬೇಕು ಅಂತ ನ್ಯಾಯಾಲಯದಲ್ಲಿ ಮನವಿ ಮಾಡಿಕೊಂಡಿದ್ದೇವೆ’ ಎಂದು ರತನ್​ ಜೈನ್​ ಹೇಳಿದ್ದಾರೆ. ‘ಈ ರೀತಿ ಹಿಂದಿ ಸಿನಿಮಾಗಳ ಟೈಟಲ್​ಗಳನ್ನು ಬೇರೆ ಭಾಷೆಯವರು ಬಳಸಿಕೊಂಡರೆ ಬಾಲಿವುಡ್​ ಚಿತ್ರಗಳಿಗೆ ತೊಂದರೆ ಆಗುತ್ತದೆ. ನಮ್ಮಲ್ಲೇ ಕೆಲವರು ನಮ್ಮ ಬೆನ್ನಿಗೆ ಚೂರಿ ಹಾಕುತ್ತಿದ್ದಾರೆ’ ಎಂದು ರತನ್​ ಜೈನ್​ ಆರೋಪಿಸಿದ್ದಾರೆ.

ಬಿಡುಗಡೆಗೂ ಮುನ್ನವೇ ‘ಕಿಲಾಡಿ’ ಚಿತ್ರದ ವಿತರಣೆ ಹಕ್ಕುಗಳು ಭಾರಿ ಮೊತ್ತಕ್ಕೆ ಸೇಲ್​ ಆಗಿದ್ದವು. ಒಟಿಟಿ, ಕಿರುತೆರೆ ಪ್ರಸಾರದ ಹಕ್ಕುಗಳ ವಿಚಾರದಲ್ಲಿಯೂ ದೊಡ್ಡ ಆಫರ್​ ಬಂದಿದೆ. ಈ ಎಲ್ಲ ಕಾರಣಗಳಿಂದಾಗಿ ಸಿನಿಮಾದ ರಿಲೀಸ್​ಗೂ ಮುನ್ನವೇ ನಿರ್ಮಾಪಕರು ಲಾಭ ಮಾಡಿಕೊಂಡಿದ್ದರು. ಇದಕ್ಕೆ ಕಾರಣವಾದ ನಿರ್ದೇಶಕ ರಮೇಶ್​ ವರ್ಮಾ ಅವರಿಗೆ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಕಾರನ್ನು ಉಡುಗೊರೆಯಾಗಿ ನಿರ್ಮಾಪಕರು ನೀಡಿದ್ದು ಸುದ್ದಿ ಆಗಿತ್ತು.

​ಇದನ್ನು ಓದಿ:

ನಟಿಯ ಜೊತೆ ರವಿ ತೇಜ ಲಿಪ್​ ಲಾಕ್​; ವೈರಲ್​ ಫೋಟೋದಲ್ಲಿರುವ ಸುಂದರಿ ಯಾರು? ಅರೆರೆ ‘ಕಿಲಾಡಿ’

ರವಿ ತೇಜ ಜೊತೆಗಿನ ಕಿಸ್ಸಿಂಗ್​ ದೃಶ್ಯ ವೈರಲ್​; ಮೊದಲ ಬಾರಿಗೆ ಮೌನ ಮುರಿದ ನಟಿ ಮೀನಾಕ್ಷಿ

Published On - 9:57 am, Sun, 13 February 22