ಹೆಣ್ಣು ಬಾಕರ ಹಾವಳಿ, ರವೀನಾ ಟಂಡನ್ ಪಟ್ಟ ಕಷ್ಟಗಳ ಬಿಚ್ಚಿಟ್ಟ ಸಹ ನಟಿ
Me too in Bollywood: ಚಿತ್ರರಂಗದಲ್ಲಿ ಮೀ ಟೂ ಆರೋಪಗಳು ಸಾಮಾನ್ಯ ಎಂಬಂತಾಗಿಬಿಟ್ಟಿವೆ. ಆದರೆ ಇತ್ತೀಚೆಗಿನ ವರ್ಷಗಳಲ್ಲಿ ನಟಿಯರು ತಮಗಾದ ಕಟು ಅನುಭವದ ಬಗ್ಗೆ ಭಯಬಿಟ್ಟು ಮಾತನಾಡುತ್ತಿದ್ದಾರೆ. ಇದೀಗ ಜನಪ್ರಿಯ ನಟಿ ರೇಣುಕಾ ಶಹಾನೆ ತಮಗೆ ಆಗಿದ್ದ ಕೆಟ್ಟ ಅನುಭವದ ಬಗ್ಗೆ ಮಾತನಾಡಿದ್ದಾರೆ. ರವೀನಾ ಟಂಡನ್ ಬಗ್ಗೆಯೂ ಅವರು ಮಾತನಾಡಿದ್ದಾರೆ.

ರೇಣುಕಾ ಶಹಾನೆ (Renuka Shahane) 90ರ ದಶಕದ ಸಿನಿಮಾ ಪ್ರೇಮಿಗಳಿಗೆ ಚಿರ ಪರಿಚಿತ ಹೆಸರು. ಕಿಂಗ್ ಶಾರುಖ್ ಖಾನ್ ಅವರ ಮೊದಲ ನಾಯಕಿ ರೇಣುಕಾ ಶಹಾನೆ. ಮಾತ್ರವಲ್ಲದೆ, ಕಲ್ಟ್ ಸಿನಿಮಾ ‘ಹಮ್ ಆಪ್ಕೆ ಹೇ ಕೋನ್’, ದೂರದರ್ಶನದಲ್ಲಿ ಭಾರಿ ಜನಪ್ರಿಯವಾಗಿದ್ದ ‘ಸುರಭಿ’ ಕಾರ್ಯಕ್ರಮದ ನಿರೂಪಕಿಯಾಗಿಯೂ ರೇಣುಕಾ ಸಹಾನೆ ಭಾರಿ ಜನಪ್ರಿಯರಾಗಿದ್ದರು. ಹಲವಾರು ಮರಾಠಿ ಸಿನಿಮಾಗಳು, ತೆಲುಗು ಸಿನಿಮಾಗಳಲ್ಲಿಯೂ ರೇಣುಕಾ ನಟಿಸಿದ್ದು, ಈಗಲೂ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ.
ಇದೀಗ ನಟಿ ರೇಣುಕಾ ಶಹಾನೆ ನಿರ್ಮಾಪಕನೊಬ್ಬ ತಮಗೆ ನೀಡಿದ್ದ ಕಿರುಕುಳದ ವಿಷಯ ಬಿಚ್ಚಿಟ್ಟಿದ್ದಾರೆ. ನಿರ್ಮಾಪಕನೊಬ್ಬ ತನ್ನ ಸೀರೆ ಬ್ರ್ಯಾಂಡ್ಗೆ ರಾಯಭಾರಿ ಆಗುವಂತೆ ರೇಣುಕಾ ಸಹಾನೆಯನ್ನು ಕೇಳಿದ್ದರಂತೆ. ಅವರ ಮನೆಗೆ ಬಂದು ರೇಣುಕಾ ಸಹಾನೆ ಹಾಗೂ ಅವರ ತಾಯಿಯ ಬಳಿ ಈ ವಿಷಯ ಚರ್ಚಿಸಿದ್ದನಂತೆ. ಸೀರೆಯ ಜಾಹೀರಾತಿನಲ್ಲಿ ನಟಿಸುವ ಜೊತೆಗೆ ನಿರ್ಮಾಪಕನೊಟ್ಟಿಗೆ ಸಹಜೀವನ ಸಹ ನಡೆಸಬೇಕಿತ್ತಂತೆ ನಟಿ. ಈ ಸಹಜೀವನ ನಡೆಸಲು ತಿಂಗಳಿಗೆ ಇಂತಿಷ್ಟು ಹಣವನ್ನೂ ನೀಡುವುದಾಗಿ ಆ ವ್ಯಕ್ತಿ ಹೇಳಿದ್ದನಂತೆ. ಆತನ ಮಾತು ಕೇಳಿ ರೇಣುಕಾ ಸಹಾನೆ ಹಾಗೂ ಅವರ ತಾಯಿ ಶಾಕ್ಗೆ ಒಳಗಾದರಂತೆ, ಕೂಡಲೇ ಆ ವ್ಯಕ್ತಿಗೆ ಸಾಧ್ಯವಿಲ್ಲವೆಂದು ಹೇಳಿ ಕಳಿಸಿದರಂತೆ. ಆದರೆ ಆ ನಿರ್ಮಾಪಕ ಬೇರೊಬ್ಬ ನಟಿಗೆ ಅದೇ ಆಫರ್ ನೀಡಿ ಒಪ್ಪಿಸಿದನಂತೆ.
ಇದನ್ನೂ ಓದಿ:ಗೆಳತಿಯರೊಟ್ಟಿಗೆ ಪ್ರವಾಸಕ್ಕೆ ಹೋದ ‘ಕೆಜಿಎಫ್’ ನಟಿ ರವೀನಾ ಟಂಡನ್
ಹಿಂದೆಲ್ಲ ನಟಿಯರಿಗೆ ಬಹಳ ಕಷ್ಟವಿತ್ತು ಎಂದಿರುವ ರೇಣುಕಾ ಶಹಾನೆ, ರವೀನಾ ಟಂಡನ್ ಅಂಥಹಾ ಸ್ಟಾರ್ ನಟಿಯರೂ ಸಹ ತಮ್ಮನ್ನು ತಾವು ಇಂಥಹಾ ಹೆಣ್ಣುಬಾಕರುಗಳಿಂದ ಕಾಪಾಡಿಕೊಳ್ಳಲು ಬಹಳ ಕಷ್ಟಪಟ್ಟಿದ್ದಾರೆ ಎಂದು ಹೇಳಿದ್ದಾರೆ. ‘ರವೀನಾ ಟಂಡನ್ ಸಹ ಇಂಥಹಾ ಸಾಕಷ್ಟು ಸನ್ನಿವೇಶಗಳನ್ನು ಎದುರಿಸಿದ್ದಾರೆ. ಅವರು ಇಂಥಹಾ ವ್ಯಕ್ತಿಗಳಿಂದ ಅಡ್ವಾನ್ಸ್ ಸಹ ಪಡೆಯುತ್ತಿರಲಿಲ್ಲ. ಕೆಲವೊಮ್ಮೆ ಔಟ್ಡೋರ್ ಶೂಟಿಂಗ್ ಇದ್ದಾಗ ರವೀನಾ ಟಂಡನ್ ಪ್ರತಿದಿನವೂ ಒಂದೊಂದು ಹೊಸ ಹೋಟೆಲ್ನಲ್ಲಿ ಉಳಿದುಕೊಳ್ಳುತ್ತಿದ್ದರಂತೆ. ಸಿನಿಮಾದ ಸಹ ನಟ, ನಿರ್ಮಾಪಕರುಗಳಿಗೆ ತಾನು ಉಳಿದುಕೊಂಡಿರುವ ಹೋಟೆಲ್ನ ವಿಳಾಸವನ್ನು ತಪ್ಪಾಗಿ ನೀಡುತ್ತಿದ್ದರಂತೆ. ಯಾರೂ ಸಹ ಶೂಟಿಂಗ್ ಮುಗಿದ ಮೇಲೆ ತಪ್ಪು ಉದ್ದೇಶದಿಂದ ತಮ್ಮನ್ನು ಹುಡುಕಿಕೊಂಡು ಬರಬಾರದು ಎಂಬುದು ಅವರ ಉದ್ದೇಶವಾಗಿತ್ತಂತೆ.
ರೇಣುಕಾ ಶಹಾನೆ ಅವರಿಗೆ ಈಗ 59 ವರ್ಷ ವಯಸ್ಸು. 1988 ರಲ್ಲಿ ಬಿಡುಗಡೆ ಆದ ಶಾರುಖ್ ಖಾನ್ ಅವರ ಮೊದಲ ಧಾರಾವಾಹಿ ‘ಸರ್ಕಸ್’ನಲ್ಲಿ ರೇಣುಕಾ ಸಹಾನೆ ನಾಯಕಿ. ಈಗಲೂ ಸಹ ರೇಣುಕಾ ಸಹಾನೆ ಮತ್ತು ಶಾರುಖ್ ಖಾನ್ ಆಪ್ತ ಗೆಳೆಯರು. ರೇಣುಕಾ ಸಹಾನೆ ಹಲವಾರು ಜನಪ್ರಿಯ ಧಾರಾವಾಹಿಗಳಲ್ಲಿಯೂ ಸಹ ನಟಿಸಿದ್ದಾರೆ. ಹಿಂದಿ, ಮರಾಠಿ, ತೆಲುಗು, ಗುಜರಾತಿ ಸಿನಿಮಾಗಳಲ್ಲಿ ರೇಣುಕಾ ಶಹಾನೆ ನಟಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




