ಅಮಾನುಷ ‘ಗಲ್ವಾನ್ ಸಂಘರ್ಷ’ ಬಗ್ಗೆ ಸಿನಿಮಾ, ಸಲ್ಮಾನ್ ಖಾನ್ ನಾಯಕ

Salman Khan: ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಘರ್ಷದ ಬಗ್ಗೆ ಬಾಲಿವುಡ್​ನಲ್ಲಿ ಹಲವು ಸಿನಿಮಾಗಳು ಬಂದಿವೆ. ಆದರೆ ಭಾರತ ಮತ್ತು ಚೀನಾ ಸಂಘರ್ಷದ ಬಗ್ಗೆ ಬಂದಿಲ್ಲ. ಆದರೆ ಇದೀಗ ಬಾಲಿವುಡ್​ನಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ನಡೆದಿದ್ದ ಗಾಲ್ವಾನ್ ಕಣಿವೆ ಸಂಘರ್ಷದ ಬಗ್ಗೆ ಸಿನಿಮಾ ಮಾಡಲಾಗುತ್ತಿದೆ. ಸಿನಿಮಾಕ್ಕೆ ಸಲ್ಮಾನ್ ಖಾನ್ ನಾಯಕ.

ಅಮಾನುಷ ‘ಗಲ್ವಾನ್ ಸಂಘರ್ಷ’ ಬಗ್ಗೆ ಸಿನಿಮಾ, ಸಲ್ಮಾನ್ ಖಾನ್ ನಾಯಕ
Salman Khan

Updated on: May 18, 2025 | 8:11 PM

ಭಾರತೀಯ ಸೇನೆಯ ಬಗ್ಗೆ ಭಾರತೀಯ ಸೇನೆಯ (Indian Army) ಆಪರೇಷನ್​ಗಳ ಬಗ್ಗೆ ಕಾಲ ಕಾಲಕ್ಕೆ ಸಿನಿಮಾಗಳು ಆಗುತ್ತಲೇ ಇವೆ. ಇತ್ತೀಚೆಗೆ ಭಾರತೀಯ ಸೇನೆ ಯಶಸ್ವಿಯಾಗಿ ಪೂರೈಸಿದ ಆಪರೇಷನ್ ಸಿಂಧೂರ್ ಬಗ್ಗೆಯೂ ಸಿನಿಮಾ ಮಾಡಲು ಈಗಾಗಲೇ ಹೆಸರುಗಳನ್ನು ನೊಂದಾಯಿಸಲಾಗಿದೆ. ಈ ಹಿಂದೆ ಆಗಿದ್ದ ‘ಉರಿ’ ದಾಳಿಗೆ ಪ್ರತಿಕಾರವಾಗಿ ಮಾಡಿದ್ದ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಈಗಾಗಲೇ ಸಿನಿಮಾ ಮಾಡಲಾಗಿದೆ. ಭಾರತೀಯ ಸೇನೆಯ ಬಗ್ಗೆ ಮಾಡಲಾಗಿರುವ ಬಹುತೇಕ ಸಿನಿಮಾಗಳು ಭಾರತ-ಪಾಕಿಸ್ತಾನದ ಬಗ್ಗೆಯೇ ಆಗಿವೆ. ಇದೀಗ ಭಾರತ ಮತ್ತು ಚೀನಾ ಸೈನಿಕರ ನಡುವೆ ನಡೆದ ಅಮಾನುಷ ಗಲಾಟೆಯೊಂದರ ಬಗ್ಗೆ ಸಿನಿಮಾ ಆಗುತ್ತಿದೆ. ಸಿನಿಮಾಕ್ಕೆ ನಾಯಕ ಸಲ್ಮಾನ್ ಖಾನ್.

ಭಾರತ-ಪಾಕಿಸ್ತಾನದ ನಡುವಿನ ಸಂಘರ್ಷದ ಬಗ್ಗೆ ಈಗಾಗಲೇ ಹಲವು ಸಿನಿಮಾಗಳಾಗಿವೆ. ಆದರೆ ಭಾರತ ಮತ್ತು ಚೀನಾದ ನಡುವಿನ ಸಂಘರ್ಷದ ಬಗ್ಗೆ ಸಿನಿಮಾಗಳಾಗಿಲ್ಲ. ಬಹುಷಃ ಮೊದಲ ಬಾರಿಗೆ ಇಂಥಹಾ ಪ್ರಯತ್ನಕ್ಕೆ ಕೈ ಹಾಕಿದೆ ಬಾಲಿವುಡ್. 2020 ರಲ್ಲಿ ಭಾರತದ ಗಡಿ ಗಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ಸೈನಿಕರು ಮುಖಾಮುಖಿ ಆದಾಗ ನಡೆದ ರಕ್ತಪಾತದ ಬಗ್ಗೆ ಸಿನಿಮಾ ಮಾಡಲಾಗುತ್ತಿದೆ. ಸಿನಿಮಾವನ್ನು ಅಪೂರ್ವ ಲಾಖಿಯಾ ನಿರ್ದೇಶನ ಮಾಡಲಿದ್ದಾರೆ.

‘ಇಂಡಿಯಾ ಫಿಯರ್ಲೆಸ್ 3’ ಪುಸ್ತಕದಿಂದ ಸ್ಪೂರ್ತಿ ಪಡೆದು ಈ ಸಿನಿಮಾ ಮಾಡಲಾಗುತ್ತಿದೆ. ಸಿನಿಮಾವು ಗಲ್ವಾನ್ ಗಲಭೆಯ ಘಟನೆ ಕುರಿತಾದ ಕತೆ ಹೊಂದಿರಲಿದೆ. ಸಲ್ಮಾನ್ ಖಾನ್, ಮಿಲಿಟರಿ ಅಧಿಕಾರಿಯ ಪಾತ್ರದಲ್ಲಿ ನಟಿಸಲಿದ್ದಾರೆ. 2025ರಲ್ಲಿಯೇ ಸಿನಿಮಾದ ಚಿತ್ರೀಕರಣ ಪ್ರಾರಂಭ ಆಗಲಿದ್ದು, 70 ದಿನಗಳ ಕಾಲ ಒಂದೇ ಶೆಡ್ಯೂಲ್​ನಲ್ಲಿ ಲಡಾಕ್ ಮತ್ತು ಮುಂಬೈಗಳಲ್ಲಿ ಚಿತ್ರೀಕರಣ ನಡೆಯಲಿದೆ.

ಇದನ್ನೂ ಓದಿ:ವಯಸ್ಸಾಯ್ತು ಎಂದು ಟೀಕಿಸಿದವರಿಗೆ ಖಡಕ್ ಉತ್ತರ ಕೊಟ್ಟ ಸಲ್ಮಾನ್ ಖಾನ್

2020ರ ಮೇ ತಿಂಗಳಲ್ಲಿ ಭಾರತ-ಚೀನಾ ಗಡಿಯ ಗಲ್ವಾನ್ ಎಂಬಲ್ಲಿ ಭಾರತ ಮತ್ತು ಚೀನಾದ ಸೈನಿಕರು ಮುಖಾ-ಮುಖಿ ಆಗಿದ್ದರು. ಎರಡೂ ದೇಶದ ಸೈನಿಕರು ಪರಸ್ಪರ ಕೈ ಕೈ ಮಿಲಾಯಿಸಿದ್ದು ಈ ಗಲಾಟೆಯಲ್ಲಿ ಸುಮಾರು 20 ಮಂದಿ ಭಾರತೀಯ ಸೈನಿಕರು ನಿಧನ ಹೊಂದಿದ್ದರು. ಚೀನಾದ ಸೈನಿಕರೂ ಸಹ ನಿಧನ ಹೊಂದಿದ್ದರು. ಹಲವಾರು ಮಂದಿ ಗಾಯಾಳುಗಳಾಗಿದ್ದರು. ಪಿಸ್ತೂಲಿನಲ್ಲಿ ಅಲ್ಲದೆ ಬಡಿಗೆಗಳು, ಚಾಕುಗಳಿಂದ ಭಾರತೀಯ ಸೈನಿಕರ ಮೇಲೆ ಚೀನಾದ ಸೈನಿಕರು ದಾಳಿ ಮಾಡಿದ್ದರು. ಭಾರಿ ರಕ್ತಪಾತ ಈ ಗಲಾಟೆಯಲ್ಲಿ ಆಗಿತ್ತು. ಇದೇ ಘಟನೆ ಆಧರಿಸಿ ಈಗ ಸಿನಿಮಾ ಮಾಡಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:07 pm, Sun, 18 May 25