ತಮಿಳು ನಿರ್ದೇಶಕನ ಜೊತೆ ಸಿನಿಮಾ ಘೋಷಿಸಿದ ಸಲ್ಮಾನ್ ಖಾನ್

|

Updated on: Mar 12, 2024 | 3:05 PM

Salman Khan: ಸೂಪರ್ ಹಿಟ್ ಸಿನಿಮಾದ ನಿರೀಕ್ಷೆಯಲ್ಲಿರುವ ಸಲ್ಮಾನ್ ಖಾನ್, ಇದೀಗ ದಕ್ಷಿಣ ಭಾರತದ ಸ್ಟಾರ್ ನಿರ್ದೇಶಕರೊಬ್ಬರ ಜೊತೆ ಕೈ ಜೋಡಿಸಿದ್ದಾರೆ. ಸಿನಿಮಾವನ್ನು ಅವರ ಆಪ್ತ ಮಿತ್ರ ನಿರ್ಮಾಣ ಮಾಡಲಿದ್ದಾರೆ.

ತಮಿಳು ನಿರ್ದೇಶಕನ ಜೊತೆ ಸಿನಿಮಾ ಘೋಷಿಸಿದ ಸಲ್ಮಾನ್ ಖಾನ್
Follow us on

ಸಲ್ಮಾನ್ ಖಾನ್ (Salman Khan) ದೊಡ್ಡದೊಂದು ಹಿಟ್ ಕೊಟ್ಟು ವರ್ಷಗಳೇ ಆಗಿವೆ. ಸಲ್ಮಾನ್​ರ ಈ ಹಿಂದಿನ ಸಿನಿಮಾ ‘ಟೈಗರ್ 3’ ಸಾಧಾರಣ ಯಶಸ್ಸನ್ನಷ್ಟೆ ಕಂಡಿದೆ. ಶಾರುಖ್ ಖಾನ್ ರೀತಿ ದೊಡ್ಡ ಹಿಟ್ ಸಿನಿಮಾಕ್ಕಾಗಿ ಸಲ್ಮಾನ್ ಖಾನ್ ಕಾತರವಾಗಿದ್ದು, ಇದಕ್ಕಾಗಿ ದಕ್ಷಿಣ ಭಾರತದ ಸ್ಟಾರ್ ನಿರ್ದೇಶಕನ ಜೊತೆ ಕೈ ಜೋಡಿಸಿದ್ದಾರೆ. ತಮಿಳು, ತೆಲುಗಿನಲ್ಲಿ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಎಆರ್ ಮುರುಗದಾಸ್ ನಿರ್ದೇಶನ ಮಾಡಲಿರುವ ಸಿನಿಮಾದಲ್ಲಿ ಸಲ್ಮಾನ್ ಖಾನ್ ನಾಯಕನಾಗಿ ನಟಿಸಲಿದ್ದಾರೆ. ಈ ಸಿನಿಮಾವನ್ನು ಸಲ್ಮಾನ್ ಖಾನ್​ರ ಆಪ್ತ ಗೆಳೆಯ ಸಾಜಿದ್ ನಾಡಿಯಾವಾಲ ನಿರ್ಮಾಣ ಮಾಡಲಿದ್ದಾರೆ. ಇದು ಭಾರಿ ಬಜೆಟ್​ ಸಿನಿಮಾ ಆಗಿರಲಿದೆಯಂತೆ.

‘ಗಜಿನಿ’, ‘ಸ್ಟಾಲಿನ್’, ‘ತುಪ್ಪಾಕಿ’, ‘ಸೆವೆಂತ್ ಸೆನ್ಸ್’, ‘ಸ್ಪೈಡರ್’ ಇನ್ನೂ ಹಲವಾರು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಎಆರ್ ಮುರುಗದಾಸ್ ಈಗ ಸಲ್ಮಾನ್ ಖಾನ್​ರ ಮುಂದಿನ ಸಿನಿಮಾವನ್ನು ನಿರ್ದೇಶನ ಮಾಡಲಿದ್ದಾರೆ. ಮುರುಗದಾಸ್​ಗೆ ಹಿಂದಿ ಹೊಸದೇನೂ ಅಲ್ಲ. ಈ ಹಿಂದೆ ಆಮಿರ್ ಖಾನ್ ನಟಿಸಿದ್ದ ‘ಗಜಿನಿ’ ಸಿನಿಮಾ ನಿರ್ದೇಶನ ಮಾಡಿದ್ದರು, ಸೊನಾಕ್ಷಿ ಸಿನ್ಹ ನಟಿಸಿದ್ದ ‘ಅಕಿರಾ’ ಸಿನಿಮಾ ಸಹ ನಿರ್ದೇಶನ ಮಾಡಿದ್ದಾರೆ. ಸಲ್ಮಾನ್ ಖಾನ್ ಸಹ, ಮುರುಗದಾಸ್ ನಿರ್ದೇಶನ ಮಾಡಿದ್ದ ‘ಸ್ಟಾಲಿನ್’ ಸಿನಿಮಾವನ್ನು ಹಿಂದಿಯಲ್ಲಿ ‘ಜೈ ಹೋ’ ಹೆಸರಲ್ಲಿ ರೀಮೇಕ್ ಮಾಡಿದ್ದಾರೆ. ಈಗ ಇಬ್ಬರೂ ಒಟ್ಟಿಗೆ ಕೆಲಸ ಮಾಡಲಿದ್ದಾರೆ.

ಇದನ್ನೂ ಓದಿ:ಸಲ್ಮಾನ್ ಖಾನ್ ದಿನದ ಸಂಪಾದನೆ ಕೋಟಿ ಕೋಟಿ; ಇದರಲ್ಲಿ ದಾನ ಮಾಡೋದು ಎಷ್ಟು?

ತಮ್ಮ ಹೊಸ ಸಿನಿಮಾ ಬಗ್ಗೆ ಇನ್​ಸ್ಟಾಗ್ರಾಂನಲ್ಲಿ ಬರೆದುಕೊಂಡಿರುವ ಸಲ್ಮಾನ್ ಖಾನ್, ‘ಈ ಪ್ರತಿಭಾವಂತ ತಂಡವನ್ನು ಸೇರಿಕೊಳ್ಳುತ್ತಿರುವುದಕ್ಕೆ ಬಹಳ ಸಂತಸವಾಗುತ್ತಿದೆ. ಎಆರ್ ಮುರುಗದಾಸ್ ಮತ್ತು ನನ್ನ ಗೆಳೆಯ ಸಾಜಿದ್ ನಾಡಿಯಾವಾಲ ಜೊತೆಗೆ ಸಿನಿಮಾ ಮಾಡುತ್ತಿರುವುದಕ್ಕೆ ಬಹಳ ಉತ್ಸುಕನಾಗಿದ್ದೇನೆ. ಈ ಸಿನಿಮಾ ಬಹಳ ವಿಶೇಷವಾಗಿರಲಿದೆ. ಈ ಸಿನಿಮಾಕ್ಕಾಗಿ ನಾನು ಎದುರು ನೋಡುತ್ತಿದ್ದೇನೆ ಮತ್ತು ನಿರೀಕ್ಷೆಗಳನ್ನು ಇರಿಸಿಕೊಂಡಿದ್ದೇನೆ. 2025ರ ಈದ್​ ಹಬ್ಬಕ್ಕೆ ಸಿನಿಮಾ ಬಿಡುಗಡೆ ಆಗಲಿದೆ’ ಎಂದಿದ್ದಾರೆ ಸಲ್ಮಾನ್ ಖಾನ್.

ಈ ಸಿನಿಮಾ ಪಕ್ಕಾ ಆಕ್ಷನ್ ಥ್ರಿಲ್ಲರ್ ಸಿನಿಮಾ ಆಗಿರಲಿದ್ದು, ಸಿನಿಮಾದ ಶೂಟಿಂಗ್ ಪೋರ್ಚುಗಲ್ ಮತ್ತು ಕೆಲವು ಯೂರೋಪ್ ದೇಶಗಳಲ್ಲಿ ನಡೆಯಲಿದೆ. ಸುಮಾರು 400 ಕೋಟಿ ಬಜೆಟ್ ಅನ್ನು ಈ ಸಿನಿಮಾಕ್ಕಾಗಿ ಮೀಸಲಿರಿಸಲಾಗಿದ್ದು, ಸಿನಿಮಾದಲ್ಲಿ ಬೇರೆ ಭಾಷೆಗಳ ಕೆಲವು ಸ್ಟಾರ್ ನಟರು ಸಹ ನಟಿಸಲಿದ್ದಾರೆ. ಈ ಮುಂಚೆಯೇ ಸಾಜಿದ್, ಸಲ್ಮಾನ್ ಖಾನ್​ಗಾಗಿ ಸಿನಿಮಾ ಮಾಡಲು ರೆಡಿಯಾಗಿದ್ದರು. ಆದರೆ ಆ ಸಿನಿಮಾದ ಕತೆ ಸಲ್ಮಾನ್ ಖಾನ್​ಗೆ ಇಷ್ಟವಾಗದ ಕಾರಣ ಸಿನಿಮಾ ರದ್ದಾಗಿತ್ತು. ಈಗ ಸಲ್ಮಾನ್ ಖಾನ್ ಹಾಗೂ ಸಾಜಿದ್ ಒಟ್ಟಿಗೆ ಸಿನಿಮಾ ಮಾಡುತ್ತಿದ್ದಾರೆ.

ಇತ್ತೀಚೆಗಷ್ಟೆ ಸಾಜಿದ್ ನಾಡಿಯಾವಾಲ, ರಜನೀಕಾಂತ್​ರನ್ನು ಭೇಟಿ ಆಗಿದ್ದರು. ರಜನೀಕಾಂತ್​ರ ಮುಂದಿನ ಸಿನಿಮಾಕ್ಕೆ ಸಾಜಿದ್ ಬಂಡವಾಳ ಹೂಡಲಿದ್ದಾರೆ ಎನ್ನಲಾಗಿದ್ದು, ಇದು ಈ ವರೆಗಿನ ಅತಿ ದೊಡ್ಡ ಪ್ಯಾನ್ ಇಂಡಿಯಾ ಸಿನಿಮಾ ಆಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಇನ್ನಷ್ಟೆ ಹೊರಬೀಳಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ