
ಆಸ್ಪತ್ರೆಯಲ್ಲಿದ್ದ ಆಪ್ತರೊಬ್ಬರನ್ನು ಭೇಟಿ ಮಾಡಿ ಸಲ್ಮಾನ್ ಖಾನ್ ಹೊರಬರುತ್ತಿದ್ದಾಗ, ಅಲ್ಲಿದ್ದ ಫೋಟೋಗ್ರಾಫರ್‌ಗಳು ಅವರ ಮುಂಬರುವ ಸಿನಿಮಾ ‘ಮಾತೃಭೂಮಿ’ ಹೆಸರನ್ನು ಜೋರಾಗಿ ಕೂಗುತ್ತಾ ಅವರ ಖಾಸಗಿತನಕ್ಕೆ ಅಡ್ಡಿಪಡಿಸಿದ್ದಾರೆ. ಈಗಾಗಲೇ ಬಿಷ್ಣೋಯ್ ಗ್ಯಾಂಗ್ ಬೆದರಿಕೆಯಿಂದಾಗಿ ತೀವ್ರ ಒತ್ತಡದಲ್ಲಿರುವ ಸಲ್ಮಾನ್, ಈ ವರ್ತನೆಯಿಂದ ಸಿಟ್ಟಿಗೆದ್ದು, ಅವರ ಹತ್ತಿರ ಹೋಗಿ ‘ನಿಮಗೆ ತಲೆ ಕೆಟ್ಟಿದೆಯೇ?’ ಎಂದು ಗದರಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
ಇದಾದ ಬೆನ್ನಲ್ಲೇ ಇನ್‌ಸ್ಟಾಗ್ರಾಮ್‌ನಲ್ಲಿ ಸರಣಿ ಪೋಸ್ಟ್ ಹಾಕಿರುವ ಸಲ್ಮಾನ್, ‘ನಾನು ಸದಾ ಬೆಂಬಲವಾಗಿ ನಿಂತ ಪಾಪರಾಜಿಗಳು ಈಗ ಆಸ್ಪತ್ರೆಯ ಮುಂದೆ ನಿಂತು ನನ್ನ ನೋವನ್ನು ನೋಡಿ ಆನಂದಿಸುತ್ತಿದ್ದಾರೆ. ಇದನ್ನು ನಾನು ನೋಡಬೇಕಾಗಿದೆ. ನನ್ನ ನಷ್ಟದಿಂದ ಹಣ ಗಳಿಸಲು ಯತ್ನಿಸಬೇಡಿ, ಸುಮ್ಮನಿರಿ. ನಿಮಗೆ ಸಿನಿಮಾ ಮುಖ್ಯವೋ ಅಥವಾ ಜೀವ ಮುಖ್ಯವೋ?’ ಎಂದು ಪ್ರಶ್ನಿಸಿದ್ದಾರೆ.
‘ಮುಂದಿನ ಬಾರಿ ನನ್ನ ದುಃಖದ ಸಮಯದಲ್ಲಿ ಈ ರೀತಿ ಮಾಡಲು ಪ್ರಯತ್ನಿಸಿ ನೋಡಿ. ನಿಮ್ಮ ಕುಟುಂಬದವರು ಯಾರಾದರೂ ಆಸ್ಪತ್ರೆಯಲ್ಲಿದ್ದಾಗ ನಾನು ಈ ರೀತಿ ವರ್ತಿಸುತ್ತೇನೆಯೇ? ಇಂತಹ ನೂರು ವಿಷಯಗಳನ್ನು ನಾನು ಸುಟ್ಟು ಬೂದಿ ಮಾಡಬಲ್ಲೆ’ ಎಂದು ಗುಡುಗಿದ್ದಾರೆ.
ತಮ್ಮ ಕೊನೆಯ ಪೋಸ್ಟ್‌ನಲ್ಲಿ ಸಲ್ಮಾನ್ ಖಾನ್ ತಮ್ಮ ಸದ್ಯದ ಪರಿಸ್ಥಿತಿ ಹಾಗೂ ಭದ್ರತೆಯ ಸವಾಲುಗಳನ್ನು ನೆನಪಿಸುವಂತೆ ಬರೆದುಕೊಂಡಿದ್ದಾರೆ. ‘ನನಗೆ ಈಗ 60 ವರ್ಷ ವಯಸ್ಸಾಗಿದೆ ನಿಜ, ಆದರೆ ನಾನು ಹೋರಾಡುವುದನ್ನು ಇನ್ನು ಮರೆತಿಲ್ಲ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ. ಇದಕ್ಕಾಗಿ ನನ್ನನ್ನು ಜೈಲಿಗೆ ಹಾಕುತ್ತೀರಾ’ ಎಂದು ಕೇಳಿದ್ದಾರೆ.
ಇದನ್ನೂ ಓದಿ: ಸಲ್ಮಾನ್ ಖಾನ್ ಮನೆಯಲ್ಲಿ ಹಾವು ರಕ್ಷಣಾ ಕಾರ್ಯ ಹೇಗಿತ್ತು? ಇಲ್ಲಿದೆ ವೈರಲ್ ವಿಡಿಯೋ
ಸಲ್ಮಾನ್ ಖಾನ್ ಸದ್ಯ 2020ರ ಗಲ್ವಾನ್ ಕಣಿವೆ ಸಂಘರ್ಷದ ಆಧಾರಿತ ಭವ್ಯ ದೇಶಭಕ್ತಿ ಸಿನಿಮಾ ‘ಮಾತೃಭೂಮಿ: ಮೇ ವಾರ್ ರೆಸ್ಟ್ ಇನ್ ಪೀಸ್’ ಚಿತ್ರದ ಬಿಡುಗಡೆಗೆ ಸಜ್ಜಾಗುತ್ತಿದ್ದಾರೆ. ಇದರ ಜೊತೆಗೆ ತೆಲುಗು ನಿರ್ದೇಶಕ ವಂಶಿ ಪೈಡಿಪಲ್ಲಿ ನಿರ್ದೇಶನದ, ದಿಲ್ ರಾಜು ನಿರ್ಮಾಣದ ತಾತ್ಕಾಲಿಕ ಶೀರ್ಷಿಕೆ ‘SVC63’ ಚಿತ್ರದಲ್ಲಿ ನಟಿ ನಯನತಾರಾ ಜೊತೆ ಮೊದಲ ಬಾರಿಗೆ ನಟಿಸುತ್ತಿದ್ದು, ಈ ಸಿನಿಮಾ 2027ರ ಈದ್ ಹಬ್ಬಕ್ಕೆ ತೆರೆಕಾಣುವ ಸಾಧ್ಯತೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 10:52 am, Wed, 20 May 26