ಸಲ್ಮಾನ್ ಖಾನ್ (Salman Khan) ಅವರ ಮನೆಯ ಮೇಲೆ ನಡೆದ ಗುಂಡಿನ ದಾಳಿ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಸ್ವೀಕರಿಸಿದ್ದಾರೆ. ಈಗಾಗಲೇ ಮುಂಬೈ ಕ್ರೈಮ್ ಬ್ರ್ಯಾಂಚ್ನವರು ಮೂವರನ್ನು ಬಂಧಿಸಿದ್ದು, ತನಿಖೆಗೆ ಚುರುಕು ಮುಟ್ಟಿಸಲಾಗಿದೆ. ಶಾಕಿಂಗ್ ವಿಚಾರ ಎಂದರೆ ಗುಂಡು ಹಾರಿಸಿದವರಿಗೆ ಲಕ್ಷ ಲಕ್ಷ ರೂಪಾಯಿ ಸಿಕ್ಕಿತ್ತು. ಈ ಪ್ರಕರಣದ ಹಿಂದೆ ಅನ್ಮೋಲ್ ಬಿಷ್ಣೋಯ್ ಕೈವಾಡ ಇದೆ ಎನ್ನಲಾಗಿದೆ. ಸದ್ಯ ಕ್ರೈಮ್ ಬ್ರ್ಯಾಂಚ್ ತಂಡ ದೆಹಲಿ, ಬಿಹಾರ್, ಗುಜರಾತ್ ಹಾಗೂ ರಾಜಸ್ಥಾನಕ್ಕೆ ತೆರಳಿದ್ದು, ತನಿಖೆ ನಡೆಸುತ್ತಿದೆ.
ಬಂಧಿತರನ್ನು ಸಾಗರ್ ಪಾಲ್ ಹಾಗೂ ವಿಕ್ಕಿ ಗುಪ್ತಾ ಎಂದು ಗುರುತಿಸಲಾಗಿದೆ. ಇವರು ಅನ್ಮೋಲ್ ಬಿಷ್ಣೋಯ್ ಜೊತೆ ಸಂಪರ್ಕದಲ್ಲಿ ಇದ್ದರು. ಇಂಟರ್ನೆಟ್ ಕಾಲ್ ಮೂಲಕ ಸಂಪರ್ಕ ಸಾಧಿಸುತ್ತಿದ್ದರು. ಇಬ್ಬರೂ ಆರೋಪಿಗಳಿಗೆ 1 ಲಕ್ಷ ರೂಪಾಯಿ ಅಡ್ವಾನ್ಸ್ ನೀಡಲಾಗಿತ್ತು. ಕೆಲಸ ಮುಗಿದ ಬಳಿಕ 3 ಲಕ್ಷ ರೂಪಾಯಿ ನೀಡುವುದಾಗಿ ಭರವಸೆ ಕೊಡಲಾಗಿತ್ತು.
ಸಲ್ಲು ಮನೆಯ ಮೇಲೆ ನಾಲ್ಕು ಬಾರಿ ಗುಂಡು ಹಾರಿಸಿ ಸಾಗರ್ ಪಾಲ್ ಹಾಗೂ ವಿಕ್ಕಿ ಗುಪ್ತಾ ಅಲ್ಲಿಂದ ಪರಾರಿಯಾಗಿದ್ದರು. ಆಟೋ, ಟ್ರೇನ್, ಕಾರು, ಬಸ್ ಮೂಲಕ ಗುಜರಾತ್ನ ಕಚ್ ತಲುಪಿದ್ದರು. ಅಲ್ಲಿಯವರೆಗೆ ಮೊಬೈಲ್ನ ಇವರು ಸ್ವಿಚ್ ಆಫ್ ಮಾಡಿಯೇ ಇಟ್ಟಿದ್ದರು. ಕಚ್ನ ಭುಜ್ಗೆ ಹೊಗಿ ಅನ್ಮೋಲ್ ಜೊತೆ ಮಾತನಾಡಲು ಮೊಬೈಲ್ ಆನ್ ಮಾಡಿದಾಗ ಇವರು ಸಿಕ್ಕಿ ಬಿದ್ದಿದ್ದಾರೆ. ಅನ್ಮೋಲ್ ಸದ್ಯ ಕೆನಡಾದಲ್ಲಿದ್ದಾನೆ. ಆತನಿಗಾಗಿ ಲುಕ್ಔಟ್ ನೋಟಿಸ್ ಹೊರಡಿಸಲಾಗಿದೆ.
ಸಲ್ಮಾನ್ ಖಾನ್ ವಿರುದ್ಧ ದ್ವೇಷ ಸಾಧಿಸುತ್ತಿರುವ ಲಾರೆನ್ಸ್ ಬಿಷ್ಣೋಯ್ ಸದ್ಯ ಜೈಲಿನಲ್ಲಿದ್ದಾನೆ. ಅಲ್ಲಿಯೇ ಇದ್ದುಕೊಂಡು ಆತ ಸಲ್ಲು ವಿರುದ್ಧ ಸಂಚು ರೂಪಿಸುತ್ತಿದ್ದಾನೆ. ಲಾರೆನ್ಸ್ನ ಸಹೋದರನೇ ಈ ಅನ್ಮೋಲ್. ಲಾರೆನ್ಸ್ ಗ್ಯಾಂಗ್ ಸಲ್ಲು ಮನೆಯ ಮೇಲಿನ ದಾಳಿಯ ಹೊಣೆ ಹೊತ್ತಿತ್ತು.
ಇದನ್ನೂ ಓದಿ: ‘ಇದು ಪ್ರಚಾರದ ಗಿಮಿಕ್’; ಸಲ್ಮಾನ್ ಖಾನ್ ಮನೆಯ ಶೂಟೌಟ್ ಬಗ್ಗೆ ತಂದೆಯ ಪ್ರತಿಕ್ರಿಯೆ
ಸಲ್ಮಾನ್ ಖಾನ್ ಅವರು ಕೃಷ್ಣ ಮೃಗ ಹತ್ಯೆ ಮಾಡಿರುವ ಆರೋಪ ಹೊತ್ತಿದ್ದಾರೆ. ಬಿಷ್ಣೋಯ್ ಸಮುದಾಯದವರು ಕೃಷ್ಣ ಮೃಗವನ್ನು ದೇವರಂತೆ ನೋಡುತ್ತಾರೆ. ಈ ಕಾರಣಕ್ಕೆ ಸಲ್ಲು ಮೇಲೆ ಲಾರೆನ್ಸ್ ಗ್ಯಾಂಗ್ನವರು ದ್ವೇಷ ಸಾಧಿಸುತ್ತಿದ್ದಾರೆ. ಸಲ್ಮಾನ್ ಖಾನ್ ಕ್ಷಮೆ ಕೇಳಬೇಕು ಎಂದು ಅವರು ಸಾಕಷ್ಟು ಬಾರಿ ಆಗ್ರಹಿಸಿದ್ದಾರೆ.
ಸಲ್ಮಾನ್ ಖಾನ್ ಮನೆಯ ಮೇಲೆ ನಡೆದ ಫೈರಿಂಗ್ ಪ್ರಕರಣದಲ್ಲಿ ಮೂರನೇ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ. ಈ ವ್ಯಕ್ತಿ ದಾಳಿಗೂ ಮುನ್ನ ಮತ್ತು ನಂತರ ಫೈಯರ್ ಮಾಡಿದವರ ಜೊತೆ ಸಂಪರ್ಕದಲ್ಲಿದ್ದ ಎನ್ನಲಾಗಿದೆ. ಹರಿಯಾಣ ಮೂಲದ ಈ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಹತ್ತು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ. ಈ ಸಂದರ್ಭದಲ್ಲಿ ಇನ್ನೂ ಕೆಲವು ದೊಡ್ಡ ವಿಚಾರಗಳು ರಿವೀಲ್ ಆಗೋ ಸಾಧ್ಯತೆ ಇದೆ. ಕಳೆದ ಎರಡು ತಿಂಗಳಿಂದ ಸಲ್ಮಾನ್ ಖಾನ್ ಮನೆಗೆ ಗುಂಡಿನ ದಾಳಿ ನಡೆಸಲು ಪ್ಲಾನ್ ಮಾಡಲಾಗಿತ್ತು ಎಂದು ಹೇಳಲಾಗುತ್ತಿದೆ. ಅಷ್ಟೇ ಅಲ್ಲ, ಈ ಬಂಧಿತರು ಕೆಲವು ತಿಂಗಳುಗಳಿಂದ ಮುಂಬೈನಲ್ಲಿ ನೆಲೆಸಿದ್ದರು. ಇವರು ಬಿಹಾರ ಮೂಲದವರು.
ಶೂಟಿಂಗ್ ಘಟನೆಯ ನಂತರ ಸಲ್ಮಾನ್ ಖಾನ್ ಮತ್ತು ಗ್ಯಾಲಕ್ಸಿ ಅಪಾರ್ಟ್‌ಮೆಂಟ್ ಭದ್ರತೆಯನ್ನು ಹೆಚ್ಚಿಸಲಾಗಿದೆ. ಸಲ್ಮಾನ್ ಖಾನ್ ಅವರ ಸಂಪೂರ್ಣ ಭದ್ರತೆಯ ಹೊಣೆಯನ್ನು ಮುಂಬೈ ಪೊಲೀಸರು ವಹಿಸಿಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ