‘ಆ ಸಿನಿಮಾ ಒಪ್ಪಿಕೊಂಡು ತಪ್ಪು ಮಾಡಿದೆ’ ಎಂದ ನಟನಿಗೆ ಸಂದೀಪ್ ರೆಡ್ಡಿ ವಂಗಾ ನೀಡಿದ ಉತ್ತರ ಏನು?
2019ರಲ್ಲಿ ತೆರೆಕಂಡ ‘ಕಬೀರ್ ಸಿಂಗ್’ ಸಿನಿಮಾದ ಕುರಿತಂತೆ ನಟ ಆದಿಲ್ ಹುಸೇನ್ ಅವರು ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಸಂದೀಪ್ ರೆಡ್ಡಿ ವಂಗಾ ನಿರ್ದೇಶನ ಮಾಡಿದ್ದ ಆ ಸಿನಿಮಾದಲ್ಲಿ ನಟಿಸಿದ್ದಕ್ಕೆ ತಮಗೆ ವಿಷಾದ ಇದೆ ಎಂದು ಸಂದರ್ಶನವೊಂದರಲ್ಲಿ ಆದಿಲ್ ಹುಸೇನ್ ಹೇಳಿದ್ದಾರೆ. ಅದರ ವಿಡಿಯೋ ಕ್ಲಿಪ್ ವೈರಲ್ ಆಗಿದ್ದು, ಸಂದೀಪ್ ರೆಡ್ಡಿ ವಂಗಾ ಪ್ರತಿಕ್ರಿಯೆ ನೀಡಿದ್ದಾರೆ.
ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ (Sandeep Reddy Vanga) ಅವರು ಮಾಡಿದ ಮೂರು ಸಿನಿಮಾಗಳು ಯಶಸ್ವಿ ಆಗಿವೆಯಾದರೂ ವಿವಾದಗಳಿಂದಲೇ ತುಂಬಿವೆ. ‘ಅರ್ಜುನ್ ರೆಡ್ಡಿ’, ‘ಕಬೀರ್ ಸಿಂಗ್’ (Kabir Singh), ‘ಅನಿಮಲ್’ ಸಿನಿಮಾಗಳನ್ನು ಸಂದೀಪ್ ರೆಡ್ಡಿ ವಂಗಾ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾಗಳಲ್ಲಿ ಮಹಿಳೆಯರ ಪಾತ್ರಗಳನ್ನು ಕೆಟ್ಟದಾಗಿ ತೋರಿಸಲಾಗಿದೆ ಎಂಬ ಆರೋಪ ಇದೆ. ಆ ಬಗ್ಗೆ ನಟ ಆದಿಲ್ ಹುಸೇನ್ ಅವರು ಮಾತನಾಡಿದ್ದಾರೆ. ‘ಕಬೀರ್ ಸಿಂಗ್’ ಸಿನಿಮಾದಲ್ಲಿ ನಟಿಸಿದ್ದಕ್ಕೆ ತಮಗೆ ನಿಷಾದವಿದೆ ಎಂದು ಅವರು ಹೇಳಿದ್ದಾರೆ. ಆದಿಲ್ ಹುಸೇನ್ (Adil Hussain) ಮಾತಿಗೆ ಸಂದೀಪ್ ರೆಡ್ಡಿ ವಂಗಾ ತಿರುಗೇಟು ನೀಡಿದ್ದಾರೆ.
ತೆಲುಗಿನಲ್ಲಿ ವಿಜಯ್ ದೇವರಕೊಂಡ ನಟಿಸಿದ್ದ ‘ಅರ್ಜುನ್ ರೆಡ್ಡಿ’ ಸಿನಿಮಾವನ್ನು ಹಿಂದಿಗೆ ‘ಕಬೀರ್ ಸಿಂಗ್’ ಶೀರ್ಷಿಕೆಯಲ್ಲಿ ರಿಮೇಕ್ ಮಾಡಲಾಯಿತು. ಆ ಸಿನಿಮಾದಲ್ಲಿ ಶಾಹಿದ್ ಕಪೂರ್, ಕಿಯಾರಾ ಅಡ್ವಾಣಿ ಮುಂತಾದವರು ನಟಿಸಿದ್ದರು. ನಟ ಆದಿಲ್ ಹುಸೇನ್ ಕೂಡ ಒಂದು ಪಾತ್ರ ಮಾಡಿದ್ದರು. ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ‘ಕಬೀರ್ ಸಿಂಗ್’ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ.
ಇದನ್ನೂ ಓದಿ: ‘ಮೈಕಲ್ ಜಾಕ್ಸನ್ ಬಯೋಪಿಕ್ ಮಾಡುವ ಆಸೆ ಇದೆ’: ಸಂದೀಪ್ ರೆಡ್ಡಿ ವಂಗಾ
‘ನನ್ನ ವೃತ್ತಿ ಜೀವನದಲ್ಲಿ ಸ್ಕ್ರಿಪ್ಟ್ ಓದದೇ ನಟಿಸಿದ ಸಿನಿಮಾ ಇದು ಮಾತ್ರ. ಅದರ ಬಗ್ಗೆ ನನಗೆ ವಿಷಾದ ಇದೆ. ನನಗೆ ನನ್ನ ದೃಶ್ಯ ಇಷ್ಟ ಆಗಿತ್ತು. ಅದು ಚೆನ್ನಾಗಿತ್ತು ಕೂಡ. ಸಿನಿಮಾ ಕೂಡ ಅದೇ ರೀತಿ ಚೆನ್ನಾಗಿರುತ್ತೆ ಎಂದುಕೊಂಡಿದ್ದೆ. ಆದರೆ ಸಿನಿಮಾ ನೋಡಲು ಹೋದಾಗ ನನಗೆ ತುಂಬ ಮುಜುಗರ ಆಯಿತು. ನನ್ನ ಸ್ನೇಹಿತರೊಬ್ಬರ ಜೊತೆ ನಾನು ಆ ಸಿನಿಮಾ ನೋಡಲು ಹೋಗಿದ್ದೆ. ಇಬ್ಬರೂ ಮಧ್ಯದಲ್ಲೇ ಎದ್ದು ಬಂದೆವು. ‘ಕಬೀರ್ ಸಿಂಗ್’ ಸಿನಿಮಾ ನೋಡು ಅಂತ ನಾನು ನನ್ನ ಪತ್ನಿಗೆ ಹೇಳಲು ಸಾಧ್ಯವಿಲ್ಲ. ನೋಡಿದರೆ ಆಕೆಗೆ ತುಂಬ ಕೋಪ ಬರುತ್ತದೆ’ ಎಂದು ಆದಿಲ್ ಹುಸೇನ್ ಹೇಳಿದ್ದರು.
ಸಂದೀಪ್ ರೆಡ್ಡಿ ವಂಗಾ ಪ್ರತಿಕ್ರಿಯೆ:
ಆದಿಲ್ ಹುಸೇನ್ ನೀಡಿದ ಸಂದರ್ಶನದ ತುಣುಕನ್ನು ಸಂದೀಪ್ ರೆಡ್ಡಿ ವಂಗಾ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ‘ನೀವು ವಿಷಾದದಿಂದ ಮಾಡಿದ ಒಂದು ಬ್ಲಾಕ್ ಬಸ್ಟರ್ ಸಿನಿಮಾದಲ್ಲಿ ನಿಮಗೆ ಸಿಕ್ಕಷ್ಟು ಜನಪ್ರಿಯತೆಯು ನೀವು ನಂಬಿಕೆಯಿಟ್ಟು ಮಾಡಿದ 30 ಕಲಾತ್ಮಕ ಸಿನಿಮಾಗಳಿಂದ ನಿಮಗೆ ಸಿಕ್ಕಿಲ್ಲ. ನಿಮ್ಮನ್ನು ಆಯ್ಕೆ ಮಾಡಿಕೊಂಡಿದ್ದಕ್ಕೆ ನನಗೆ ವಿಷಾದವಿದೆ. ಪ್ಯಾಷನ್ಗಿಂತಲೂ ನಿಮಗೆ ದುರಾಸೆ ಜಾಸ್ತಿ ಇದೆ. ಕೃತಕ ಬುದ್ಧಿಮತ್ತೆಯ ಸಹಾಯನಿಂದ ಸಿನಿಮಾದಲ್ಲಿ ನಿಮ್ಮ ಮುಖವನ್ನು ಬದಲಾಯಿಸುತ್ತೇನೆ. ಆ ಮೂಲಕ ನಿಮಗೆ ಆದ ಮುಜುಗರವನ್ನು ತಪ್ಪಿಸುತ್ತೇನೆ. ಈಗ ಸರಿಯಾಗಿ ಸ್ಮೈಲ್ ಮಾಡಿ’ ಎಂದು ಸಂದೀಪ್ ರೆಡ್ಡಿ ವಂಗಾ ಪೋಸ್ಟ್ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.