2002ರ ಸೆಪ್ಟೆಂಬರ್ 28ರಂದು ಮುಂಬೈನ ಬಾಂದ್ರಾದಲ್ಲಿ ಹಿಟ್ ಆ್ಯಂಡ್ ರನ್ ಕೇಸ್ ನಡೆದಿತ್ತು. ಟೊಯಾಟೋ ಲ್ಯಾಂಡ್ ಕ್ರೂಸರ್ ಕಾರು ಬೇಕರಿ ಸಮೀಪ ಮಲಗಿದ್ದ ವ್ಯಕ್ತಿಗಳ ಮೇಲೆ ಹರಿದಿತ್ತು. ಇದರಿಂದ ಒಬ್ಬರು ಸತ್ತರೆ, ಹಲವರು ಗಾಯಗೊಂಡಿದ್ದರು. ಈ ಪ್ರಕರಣದಲ್ಲಿ ಆರೋಪಿ ಸ್ಥಾನದಲ್ಲಿ ಇದ್ದಿದ್ದು ಬಾಲಿವುಡ್ನ ಸ್ಟಾರ್ ಹೀರೋ ಸಲ್ಮಾನ್ ಖಾನ್ (Salman Khan). ಅಸಲಿಗೆ ಅವರು ಈ ಪ್ರಕರಣದಲ್ಲಿ ತಮ್ಮ ಕೈವಾಡ ಇಲ್ಲ ಎಂದು ಹೇಳಿಕೊಂಡಿದ್ದರು. ತಾವು ಹಿಂದೆ ಕೂತಿದ್ದಾಗಿಯೂ, ಡ್ರೈವರ್ ಕಾರು ಓಡಿಸುತ್ತಿದ್ದಾಗಿಯೂ ಅವರು ಹೇಳಿಕೊಂಡಿದ್ದರು. ಈ ವಿಡಿಯೋ ಈಗ ಮತ್ತೆ ವೈರಲ್ ಆಗಿದೆ.
ರಜತ್ ಶರ್ಮಾ ಅವರು ನಡೆಸಿಕೊಡುವ ‘ಆಪ್ ಕಿ ಅದಾಲತ್’ ಕಾರ್ಯಕ್ರಮಕ್ಕೆ ಸಲ್ಮಾನ್ ಖಾನ್ ಅವರು ಆಗಮಿಸಿದ್ದರು. ಈ ವೇಳೆ ಸಲ್ಮಾನ್ ಖಾನ್ ಅವರು ಅಂದು ನಡೆದ ಘಟನೆಯನ್ನು ನೆನಪಿಸಿಕೊಂಡಿದ್ದರು. ‘ನನಗೆ ಆ ಘಟನೆ ಬಗ್ಗೆ ಈಗಲೂ ಬೇಸರ ಇದೆ. ಮನೆಗೆ ಹೋಗುವಾಗ ನನಗೆ ಆ ಘಟನೆ ನೆನಪಾಗುತ್ತದೆ. ಘಟನೆ ನಡೆದ ಜಾಗದಲ್ಲಿ ಪ್ರತಿ ಬಾರಿ ಬಲಕ್ಕೆ ತಿರುಗುವಾಗ ನನಗೆ ನೋವಾಗುತ್ತದೆ, ಕಾಡುತ್ತದೆ’ ಎಂದು ಸಲ್ಮಾನ್ ಖಾನ್ ಹೇಳಿದ್ದರು.
‘ಇದರಷ್ಟು ಕೆಟ್ಟ ಘಟನೆ ಮತ್ತೊಂದು ನಡೆಯೋಕೆ ಸಾಧ್ಯವಿಲ್ಲ. ಡ್ರೈವರ್ ಗಾಡಿ ಓಡಿಸುತ್ತಿದ್ದರು. ನಾನು ಹಾಗೂ ಕಮಾಲ್ ಹಿಂದೆ ಕೂತಿದ್ದೆವು. ರಸ್ತೆಯ ಮೇಲೆ ಕಲ್ಲಿತ್ತು. ಡ್ರೈವರ್ ಬ್ರೇಕ್ ಹಾಕಿದ. ಇದರಿಂದ ಕಾರು ಸ್ಕಿಡ್ ಆಯಿತು’ ಎಂದು ಅವರು ಹೇಳಿಕೊಂಡಿದ್ದರು. ಜೊತೆಗೆ ತಮ್ಮ ಕಾರಿನಿಂದ ಈ ಘಟನೆ ನಡೆಯಿತಲ್ಲ ಎನ್ನುವ ಬೇಸರ ಅವರಿಗೆ ಇದೆಯಂತೆ.
ಕಾರು ತುಂಬಾನೇ ಸ್ಪೀಡ್ ಇತ್ತು ಎಂದು ಅನೇಕರು ಆರೋಪಿಸಿದ್ದಿದೆ. ಇದಕ್ಕೂ ಸಲ್ಮಾನ್ ಖಾನ್ ಉತ್ತರಿಸಿದ್ದರು. ‘ಕಾರು 180-200 ಕಿಮೀ ಸ್ಪೀಡ್ನಲ್ಲಿ ಇತ್ತು ಎಂದು ಅನೇಕರು ಆರೋಪಿಸುತ್ತಾರೆ. ಪ್ರೊಫೆಷನಲ್ ರೇಸರ್ಗಳಿಗೆ ಕಾರು ನೀಡಿದರೂ ಅವರು ಅಲ್ಲಿ ಅಷ್ಟು ವೇಗದಲ್ಲಿ ಅಲ್ಲಿ ಕಾರು ಓಡಿಸೋಕೆ ಸಾಧ್ಯವಿಲ್ಲ’ ಎಂದು ಸಲ್ಲು ಹೇಳಿದ್ದರು. ಹಿಟ್ ಆ್ಯಂಡ್ ರನ್ ಕೇಸ್ ಘಟನೆ ಅಂದಿನ ಕಾಲಕ್ಕೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು.
ಸಲ್ಮಾನ್ ಖಾನ್ ಅವರ ಈ ಹೇಳಿಕೆ ಕೂಡ ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ‘ಆಸ್ಕರ್ ಲೆವೆಲ್ ಸ್ಟೋರಿ’ ಎಂದು ಅನೇಕರು ಟೀಕೆ ಮಾಡಿದ್ದರು. ‘ಇದೊಂದೇ ಬಾರಿ ಸಲ್ಮಾನ್ ಖಾನ್ ಅವರು ಉತ್ತಮವಾಗಿ ನಟಿಸಿದ್ದರು’ ಎಂದು ಕೆಲವರು ಕಮೆಂಟ್ ಮಾಡಿದ್ದರು. ‘ದೃಶ್ಯಂ ಸಿನಿಮಾದ ಕಥೆಯಂತೆ ಇದೆ’ ಎಂದು ಕೂಡ ಕೆಲವರು ಟೀಕೆ ಮಾಡಿದ್ದರು.
ಇದನ್ನೂ ಓದಿ: ಬಾಲಿವುಡ್ನ ‘ರಾಮಾಯಣ’ ಚಿತ್ರಕ್ಕೆ ನಿರ್ಮಾಪಕನಾದ ಯಶ್; ಏನಿದು ಸಮಾಚಾರ?
ಸಲ್ಮಾನ್ ಖಾನ್ ಅವರು ಸದ್ಯ ಸುದ್ದಿಯಲ್ಲಿದ್ದಾರೆ. ಅವರ ಮನೆಯ ಮೇಲೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನವರು ಗುಂಡು ಹಾರಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಜನರನ್ನು ಬಂಧಿಸಲಾಗಿದೆ. ಈ ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ. ಸದ್ಯ ಸಲ್ಮಾನ್ಗೆ ಹೆಚ್ಚಿನ ಭದ್ರತೆ ನೀಡಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ