ಜೀವ ಬೆದರಿಕೆ ನಡುವೆಯೂ ಚಿತ್ರೀಕರಣಕ್ಕೆ ಮರಳಲಿರುವ ಸಲ್ಮಾನ್ ಖಾನ್​

|

Updated on: Oct 17, 2024 | 3:52 PM

Salman Khan: ಸಲ್ಮಾನ್ ಖಾನ್​ಗೆ ಕೊಲೆ ಬೆದರಿಕೆ, ಅವರ ಆಪ್ತರೊಬ್ಬರನ್ನು ಇತ್ತೀಚೆಗಷ್ಟೆ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ಹತ್ಯೆ ಮಾಡಿದ್ದು, ಮುಂದಿನ ಗುರಿ ಸಲ್ಮಾನ್ ಖಾನ್ ಎಂದಿದೆ. ಇದರ ನಡುವೆಯೂ ಸಲ್ಮಾನ್ ಖಾನ್ ಸಿನಿಮಾ ಚಿತ್ರೀಕರಣ ಪ್ರಾರಂಭ ಮಾಡುತ್ತಿದ್ದಾರೆ.

ಜೀವ ಬೆದರಿಕೆ ನಡುವೆಯೂ ಚಿತ್ರೀಕರಣಕ್ಕೆ ಮರಳಲಿರುವ ಸಲ್ಮಾನ್ ಖಾನ್​
Follow us on

ಸಲ್ಮಾನ್ ಖಾನ್​ಗೆ ವರ್ಷಗಳಿಂದಲೂ ಜೀವ ಬೆದರಿಕೆ ಇದೆ. ಈಗಾಗಲೇ ಹಲವು ಬಾರಿ ಸಲ್ಮಾನ್ ಖಾನ್ ಅನ್ನು ಕೊಲ್ಲುವ ಪ್ರಯತ್ನ ಮಾಡಲಾಗಿದೆ. ಆದರೆ ಕೆಲ ದಿನಗಳ ಹಿಂದಷ್ಟೆ ಸಲ್ಮಾನ್ ಖಾನ್​ರ ಆಪ್ತ ಬಾಬಾ ಸಿದ್ಧಿಕಿ ಅವರನ್ನು ಕೆಲ ಅಗಂತುಕರು ಕೊಂದಿದ್ದು, ಮುಂದಿನ ಟಾರ್ಗೆಟ್ ಸಲ್ಮಾನ್ ಖಾನ್ ಎಂದಿದ್ದಾರೆ. ಇದು ಸಲ್ಮಾನ್ ಖಾನ್ ಅಭಿಮಾನಿಗಳನ್ನು ಆತಂಕಕ್ಕೆ ಈಡು ಮಾಡಿದೆ. ಆದರೆ ಇದೆಲ್ಲದರ ನಡುವೆಯೂ ಸಲ್ಮಾನ್ ಖಾನ್ ಮತ್ತೆ ಚಿತ್ರೀಕರಣಕ್ಕೆ ಮರಳುತ್ತಿದ್ದಾರೆ.

ಬಾಬಾ ಸಿದ್ಧಿಕಿ ಹತ್ಯೆ ಆದ ಬಳಿಕ ನಿಗದಿಯಾಗಿದ್ದ ತಮ್ಮ ಎಲ್ಲ ಕಾರ್ಯಕ್ರಮಗಳನ್ನು ಸಲ್ಮಾನ್ ಖಾನ್ ರದ್ದು ಮಾಡಿದ್ದರು. ಆದರೆ ಕೆಲವೇ ದಿನಕ್ಕೆ ಈಗ ಮತ್ತೆ ಸಿನಿಮಾ ಚಿತ್ರೀಕರಣಕ್ಕೆ ಮರಳುವ ನಿರ್ಧಾರ ಮಾಡಿದ್ದಾರೆ. ಅಲ್ಲದೆ ಈ ವಾರದ ಬಿಗ್​ಬಾಸ್ ವೀಕೆಂಡ್ ಎಪಿಸೋಡ್​ನ ಚಿತ್ರೀಕರಣದಲ್ಲಿಯೂ ಸಹ ಸಲ್ಮಾನ್ ಖಾನ್ ಭಾಗಿಯಾಗಲಿದ್ದಾರೆ ಎನ್ನಲಾಗುತ್ತಿದೆ.

ಬಾಬಾ ಸಿದ್ಧಿಕಿ ಹತ್ಯೆ ಬಳಿಕ ಸಲ್ಮಾನ್ ಖಾನ್​ರ ಭದ್ರತೆಯನ್ನು ಹೆಚ್ಚಿಸಲಾಗಿದೆ. ಸಲ್ಮಾನ್ ಖಾನ್ ಸಹ ತಮ್ಮ ಭದ್ರತೆಗಾಗಿ ಖಾಸಗಿ ಸಂಗರಕ್ಷಕರನ್ನು ಸಹ ನೇಮಿಸಿಕೊಂಡಿದ್ದಾರೆ. ಈ ಹಿಂದೆ ಬೆದರಿಕೆ ಇದ್ದಾಗಲೂ ಸಹ ಸಲ್ಮಾನ್ ಖಾನ್ ಯಾವುದೇ ಹಿಂಜರಿಕೆ ಇಲ್ಲದೆ ಸಿನಿಮಾ ಚಿತ್ರೀಕರಣಗಳಲ್ಲಿ, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಈಗಲೂ ಸಹ ಸಲ್ಮಾನ್ ಖಾನ್ ಮತ್ತೆ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ. ಆದರೆ ಈ ಬಾರಿ ಭದ್ರತೆಯನ್ನು ಇನ್ನಷ್ಟು ಹೆಚ್ಚು ಮಾಡಲಾಗುವುದಂತೆ.

ಇದನ್ನೂ ಓದಿ:ಸಲ್ಮಾನ್ ಖಾನ್​ ಭದ್ರತೆಗೆ ವರ್ಷಕ್ಕೆ ಖರ್ಚಾಗೋದು ಎಷ್ಟು ಕೋಟಿ ರೂಪಾಯಿ?

‘ಸಿಖಂಧರ್’ ಸಿನಿಮಾವನ್ನು ತಮಿಳಿನ ಮುರುಗದಾಸ್ ನಿರ್ದೇಶನ ಮಾಡುತ್ತಿದ್ದು, ಕನ್ನಡತಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿದ್ದಾರೆ. ಸಿನಿಮಾದ ಚಿತ್ರೀಕರಣ ತಿಂಗಳ ಹಿಂದೆಯೇ ಪ್ರಾರಂಭವಾಗಿದ್ದು ವಿದೇಶದಲ್ಲಿ ಕೆಲ ಭಾಗಗಳ ಚಿತ್ರೀಕರಣವನ್ನು ಚಿತ್ರತಂಡ ಮುಗಿಸಿದೆ. ಭಾರತದಲ್ಲಿ ಚಿತ್ರೀಕರಣ ಜಾರಿಯಲ್ಲಿರುವಾಗಲೇ ಈ ದುರ್ಘಟನೆ ನಡೆದಿದೆ. ಮುಂದಿನ ಚಿತ್ರೀಕರಣಕ್ಕೆ ಸೆಟ್​ನಲ್ಲಿ ಭದ್ರತೆಯನ್ನು ಹೆಚ್ಚು ಮಾಡಲಾಗುತ್ತಿದ್ದು, ಸಲ್ಮಾನ್ ಖಾನ್ ಸೆಟ್​ಗೆ ಬರುವ ಮುನ್ನವೇ ಭದ್ರತೆಯವರು ಹಾಜರಿದ್ದು ಸೆಟ್​ ಅನ್ನು ಪರಿಶೀಲಿಸಿದ ಬಳಿಕವಷ್ಟೆ ಸಲ್ಮಾನ್ ಖಾನ್ ಬರಲಿದ್ದಾರೆ.

ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್​ನವರು ಸಲ್ಮಾನ್ ಖಾನ್ ಅನ್ನು ಕೊಲ್ಲುವ ಪ್ರಯತ್ನ ಮಾಡುತ್ತಲೇ ಬರುತ್ತಿದ್ದಾರೆ. ಈ ಹಿಂದೆ ಕೆಲವು ಬಾರಿ ಸಲ್ಮಾನ್ ಖಾನ್ ಅನ್ನು ಕೊಲ್ಲುವ ಪ್ರಯತ್ನವನ್ನು ಈ ಗ್ಯಾಂಗ್ ಮಾಡಿದೆ ಆದರೆ ಸಫಲವಾಗಿಲ್ಲ. ನಿನ್ನೆ ಸಹ ಸಲ್ಮಾನ್ ಖಾನ್​ಗೆ ಕೊಲೆ ಬೆದರಿಕೆ ಹಾಕಿದ ಹರಿಯಾಣ ಮೂಲದ ವ್ಯಕ್ತಿಯೊಬ್ಬನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ