ಶಾರುಖ್​ ಮಗನನ್ನು ಅರೆಸ್ಟ್​ ಮಾಡಿದ ಎನ್​ಸಿಬಿ ಅಧಿಕಾರಿಗೆ ಈಗ ಹೊಸ ತಲೆನೋವು; ಇದು ಯಾರ ಸಂಚು?

| Updated By: ಮದನ್​ ಕುಮಾರ್​

Updated on: Oct 12, 2021 | 4:19 PM

ಎನ್​ಸಿಬಿ ಅಧಿಕಾರಿ ಸಮೀರ್​ ವಾಂಖೆಡೆ ಅವರನ್ನು ಯಾರೋ ಫಾಲೋ ಮಾಡುತ್ತಿರುವುದು ಗೊತ್ತಾಗಿದೆ. ಅವರು ಹೋದಲ್ಲಿ ಬಂದಲ್ಲಿ ಯಾರೋ ಇಬ್ಬರು ಹಿಂಬಾಲಿಸುತ್ತಿದ್ದಾರೆ.

ಶಾರುಖ್​ ಮಗನನ್ನು ಅರೆಸ್ಟ್​ ಮಾಡಿದ ಎನ್​ಸಿಬಿ ಅಧಿಕಾರಿಗೆ ಈಗ ಹೊಸ ತಲೆನೋವು; ಇದು ಯಾರ ಸಂಚು?
ಸಮೀರ್​ ವಾಂಖೆಡೆ, ಆರ್ಯನ್​ ಖಾನ್​
Follow us on

ಶಾರುಖ್​ ಖಾನ್​ ಪುತ್ರ ಆರ್ಯನ್​ ಖಾನ್​ ಅವರು ಡ್ರಗ್ಸ್ ಪಾರ್ಟಿ ಮಾಡಿದ ಆರೋಪದ ಮೇಲೆ ಸಿಕ್ಕ ಬಿದ್ದ ಬಳಿಕ ಆ ಬಗ್ಗೆ ಹಲವು ಆಯಾಮದಲ್ಲಿ ಚರ್ಚೆ ಆಗುತ್ತಿದೆ. ಸ್ಟಾರ್​ ಪುತ್ರನೆಂಬ ಮುಲಾಜಿಗೂ ಒಳಗಾಗದೇ ಅವರನ್ನು ಅರೆಸ್ಟ್​ ಮಾಡಿದ ಎನ್​ಸಿಬಿ ಅಧಿಕಾರಿ ಸಮೀರ್​ ವಾಂಖೆಡೆ ಅವರನ್ನು ಎಲ್ಲರೂ ಹೊಗಳುತ್ತಿದ್ದಾರೆ. ಆದರೆ ಕೆಲವರು ಸಮೀರ್​ ಕಾರ್ಯವೈಖರಿ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಇದು ರಾಜಕೀಯ ಪ್ರೇರಿತ ದಾಳಿ ಎಂಬ ಅಭಿಪ್ರಾಯ ಕೂಡ ಹಲವರಿಂದ ವ್ಯಕ್ತವಾಗಿದೆ. ಅದರ ನಡುವೆ ಸಮೀರ್​ ವಾಂಖೆಡೆ ಅವರಿಗೆ ಇನ್ನೊಂದು ತಲೆಬಿಸಿ ಶುರುವಾಗಿದೆ.

ಆರ್ಯನ್​ ಖಾನ್​ ಅವರ ಡ್ರಗ್ಸ್​ ಕೇಸ್​ ಯಾವ ರೀತಿಯಲ್ಲಿ ಅಂತ್ಯ ಕಾಣಲಿದೆಯೋ ಗೊತ್ತಿಲ್ಲ. ಅವರಿಗೆ ಸೂಕ್ತ ಶಿಕ್ಷೆ ಕೊಡಿಸಲು ಎನ್​ಸಿಬಿ ಅಧಿಕಾರಿಗಳು ಪಣ ತೊಟ್ಟಂತಿದೆ. ಸೂಕ್ತ ಸಾಕ್ಷಿಗಳನ್ನು ನ್ಯಾಯಾಲಯಕ್ಕೆ ನೀಡಲು ಅವರು ಸಿದ್ಧತೆ ಮಾಡಿಕೊಂಡಿದ್ದಾರೆ. ಆದರೆ ಈ ನಡುವೆ ಎನ್​ಸಿಬಿ ಅಧಿಕಾರಿ ಸಮೀರ್​ ವಾಂಖೆಡೆ ಅವರನ್ನು ಯಾರೋ ಫಾಲೋ ಮಾಡುತ್ತಿರುವುದು ಗೊತ್ತಾಗಿದೆ. ಅವರು ಹೋದಲ್ಲಿ ಬಂದಲ್ಲಿ ಯಾರೋ ಇಬ್ಬರು ಹಿಂಬಾಲಿಸುತ್ತಿದ್ದಾರೆ. ಈ ವಿಚಾರ ತಮ್ಮ ಗಮನಕ್ಕೆ ಬರುತ್ತಿದ್ದಂತೆಯೇ ಪೊಲೀಸ್​ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಸಮೀರ್​ ವಾಂಖೆಡೆ ದೂರು ನೀಡಿದ್ದಾರೆ.

‘ಸಮೀರ್​ ವಾಂಖೆಡೆ ಮೇಲೆ ಕಣ್ಣಿಡಬೇಕು ಎಂದು ಪೊಲೀಸರಿಗಾಗಲಿ ಅಥವಾ ರಾಜ್ಯ ಗುಪ್ತಚರ ಇಲಾಖೆಗಾಗಲಿ ನಾವು ಸೂಚನೆ ನೀಡಿಲ್ಲ. ತಮ್ಮನ್ನು ಯಾರೋ ಹಿಂಬಾಲಿಸುತ್ತಿದ್ದಾರೆ ಎಂದು ಸಮೀರ್​ ಅವರು ದೂರು ನೀಡಿದ್ದಾರೆ. ಈ ಬಗ್ಗೆ ನಾವು ಗಮನ ಹರಿಸುತ್ತೇವೆ’ ಎಂದು ಮಹಾರಾಷ್ಟ್ರ ಗೃಹ ಸಚಿವರು ಹೇಳಿಕೆ ನೀಡಿದ್ದಾರೆ.

ತಮ್ಮ ತಾಯಿಯ ಅಂತ್ಯ ಸಂಸ್ಕಾರ ನಡೆದ ಜಾಗಕ್ಕೆ ಸಮೀರ್​ ವಾಂಖೆಡೆ ಅವರು ಆಗಾಗ ಭೇಟಿ ನೀಡುತ್ತಾರೆ. ಈ ವೇಳೆ ಅವರನ್ನು ಹಿಂಬಾಲಿಸಿಕೊಂಡ ಬಂದ ವ್ಯಕ್ತಿಗಳು ತಮ್ಮನ್ನು ತಾವು ಪೊಲೀಸರು ಎಂದು ಹೇಳಿಕೊಂಡು, ಆ ಪ್ರದೇಶದ ಸಿಸಿಟಿವಿ ದೃಶ್ಯಗಳನ್ನು ಪಡೆದುಕೊಂಡಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ. ಇದರ ಹಿಂದೆ ಯಾರ ಕೈವಾಡ ಇದೆ ಎಂಬ ಪ್ರಶ್ನೆ ಮೂಡಿದೆ.

ಇದನ್ನೂ ಓದಿ:

‘ಅದಾನಿ ಬಂದರು ಡ್ರಗ್ಸ್​ ಮತ್ತು ರೈತರ ಕೊಲೆ ಮರೆಮಾಚಲು ಶಾರುಖ್​ ಮಗ ಟಾರ್ಗೆಟ್​’: ವಿಶಾಲ್​ ದದ್ಲಾನಿ

‘ಖಾನ್​ ಎಂಬ ಹೆಸರಿನ ಕಾರಣಕ್ಕೆ ಶಾರುಖ್​ ಮಗನನ್ನು ಅರೆಸ್ಟ್​ ಮಾಡಲಾಗಿದೆ’: ಮೆಹಬೂಬಾ ಮುಫ್ತಿ ಆರೋಪ