‘ಖಾನ್ ಎಂಬ ಹೆಸರಿನ ಕಾರಣಕ್ಕೆ ಶಾರುಖ್ ಮಗನನ್ನು ಅರೆಸ್ಟ್ ಮಾಡಲಾಗಿದೆ’: ಮೆಹಬೂಬಾ ಮುಫ್ತಿ ಆರೋಪ
ಆರ್ಯನ್ ಖಾನ್ ಬಂಧನದ ಬಗ್ಗೆ ಟ್ವೀಟ್ ಮಾಡಿರುವ ಮೆಹಬೂಬಾ ಮುಫ್ತಿ ಅವರು ಬಿಜೆಪಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ ಅವರ ಹೇಳಿಕೆಯನ್ನು ಬಹುತೇಕರು ಖಂಡಿಸಿದ್ದಾರೆ.
ಡ್ರಗ್ಸ್ ಪಾರ್ಟಿ ಮಾಡುತ್ತಿದ್ದ ಆರೋಪದ ಮೇಲೆ ಶಾರುಖ್ ಖಾನ್ ಮಗ ಆರ್ಯನ್ ಖಾನ್ ಬಂಧನಕ್ಕೆ ಒಳಗಾದ ಬಳಿಕ ಅವರ ಪರವಾಗಿ ಅನೇಕರು ಧ್ವನಿ ಎತ್ತಿದ್ದಾರೆ. ಸದ್ಯ ಆರ್ಯನ್ ಖಾನ್ ನ್ಯಾಯಾಂಗ ಬಂಧನದಲ್ಲಿ ಇದ್ದಾರೆ. ಅವರನ್ನು ಎನ್ಸಿಬಿ ಅಧಿಕಾರಿಗಳು ಅರೆಸ್ಟ್ ಮಾಡಿದ್ದರ ಹಿಂದೆ ರಾಜಕೀಯ ಷಡ್ಯಂತ್ರವಿದೆ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಇದರ ನಡುವೆ ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರು ಜಾತಿ-ಧರ್ಮದ ವಿಚಾರವನ್ನೂ ಎಳೆದುತಂದಿದ್ದಾರೆ. ಅದು ದೊಡ್ಡ ಚರ್ಚೆಗೆ ಕಾರಣ ಆಗಿದೆ.
ಆರ್ಯನ್ ಬಂಧನದ ಬಗ್ಗೆ ಟ್ವೀಟ್ ಮಾಡಿರುವ ಮೆಹಬೂಬಾ ಮುಫ್ತಿ ಅವರು ಬಿಜೆಪಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ರೈತರ ಕೊಲೆ ಆರೋಪ ಹೊತ್ತಿರುವ ಕೇಂದ್ರ ಸಚಿವರ ಮಗನಿಗೆ ಶಿಕ್ಷೆ ಕೊಡಿಸುವ ಬದಲು ತನಿಖಾ ಸಂಸ್ಥೆಗಳು 23ರ ಪ್ರಾಯದ ಹುಡುಗನ ಹಿಂದೆ ಬಿದ್ದಿವೆ. ಆತನ ಸರ್ನೇಮ್ ಖಾನ್ ಎಂಬುದೇ ಇದಕ್ಕೆ ಕಾರಣ. ಬಿಜೆಪಿಯ ವೋಟ್ ಬ್ಯಾಂಕ್ ಕಾರಣದಿಂದ ಮುಸ್ಲೀಮರು ಟಾರ್ಗೆಟ್ ಆಗುತ್ತಿದ್ದಾರೆ’ ಎಂದು ಮೆಹಬೂಬಾ ಮುಫ್ತಿ ಟ್ವೀಟ್ ಮಾಡಿದ್ದಾರೆ.
ಮೆಹಬೂಬಾ ಮುಫ್ತಿ ಅವರ ಹೇಳಿಕೆಯನ್ನು ಬಹುತೇಕರು ಖಂಡಿಸಿದ್ದಾರೆ. ಈ ಸಂಬಂಧ ದೆಹಲಿ ಮೂಲದ ವಕೀಲರೊಬ್ಬರು ಅವರ ವಿರುದ್ಧ ದೂರು ನೀಡಿದ್ದಾರೆ ಎಂದು ವರದಿ ಆಗಿದೆ. ಅದೇನೇ ಇರಲಿ, ಪ್ರತಿ ದಿನ ಒಬ್ಬರಲ್ಲಾ ಒಬ್ಬರು ಶಾರುಖ್ ಫ್ಯಾಮಿಲಿ ಪರವಾಗಿ ಬ್ಯಾಟ್ ಬೀಸುತ್ತಲೇ ಇದ್ದಾರೆ. ಇತ್ತೀಚೆಗೆ ಹೃತಿಕ್ ರೋಷನ್, ವಿಶಾಲ್ ದದ್ಲಾನಿ, ಶೇಖರ್ ಸುಮನ್, ಸಲ್ಮಾನ್ ಖಾನ್, ಫರ್ಹಾ ಖಾನ್ ಮುಂತಾದವರು ಶಾರುಖ್ಗೆ ಬೆಂಬಲ ವ್ಯಕ್ತಪಡಿಸಿದ್ದರು.
Instead of making an example out of a Union Minister’s son accused of killing four farmers, central agencies are after a 23 year old simply because his surname happens to be Khan.Travesty of justice that muslims are targeted to satiate the sadistic wishes of BJPs core vote bank.
— Mehbooba Mufti (@MehboobaMufti) October 11, 2021
ವಿಶೇಷ ಎನ್ಡಿಪಿಎಸ್ ನ್ಯಾಯಾಲಯದಲ್ಲಿ ಸೋಮವಾರ (ಅ.11) ಆರ್ಯನ್ ಖಾನ್ ಜಾಮೀನು ಅರ್ಜಿ ವಿಚಾರಣೆ ನಡೆಯಬೇಕಿತ್ತು. ಆದರೆ ಅರ್ಜಿ ವಿಚಾರಣೆ ದಿನಾಂಕವನ್ನು ನ್ಯಾಯಾಲಯಕ್ಕೆ ಬುಧವಾರಕ್ಕೆ (ಅ.13) ಮುಂದೂಡಿದೆ. ಅಲ್ಲಿಯವರೆಗೂ ಆರ್ಯನ್ ಖಾನ್ ಜೈಲಿನಲ್ಲಿ ದಿನ ಕಳೆಯದೇ ಬೇರೆ ದಾರಿ ಇಲ್ಲ. ಆರ್ಯನ್ ಖಾನ್ಗೆ ಜಾಮೀನು ಕೊಡಿಸಲು ಶಾರುಖ್ ಖಾನ್ ಹರಸಾಹಸ ಮಾಡುತ್ತಿದ್ದಾರೆ. ಪುತ್ರ ಅರೆಸ್ಟ್ ಆದ ದಿನದಿಂದಲೂ ಶಾರುಖ್ ಮತ್ತು ಗೌರಿ ಖಾನ್ ದಂಪತಿಗೆ ನೆಮ್ಮದಿಯೇ ಇಲ್ಲದಂತಾಗಿದೆ. ಊಟ, ನಿದ್ರೆಯ ಕಡೆಗೂ ಅವರು ಗಮನ ಕೊಡುತ್ತಿಲ್ಲ ಎಂಬ ಮಾಹಿತಿ ಕೇಳಿಬರುತ್ತಿದೆ. ಒಂದು ವೇಳೆ ಸ್ಪೆಷಲ್ ಎನ್ಡಿಪಿಎಸ್ ನ್ಯಾಯಾಲಯದಲ್ಲಿ ಆರ್ಯನ್ಗೆ ಜಾಮೀನು ಸಿಗದೇ ಇದ್ದರೆ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲು ವಕೀಲ ಸತೀಶ್ ಮಾನೆಶಿಂಧೆ ನಿರ್ಧರಿಸಿದ್ದಾರೆ. ಯಾವುದಕ್ಕೂ ಬುಧವಾರದವರೆಗೆ ಕಾಯುವುದು ಅನಿವಾರ್ಯ.
ಇದನ್ನೂ ಓದಿ:
ಡ್ರಗ್ಸ್ ಪಾರ್ಟಿಯಲ್ಲಿ ಸಿಕ್ಕಿಬಿದ್ದ ಶಾರುಖ್ ಪುತ್ರನ ಹಿನ್ನೆಲೆ ಏನು? ಇಲ್ಲಿದೆ ಆರ್ಯನ್ ಖಾನ್ ಇತಿಹಾಸ
‘ನನ್ನ ಮಗ ಡ್ರಗ್ಸ್ ಸೇವಿಸಲಿ, ಹುಡುಗಿಯರ ಹಿಂದೆ ಹೋಗಲಿ’ ಎಂದಿದ್ದ ಶಾರುಖ್; ಇಲ್ಲಿದೆ ಶಾಕಿಂಗ್ ವಿಡಿಯೋ