ಜನ ಮೆಚ್ಚಿದ್ದ ಸಿನಿಮಾಕ್ಕೆ ಒಂಬತ್ತು ವರ್ಷದ ಬಳಿಕ ಸಿಕ್ಕಿತು ‘ನ್ಯಾಯ‘

Sanam Teri Kasam: ಹಲವು ಒಳ್ಳೆಯ ಸಿನಿಮಾಗಳು ಬಿಡುಗಡೆ ಆದಾಗ ಬೇರೆ ಬೇರೆ ಕಾರಣಗಳಿಗೆ ಜನರಿಂದ ನಿರ್ಲಕ್ಷ್ಮಿಸಲ್ಪಟ್ಟಿರುತ್ತವೆ, ಆದರೆ ಇತ್ತೀಚೆಗೆ ಟ್ರೆಂಡ್​ ಆಗಿರುವ ಮರು ಬಿಡುಗಡೆ ಇಂದಾಗಿ ಅಂಥಹಾ ಕೆಲವು ಸಿನಿಮಾಗಳಿಗೆ ನ್ಯಾಯ ದೊರಕುತ್ತಿದೆ. ಮೊದಲು ಬಿಡುಗಡೆ ಆದಾಗ ಸೋತ ಕೆಲ ಒಳ್ಳೆಯ ಸಿನಿಮಾಗಳು ಮರು ಬಿಡುಗಡೆಯಲ್ಲಿ ಗೆಲ್ಲುತ್ತಿವೆ. ಅಂಥಹದ್ದೇ ಒಂದು ಸಿನಿಮಾದ ಕತೆ ಇಲ್ಲಿದೆ.

ಜನ ಮೆಚ್ಚಿದ್ದ ಸಿನಿಮಾಕ್ಕೆ ಒಂಬತ್ತು ವರ್ಷದ ಬಳಿಕ ಸಿಕ್ಕಿತು ‘ನ್ಯಾಯ‘
Sanam Teri Kasam

Updated on: Feb 14, 2025 | 1:01 PM

ಮೊದಲು ಬಿಡುಗಡೆ ಆದಾಗ ಸೂಪರ್ ಹಿಟ್ ಸಿನಿಮಾಗಳು ಮರು ಬಿಡುಗಡೆಯಲ್ಲೂ ಭರ್ಜರಿ ಕಲೆಕ್ಷನ್ ಮಾಡುವುದು ಸಾಮಾನ್ಯ. ಆದರೆ ಮೊದಲು ಬಿಡುಗಡೆ ಆದಾಗ ಫ್ಲಾಪ್ ಆಗಿ ಆದರೆ ಒಂಬತ್ತು ವರ್ಷಗಳ ಬಳಿಕ ಮರು ಬಿಡುಗಡೆ ಆದಾಗ ಬ್ಲಾಕ್ ಬಸ್ಟರ್ ಆದ ಸಿನಿಮಾಗಳ ಸಂಖ್ಯೆ ಬಲು ವಿರಳ. ಅಂಥಹಾ ಒಂದು ವಿಶೇಷ ದಾಖಲೆಯನ್ನು ಹಿಂದಿ ಸಿನಿಮಾ ‘ಸನಮ್ ತೇರಿ ಕಸಮ್’ ಮಾಡಿದೆ. 2016 ರಲ್ಲಿ ಬಿಡುಗಡೆ ಆಗಿದ್ದ ‘ಸನಮ್ ಥೇರಿ ಕಸಮ್’ ಸಿನಿಮಾ ಆ ಸಮಯದಲ್ಲಿ ಫ್ಲಾಪ್ ಎನಿಸಿಕೊಂಡಿತ್ತು. ಆದರೆ ಈಗ ಈ ಸಿನಿಮಾ ಬ್ಲಾಕ್ ಬಸ್ಟರ್ ಆಗಿದೆ.

ಹರ್ಷವರ್ಧನ್ ರಾಣೆ, ಮಾರ್ವಾ ಹೊಕಾನೆ ಮುಖ್ಯ ಪಾತ್ರದಲ್ಲಿ ನಟಿಸಿದ್ದ ‘ಸನಮ್ ಥೇರಿ ಕಸಮ್’ ಸಿನಿಮಾ 2016 ರಲ್ಲಿ ಸುಮಾರು 20 ಕೋಟಿ ಬಜೆಟ್​ನಲ್ಲಿ ನಿರ್ಮಾಣವಾಗಿತ್ತು. ಫೆಬ್ರವರಿ 5 ರಂದು ಬಿಡುಗಡೆ ಆಗಿದ್ದ ಈ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಗಳಿಸಿದ್ದು ಕೇವಲ 9 ಕೋಟಿ. ಕೆಲ ಸ್ಟಾರ್ ನಟರ ಸಿನಿಮಾಗಳ ಹಾವಳಿಯಿಂದಾಗಿ ಸಿನಿಮಾ ಬಾಕ್ಸ್ ಆಫೀಸ್ ರೇಸ್​ನಲ್ಲಿ ಹಿಂದೆ ಬಿದ್ದಿತು. ಆದರೆ ಆ ನಂತರ ಟಿವಿಯಲ್ಲಿ, ಪೈರಸಿ ಕಾಪಿಗಳ ಮೂಲಕ ಕೋಟ್ಯಂತರ ಜನರನ್ನು ತಲುಪಿದ ಈ ಸಿನಿಮಾಕ್ಕೆ ಕಲ್ಟ್ ಸ್ಥಾನ ಪ್ರಾಪ್ತಿಯಾಯ್ತು. ಬಾಲಿವುಡ್​ನ ಅತ್ಯುತ್ತಮ ಲವ್ ಸ್ಟೋರಿಗಳಲ್ಲಿ ಒಂದು ಎಂಬ ಹೆಸರು ಧಕ್ಕಿಸಿಕೊಂಡಿತು.

ಏಳು ದಿನಗಳ ಹಿಂದೆ ಈ ಸಿನಿಮಾ ಮರು ಬಿಡುಗಡೆ ಆಗಿದ್ದು ಸಿನಿಮಾ ಬ್ಲಾಕ್ ಬಸ್ಟರ್ ಆಗಿದೆ. ಒಂಬತ್ತು ವರ್ಷಗಳ ಬಳಿಕ ಸೀಮಿತ ಚಿತ್ರಮಂದಿರಗಳಲ್ಲಿ ಮರು ಬಿಡುಗಡೆ ಆಗಿರುವ ಈ ಸಿನಿಮಾ ಬ್ಲಾಕ್ ಬಸ್ಟರ್ ಆಗಿದ್ದು ಕೇವಲ ಏಳು ದಿನಗಳಲ್ಲಿ ಬರೋಬ್ಬರಿ 30 ಕೋಟಿ ರೂಪಾಯಿ ಹಣ ಗಳಿಸಿದೆ. ಹಿಂದಿಯಲ್ಲಿ ಇತ್ತೀಚೆಗೆ ಮರು ಬಿಡುಗಡೆ ಆದ ಸಿನಿಮಾಗಳ ಪೈಕಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಸಾಲಿಗೆ ಈ ಸಿನಿಮಾ ಸೇರಿಕೊಂಡಿದೆ. ಇತ್ತೀಚೆಗಷ್ಟೆ ಮರು ಬಿಡುಗಡೆ ಆಗಿದ್ದ ಶಾರುಖ್-ಸಲ್ಮಾನ್ ಖಾನ್​ರ ‘ಕರಣ್ ಅರ್ಜುನ್’ ಸಹ ಇಷ್ಟು ದೊಡ್ಡ ಮೊತ್ತ ಗಳಿಕೆ ಮಾಡಿರಲಿಲ್ಲ.

ಇದನ್ನೂ ಓದಿ:Telugu Movies: ತೆಲುಗಿನಲ್ಲಿ ಸಾಲು-ಸಾಲು ರೀ ರಿಲೀಸ್, ಅಭಿಮಾನಿಗಳಿಗೆ ಹಬ್ಬ

‘ಸನಮ್ ಥೇರಿ ಕಸಮ್’ ಸಿನಿಮಾಕ್ಕೆ ಭಾರಿ ಜನಪ್ರೀತಿ ಧಕ್ಕಿದ ಬೆನ್ನಲ್ಲೆ ಇದೀಗ ಈ ಸಿನಿಮಾದ ಸೀಕ್ವೆಲ್​ಗೆ ಬೇಡಿಕೆ ಹೆಚ್ಚಿದೆ. ಸಿನಿಮಾದ ನಾಯಕ ಹರ್ಷವರ್ಧನ್ ರಾಣೆ ಸಹ ಈ ಬಗ್ಗೆ ಬೇಡಿಕೆ ಇಟ್ಟಿದ್ದು, ಸಿನಿಮಾದ ಸೀಕ್ವೆಲ್ ಮಾಡುವಂತೆ ನಿರ್ಮಾಪಕರ ಮನೆ ಮುಂದೆ ನೀರು ಸೇವಿಸದೆ ಉಪವಾಸ ಮಾಡುವುದಾಗಿಯೂ ಘೋಷಣೆ ಮಾಡಿದ್ದಾರೆ. ಒಟ್ಟಾರೆಯಾಗಿ ಒಂದೊಳ್ಳೆ ಸಿನಿಮಾಕ್ಕೆ ಒಂಬತ್ತು ವರ್ಷಗಳ ಬಳಿಕವಾದರೂ ಅದಕ್ಕೆ ಸಿಗಬೇಕಾದ ಗೌರವ, ಪ್ರಶಂಸೆ ಮತ್ತು ನ್ಯಾಯ ಸಿಕ್ಕ ಖುಷಿಯಲ್ಲಿದ್ದಾರೆ ಸಿನಿಮಾ ಪ್ರೇಮಿಗಳು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ