Telugu Movies: ತೆಲುಗಿನಲ್ಲಿ ಸಾಲು-ಸಾಲು ರೀ ರಿಲೀಸ್, ಅಭಿಮಾನಿಗಳಿಗೆ ಹಬ್ಬ

Telugu Movies: ತೆಲುಗು ಚಿತ್ರರಂಗದಲ್ಲಿ ಸಿನಿಮಾಗಳ ಮರು ಬಿಡುಗಡೆ ಟ್ರೆಂಡ್ ಜೋರಾಗಿ ನಡೆಯುತ್ತಿದೆ. ವರ್ಷಗಳ ಹಿಂದೆ ಸೂಪರ್ ಹಿಟ್ ಆಗಿದ್ದ ಸಿನಿಮಾಗಳನ್ನು ಈಗ ಮರು ಬಿಡುಗಡೆ ಮಾಡಲಾಗುತ್ತಿದ್ದು, ಮರು ಬಿಡುಗಡೆ ಆಗುತ್ತಿರುವ ಸಿನಿಮಾಗಳ ದೊಡ್ಡ ಪಟ್ಟಿ ಇಲ್ಲಿದೆ.

Telugu Movies: ತೆಲುಗಿನಲ್ಲಿ ಸಾಲು-ಸಾಲು ರೀ ರಿಲೀಸ್, ಅಭಿಮಾನಿಗಳಿಗೆ ಹಬ್ಬ
Follow us
ಮಂಜುನಾಥ ಸಿ.
|

Updated on: Jul 25, 2024 | 1:00 PM

ತೆಲುಗು ಚಿತ್ರರಂಗದಲ್ಲಿ ಇತ್ತೀಚೆಗೆ ರೀ ರಿಲೀಸ್ ಟ್ರೆಂಡ್ ಜೋರಾಗಿದೆ. ಒಂದರ ಹಿಂದೊಂದು ಬ್ಲಾಕ್ ಬಸ್ಟರ್ ಸಿನಿಮಾಗಳು ಮರು ಬಿಡುಗಡೆ ಆಗುತ್ತಿವೆ. ಮಾತ್ರವಲ್ಲ ಭಾರಿ ಕಲೆಕ್ಷನ್ ಅನ್ನು ಸಹ ಮಾಡುತ್ತಿವೆ. ಕಳೆದ ಕೆಲವು ತಿಂಗಳುಗಳಿಂದ ಈ ಟ್ರೆಂಡ್ ಶುರುವಾಗಿದ್ದು, ತೆಲುಗಿನ ಕಲ್ಟ್, ಬ್ಲಾಕ್ ಬಸ್ಟರ್​ಗಳು ಮರು ಬಿಡುಗಡೆ ಆಗುತ್ತಿವೆ. ಇದೀಗ ಆ ಟ್ರೆಂಡ್ ಇನ್ನಷ್ಟು ವೇಗ ಪಡೆದುಕೊಂಡಿದ್ದು ಒಂದರ ಹಿಂದೊಂದು ಸಾಲು-ಸಾಲಾಗಿ ಹಳೆಯ ಸಿನಿಮಾಗಳು ಮರು ಬಿಡುಗಡೆ ಆಗಲಿದ್ದು, ಅಭಿಮಾನಿಗಳಿಗಂತಲೂ ಇದು ಹಬ್ಬವೇ ಆಗಿದೆ.

ಈ ಹಿಂದೆ, ‘ಪೋಕಿರಿ’, ‘ವೆಂಕಿ’, ‘ತೊಲಿ ಪ್ರೇಮ’, ‘ಶಿವ’ ಇನ್ನೂ ಹಲವು ಸಿನಿಮಾಗಳು ಮರು ಬಿಡುಗಡೆ ಆಗಿದ್ದವು. ಈಗ ಮೆಗಾಸ್ಟಾರ್ ಚಿರಂಜೀವಿಯ ಬ್ಲಾಕ್ ಬಸ್ಟರ್ ಸಿನಿಮಾ ‘ಇಂದ್ರ’ ಮರು ಬಿಡುಗಡೆ ಆಗುತ್ತಿದೆ. ‘ಇಂದ್ರ’ ಸಿನಿಮಾ ಬಿಡುಗಡೆ ಆಗಿ 23 ವರ್ಷಗಳಾಗಿವೆ. ಅಲ್ಲದೆ ಚಿರಂಜೀವಿಯ ಹುಟ್ಟುಹಬ್ಬ ಸಹ ಸನಿಹದಲ್ಲಿರುವ ಕಾರಣದಿಂದ ‘ಇಂದ್ರ’ ಸಿನಿಮಾ ಮರು ಬಿಡುಗಡೆ ಆಗುತ್ತಿದೆ. ‘ಇಂದ್ರ’ ಸಿನಿಮಾ ಆಗಸ್ಟ್ 22 ರಂದು ಮರು ಬಿಡುಗಡೆ ಆಗಲಿದೆ.

ಇನ್ನು ಇದೇ ಜುಲೈ 27ಕ್ಕೆ ನಟ ರವಿತೇಜ ನಟಿಸಿ, ರಾಜಮೌಳಿ ನಿರ್ದೇಶನ ಮಾಡಿರುವ ‘ವಿಕ್ರಮಾರ್ಕುಡು’ ಸಿನಿಮಾ ಮರು ಬಿಡುಗಡೆ ಆಗಲಿದೆ. ಈ ಸಿನಿಮಾದಲ್ಲಿ ರವಿತೇಜ ಜೊತೆಗೆ ಅನುಷ್ಕಾ ಶೆಟ್ಟಿ ನಟಿಸಿದ್ದರು. ಇದೇ ಸಿನಿಮಾದಲ್ಲಿ ಕನ್ನಡದಲ್ಲಿ ಸುದೀಪ್ ರೀಮೇಕ್ ಮಾಡಿದ್ದರು. ಅದೂ ಸಹ ಸೂಪರ್ ಹಿಟ್ ಆಯ್ತು.

ಆಗಸ್ಟ್ 2 ರಂದು ನಟ ನಾನಿ ಮತ್ತು ಸಮಂತಾ ನಟಿಸಿದ್ದ ನವಿರಾದ ಪ್ರೇಮಕಥಾ ಸಿನಿಮಾ ‘ಯೆಟೊ ವೆಳ್ಳಿ ಪೋಯಿಂದಿ ಮನಸು’ ಸಿನಿಮಾ ಮರು ಬಿಡುಗಡೆ ಆಗಲಿದೆ. ಈ ಸಿನಿಮಾವನ್ನು ವಾಸುದೇವ್ ಮೆನನ್ ನಿರ್ದೇಶನ ಮಾಡಿದ್ದರು. ಈ ಸಿನಿಮಾ ಬಿಡುಗಡೆ ಆದಾಗ ಬ್ಲಾಕ್ ಬಸ್ಟರ್ ಆಗಿತ್ತು. ಆಗಿನ ಕಾಲಕ್ಕೆ ಪ್ರೇಮಿಗಳ ಪಾಲಿಗೆ ನೆಚ್ಚಿನ ಸಿನಿಮಾ.

ಇದನ್ನೂ ಓದಿ:ಚಿತ್ರರಂಗಕ್ಕೆ ಮಾರಕ: 25 ಯೂಟ್ಯೂಬ್ ಚಾನೆಲ್​ಗಳ ಡಿಲೀಟ್ ಮಾಡಿಸಿದ ಟಾಲಿವುಡ್

ಮಹೇಶ್ ಬಾಬು ನಟನೆಯ ಎರಡು ಸಿನಿಮಾಗಳು ಒಂದರ ಹಿಂದೊಂದು ಮರು ಬಿಡುಗಡೆ ಆಗಲಿವೆ. ಮಹೇಶ್ ಬಾಬು ನಟನೆಯ ಬ್ಲಾಕ್ ಬಸ್ಟರ್ ಸಿನಿಮಾ ‘ಒಕ್ಕಡು’ ಆಗಸ್ಟ್ 8 ಕ್ಕೆ ಮರು ಬಿಡುಗಡೆ ಆಗಲಿದೆ. ಗುಣಶೇಖರ್ ನಿರ್ದೇಶನ ಮಾಡಿದ್ದ ಈ ಸಿನಿಮಾ ತೆಲುಗು ಚಿತ್ರರಂಗದಲ್ಲಿ ದಾಖಲೆಗಳನ್ನು ಬರೆದಿತ್ತು. ಸಿನಿಮಾ ಕನ್ನಡದಲ್ಲಿ ‘ಅಜಯ್’ ಹೆಸರಲ್ಲಿ ರೀಮೇಕ್ ಆಯ್ತು. ತಮಿಳು, ತೆಲುಗಿನಲ್ಲಿಯೂ ಸಿನಿಮಾ ರೀಮೇಕ್ ಆಯ್ತು. ಮಹೇಶ್ ಬಾಬು ನಟನೆಯ ‘ಮುರಾರಿ’ ಸಿನಿಮಾ ಆಗಸ್ಟ್ 9 ರಂದು ಬಿಡುಗಡೆ ಆಗಲಿದೆ. ಆಗಸ್ಟ್ 9 ಮಹೇಶ್ ಬಾಬು ಹುಟ್ಟುಹಬ್ಬ ಹಾಗಾಗಿ ‘ಮುರಾರಿ’ ಹಾಗೂ ‘ಒಕ್ಕಡು’ ಸಿನಿಮಾಗಳು ಮರು ಬಿಡುಗಡೆ ಆಗಲಿವೆ.

ತೆಲುಗು ಚಿತ್ರರಂಗ ಮಾತ್ರವಲ್ಲ ಇಡೀ ಭಾರತ ಚಿತ್ರರಂಗವೇ ಬೆರಗಾಗುವಂತೆ ಮಾಡಿದ್ದ ಸಿನಿಮಾ ‘ಶಿವ’ ಆಗಸ್ಟ್ 29ಕ್ಕೆ ಮರು ಬಿಡುಗಡೆ ಆಗುತ್ತಿವೆ. ಈ ಸಿನಿಮಾವನ್ನು ರಾಮ್ ಗೋಪಾಲ್ ವರ್ಮಾ ನಿರ್ದೇಶನ ಮಾಡಿದ್ದರು. ಈ ಸಿನಿಮಾ ತೆಲುಗು ಚಿತ್ರರಂಗದ ಕಲ್ಟ್ ಕ್ಲಾಸಿಕ್ ಸಿನಿಮಾ. ಈ ಸಿನಿಮಾದಿಂದ ಭಾರತೀಯ ಚಿತ್ರರಂಗಕ್ಕೆ ರಾಮ್ ಗೋಪಾಲ್ ವರ್ಮಾ ಅಂಥಹಾ ಪ್ರತಿಭಾವಂತ ನಿರ್ದೇಶಕ ದೊರೆತರು.

ಇನ್ನು ನೂತನವಾಗಿ ಆಂಧ್ರ ಪ್ರದೇಶದ ಡಿಸಿಎಂ ಆಗಿರುವ ಪವನ್ ಕಲ್ಯಾಣ್ ನಟನೆಯ ಬ್ಲಾಕ್ ಬಸ್ಟರ್ ಸಿನಿಮಾ ‘ಗಬ್ಬರ್ ಸಿಂಗ್’ ಸೆಪ್ಟೆಂಬರ್ 2 ಕ್ಕೆ ಮರು ಬಿಡುಗಡೆ ಆಗಲಿದೆ. ಈ ಸಿನಿಮಾ, ಹಿಂದಿಯ ‘ದಬಂಗ್’ ಸಿನಿಮಾ ರೀಮೇಕ್ ಆಗಿದ್ದು, ಸಿನಿಮಾದಲ್ಲಿ ಪವನ್ ಕಲ್ಯಾಣ್ ಜೊತೆಗೆ ಶ್ರುತಿ ಹಾಸನ್ ನಟಿಸಿದ್ದಾರೆ. ಸಿನಿಮಾವನ್ನು ಹರೀಶ್ ಶಂಕರ್ ನಿರ್ದೇಶನ ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ