ಚಿತ್ರರಂಗಕ್ಕೆ ಮಾರಕ: 25 ಯೂಟ್ಯೂಬ್ ಚಾನೆಲ್ಗಳ ಡಿಲೀಟ್ ಮಾಡಿಸಿದ ಟಾಲಿವುಡ್
ತೆಲುಗು ಚಿತ್ರರಂಗವು ಯೂಟ್ಯೂಬ್ ಚಾನೆಲ್ಗಳ ಮೇಲೆ ಗರಂ ಆಗಿದ್ದು, ನಟ-ನಟಿಯರ ಬಗ್ಗೆ ಸುಳ್ಳು ಸುದ್ದಿ ಹರಡುವ, ಸಿನಿಮಾಗಳ ಬಗ್ಗೆ ನೆಗೆಟಿವ್ ವಿಮರ್ಶೆ ನೀಡುವ, ನಟ-ನಟಿಯರ ಟ್ರೋಲ್ ಮಾಡುವ 25 ಯೂಟ್ಯೂಬ್ ಚಾನೆಲ್ಗಳನ್ನು ಪೊಲೀಸರ ಸಹಾಯದಿಂದ ಡಿಲೀಟ್ ಮಾಡಿಸಿವೆ.
ಆನ್ಲೈನ್ ಟ್ರೋಲಿಂಗ್, ಸಿನಿಮಾಗಳ ಬಗ್ಗೆ, ನಟ-ನಟಿಯರ ಬಗ್ಗೆ ಸುಳ್ಳು ಮಾಹಿತಿಗಳನ್ನು ಹಂಚಿಕೊಳ್ಳುತ್ತಿದ್ದ ಯೂಟ್ಯೂಬ್ ಚಾನೆಲ್ಗಳ ಮೇಲೆ ಕಠಿಣ ಕ್ರಮಕ್ಕೆ ತೆಲುಗು ಚಿತ್ರರಂಗ ಮುಂದಾಗಿದೆ. ತೆಲುಗು ಕಲಾವಿದರ ಸಂಘ (ಮಾ) ಈ ಆನ್ಲೈನ್ ಟ್ರೋಲಿಂಗ್ ಅನ್ನು ಗಂಭೀರವಾಗಿ ಪರಿಗಣಿಸಿದ್ದು, ಆನ್ಲೈನ್ ಟ್ರೋಲಿಂಗ್, ನಟ-ನಟಿಯರ ಬಗ್ಗೆ ಸುಳ್ಳು ಸುದ್ದಿ, ಅಶ್ಲೀಲ ಸುದ್ದಿಗಳನ್ನು ಹಂಚಿಕೊಳ್ಳುತ್ತಿದ್ದ 25 ಯೂಟ್ಯೂಬ್ ಚಾನೆಲ್ಗಳನ್ನು ಡಿಲೀಟ್ ಮಾಡಿಸಿದೆ. ಇನ್ನೂ 200 ಚಾನೆಲ್ಗಳ ಪಟ್ಟಿ ನಮ್ಮ ಬಳಿ ಇದ್ದು ಅವುಗಳ ವಿರುದ್ಧವೂ ಕ್ರಮ ಕೈಗೊಳ್ಳಲಿದ್ದೇವೆ’ ಎಂದಿದ್ದಾರೆ.
ಮಾ (ಮೂವಿ ಆರ್ಟಿಸ್ಟ್ ಅಸೋಸಿಯೇಷನ್) ನ ಶಿವ ಬಾಲಾಜಿ, ರಾಜೀವ್ ಕನಕಾಲ ಅವರುಗಳು ನಿನ್ನೆ ಮಾಧ್ಯಮಗಳೊಟ್ಟಿಗೆ ಈ ಬಗ್ಗೆ ಮಾತನಾಡಿದ್ದು, ‘ಇತ್ತೀಚೆಗೆ ಆನ್ಲೈನ್ ಟ್ರೋಲಿಂಗ್ ಎಂಬುದು ವಿಪರೀತಕ್ಕೆ ಹೋಗಿದೆ. ನಟ-ನಟಿಯರ ಬಗ್ಗೆ ತೀರ ಕೆಟ್ಟದಾಗಿ ಸುದ್ದಿಗಳು ಪ್ರಕಟವಾಗುತ್ತಿವೆ. ಈ ಟ್ರೋಲಿಂಗ್, ನಟ-ನಟಿಯರ ಮಾನಸಿಕ ನೆಮ್ಮದಿಯನ್ನು ಕೆಡಿಸಿವೆ. ನಟ-ನಟಿಯರ ಖಾಸಗಿ ಬದುಕಿನ ಬಗ್ಗೆ ಸುಳ್ಳು ಸುದ್ದಿಗಳನ್ನು ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ಮಾ (MAA) ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಇಂಥಹಾ ಕೃತ್ಯದಲ್ಲಿ ತೊಡಗಿರುವ 25 ಯೂಟ್ಯೂಬ್ ಚಾನೆಲ್ಗಳನ್ನು ಡಿಲೀಟ್ ಮಾಡಿಸಲಾಗಿದೆ’ ಎಂದಿದ್ದಾರೆ.
ಇದನ್ನೂ ಓದಿ:ಟಾಲಿವುಡ್ ನಟ ರಾಜ್ ತರುಣ್ ಪ್ರೇಯಸಿಯ ಹೈಡ್ರಾಮಾ, ಪೊಲೀಸರ ಮಧ್ಯ ಪ್ರವೇಶ
ಸೈಬರ್ ಕ್ರೈಂ ನ ಡಿಸಿಪಿಗೆ ಈ ಬಗ್ಗೆ ದೂರು ನೀಡಿ, ಸಾಕ್ಷ್ಯಗಳನ್ನು ಒದಗಿಸಿ 25 ಯೂಟ್ಯೂಬ್ ಚಾನೆಲ್ಗಳನ್ನು ಈಗಾಗಲೇ ಡಿಲೀಟ್ ಮಾಡಿಸಿದ್ದೇವೆ. ಇನ್ನೂ 200 ಚಾನೆಲ್ಗಳ ಪಟ್ಟಿ ನಮ್ಮ ಬಳಿ ಇದ್ದು, ಅವುಗಳ ಹೆಸರುಗಳನ್ನು ಸೈಬರ್ ಪೊಲೀಸರಿಗೆ ನೀಡಿದ್ದು, ಪರವೀಕ್ಷಣೆಯಲ್ಲಿ ಇಡುವಂತೆ ಕೋರಿದ್ದೇವೆ. ಮಾ ಸಂಘದ ವತಿಯಿಂದಲೂ ಪ್ರತ್ಯೇಕ ಸೈಬರ್ ತಂಡವನ್ನು ಪ್ರಾರಂಭಿಸಿ, ನಟ-ನಟಿಯರ ಘನತೆಗೆ ಪಟ್ಟು ನೀಡುವ ಹೇಳಿಕೆಗಳು, ವಿಡಿಯೋಗಳನ್ನು ಗುರುತಿಸಿ ಅವುಗಳ ವಿರುದ್ಧ ದೂರು ನೀಡುವ ಕೆಲಸ ನಡೆಯಲಿದೆ ಎಂದಿದ್ದಾರೆ. ಅಲ್ಲದೆ, ಸಿನಿಮಾಗಳ ಟ್ರೈಲರ್ಗಳನ್ನು ಬಳಸಿಕೊಂಡು ಅದನ್ನು ರಿವ್ಯೂ ಮಾಡುವುದು, ಕತೆಯನ್ನು ಹೇಳಿಬಿಡುವುದು, ರಿವ್ಯೂ ಮಾಡುವುದು ಸಹ ಮಾಡಿದ್ದಾರೆ ಇದರ ವಿರುದ್ಧವೂ ತಂಡ ಗಮನ ಇಡಲಿದೆ’ ಎಂದಿದ್ದಾರೆ.
ಅಸಲಿಗೆ, ಮಾ ಯೂಟ್ಯೂಬ್ ಚಾನೆಲ್ಗಳ ವಿರುದ್ಧ ಈ ಕ್ರಮಕ್ಕೆ ಮುಂದಾಗಲು ಮುಖ್ಯ ಕಾರಣ, ಯೂಟ್ಯೂಬರ್ಗಳ ವಿಮರ್ಶೆಗಳು ಎನ್ನುವ ಮಾತುಗಳು ಸಹ ಕೇಳಿ ಬರುತ್ತಿವೆ. ತೆಲುಗಿನಲ್ಲಿ ಹಲವು ಯೂಟ್ಯೂಬರ್ಗಳು ಸಿನಿಮಾ ರಿವ್ಯೂಗಳನ್ನು, ಆಡಿಯೆನ್ಸ್ ರಿವ್ಯೂಗಳನ್ನು ಮಾಡುತ್ತಿದ್ದಾರೆ. ಈ ಯೂಟ್ಯೂಬ್ ರಿವ್ಯೂಗಳಲ್ಲಿ ಸಿನಿಮಾಗಳು ಚೆನ್ನಾಗಿಲ್ಲವೆಂದು ಹೇಳಿ ಅದು ಸಿನಿಮಾದ ಕಲೆಕ್ಷನ್ ಮೇಲೆ ಪರಿಣಾಮ ಬೀರಿದ್ದು ಸಹ ಇದೆ. ಇತ್ತೇಚೆಗಷ್ಟೆ ಖ್ಯಾತ ನಿರ್ಮಾಪಕ ದಿಲ್ ರಾಜು ಇದರ ಬಗ್ಗೆ ಮಾತನಾಡಿ, ಸಿನಿಮಾ ಬಿಡುಗಡೆ ಆದ ಮೂರು ದಿನಗಳ ಕಾಲ ಯೂಟ್ಯೂಬ್ ವಿಮರ್ಶೆಗಳನ್ನು ಬ್ಯಾನ್ ಮಾಡಿಸಬೇಕು ಇಲ್ಲವಾದರೆ ಚಿತ್ರರಂಗ ಉಳಿಯುವುದಿಲ್ಲ ಎಂದಿದ್ದರು. ಅದರ ಬೆನ್ನಲ್ಲೆ ಈಗ ಮಾ, ಯೂಟ್ಯೂಬ್ ಚಾನೆಲ್ಗಳ ಮೇಲೆ ದೂರು ನೀಡಿ, ಖಾತೆಗಳನ್ನು ಡಿಲೀಟ್ ಮಾಡುವ ಪ್ರಯತ್ನ ಮಾಡುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ