ಸಂಜಯ್ ದತ್ (Sanjay Dutt) ಅವರು ಬಾಲಿವುಡ್ನ ಬೇಡಿಕೆಯ ಹೀರೋ. ಕೇವಲ ಹಿಂದಿ ಚಿತ್ರರಂಗ ಮಾತ್ರವಲ್ಲದೆ, ದಕ್ಷಿಣ ಭಾರತದಲ್ಲೂ ಅವರು ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ. ಸಂಜಯ್ ದತ್ ಜೀವನವನ್ನು ನೋಡಿದರೆ ಕೇವಲ ಯಶಸ್ಸು ಮಾತ್ರ ಕಾಣುವುದಿಲ್ಲ. ಅವರು ಸಾಕಷ್ಟು ಏಳು ಬೀಳುಗಳನ್ನು ಕಂಡಿದ್ದಾರೆ. ಅವರು ಡ್ರಗ್ಸ್ನ ದಾಸರಾಗಿದ್ದರು. ಪ್ರೀತಿಯ ಪತ್ನಿಯನ್ನು ಕಳೆದುಕೊಂಡರು. ಅಕ್ರಮ ಶಸ್ತ್ರಾಸ್ತ್ರ ದಾಸ್ತಾನು ಕೇಸ್ನಲ್ಲಿ ಜೈಲು ಸೇರಿದರು. ಇದೆಲ್ಲ ಹಳೆಯ ಜನ್ಮದಿಂದ ಬಂದ ಶಾಪದ ಫಲ ಎಂಬುದು ಸಂಜಯ್ ದತ್ ನಂಬಿಕೆ. ಈ ಬಗ್ಗೆ ಅವರು ಈ ಮೊದಲು ಹೇಳಿಕೊಂಡಿದ್ದರು. ಹಿಂದಿನ ಜನ್ಮದಲ್ಲಿ ಸಂಜಯ್ ದತ್ ರಾಜನಾಗಿದ್ದರು. ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಪತ್ನಿಯನ್ನು ಅವರು ಕೊಂದಿದ್ದರು. ಇದು ಅಚ್ಚರಿ ಎನಿಸಿದರೂ ನಿಜ.
ಸಂಜಯ್ ದತ್ಗೆ ಚಿತ್ರರಂಗದ ಹಿನ್ನೆಲೆ ಇದೆ. ತಂದೆ ಸುನಿಲ್ ದತ್ ಹೀರೋ, ನಿರ್ದೇಶಕರಾಗಿದ್ದರು. ತಾಯಿ ನರ್ಗೀಸ್ ಬೇಡಿಕೆಯ ನಟಿ. ಹೀಗಾಗಿ ಬಣ್ಣದ ಲೋಕಕ್ಕೆ ಸುಲಭದಲ್ಲಿ ಎಂಟ್ರಿ ಸಿಕ್ಕಿತು. ಎಲ್ಲವೂ ಸರಿಯಾಗಿ ಇದ್ದಿದ್ದರೆ ನಟನೆಯಲ್ಲಿ ಗೆಲುವು ಕಾಣಬಹುದಿತ್ತು. ಆದರೆ, ಡ್ರಗ್ನ ದಾಸರಾದರು. ಮೊದಲ ಸಿನಿಮಾ ರಿಲೀಸ್ ಆಗುವುದಕ್ಕೂ ಕೆಲವೇ ದಿನ ಮೊದಲು ಅವರು ತಾಯಿಯನ್ನು ಕಳೆದುಕೊಂಡರು. ಇದು ಅವರನ್ನು ಅತೀವವಾಗಿ ಕಾಡಿತು. ಇಷ್ಟೇ ಅಲ್ಲ, 1993ರಲ್ಲಿ ನಡೆದ ಬಾಂಬೆ ಬ್ಲಾಸ್ಟ್ ಕೇಸ್ನಲ್ಲಿ ಅವರ ಹೆಸರು ಕೇಳಿ ಬಂತು. ಅಕ್ರಮ ಶಸ್ತ್ರಾಸ್ತ್ರ ದಾಸ್ತಾನು ಪ್ರಕರಣದಲ್ಲಿ ಸಂಜಯ್ ದತ್ ಜೈಲು ಸೇರಿದರು.
ಇದಕ್ಕೆಲ್ಲ ಕಾರಣ ಆಗಿದ್ದು ಹಿಂದಿನ ಜನ್ಮದ ಘಟನೆಯಂತೆ. ಸಂಜಯ್ ದತ್ ಅವರು ಚೆನ್ನೈ ಸಮೀಪದ ಊರೊಂದಕ್ಕೆ ತೆರಳಿದ್ದರು. ಆ ಊರಿನಲ್ಲಿದ್ದ ವ್ಯಕ್ತಿಯೊಬ್ಬರು ಸಂಜಯ್ ದತ್ ಹಿಂದಿನ ಜನ್ಮದ ಕಥೆ ಹೇಳಿದ್ದರು. ‘ನಿಮ್ಮ ತಂದೆಯ ಹೆಸರು ಬಾಲರಾಜ್ ದತ್. ನಿಮ್ಮ ತಾಯಿಯ ಹೆಸರು ಫಾತಿಮಾ ಹುಸೇನ್’ ಎಂದು ಸಂಜಯ್ ದತ್ ಬಗ್ಗೆ ಹೇಳಿದ್ದರು ಆ ವ್ಯಕ್ತಿ. ಸಂಜಯ್ ದತ್ ತಂದೆ ಸುನಿಲ್ ಮೂಲ ಹೆಸರು ಬಾಲರಾಜ್. ತಾಯಿ ನರ್ಗಿಸ್ ಮೂಲ ಹೆಸರು ಫಾತಿಮಾ ಎಂಬುದಾಗಿತ್ತು.
‘ಅಶೋಕ ಚಕ್ರವರ್ತಿಯ ಸಮಯದಲ್ಲಿ ನಾನು ಅರಸನಾಗಿದ್ದೆ. ನನ್ನದೇ ಮಂತ್ರಿ ಮಂಡಲದವನ ಜೊತೆ ನನ್ನ ಪತ್ನಿ ಅಕ್ರಮ ಸಂಬಂಧ ಹೊಂದಿದ್ದಳು. ಆಕೆಗೆ ನನ್ನನ್ನು ಸಾಯಿಸುವ ಉದ್ದೇಶ ಇತ್ತು. ಹೀಗಾಗಿ, ನನ್ನನ್ನು ಯುದ್ಧಕ್ಕೆ ಕಳುಹಿಸಿದ್ದಳು. ನಾನು ಆ ಯುದ್ಧ ಗೆದ್ದೆ. ಮರಳಿ ಬಂದ ಬಳಿಕ ಅವಳ ಅಕ್ರಮ ವಿಚಾರದ ಬಗ್ಗೆ ಗೊತ್ತಾಯಿತು. ಅವಳನ್ನು ಅಲ್ಲಿಯೇ ಕೊಂದೆ. ಅಕ್ರಮ ಸಂಬಂಧ ಹೊಂದಿದ್ದ ಮಂತ್ರಿಯನ್ನೂ ಹತ್ಯೆ ಮಾಡಿದೆ. ಇದು ನನ್ನ ಹಿಂದಿನ ಜನ್ಮದ ಕಥೆ’ ಎಂದಿದ್ದರು ಸಂಜಯ್ ದತ್. ಪತ್ನಿಯನ್ನು ಕೊಂದ ಬಳಿಕ ಅವರಿಗೆ ಪಾಪಪ್ರಜ್ಞೆ ಕಾಡಿತ್ತಂತೆ. ಹೀಗಾಗಿ, ಕಾಡಿನ ಒಳಗೆ ಹೋಗಿ ಹಸಿವಿನಿಂದ ಮೃತಪಟ್ಟರು ಸಂಜಯ್.
‘ಇದೆಲ್ಲ ಪಾಪದ ಫಲ. ನಾನು ಈ ಜನ್ಮದಲ್ಲಿ ಒಳ್ಳೆಯ ಫ್ಯಾಮಿಲಿಯಲ್ಲಿ ಜನಿಸಿದೆ. ಆದರೂ ನಾನು ಸಾಕಷ್ಟು ಅಡೆತಡೆ ಎದುರಿಸಿದೆ. ಕ್ಯಾನ್ಸರ್ ಕಾಣಿಸಿತು. ಹಳೆಯ ಜನ್ಮದಲ್ಲಿ ಮಾಡಿದ ಪಾಪಗಳಿಗೆ ಈ ಜನ್ಮದಲ್ಲಿ ಅನುಭವಿಸಿದ್ದೇನೆ’ ಎಂದು ಅವರು ಹೇಳಿದ್ದರು.
ಇದನ್ನೂ ಓದಿ: ಸಂಜಯ್ ದತ್ ಮೊದಲ ಮಗಳ ಬಗ್ಗೆ ನಿಮಗೆಷ್ಟು ಗೊತ್ತು? ನಟನೆಯಿಂದ ದೂರವೇ ಇದ್ದಾರೆ ಇವರು..
ಸಂಜಯ್ ದತ್ ಹಲವರನ್ನು ಕಳೆದುಕೊಂಡರು. ಅವರ ತಾಯಿ ಮೃತಪಟ್ಟರು. ಸಂಜಯ್ ದತ್ ಮೊದಲ ಪತ್ನಿ ರಿಚಾ ಶರ್ಮಾ ಕೂಡ ಮೃತಪಟ್ಟರು. ಅವರಿಗೆ ಕ್ಯಾನ್ಸರ್ ಕೂಡ ಕಾಣಿಸಿಕೊಂಡಿತು. ಹೀಗೆ ಹಲವು ಏಳು ಬೀಳುಗಳನ್ನು ಕಂಡಿದ್ದಾರೆ. ಸಂಜಯ್ ದತ್ ‘ಕೆಜಿಎಫ್ 2’ ಚಿತ್ರದಲ್ಲಿ ವಿಲನ್ ಪಾತ್ರ ಮಾಡಿ ಚಿತ್ರರಂಗದಲ್ಲಿ ಮರುಹುಟ್ಟು ಪಡೆದರು. ಅವರಿಗೆ ದಕ್ಷಿಣ ಭಾರತದಲ್ಲಿ ಸಖತ್ ಬೇಡಿಕೆ ಸೃಷ್ಟಿ ಆಗಿದೆ. ಧ್ರುವ ಸರ್ಜಾ ನಟನೆಯ ‘ಕೆಡಿ’ ಚಿತ್ರದಲ್ಲಿ ಅವರು ಖಳನ ಪಾತ್ರ ಮಾಡುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:54 am, Sat, 20 January 24