ಸಾಯಿ ಪಲ್ಲವಿ ಕೈತಪ್ಪಿದ ಮಧುಬಾಲಾ ಬಯೋಪಿಕ್ ಅವಕಾಶ: ಕಾರಣ ಏನು?

ನಟಿ ಸಾಯಿ ಪಲ್ಲವಿ ಅವರು ಯಾವ ಪಾತ್ರ ಕೊಟ್ಟರೂ ಅತ್ಯುತ್ತಮವಾಗಿ ನಿಭಾಯಿಸುತ್ತಾರೆ. ಅವರನ್ನು ಮಧುಬಾಲಾ ಬಯೋಪಿಕ್​ಗೆ ಆಯ್ಕೆ ಮಾಡಬೇಕು ಎಂಬ ಮಾತುಕತೆ ನಡೆದಿತ್ತು ಎನ್ನಲಾಗಿದೆ. ಆದರೆ ಕಾರಣಾಂತರಗಳಿಂದ ಅವರನ್ನು ಆಯ್ಕೆ ಮಾಡಲು ಸಾಧ್ಯವಾಗಲಿಲ್ಲ ಎಂಬ ಸುದ್ದಿ ಕೇಳಿಬಂದಿದೆ. ಆ ಕುರಿತು ಇಲ್ಲಿದೆ ವಿವರ..

ಸಾಯಿ ಪಲ್ಲವಿ ಕೈತಪ್ಪಿದ ಮಧುಬಾಲಾ ಬಯೋಪಿಕ್ ಅವಕಾಶ: ಕಾರಣ ಏನು?
Sai Pallavi, Madhubala

Updated on: Mar 13, 2026 | 7:22 PM

ಭಾರತೀಯ ಚಿತ್ರರಂಗದ ಪ್ರತಿಭಾವಂತ ನಟಿ, ದಿವಂಗತ ಮಧುಬಾಲಾ ಅವರ ಬಯೋಪಿಕ್ (Madhubala Biopic) ಬಗ್ಗೆ ಬಿಟೌನ್‌ನಲ್ಲಿ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿದೆ. ಈ ಚಿತ್ರದಲ್ಲಿ ಮಧುಬಾಲಾ ಪಾತ್ರವನ್ನು ಯಾರು ನಿರ್ವಹಿಸಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲೂ ಇದೆ. ಅನೇಕ ನಟಿಯರ ಹೆಸರು ಕೇಳಿಬರುತ್ತಿದೆ. ದಕ್ಷಿಣ ಭಾರತದ ಖ್ಯಾತ ನಟಿ ಸಾಯಿ ಪಲ್ಲವಿ (Sai Pallavi) ಅವರನ್ನು ಈ ಪಾತ್ರಕ್ಕೆ ಆಯ್ಕೆ ಮಾಡುವ ಆಲೋಚನೆ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರಿಗೆ ಇತ್ತು ಎನ್ನಲಾಗಿದೆ.

ವರದಿಗಳ ಪ್ರಕಾರ, ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರು ಮಧುಬಾಲಾ ಪಾತ್ರಕ್ಕೆ ಸಾಯಿ ಪಲ್ಲವಿ ಅವರನ್ನು ಆಯ್ಕೆ ಮಾಡಲು ತೀವ್ರ ಆಸಕ್ತಿ ಹೊಂದಿದ್ದರು. ಬಾಲಿವುಡ್‌ಗೆ ಸಾಯಿ ಪಲ್ಲವಿ ಹೊಸ ಮುಖವಾಗಿರುವುದರಿಂದ, ಮಧುಬಾಲಾ ಅವರಂತಹ ಐತಿಹಾಸಿಕ ಪಾತ್ರಕ್ಕೆ ಅವರು ಹೊಸ ಕಳೆ ನೀಡಬಲ್ಲರು ಎಂದು ಬನ್ಸಾಲಿ ಭಾವಿಸಿದ್ದರು. ಆದರೆ, ಮಾತುಕತೆಗಳು ಅಂದುಕೊಂಡಂತೆ ನಡೆಯಲಿಲ್ಲ. ಮೂಲಗಳ ಪ್ರಕಾರ, ಕಾಲ್‌ಶೀಟ್ ಸಮಸ್ಯೆಯಿಂದಾಗಿ ಸಾಯಿ ಪಲ್ಲವಿ ಈ ಬಹುದೊಡ್ಡ ಅವಕಾಶದಿಂದ ಹಿಂದೆ ಸರಿದಿದ್ದಾರೆ ಎನ್ನಲಾಗಿದೆ.

ಮಧುಬಾಲಾ ಬಯೋಪಿಕ್ ಕೈತಪ್ಪಿದರೂ, ಸಾಯಿ ಪಲ್ಲವಿ ಬಾಲಿವುಡ್‌ಗೆ ಭರ್ಜರಿಯಾಗಿಯೇ ಎಂಟ್ರಿ ಕೊಡುತ್ತಿದ್ದಾರೆ. ಆಮಿರ್ ಖಾನ್ ಪುತ್ರ ಜುನೈದ್ ಖಾನ್ ಜೊತೆ ‘ಏಕ್ ದಿನ್’ ಚಿತ್ರದ ಮೂಲಕ ಸಾಯಿ ಪಲ್ಲವಿ ಅವರು ಹಿಂದಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಸುನಿಲ್ ಪಾಂಡೆ ನಿರ್ದೇಶನದ ಈ ರೊಮ್ಯಾಂಟಿಕ್ ಸಿನಿಮಾ ಮೇ 1ರಂದು ಬಿಡುಗಡೆ ಆಗಲಿದೆ.

ಇಷ್ಟೇ ಅಲ್ಲದೆ, ನಿತೇಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ ‘ರಾಮಾಯಣ ಪಾರ್ಟ್ 1’ ಸಿನಿಮಾದಲ್ಲಿ ಸಾಯಿ ಪಲ್ಲವಿ ಅವರು ಸೀತೆಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಣಬೀರ್ ಕಪೂರ್ ರಾಮನಾಗಿ ನಟಿಸುತ್ತಿರುವ ಈ ಬೃಹತ್ ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ (ರಾವಣ), ಸನ್ನಿ ಡಿಯೋಲ್ (ಹನುಮಂತ) ಸೇರಿದಂತೆ ಭಾರತದ ದೊಡ್ಡ ತಾರಾಬಳಗವೇ ಇದೆ.

ಇದನ್ನೂ ಓದಿ: ರಣಬೀರ್, ಸಾಯಿ ಪಲ್ಲವಿ ‘ರಾಮಾಯಣ’ ಫೋಟೋ ಫೇಕ್; ಅಸಲಿ ವಿಷಯ ಬಿಚ್ಚಿಟ್ಟ ನಟ

ಮಧುಬಾಲಾ ಪಾತ್ರದಲ್ಲಿ ಸಾಯಿ ಪಲ್ಲವಿ ಅವರನ್ನು ನೋಡಲಾಗದಿದ್ದರೂ, ಸೀತೆಯ ಪಾತ್ರದಲ್ಲಿ ಅವರ ನಟನೆಯನ್ನು ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ದಕ್ಷಿಣ ಭಾರತದಲ್ಲಿ ಈಗಾಗಲೇ ಮೋಡಿ ಮಾಡಿರುವ ಅವರಿಗೆ ಬಾಲಿವುಡ್ ಪ್ರೇಕ್ಷಕರು ಯಾವ ರೀತಿ ಸ್ವಾಗತ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us