ಸಾರಾ ಅಲಿ ಖಾನ್, ಬಾಲಿವುಡ್ನ ಬೇಡಿಕೆಯ ಯುವನಟಿ. ಮರಸುತ್ತುವ ಪಾತ್ರಗಳ ಜೊತೆಗೆ ಹಾಸ್ಯಮಯ ಪಾತ್ರಗಳು, ಆಗಾಗ್ಗೆ ಗಂಭೀರ ಪಾತ್ರಗಳಲ್ಲಿ ನಟಿಸುತ್ತಾ ಬರುತ್ತಿದ್ದಾರೆ ಸಾರಾ ಅಲಿ ಖಾನ್. ಖ್ಯಾತ ನಟ ಸೈಫ್ ಅಲಿ ಖಾನ್ ಪುತ್ರಿ ಸಾರಾ ಅಲಿ ಖಾನ್, ಪ್ರಸ್ತುತ ತಾಯಿ ಹಾಗೂ ತಮ್ಮನ ಜೊತೆಗೆ ಪ್ರತ್ಯೇಕವಾಗಿ ನೆಲಸಿದ್ದಾರೆ. ತಂದೆಯ ಮನೆಯಲ್ಲಿ ಸಾರಾ ನೆಲೆಸಿಲ್ಲ. ಬಹಳ ಕಷ್ಟಪಟ್ಟು ನಾಯಕಿಯಾದ ಸಾರಾ, ನಟಿಯಾಗಿ ಯಶಸ್ವಿಯೂ ಆಗಿದ್ದಾರೆ. ಉತ್ತಮ ಗಳಿಕೆಯನ್ನೂ ಮಾಡುತ್ತಿದ್ದಾರೆ. ಸಾರಾ ಅಲಿ ಖಾನ್ ಉದ್ಯಮಿಯೂ ಆಗಿದ್ದು ರಿಯಲ್ ಎಸ್ಟೇಟ್ ಮೇಲೆ ಬಂಡವಾಳ ಹೂಡಿದ್ದಾರೆ.
ತಾಯಿ ಅಮೃತ್ ರಾವ್ ಜೊತೆ ನೆಲೆಸಿರುವ ಸಾರಾ ಅಲಿ ಖಾನ್ ಇದೀಗ ತಾಯಿಯ ಜೊತೆಗೆ ಸೇರಿಕೊಂಡು ಬಾಂದ್ರಾನಲ್ಲಿ ಎರಡು ದೊಡ್ಡ ಕಮರ್ಶಿಯಲ್ ಕಚೇರಿ ಪ್ರಾಪರ್ಟಿಗಳನ್ನು ಖರೀದಿ ಮಾಡಿದ್ದಾರೆ. ಎರಡು ಪ್ರಾಪರ್ಟಿಗಳಿಗೆ ಸಾರಾ ಅಲಿ ಖಾನ್ 22 ಕೋಟಿ ರೂಪಾಯಿ ಪಾವತಿ ಮಾಡಿದ್ದಾರೆ. ಈ ಪ್ರಾಪರ್ಟಿ, ಅಮೃತಾ ರಾವ್ ಮತ್ತು ಸಾರಾ ಅಲಿ ಖಾನ್ ಹೆಸರಿನ ಮೇಲಿದೆ. ಮುಂಬೈನ ಐಶಾರಾಮಿ ಮತ್ತು ಬ್ಯುಸಿ ಏರಿಯಾಗಳಲ್ಲಿ ಒಂದಾಗಿರುವ ಅಂಧೇರಿ ವೆಸ್ಟ್ನಲ್ಲಿ ಈ ಕಮರ್ಶಿಯಲ್ ಜಾಗವನ್ನು ಖರೀದಿ ಮಾಡಿದ್ದಾರೆ ಸಾರಾ ಅಲಿ ಖಾನ್.
ಇದನ್ನೂ ಓದಿ:100 ಕೆಜಿ ತೂಕದ ದಡೂತಿ ಸಾರಾ ಅಲಿ ಖಾನ್ ಸಣ್ಣಗೆ ಝೀರೋ ಫಿಗರ್ ಆಗಿದ್ದು ಹೇಗೆ?
ಎರಡೂ ಪ್ರಾಪರ್ಟಿಗಳ ಒಟ್ಟು ಅಳತೆ ಸುಮಾರು 4000 ಚದರ ಅಡಿಗಳಷ್ಟಿದೆ. ಒಂದು ಪ್ರಾಪರ್ಟಿಗೆ 11.13 ಕೋಟಿ ನೀಡಿದ್ದರೆ ಮತ್ತೊಂದಕ್ಕೆ 10.87 ಕೋಟಿ ರೂಪಾಯಿಗಳನ್ನು ನೀಡಿ ನೊಂದಣಿ ಮಾಡಿಸಿಕೊಂಡಿದ್ದಾರೆ. ಕಳೆದ ವರ್ಷ ಜುಲೈ ತಿಂಗಳಲ್ಲಿ ಅದೇ ಬಿಲ್ಡಿಂಗ್ನ ನಾಲ್ಕನೇ ಫ್ಲೋರ್ನಲ್ಲಿರುವ ಆಫೀಸ್ ಕಚೇರಿಯೊಂದನ್ನು ಖರೀದಿ ಮಾಡಿದ್ದರು ಸಾರಾ ಅಲಿ ಖಾನ್. ಆಗ ಆ ಕಚೇರಿಗೆ 9 ಕೋಟಿ ರೂಪಾಯಿ ಹಣ ನೀಡಿದ್ದರು. ದರ ಜೊತೆಗೆ ಮೂರು ಕಾರ್ ಪಾರ್ಕಿಂಗ್ ಸ್ಪಾಟ್ ಅನ್ನು ಸಹ ಖರೀದಿ ಮಾಡಿದ್ದರು.
ಸಾರಾ ಈಗ ಕಚೇರಿ ಖರೀದಿ ಮಾಡಿರುವ ಬಿಲ್ಡಿಂಗ್ನಲ್ಲೇ ಕೆಲವು ದೊಡ್ಡ ಬಾಲಿವುಡ್ ಸೆಲೆಬ್ರಿಟಿಗಳು ಕಮರ್ಶಿಯಲ್ ಸ್ಪೇಸ್ ಖರೀದಿ ಮಾಡಿದ್ದಾರೆ. ಇದೇ ಕಟ್ಟಡದ 21ನೇ ಫ್ಲೋರ್ನಲ್ಲಿ ಅಮಿತಾಬ್ ಬಚ್ಚನ್ ಒಂದು ಕಚೇರಿ ಹೊಂದಿದ್ದು, ಬಾಡಿಗೆಗೆ ನೀಡಿದ್ದಾರೆ. ಇದೇ ಕಟ್ಟಡದಲ್ಲಿ ಬಾಲಿವುಡ್ ಯುವನಟ, ಸಾರಾರ ಗೆಳೆಯ ಕಾರ್ತಿಕ್ ಆರ್ಯನ್ ಸಹ ಕಚೇರಿ ಹೊಂದಿದ್ದು ಈ ಕಚೇರಿಯನ್ನು ಅವರು ಕಳೆದ ತಿಂಗಳಷ್ಟೆ 10.80 ಕೋಟಿಗೆ ಖರೀದಿ ಮಾಡಿದ್ದಾರೆ.
ಬಾಲಿವುಡ್ನ ಹಲವು ನಟ-ನಟಿಯರು ಕಳೆದ ಕೆಲ ವರ್ಷಗಳಲ್ಲಿ ರಿಯಲ್ ಎಸ್ಟೇಟ್ ಮೇಲೆ ಹೆಚ್ಚಿನ ಹೂಡಿಕೆ ಮಾಡುತ್ತಿದ್ದಾರೆ. ಅಜಯ್ ದೇವಗನ್ ಅಂತೂ ಕಳೆದ ಮೂರು ವರ್ಷಗಳಲ್ಲಿ ಸುಮಾರು 200 ಕೋಟಿಗೂ ಹೆಚ್ಚು ಮೌಲ್ಯದ ರಿಯಲ್ ಎಸ್ಟೇಟ್ ಖರೀದಿ ಮಾಡಿದ್ದಾರೆ. ಹೃತಿಕ್ ರೋಷನ್ ಸಹ ಇತ್ತೀಚೆಗೆ ಭಾರಿ ಮೊತ್ತದ ರಿಯಲ್ ಎಸ್ಟೇಟ್ ಖರೀದಿ ಮಾಡಿದ್ದಾರೆ. ಕಂಗನಾ ರನೌತ್ ಸಹ ಕಳೆದ ತಿಂಗಳು 1.90 ಕೋಟಿಗೆ ಮುಂಬೈನ ಬಾಂದ್ರಾನಲ್ಲಿ ಪುಟ್ಟ ಕಚೇರಿ ಖರೀದಿ ಮಾಡಿದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ