ಸೌರವ್ ಗಂಗೂಲಿ ಬಯೋಪಿಕ್​ನಲ್ಲಿ ರಣಬೀರ್ ಬದಲಿಗೆ ಆಯುಷ್ಮಾನ್ ಖುರಾನಾ?

ಆಯುಷ್ಮಾನ್ ಖುರಾನಾ ಅವರು ದೊಡ್ಡ ಮಟ್ಟದ ಜನಪ್ರಿಯತೆ ಪಡೆದಿದ್ದಾರೆ. ‘ಡ್ರೀಮ್ ಗರ್ಲ್​ 2’ ಚಿತ್ರದ ಮೂಲಕ ಅವರು ಗೆಲುವಿನ ಟ್ರ್ಯಾಕ್​ಗೆ ಮರಳಿದ್ದಾರೆ. ಅವರಿಗೆ ಆಫರ್ ಸಂಖ್ಯೆ ಹೆಚ್ಚುತ್ತಿದೆ. ಗಂಗೂಲಿ ಬಯೋಪಿಕ್​ನಲ್ಲಿ ರಣಬೀರ್ ಕಪೂರ್ ಬದಲಿಗೆ ಆಯುಷ್ಮಾನ್ ಅವರನ್ನು ಹೀರೋ ಆಗಿ ಆಯ್ಕೆ ಮಾಡಿಕೊಳ್ಳಲು ತಂಡದವರು ಹೆಚ್ಚಿನ ಉತ್ಸಾಹ ತೋರಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಸೌರವ್ ಗಂಗೂಲಿ ಬಯೋಪಿಕ್​ನಲ್ಲಿ ರಣಬೀರ್ ಬದಲಿಗೆ ಆಯುಷ್ಮಾನ್ ಖುರಾನಾ?
ಆಯುಷ್ಮಾನ್-ಸೌರವ್ ಗಂಗೂಲಿ
Follow us
ರಾಜೇಶ್ ದುಗ್ಗುಮನೆ
|

Updated on: Sep 05, 2023 | 12:07 PM

ಸೌರವ್ ಗಂಗೂಲಿ (Saurav Ganguly) ಅವರು ದೇಶ ಕಂಡ ಮಹಾನ್ ಕ್ರಿಕೆಟರ್. ದಾದಾ ಎಂದೇ ಫೇಮಸ್ ಆದ ಅವರು ಬಿಸಿಸಿಐನ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಹಲವು ದಾಖಲೆಗಳು ಇವರ ಹೆಸರಲ್ಲಿ ಇವೆ. ಸೌರವ್ ಗಂಗೂಲಿ ಬಯೋಪಿಕ್ ಸಿದ್ಧವಾಗುತ್ತಿದೆ. ಈ ಬಯೋಪಿಕ್​ನಲ್ಲಿ ಗಂಗೂಲಿ ಪಾತ್ರದಲ್ಲಿ ರಣಬೀರ್ ಕಪೂರ್ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಈಗ ಹೀರೋ ಬದಲಾಗುವ ಸೂಚನೆ ಸಿಕ್ಕಿದೆ. ರಣಬೀರ್ ಬದಲು ಆಯುಷ್ಮಾನ್ ಖುರಾನಾ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಆಯುಷ್ಮಾನ್ ಖುರಾನಾ ಅವರು ದೊಡ್ಡ ಮಟ್ಟದ ಜನಪ್ರಿಯತೆ ಪಡೆದಿದ್ದಾರೆ. ‘ಡ್ರೀಮ್ ಗರ್ಲ್​ 2’ ಚಿತ್ರದ ಮೂಲಕ ಅವರು ಗೆಲುವಿನ ಟ್ರ್ಯಾಕ್​ಗೆ ಮರಳಿದ್ದಾರೆ. ಅವರಿಗೆ ಆಫರ್ ಸಂಖ್ಯೆ ಹೆಚ್ಚುತ್ತಿದೆ. ಗಂಗೂಲಿ ಬಯೋಪಿಕ್​ನಲ್ಲಿ ರಣಬೀರ್ ಕಪೂರ್ ಬದಲಿಗೆ ಆಯುಷ್ಮಾನ್ ಅವರನ್ನು ಹೀರೋ ಆಗಿ ಆಯ್ಕೆ ಮಾಡಿಕೊಳ್ಳಲು ತಂಡದವರು ಹೆಚ್ಚಿನ ಉತ್ಸಾಹ ತೋರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಈ ಬಗ್ಗೆ ಕೇಳಿದಾಗ ಆಯುಷ್ಮಾನ್ ಅವರು ಒಪ್ಪಿಕೊಂಡಿಲ್ಲ, ಅಲ್ಲಗಳೆಯಲೂ ಇಲ್ಲ.

‘ಡ್ರೀಮ್ ಗರ್ಲ್ 2’ ಗೆಲುವಿನ ಬಳಿಕ ಅನೇಕ ಮಾಧ್ಯಮಗಳಿಗೆ ಆಯುಷ್ಮಾನ್ ಅವರು ಸಂದರ್ಶನ ನೀಡಿದ್ದಾರೆ. ‘ನಾನು ಈ ಬಗ್ಗೆ ಏನನ್ನೂ ಹೇಳಲು ಸಾಧ್ಯವಿಲ್ಲ. ಏನೇ ಆದರೂ ಅದನ್ನು ನಾವು ಅಧಿಕೃತವಾಗಿಯೇ ತಿಳಿಸಬೇಕಾಗುತ್ತದೆ’ ಎಂದಿದ್ದಾರೆ ಆಯುಷ್ಮಾನ್. ಒಂದೊಮ್ಮೆ ಈ ವಿಚಾರ ವದಂತಿಯೇ ಆಗಿದ್ದರೆ ಆಯುಷ್ಮಾನ್ ನೇರವಾಗಿ ಅದನ್ನು ಅಲ್ಲಗಳೆಯುತ್ತಿದ್ದರು. ಆದರೆ, ಅವರು ಹಾಗೆ ಮಾಡಿಲ್ಲ. ಹೀಗಾಗಿ ಅವರ ಮಾತುಗಳು ಸಾಕಷ್ಟು ಕುತೂಹಲ ಮೂಡಿಸಿದೆ.

ಇದನ್ನೂ ಓದಿ: 60 ಕೋಟಿ ರೂಪಾಯಿ ಗಳಿಸಿದ ‘ಡ್ರೀಮ್ ಗರ್ಲ್ 2’: ‘ಗದರ್ 2’ ಅಬ್ಬರದ ನಡುವೆಯೂ ಗೆದ್ದ ಆಯುಷ್ಮಾನ್​

ಇನ್ನು, ‘ಡ್ರೀಮ್ ಗರ್ಲ್ 3’ಗೆ ಸಿದ್ಧತೆ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ. ‘ಡ್ರೀಮ್ ಗರ್ಲ್’ ಹಾಗೂ ‘ಡ್ರೀಮ್ ಗರ್ಲ್​ 2’ ಎರಡೂ ಸಿನಿಮಾ ಹಿಟ್ ಆಗಿರುವುದರಿಂದ ನಿರ್ದೇಶಕ ರಾಜ್ ಶಾಂಡಿಲ್ಯ ಅವರು ಈ ಸರಣಿಯ ಮೂರನೇ ಸಿನಿಮಾ ಮಾಡುತ್ತಾರೆ ಎಂದು ವರದಿ ಆಗಿದೆ. ಈ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಆಗಿಲ್ಲ.

‘ಡ್ರೀಮ್ ಗರ್ಲ್ 2’ ಸಿನಿಮಾ ಈವರೆಗೆ 91 ಕೋಟಿ ರೂಪಾಯಿ ಬಾಚಿಕೊಂಡಿದೆ. ಅನನ್ಯಾ ಪಾಂಡೆ ಮೊದಲಾದವರು ಈ ಚಿತ್ರದಲ್ಲಿ ನಟಿಸಿದ್ದರು. ಈ ಸಿನಿಮಾದಲ್ಲಿ ಹೆಣ್ಣಿನ ಧ್ವನಿಯಲ್ಲಿ ಮಾತನಾಡಿ ಎಲ್ಲರನ್ನೂ ಯಾಮಾರಿಸುವ ವ್ಯಕ್ತಿಯಾಗಿ ಆಯುಷ್ಮಾನ್ ಕಾಣಿಸಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ