60 ಕೋಟಿ ರೂಪಾಯಿ ಗಳಿಸಿದ ‘ಡ್ರೀಮ್ ಗರ್ಲ್ 2’: ‘ಗದರ್ 2’ ಅಬ್ಬರದ ನಡುವೆಯೂ ಗೆದ್ದ ಆಯುಷ್ಮಾನ್​

‘ಗದರ್ 2’ ಸಿನಿಮಾ ಅಬ್ಬರಿಸುತ್ತಿರುವಾಗಲೇ ‘ಡ್ರೀಮ್ ಗರ್ಲ್ 2’ ಸಿನಿಮಾ ಬಿಡುಗಡೆಗೊಂಡರೂ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಸಿನಿಮಾ ಬಿಡುಗಡೆಯಾದ 6 ದಿನಗಳಲ್ಲಿ 60 ಕೋಟಿ ರೂಪಾಯಿ ಬಾಚಿಕೊಂಡಿದೆ. ಇದರಿಂದ ನಟ ಆಯುಷ್ಮಾನ್​ ಖುರಾನಾ ಅವರ ಖಾತೆಗೆ ಮತ್ತೊಂದು ಗೆಲುವು ಸೇರ್ಪಡೆ ಆಗಿದೆ.

60 ಕೋಟಿ ರೂಪಾಯಿ ಗಳಿಸಿದ ‘ಡ್ರೀಮ್ ಗರ್ಲ್ 2’: ‘ಗದರ್ 2’ ಅಬ್ಬರದ ನಡುವೆಯೂ ಗೆದ್ದ ಆಯುಷ್ಮಾನ್​
ಡ್ರೀಮ್​ ಗರ್ಲ್​ 2, ಗದರ್​ 2
Follow us
TV9 Web
| Updated By: ಮದನ್​ ಕುಮಾರ್​

Updated on: Aug 31, 2023 | 3:04 PM

2019ರಲ್ಲಿ ‘ಡ್ರೀಮ್ ಗರ್ಲ್’ ಸಿನಿಮಾ ತೆರೆಕಂಡಿತ್ತು. ನಟ ಆಯುಷ್ಮಾನ್ ಖುರಾನಾ (Ayushmann Khurrana) ಈ ಸಿನಿಮಾದ ಮೂಲಕ ಸಾಕಷ್ಟು ಹೆಸರು ಪಡೆದಿದ್ದರು. ರಾಜ್ ಶಾಂಡಿಲ್ಯ ನಿರ್ದೇಶನದ ಈ ಸಿನಿಮಾಕ್ಕೆ ಏಕ್ತಾ ಕಪೂರ್ ಹಣ ಹೂಡಿದ್ದರು. 2023ರಲ್ಲಿ ಈ ಸಿನಿಮಾದ ಸೀಕ್ವೆಲ್ ಆಗಿ ‘ಡ್ರೀಮ್ ಗರ್ಲ್ 2’ ಚಿತ್ರ ಆಗಸ್ಟ್ 25ರಂದು ತೆರೆಕಂಡಿದೆ. ಈ ಸಿನಿಮಾ 6 ದಿನಗಳಲ್ಲಿ 60 ಕೋಟಿ ರೂಪಾಯಿ ಗಳಿಸಿಕೊಂಡಿದೆ. ಮಂಗಳವಾರ (ಆಗಸ್ಟ್ 29) 5.78 ಕೋಟಿ ರೂಪಾಯಿ ಗಳಿಸಿದ ಈ ಸಿನಿಮಾದ ಬುಧವಾರ (7.75) ಕೋಟಿ ರೂ. ಗಳಿಸಿದೆ. ‘ಡ್ರೀಮ್ ಗರ್ಲ್ 2’ (Dream Girl 2) ಸಿನಿಮಾದಲ್ಲಿ ಆಯುಷ್ಮಾನ್ ಖುರಾನಾ, ಅನನ್ಯಾ ಪಾಂಡೆ, ಪರೇಶ್ ರಾವಲ್, ವಿಜಯ್ ರಾಝ್ ಮೊದಲಾದವರು ನಟಿಸಿದ್ದಾರೆ. ‘ಬಾಲಾಜಿ ಮೋಷನ್ ಪಿಕ್ಚರ್’ ಸಂಸ್ಥೆಯು 35 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಸಿನಿಮಾವನ್ನು ನಿರ್ಮಾಣ ಮಾಡಿದೆ. ಈ ಚಿತ್ರದಲ್ಲಿ ಹಣಕ್ಕಾಗಿ ಪೂಜಾ ಎಂಬ ಹುಡುಗಿಯ ವೇಷ ಧರಿಸುವ ಯುವಕನ ಪಾತ್ರಕ್ಕೆ ಆಯುಷ್ಮಾನ್ ಖುರಾನಾ ಬಣ್ಣ ಹಚ್ಚಿದ್ದಾರೆ.

ಈ ಸಿನಿಮಾದ ಗೆಲುವಿನ ಬಗ್ಗೆ ಎಎನ್​ಐ ಸುದ್ದಿ ಸಂಸ್ಥೆಯೊಂದಿಗೆ ಆಯುಷ್ಮಾನ್​ ಖುರಾನಾ ಮಾತನಾಡಿದ್ದಾರೆ. ‘ಕಳೆದ ಮೂರು ತಿಂಗಳಿನಿಂದ ಸಣ್ಣ ಬಜೆಟ್ ಸಿನಿಮಾಗಳು ಹಣ ಗಳಿಕೆಯಲ್ಲಿ ಯಶಸ್ವಿ ಆಗುತ್ತಿವೆ. ಈ ಮೊದಲು ಬಿಗ್ ಬಜೆಟ್ ಸಿನಿಮಾಗಳು ಮಾತ್ರ ಯಶಸ್ಸು ಕಾಣುತ್ತವೆ ಎಂಬ ಅಲಿಖಿತ ನಿಯಮವಿತ್ತು. ಬಿಗ್ ಬಜೆಟ್ ಸಿನಿಮಾಗಳಾದ ‘ಗದರ್ 2’ ಮತ್ತು ‘ಜವಾನ್​​’ ಸಿನಿಮಾಗಳ ನಡುವೆ ನಮ್ಮ ಸಿನಿಮಾ ತೆರೆಕಂಡು ಅಭಿಮಾನಿಗಳಿಂದ ಮೆಚ್ಚುಗೆಗೆ ಪಾತ್ರವಾಗಿದೆ. ‘ಡ್ರೀಮ್ ಗರ್ಲ್’ ಮತ್ತು ‘ವಿಕ್ಕಿ ಡೋನರ್’ ಸಿನಿಮಾಗಳಲ್ಲಿ ಅನ್ನು ಕಪೂರ್ ಹಾಗೂ ನಾನು ಒಟ್ಟಿಗೆ ಅಭಿನಯಿಸಿದ್ದೆವು. ‘ಡ್ರೀಮ್​ ಗರ್ಲ್​ 2’ ಸಿನಿಮಾದಲ್ಲಿಯೂ ಒಟ್ಟಿಗೆ ನಟಿಸಿದ್ದೇವೆ. ಈ ಎರಡು ಸಿನಿಮಾಗಳು ಗೆದ್ದಿವೆ. ಆದ್ದರಿಂದ ಅವರು ನನ್ನ ಪಾಲಿಗೆ ಲಕ್ಕಿ’ ಎಂದು ಆಯುಷ್ಮಾನ್​ ಖುರಾನಾ ಹೇಳಿದ್ದಾರೆ.

ಇದನ್ನೂ ಓದಿ: ಶಾರುಖ್ ಖಾನ್-ಸನ್ನಿ ಡಿಯೋಲ್ ವೈರತ್ವ ಅಂತ್ಯ; ಮುಕ್ತವಾಗಿ ಮಾತನಾಡಿದ ‘ಗದರ್ 2’ ಹೀರೋ

ಸದ್ಯ ಆಯುಷ್ಮಾನ್​ ಖುರಾನಾ ಅವರು ‘ಬಾಲಾ’ ಸಿನಿಮಾ ನಿರ್ದೇಶಕ ಅಮರ್ ಕೌಶಿಕ್ ಜೊತೆ ಮುಂದಿನ ಸಿನಿಮಾಕ್ಕೆ ತಯಾರಿ ನಡೆಸುತ್ತಿದ್ದಾರೆ. ಈ ಚಿತ್ರಕ್ಕೆ ‘ವೆಂಪೈರ್ಸ್ ಆಫ್ ವಿಜಯನಗರ್’ ಎಂದು ಹೆಸರಿಡಲಾಗಿದೆ. ಈ ಚಿತ್ರದಲ್ಲಿ ಸಮಂತಾ ರುತ್​ ಪ್ರಭು ಅವರು ನಾಯಕಿಯಾಗಿ ನಟಿಸಲಿದ್ದಾರೆ. ಆ ಕಾರಣದಿಂದ ಈ ಸಿನಿಮಾ ಮೇಲೆ ನಿರೀಕ್ಷೆ ಮೂಡಿದೆ.

ಇದನ್ನೂ ಓದಿ: ಅವಕಾಶ ಕೊಟ್ಟರೆ ಭಾರತಕ್ಕೆ ಹೋಗಿ ಸೆಟಲ್ ಆಗುತ್ತೇವೆ ಎಂದ ಪಾಕ್ ಯುವಕರು; ಇದು ‘ಗದರ್ 2’ ಎಫೆಕ್ಟ್

ಆಗಸ್ಟ್ 11ರಂದು ಬಿಡುಗಡೆಯಾದ ‘ಗದರ್ 2’ ಚಿತ್ರವು ಗಳಿಕೆಯಲ್ಲಿ ಎಲ್ಲಾ ದಾಖಲೆಗಳನ್ನು ಮುರಿದಿದೆ. ಶಾರುಖ್ ಖಾನ್ ಅಭಿನಯದ ‘ಜವಾನ್’ ಸಿನಿಮಾ ತೆರೆ ಕಾಣಲು ಸಿದ್ಧವಾಗಿದೆ. ಬುಧವಾರ (ಆಗಸ್ಟ್​ 30) ಅದ್ದೂರಿಯಾಗಿ ಆಡಿಯೋ ಲಾಂಚ್ ಕೂಡ ಮಾಡಲಾಗಿದೆ. ಬಹುತಾರಾಂಗಣ ಹೊಂದಿರುವ ಈ ಸಿನಿಮಾ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ. ಆ ಸಿನಿಮಾ ಸೆಪ್ಟೆಂಬರ್​ 7ರಂದು ಬಿಡುಗಡೆ ಆಗಲಿದೆ. ಆ ಸಿನಿಮಾ ರಿಲೀಸ್​ ಆದ ಬಳಿಕ ‘ಡ್ರೀಮ್ ಗರ್ಲ್ 2’ ಚಿತ್ರದ ಹವಾ ಕಡಿಮೆ ಆಗುವ ಸಾಧ್ಯತೆ ಇದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.