ಒಂದು ನಿಮಿಷಕ್ಕೆ ಒಂದು ಕೋಟಿ ಸಂಭಾವನೆ ಪಡೆಯುವುದಾಗಿ ಹೇಳಿದ ಊರ್ವಶಿ ರೌಟೆಲ್ಲಾ: ಹೌಹಾರಿದ ನೆಟ್ಟಿಗರು
Urvashi Rautela: ಐಟಂ ಹಾಡುಗಳು, ಗ್ಲಾಮರಸ್ ಫೋಟೊಶೂಟ್ಗಳ ಮೂಲಕ ಸದಾ ಸುದ್ದಿಯಲ್ಲಿರುವ ನಟಿ ಊರ್ವಶಿ ರೌಟೆಲ್ಲಾ, ತಾವು ಒಂದು ನಿಮಿಷಕ್ಕೆ ಒಂದು ಕೋಟಿ ರೂಪಾಯಿ ಸಂಭಾವನೆ ಪಡೆಯುವುದಾಗಿ ಹೇಳಿದ್ದಾರೆ. ನಟಿಯ ಹೇಳಿಕೆಯನ್ನು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ.
ನಟಿ ಊರ್ವಶಿ ರೌಟೆಲ್ಲಾ (Urvashi Rautela) ಸಿನಿಮಾಗಳಿಗಿಂತಲೂ ಹೆಚ್ಚಾಗಿ ಫೋಟೊಶೂಟ್, ಜಾಹೀರಾತುಗಳು, ಲೈವ್ ಫರ್ಮಾಮೆನ್ಸ್ಗಳಿಂದ ಸುದ್ದಿಯಾಗಿದ್ದಾರೆ. ಅದರಲ್ಲಿಯೂ ರಿಷಬ್ ಪಂತ್ ಹಿಂದೆ ಬಿದ್ದು ಸಖತ್ ಟ್ರೋಲ್ ಆಗಿದ್ದರು, ಪೆದ್ದು ಪೆದ್ದಾಗಿ ಹೇಳಿಕೆಗಳಿಂದ ಈಗಲೂ ಟ್ರೋಲ್ ಆಗುತ್ತಲೇ ಇರುತ್ತಾರೆ. ಇತ್ತೀಚೆಗೆ ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ತಾವು ಒಂದು ನಿಮಿಷಕ್ಕೆ ಒಂದು ಕೋಟಿ ಚಾರ್ಜ್ ಮಾಡುತ್ತಿರುವುದಾಗಿ ಕೇಳಿದ ಪ್ರಶ್ನೆಗೆ ಹೌದೆಂದಿರುವ ನಟಿ, ನನ್ನಂತೆ ಎಲ್ಲರೂ ದುಬಾರಿ ಸಂಭಾವನೆ ಪಡೆಯಬಹುದು ಎಂದು ಹೇಳಿದ್ದಾರೆ ಸಹ.
ಯೂಟ್ಯೂಬ್ ಚಾನೆಲ್ ಒಂದರ ನಿರೂಪಕ, ‘ನೀವು ಭಾರತದ ಅತಿ ಹೆಚ್ಚು ಸಂಭಾವನೆ ಪಡೆವ ನಟಿ, ಒಂದು ನಿಮಿಷಕ್ಕೆ ಒಂದು ಕೋಟಿ ಚಾರ್ಜ್ ಮಾಡುತ್ತೀರ? ಇದೆಲ್ಲ ಹೇಗೆ ಸಾಧ್ಯವಾಯಿತು, ಇಷ್ಟು ದೊಡ್ಡ ಸಂಭಾವನೆ ಪಡೆಯುತ್ತಿರುವ ಬಗ್ಗೆ ಅಭಿಪ್ರಾಯವೇನು?’ ಎಂದು ಕೇಳಿದ್ದಾರೆ. ಪತ್ರಕರ್ತನ ಮಾತಿಗೆ ಸಮ್ಮತಿ ಸೂಚಿಸಿರುವ ನಟಿ ಊರ್ವಶಿ ರೌಟೆಲ್ಲಾ, ‘ಇದು ಬಹಳ ಒಳ್ಳೆಯದು, ಸ್ವ ಪರಿಶ್ರಮದಿಂದ ಮೇಲೆ ಬಂದ ಪ್ರತಿಯೊಬ್ಬ ನಟ-ನಟಿಯರೂ ಇಂಥಹಾ ಒಂದು ದಿನಗಳನ್ನು ನೋಡಲಿ” ಎಂದಿದ್ದಾರೆ.
ಆದರೆ ಊರ್ವಶಿಯ ಈ ಹೇಳಿಕೆಗೆ ಕೇಳಿ ನೆಟ್ಟಿಗರು ಮತ್ತೆ ಟ್ರೋಲ್ ಮಾಡಲು ಆರಂಭಿಸಿದ್ದಾರೆ. ಒಂದು ನಿಮಿಷಕ್ಕೆ ಒಂದು ಕೋಟಿ ಸಂಭಾವನೆಯನ್ನು ಬಾಲಿವುಡ್ ಟಾಪ್ ನಟಿಯರಾದ ದೀಪಿಕಾ, ಆಲಿಯಾ ಅವರುಗಳೇ ಪಡೆಯುವುದಿಲ್ಲ, ಕೈಯಲ್ಲಿ ಒಂದೂ ಸಿನಿಮಾಗಳಿಲ್ಲದ ಊರ್ವಶಿ ಹೇಗೆ ಒಂದು ನಿಮಿಷಕ್ಕೆ ಒಂದು ಕೋಟಿ ಸಂಭಾವನೆ ಪಡೆಯಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಹೀಗೆಯೇ ಸುಳ್ಳು ಹೇಳಿಕೊಂಡು ಓಡಾಡುವುದರಿಂದ ದೊಡ್ಡ ನಟಿ ಎನಿಸಿಕೊಳ್ಳಲಾಗುವುದಿಲ್ಲ, ಶ್ರಮ ಹಾಕಿ ಕೆಲಸ ಮಾಡಬೇಕು ಎಂದಿದ್ದಾರೆ.
ಇದನ್ನೂ ಓದಿ:ಹೊಸ ಮನೆ ಖರೀದಿಸಿದ ಊರ್ವಶಿ ರೌಟೆಲಾ, ಮನೆಯ ಮೌಲ್ಯ 150 ಕೋಟಿಗೂ ಅಧಿಕ
ಊರ್ವಶಿ ರೌಟೆಲ್ಲಾ ಈವರೆಗೆ ಕಾಣಿಸಿಕೊಂಡಿರುವುದು ಸುಮಾರು 12-13 ಸಿನಿಮಾಗಳಲ್ಲಿ ಮಾತ್ರ. ಅವುಗಳಲ್ಲಿಯೂ ನಾಯಕಿಯಾಗಿ ನಟಿಸಿರುವುದು ಬಹಳ ಕಡಿಮೆ. ಕನ್ನಡದ ‘ಐರಾವತ’ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಊರ್ವಶಿ ಹೆಚ್ಚಾಗಿ ಐಟಂ ಹಾಡುಗಳಲ್ಲಿಯೇ ಕಾಣಿಸಿಕೊಳ್ಳುತ್ತಾರೆ. ಇತ್ತೀಚೆಗಂತೂ ಕೇವಲ ಐಟಂ ಹಾಡುಗಳಿಗೆ ಮಾತ್ರವೇ ಊರ್ವಶಿಯನ್ನು ಸೀಮಿತಗೊಳಿಸಿದಂತಿದೆ ಚಿತ್ರರಂಗ. ಆದರೂ ಊರ್ವಶಿ ತಾವು ಒಂದು ನಿಮಿಷಕ್ಕೆ ಒಂದು ಕೋಟಿ ಚಾರ್ಜ್ ಮಾಡುವುದಾಗಿ ಹೇಳಿ ಆಶ್ಚರ್ಯ ಮೂಡಿಸಿದ್ದಾರೆ.
ಊರ್ವಶಿ ರೌಟೆಲ್ಲಾ ಆಗಾಗ್ಗೆ ಹೀಗೆ ಪೆದ್ದು ಪೆದ್ದು ಹೇಳಿಕೆಗಳಿಂದಾಗಿ ಟ್ರೋಲ್ಗೆ ಗುರಿಯಾಗುತ್ತಿರುತ್ತಾರೆ. ರಿಷಬ್ ಪಂಥ್ ತಮ್ಮ ಹಿಂದೆ ಬಿದ್ದಿದ್ದಾರೆಂದು ಹೇಳಿ ತೀವ್ರ ಟ್ರೋಲ್ಗೆ ಒಳಗಾಗಿದ್ದರು. ರಿಷಬ್ ಆಡುವ ಮ್ಯಾಚ್ಗಳಿಗೆ ಹೋಗುವ ಮೂಲಕ ಪ್ರಚಾರ ಪಡೆದುಕೊಂಡರು. ರಿಷಬ್ ಗೆ ಅಪಘಾತವಾಗಿದ್ದಾಗ ಅವರು ದಾಖಲಾಗಿದ್ದ ಆಸ್ಪತ್ರೆ ಚಿತ್ರವನ್ನು ಹಂಚಿಕೊಂಡಿದ್ದರು.
ಸಿನಿಮಾಗಳ ವಿಷಯಕ್ಕೆ ಬರುವುದಾದರೆ, 2022 ರಲ್ಲಿ ತೆರೆಗೆ ಬಂದಿದ್ದ ‘ದಿ ಲೆಜೆಂಡ್’ ಸಿನಿಮಾದಲ್ಲಿ ಊರ್ವಶಿ ನಾಯಕಿಯಾಗಿ ನಟಿಸಿದ್ದರು. ಆ ಸಿನಿಮಾದಲ್ಲಿ ಸರವಣನ್ ನಾಯಕನಾಗಿ ನಟಿಸಿದ್ದರು. ಆ ಸಿನಿಮಾ ಸಖತ್ ಟ್ರೋಲ್ ಆಗಿತ್ತು. ಅದಾದ ಬಳಿಕ ಯಾವುದೇ ಸಿನಿಮಾದಲ್ಲಿ ಊರ್ವಶಿ ನಾಯಕಿಯಾಗಿ ನಟಿಸಿಲ್ಲ. ತೆಲುಗಿನ ‘ವಾಲ್ಟರ್ ವೀರಯ್ಯ’, ‘ಏಜೆಂಟ್’, ‘ಬ್ರೋ’ ಸಿನಿಮಾಗಳಲ್ಲಿ ಐಟಂ ಹಾಡುಗಳಲ್ಲಿ ಊರ್ವಶಿ ಕಾಣಿಸಿಕೊಂಡಿದ್ದಾರೆ. ತೆಲುಗಿನ ಇನ್ನೂ ಎರಡು ಸಿನಿಮಾಗಳಲ್ಲಿ ಐಟಂ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ