150 ಕೋಟಿಯಿಂದ 350 ಕೋಟಿ ರೂಪಾಯಿಗೆ ಏರಿತು ಶಾರುಖ್ ನಟನೆಯ ‘ಕಿಂಗ್’ ಸಿನಿಮಾ ಬಜೆಟ್

ಶಾರುಖ್ ಖಾನ್ ನಟನೆಯ ಬಹುನಿರೀಕ್ಷಿತ ‘ಕಿಂಗ್’ ಸಿನಿಮಾದ ಬಿಡುಗಡೆಗೆ ಇನ್ನೂ ಸಾಕಷ್ಟು ಸಮಯ ಇದೆ. ಅಷ್ಟರಲ್ಲಾಗಲೇ ಈ ಚಿತ್ರದ ಕುರಿತು ಸಿಕ್ಕಾಪಟ್ಟೆ ಇಂಟರೆಸ್ಟಿಂಗ್ ಮಾಹಿತಿಗಳು ಕೇಳಿಬರಲು ಆರಂಭಿಸಿವೆ. ಈ ಸಿನಿಮಾದ ಬಜೆಟ್ 350 ಕೋಟಿ ರೂಪಾಯಿ ಎಂದು ಹೇಳಲಾಗುತ್ತಿದೆ. ಆ ಕುರಿತು ಇಲ್ಲಿದೆ ಮಾಹಿತಿ..

150 ಕೋಟಿಯಿಂದ 350 ಕೋಟಿ ರೂಪಾಯಿಗೆ ಏರಿತು ಶಾರುಖ್ ನಟನೆಯ ‘ಕಿಂಗ್’ ಸಿನಿಮಾ ಬಜೆಟ್
Shah Rukh Khan

Updated on: Nov 09, 2025 | 2:26 PM

ನಟ ಶಾರುಖ್ ಖಾನ್ (Shah Rukh Khan) ಅವರು ಒಂದು ಗ್ಯಾಪ್ ತೆಗೆದುಕೊಂಡು ‘ಕಿಂಗ್’ ಸಿನಿಮಾ ಮಾಡುತ್ತಿದ್ದಾರೆ. ಬಹಳ ಅದ್ದೂರಿಯಾಗಿ ಈ ಚಿತ್ರವನ್ನು ನಿರ್ಮಿಸಲಾಗುತ್ತಿದೆ. ಸ್ವತಃ ಶಾರುಖ್ ಖಾನ್ ಅವರೇ ಈ ಚಿತ್ರದ ನಿರ್ಮಾಪಕರು. ನೋಡನೋಡುತ್ತಿದ್ದಂತೆಯೇ ಈ ಚಿತ್ರದ ಬಜೆಟ್ ಜಾಸ್ತಿ ಆಗಿದೆ. ವರದಿಗಳ ಪ್ರಕಾರ ಬರೋಬ್ಬರಿ 350 ಕೋಟಿ ರೂಪಾಯಿ ಬಜೆಟ್​​ನಲ್ಲಿ ಸಿನಿಮಾ ನಿರ್ಮಾಣ ಆಗಲಿದೆ. ಇದೇ ಸಿನಿಮಾದಲ್ಲಿ ಶಾರುಖ್ ಖಾನ್ ಅವರ ಮಗಳು ಸುಹಾನಾ ಖಾನ್ ಕೂಡ ನಟಿಸುತ್ತಿದ್ದಾರೆ. ಆ ಕಾರಣಕ್ಕಾಗಿ ಶಾರುಖ್ ಖಾನ್ ಅವರಿಗೆ ‘ಕಿಂಗ್’ ಸಿನಿಮಾ (King Movie) ಮೇಲೆ ವಿಶೇಷ ಪ್ರೀತಿ ಇದೆ.

‘ಪಠಾಣ್’ ಖ್ಯಾತಿಯ ನಿರ್ದೇಶಕ ಸಿದ್ದಾರ್ಥ್ ಆನಂದ್ ಅವರು ‘ಕಿಂಗ್’ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಸತತ ಸೋಲಿನಿಂದ ಕಂಗೆಟ್ಟಿದ್ದ ಶಾರುಖ್ ಖಾನ್ ಅವರಿಗೆ 2023ರಲ್ಲಿ ಬಹು ದೊಡ್ಡ ಸಕ್ಸಸ್ ತಂದುಕೊಟ್ಟಿದ್ದು ಇದೇ ಸಿದ್ದಾರ್ಥ್ ಆನಂದ್. ಹಾಗಾಗಿ ಅವರ ಮೇಲೆ ಶಾರುಖ್ ಖಾನ್ ಅವರಿಗೆ ಸಖತ್ ಭರವಸೆ. ಆ ಕಾರಣದಿಂದ ‘ಕಿಂಗ್’ ಸಿನಿಮಾಗೆ ಹಣವನ್ನು ನೀರಿನಂತೆ ಖರ್ಚು ಮಾಡಲಾಗುತ್ತಿದೆ.

ಈ ಮೊದಲು ‘ಕಿಂಗ್’ ಸಿನಿಮಾಗೆ ಇದ್ದ ಬಜೆಟ್ 150 ಕೋಟಿ ರೂಪಾಯಿ. ಆಗ ಆ ಸಿನಿಮಾವನ್ನು ಸುಜಯ್ ಘೋಷ್ ಅವರು ನಿರ್ದೇಶಿಸುತ್ತಾರೆ ಎಂದು ನಿರ್ಧರಿಸಲಾಗಿತ್ತು. ಬಳಿಕ ನಿರ್ದೇಶನದ ಜವಾಬ್ದಾರಿಯನ್ನು ಸಿದ್ದಾರ್ಥ್ ಆನಂದ್ ಅವರಿಗೆ ನೀಡಲಾಯಿತು. ಅಲ್ಲಿಂದ ಎಲ್ಲವೂ ಬದಲಾಯಿತು. ಸಿದ್ದಾರ್ಥ್ ಆನಂದ್ ಅವರು ಸಿನಿಮಾದ ಕಥೆಯನ್ನು ಸಾಕಷ್ಟು ಬದಲಾಯಿಸಿದರು. ಅದಕ್ಕೆ ತಕ್ಕಂತೆ ಬಜೆಟ್ ಕೂಡ ಹೆಚ್ಚಾಯಿತು.

‘ಬಾಲಿವುಡ್ ಹಂಗಾಮಾ’ ಮಾಡಿರುವ ವರದಿ ಪ್ರಕಾರ, ‘ಕಿಂಗ್’ ಸಿನಿಮಾಗೆ ಈಗ 350 ಕೋಟಿ ರೂಪಾಯಿ ಬಜೆಟ್ ಹಾಕಲಾಗಿದೆ. ಪ್ರಚಾರದ ಖರ್ಚು ಕೂಡ ಇದರಲ್ಲಿ ಸೇರ್ಪಡೆ ಆಗಿದೆ. ಭಾರತದ ಅತಿ ದೊಡ್ಡ ಆ್ಯಕ್ಷನ್ ಸಿನಿಮಾ ಎಂಬ ಖ್ಯಾತಿಗೆ ‘ಕಿಂಗ್’ ಚಿತ್ರ ಪಾತ್ರವಾಗುತ್ತಿದೆ. ಇತ್ತೀಚೆಗಷ್ಟೇ ಈ ಸಿನಿಮಾದ ಟೀಸರ್ ಬಿಡುಗಡೆ ಆಗಿತ್ತು. ಅದರಲ್ಲಿ ಶಾರುಖ್ ಖಾನ್ ಅವರ ಆ್ಯಕ್ಷನ್ ಅಬ್ಬರ ನೋಡಿ ಅಭಿಮಾನಿಗಳು ಅಚ್ಚರಿಪಟ್ಟರು.

ಇದನ್ನೂ ಓದಿ: ಹೊಸ ಅವತಾರದಲ್ಲಿ ಬಂದ ಶಾರುಖ್ ಖಾನ್: ಹುಟ್ಟುಹಬ್ಬಕ್ಕೆ ‘ಕಿಂಗ್’ ಟೀಸರ್ ರಿಲೀಸ್

ಆ್ಯಕ್ಷನ್ ಸಿನಿಮಾ ಮಾಡುವಲ್ಲಿ ಸಿದ್ದಾರ್ಥ್ ಆನಂದ್ ಅವರು ಭೇಷ್ ಎನಿಸಿಕೊಂಡವರು. ಹಾಗಾಗಿ ‘ಕಿಂಗ್’ ಸಿನಿಮಾದಲ್ಲಿ ಕೂಡ ಬರೋಬ್ಬರಿ 6 ಫೈಟಿಂಗ್ ದೃಶ್ಯಗಳು ಇರಲಿವೆ. ಮೂರು ಸಾಹಸ ದೃಶ್ಯಗಳನ್ನು ಸೆಟ್​​ನಲ್ಲಿ ಹಾಗೂ ಇನ್ನುಳಿದ ಮೂರನ್ನು ರಿಯಲ್ ಲೊಕೇಷನ್​​ನಲ್ಲಿ ಮಾಡಲು ಸಿದ್ದಾರ್ಥ್ ಆನಂದ್ ಅವರು ನಿರ್ಧರಿದ್ದಾರೆ. ಈ ಸಿನಿಮಾ 2026ರಲ್ಲಿ ಬಿಡುಗಡೆ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.