ಶಾಹಿದ್ ಕಪೂರ್ (Shahid Kapoor) ನಟನೆಯ ‘ಜೆರ್ಸಿ’ಗೆ (Jersy) ಏಕೋ ಬಿಡುಗಡೆಯ ಮುಹೂರ್ತ ಸರಿಯಾದಂತೆ ಕಾಣುತ್ತಿಲ್ಲ. ಚಿತ್ರಕ್ಕೆ ಮೊದಲಿನಿಂದಲೂ ಒಂದಲ್ಲ ಒಂದು ವಿಘ್ನಗಳು ಎದುರಾಗುತ್ತಲೇ ಇವೆ. ಚಿತ್ರವು ಏಪ್ರಿಲ್ 14ರಂದು ತೆರೆಕಾಣಲಿದೆ ಎಂದು ಘೋಷಿಸಲಾಗಿತ್ತು. ಆದರೆ ಕಾನೂನಾತ್ಮಕ ತೊಡಕಿನಿಂದ ಚಿತ್ರದ ರಿಲೀಸ್ ಮುಂದೂಡಲಾಗಿತ್ತು. ಆದರೆ ಬಾಲಿವುಡ್ ವರದಿಗಳ ಪ್ರಕಾರ ‘ಕೆಜಿಎಫ್ ಚಾಪ್ಟರ್ 2’ ಚಿತ್ರದ ಕ್ರೇಜ್ ಗಮನಿಸಿಯೂ ಚಿತ್ರತಂಡ ಕಡೆಯ ಕ್ಷಣದಲ್ಲಿ ಬಿಡುಗಡೆ ಮುಂದೂಡಿತ್ತು. ಅಂತಿಮವಾಗಿ ಒಂದು ವಾರಗಳ ನಂತರ ಅಂದರೆ ಏಪ್ರಿಲ್ 22ರಂದು ‘ಜೆರ್ಸಿ’ ತೆರೆಕಾಣಲಿದೆ ಎಂದು ಘೋಷಿಸಲಾಗಿದೆ. ಆದರೆ ದೇಶದಲ್ಲಿ ಇನ್ನೂ ‘ಕೆಜಿಎಫ್ ಚಾಪ್ಟರ್ 2’ ಹವಾ ಜೋರಾಗಿದೆ. ಅದರಲ್ಲೂ ಉತ್ತರ ಭಾರತದಲ್ಲಿ ಜನರು ಮುಗಿಬಿದ್ದು ಚಿತ್ರವನ್ನು ವೀಕ್ಷಿಸುತ್ತಿದ್ದಾರೆ. ಪರಿಣಾಮವಾಗಿ ಈಗಾಗಲೇ ಚಿತ್ರವು 250 ಕೋಟಿ ಕ್ಲಬ್ ಸೇರಿದೆ. ಈ ಹಿನ್ನೆಲೆಯಲ್ಲಿ ‘ಜೆರ್ಸಿ’ ಚಿತ್ರತಂಡ ಮತ್ತೆ ಗೊಂದಲದಲ್ಲಿದೆಯಾ ಎಂಬ ಅನುಮಾನ ಮೂಡಿದೆ. ಕಾರಣ, ಈ ಬಗ್ಗೆ ಶಾಹಿದ್ ಕಪೂರ್ ನೀಡಿರುವ ಹೇಳಿಕೆ. ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಶಾಹಿದ್ ಕಪೂರ್, ಬಿಡುಗಡೆಯ ದಿನಾಂಕವನ್ನು ಖಚಿತಪಡಿಸಿಕೊಳ್ಳಲು ಪ್ರತಿದಿನವೂ ನಿರ್ಮಾಪಕರಿಗೆ ಕರೆಮಾಡುತ್ತೇನೆ ಎಂದಿದ್ದಾರೆ.
‘ಜೆರ್ಸಿ’ ಚಿತ್ರವು ಈ ಮೊದಲು 2021ರ ಡಿಸೆಂಬರ್ 31ರಂದು ತೆರೆ ಕಾಣಬೇಕಿತ್ತು. ಆದರೆ ಕೊರೊನಾ ಕಾರಣದಿಂದ ಚಿತ್ರತಂಡ ಹಿಂದೆ ಸರಿದಿತ್ತು. ಆಮಿರ್ ಖಾನ್ ನಟನೆಯ ‘ಲಾಲ್ ಸಿಂಗ್ ಛಡ್ಡಾ’ ಏಪ್ರಿಲ್ 14ರಂದು ‘ಕೆಜಿಎಫ್ ಚಾಪ್ಟರ್ 2’ ದಿನವೇ ರಿಲೀಸ್ ಆಗುವುದಾಗಿ ಘೋಷಿಸಿತ್ತು. ಆದರೆ ಆಮಿರ್ ಚಿತ್ರದ ಕೆಲಸಗಳು ಪೂರ್ಣಗೊಳ್ಳದ ಕಾರಣ ರಿಲೀಸ್ನಿಂದ ಹಿಂದೆ ಸರಿದರು. ಹೀಗಾಗಿ ಆ ಜಾಗದಲ್ಲಿ ‘ಜೆರ್ಸಿ’ ರಿಲೀಸ್ ಆಗುವುದಾಗಿ ಹೇಳಿತ್ತು. ಆದರೆ ಅದೇ ಸಮಯದಲ್ಲಿ ಕಾನೂನಾತ್ಮಕ ತೊಡಕು, ‘ಕೆಜಿಎಫ್ ಚಾಪ್ಟರ್ 2’ ಕಾರಣದಿಂದ ಮತ್ತೆ ಒಂದು ವಾರಗಳ ಕಾಲ ಚಿತ್ರದ ಬಿಡುಗಡೆಯನ್ನು ಮುಂದೂಲಾಗಿತ್ತು.
ಈಗ ‘ಜೆರ್ಸಿ’ ಚಿತ್ರತಂಡ ಪ್ರಚಾರದಲ್ಲಿ ಭಾಗಿಯಾಗಿದೆ. ಈ ಸಂದರ್ಭದಲ್ಲಿ ಮಾತನಾಡುತ್ತಾ ನಾಯಕ ಶಾಹಿದ್ ಕಪೂರ್, ನಿರ್ಮಾಪಕರಿಗೆ ದಿನವೂ ಕರೆ ಮಾಡಿ ನಿಗದಿತ ದಿನಾಂಕದಂದೇ ಚಿತ್ರ ರಿಲೀಸ್ ಆಗಲಿದೆಯೇ ಎಂದು ಖಚಿತಪಡಿಸಿಕೊಳ್ಳುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ‘‘ಈಗಾಗಲೇ ಎರಡು ಬಾರಿ ಮುಂದೂಡಲ್ಪಟ್ಟಿದೆ. ಜನರು ಮತ್ತೊಂದು ಅವಕಾಶ ನೀಡುತ್ತಾರೆ ಎಂದು ನನಗನ್ನಿಸುವುದಿಲ್ಲ. ಹೀಗಾಗಿ ನಿರ್ಮಾಪಕರಿಗೆ ದಿನವೂ ಕರೆ ಮಾಡಿ ಎಲ್ಲವೂ ಸರಿಯಿದೆಯೇ? ನಿಗದಿತ ದಿನದಂದೇ ಚಿತ್ರ ತೆರೆಕಾಣಲಿದೆಯೇ? ಅಥವಾ ಮತ್ತೆ ಸಿನಿಮಾ ಮುಂದೂಡಲ್ಪಡುತ್ತದೆಯೇ? ಎಂದು ಕೇಳಿ ಬಿಡುಗಡೆಯನ್ನು ಪಕ್ಕಾ ಮಾಡಿಕೊಳ್ಳುತ್ತೇನೆ’’ ಎಂದಿದ್ದಾರೆ ಶಾಹಿದ್.
‘ಜೆರ್ಸಿ’ ಚಿತ್ರ ಬಹಳ ಆಪ್ತವಾದ ಚಿತ್ರ ಎಂದಿರುವ ಶಾಹಿದ್, ಇದುವರೆಗಿನ ಕಾಯುವಿಕೆ ವ್ಯರ್ಥವಾಗುವುದಿಲ್ಲ ಎಂದು ಅಭಿಮಾನಿಗಳಿಗೆ ಭರವಸೆಯನ್ನೂ ನೀಡಿದ್ದಾರೆ. 2019ರಲ್ಲಿ ತೆಲುಗಿನಲ್ಲಿ ತೆರೆಕಂಡಿದ್ದ ಇದೇ ಹೆಸರಿನ ಸಿನಿಮಾದ ರಿಮೇಕ್ ಆಗಿದೆ ಈ ಚಿತ್ರ. ಶಾಹಿದ್ಗೆ ನಾಯಕಿಯಾಗಿ ಮೃಣಾಲ್ ಠಾಕೂರ್ ನಟಿಸಿದ್ದಾರೆ. ಬಾಕ್ಸಾಫೀಸ್ನಲ್ಲಿ ಚಿತ್ರಕ್ಕೆ ಹೇಗೆ ಪ್ರತಿಕ್ರಿಯೆ ಸಿಗಬಹುದು ಎಂಬ ಕುತೂಹಲ ಸದ್ಯ ಚಿತ್ರಪ್ರೇಮಿಗಳದ್ದು.
ಇದನ್ನೂ ಓದಿ: ವಿಮಲ್ ಜಾಹೀರಾತಿನಲ್ಲಿ ನಟಿಸಿದ ಅಕ್ಷಯ್ ಕುಮಾರ್ಗೆ ಜನರಿಂದ ಭಾರಿ ವಿರೋಧ; ಕ್ಷಮೆ ಕೇಳಿ ಹಿಂದೆ ಸರಿದ ನಟ
ವಿವೇಕ್ ಅಗ್ನಿಹೋತ್ರಿ ಮುಂದಿನ ಚಿತ್ರ ‘ದಿ ಡೆಲ್ಲಿ ಫೈಲ್ಸ್’ ವಿರೋಧಿಸಿದ ಮಹಾರಾಷ್ಟ್ರ ಸಿಖ್ ಅಸೋಸಿಯೇಷನ್; ಕಾರಣವೇನು?