ಸೆಟ್ಟೇರಿತು ಶಾರುಖ್- ನಯನತಾರಾ ನಟನೆಯ ನೂತನ ಚಿತ್ರ; ಬಣ್ಣಹಚ್ಚಲಿದ್ದಾರಾ ಪ್ರಿಯಾಮಣಿ, ರಾಣಾ ದಗ್ಗುಬಾಟಿ?

| Updated By: shivaprasad.hs

Updated on: Sep 05, 2021 | 10:21 AM

Shahrukh Khan: ಶಾರುಖ್ ಖಾನ್ ಹಾಗೂ ನಯನತಾರಾ ನಟಿಸುತ್ತಿರುವ, ಆಟ್ಲಿ ನಿರ್ದೇಶನದ ಬಹುನಿರೀಕ್ಷಿತ ಚಿತ್ರ ಚಿತ್ರೀಕರಣ ಪ್ರಾರಂಭಿಸಿದೆ. ಚಿತ್ರತಂಡಕ್ಕೆ ಭಾರತದ ಖ್ಯಾತ ನಟ ಖಳನಾಯಕನ ಸ್ಥಾನದಲ್ಲಿ ಹಾಗೂ ಕನ್ನಡ ಮೂಲದ ನಟಿಯೋರ್ವರು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುತ್ತಿವೆ ಮೂಲಗಳು. ಅದರ ಕುರಿತು ಮಾಹಿತಿ ಇಲ್ಲಿದೆ.

ಸೆಟ್ಟೇರಿತು ಶಾರುಖ್- ನಯನತಾರಾ ನಟನೆಯ ನೂತನ ಚಿತ್ರ; ಬಣ್ಣಹಚ್ಚಲಿದ್ದಾರಾ ಪ್ರಿಯಾಮಣಿ, ರಾಣಾ ದಗ್ಗುಬಾಟಿ?
ನಯನತಾರಾ, ಶಾರುಖ್ ಖಾನ್
Follow us on

ಬಾಲಿವುಡ್​ ಖ್ಯಾತ ನಟ ಶಾರುಖ್ ಖಾನ್ ಇತ್ತೀಚೆಗಷ್ಟೇ ‘ಪಠಾಣ್’ ಚಿತ್ರದ ಚಿತ್ರೀಕರಣದಲ್ಲಿದ್ದಾರೆ ಎಂದು ಸುದ್ದಿಯಾಗಿತ್ತು. ಇದೀಗ ಹೊಸ ಅಪ್ಡೇಟ್ ಒಂದು ಲಭ್ಯವಾಗಿದ್ದು, ಅವರು ತಮ್ಮ ನೂತನ ಚಿತ್ರದ ಚಿತ್ರೀಕರಣವನ್ನೂ ಪ್ರಾರಂಭಿಸಿದ್ದಾರೆ. ಇನ್ನೂ ಹೆಸರಿಡದ ಈ ಚಿತ್ರವನ್ನು ತಮಿಳಿನ ಖ್ಯಾತ ನಿರ್ದೇಶಕ ಆಟ್ಲಿ ನಿರ್ದೇಶನ ಮಾಡುತ್ತಿದ್ದಾರೆ. ಲೇಡಿ ಸೂಪರ್​ಸ್ಟಾರ್ ಎಂದೇ ಅಭಿಮಾನಿಗಳಿಂದ ಕರೆಯಲ್ಪಡುವ ದಕ್ಷಿಣ ಭಾರತದ ಖ್ಯಾತ ನಟಿ ನಯನತಾರಾ ಈ ಚಿತ್ರದಲ್ಲಿ ಶಾರುಖ್​ಗೆ ಜೋಡಿಯಾಗಿ ನಟಿಸುತ್ತಿದ್ದಾರೆ.

ಇಂಡಿಯನ್ ಎಕ್ಸ್​ಪ್ರೆಸ್ ವರದಿ ಮಾಡಿರುವ ಪ್ರಕಾರ, ಶಾರುಖ್ ಹಾಗೂ ನಯನತಾರಾ ನಟನೆಯ ನೂತನ ಚಿತ್ರ ಪುಣೆಯಲ್ಲಿ ಈಗಾಗಲೇ ಚಿತ್ರೀಕರಣ ಆರಂಭಿಸಿ ಕೆಲ ದಿನಗಳು ಕಳೆದಿವೆ. ಶಾರುಖ್ ಕಳೆದ ವಾರ ಚಿತ್ರತಂಡವನ್ನು ಸೇರಿಕೊಂಡಿದ್ದರೆ, ನಯನತಾರಾ ಕೆಲ ದಿನಗಳ ಹಿಂದಷ್ಟೇ ಆಗಮಿಸಿದ್ದಾರೆ. ಹಾಗೆಯೇ ಮೂಲಗಳ ಪ್ರಕಾರ ಸಿನಿ ಅಭಿಮಾನಿಗಳಿಗೆ ಅಚ್ಚರಿಯ ಹಾಗೂ ಸಂತಸದ ಸುದ್ದಿಯೊಂದು ಕೂಡ ಲಭ್ಯವಾಗಿದೆ. ಬಾಹುಬಲಿ ಸೇರಿದಂತೆ ಅನೇಕ ತೆಲುಗು, ಹಿಂದಿ, ತಮಿಳು ಚಿತ್ರಗಳ ಮೂಲಕ ಭಾರತದಾದ್ಯಂತ ಮನೆಮಾತಾಗಿರುವ ಪ್ರತಿಭಾವಂತ ನಟ ರಾಣಾ ದಗ್ಗುಬಾಟಿ ಈ ಚಿತ್ರದಲ್ಲಿ ಖಳನಾಯಕನಾಗಲಿದ್ದಾರೆ ಎಂಬ ಮಾಹಿತಿ ಕೇಳಿ ಬಂದಿದ್ದು, ಚಿತ್ರತಂಡವನ್ನು ಕೆಲ ಸಮಯದ ನಂತರ ಸೇರಿಕೊಳ್ಳಲಾಗಿದ್ದಾರೆ ಎನ್ನಲಾಗಿದೆ. ಚಿತ್ರತಂಡ ಪುಣೆಯಲ್ಲಿ ಹತ್ತು ದಿನಗಳ ಚಿತ್ರೀಕರಣ ಪೂರ್ಣಗೊಳಿಸಿ ಎರಡನೇ ಶೆಡ್ಯೂಲ್​ಗೆ ಮುಂಬೈಗೆ ತೆರಳಲಿದೆ.

ಶಾರುಖ್ ಖಾನ್ ಕೊನೆಯದಾಗಿ ‘ಜೀರೋ’ ಚಿತ್ರದಲ್ಲಿ ಅನುಷ್ಕಾ ಶರ್ಮ ಹಾಗೂ ಕತ್ರಿನಾ ಕೈಫ್ ಅವರೊಂದಿಗೆ ಬಣ್ಣ ಹಚ್ಚಿದ್ದರು. ಆದರೆ ಆ ಚಿತ್ರ ಸೋಲು ಕಂಡಿತ್ತು. ಹಾಗಾಗಿ ತಮ್ಮ ನೂತನ ಚಿತ್ರಗಳ ಕುರಿತು ಅವರು ಕಾಳಜಿ ವಹಿಸಿದ್ದಾರೆ. ಆಟ್ಲಿ ನಿರ್ದೇಶನದ ಆಕ್ಷನ್ ಮಾದರಿಯ ಈ ಚಿತ್ರದಲ್ಲಿ ಪ್ರಿಯಾಮಣಿ, ಸಾನ್ಯಾ ಮಲ್ಹೋತ್ರಾ ಕೂಡ ಬಣ್ಣ ಹಚ್ಚಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಕನ್ನಡ ಮೂಲದ ನಟಿ ಪ್ರಿಯಾಮಣಿ ಪುಣೆಯ ಸೆಟ್​ ಸಮೀಪ ಕಾಣಿಸಿಕೊಂಡಿದ್ದು, ಇದಕ್ಕೆ ಪುಷ್ಟಿ ನೀಡಿದೆ. ಈ ಕುರಿತು ಚಿತ್ರತಂಡ ಇನ್ನಷ್ಟೇ ಅಧಿಕೃತ ಮಾಹಿತಿ ನೀಡಬೇಕಿದೆ.

ಶನಿವಾರ, ರಮೇಶ್ ಬಾಲ ಎಂಬುವವರು ಆಟ್ಲಿ ನಿರ್ದೇಶನದ ಕುರಿತು ಟ್ವೀಟ್ ಮಾಡಿ ಅಪ್ಡೇಟ್ ನೀಡಿದ್ದಾರೆ. ಜೊತೆಗೆ ಚಿತ್ರತಂಡಕ್ಕೆ ಶುಭಾಶಯಗಳನ್ನೂ ಕೋರಿದ್ದಾರೆ. ಆ ಟ್ವೀಟ್ ಇಲ್ಲಿದೆ.

ಶಾರುಖ್ ಖಾನ್ ದೀಪಿಕಾ ಪಡುಕೋಣೆ ಹಾಗೂ ಜಾನ್ ಅಬ್ರಹಾಂ ಅವರೊಂದಿಗೆ ಕಾಣಿಕೊಳ್ಳುತ್ತಿರುವ ‘ಪಠಾಣ್’ ಚಿತ್ರದ ಕುರಿತು ಸಾಕಷ್ಟು ನಿರೀಕ್ಷೆ ಇದೆ. ‘ಯಶ್ ರಾಜ್ ಫಿಲ್ಮ್ಸ್’ ಬ್ಯಾನರ್​ನಲ್ಲಿ ಈ ಚಿತ್ರ ತಯಾರಾಗುತ್ತಿದೆ.

ಇದನ್ನೂ ಓದಿ:

‘ಉರಿ’ ಸಿನಿಮಾದ ಚೆಲುವೆ ಯಾಮಿ ಗೌತಮ್​ ಫಿಟ್ನೆಸ್​ ಹಿಂದಿದೆ ಎರಡು ಗುಟ್ಟುಗಳು​

Tokyo Paralympics: ಭಾರತಕ್ಕೆ 5ನೇ ಚಿನ್ನ: ಬ್ಯಾಡ್ಮಿಂಟನ್ ಫೈನಲ್​ನಲ್ಲಿ ಕೃಷ್ಣ ನಗರ್​ಗೆ ರೋಚಕ ಗೆಲುವು

(Shahrukh and Nayantara starts Atlee s new film in Pune and some big names are rumored to join team)

Published On - 10:18 am, Sun, 5 September 21