ಸಾಮಾಜಿಕ ಜಾಲತಾಣಕ್ಕೂ ಶಿಲ್ಪಾ ಕಮ್​ಬ್ಯಾಕ್; ಪೋಸ್ಟ್ ಮೂಲಕ ವಿರೋಧಿಗಳ ಬಾಯ್ಮುಚ್ಚಿಸಿದ ರಾಜ್ ಕುಂದ್ರಾ ಪತ್ನಿ

| Updated By: shivaprasad.hs

Updated on: Aug 21, 2021 | 6:06 PM

Shilpa Shetty: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ‘ಸೂಪರ್ ಡಾನ್ಸರ್ 4’ ಶೋಗೆ ಕಮ್​ಬ್ಯಾಕ್ ಮಾಡಿದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಿಗೂ ಮರಳಿದ್ದಾರೆ. ತಮ್ಮ ಚಿತ್ರಗಳೊಂದಿಗೆ ಆತ್ಮವಿಶ್ವಾಸದ ನುಡಿಗಳನ್ನೂ ಅವರು ಹಂಚಿಕೊಂಡಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಸಾಮಾಜಿಕ ಜಾಲತಾಣಕ್ಕೂ ಶಿಲ್ಪಾ ಕಮ್​ಬ್ಯಾಕ್; ಪೋಸ್ಟ್ ಮೂಲಕ ವಿರೋಧಿಗಳ ಬಾಯ್ಮುಚ್ಚಿಸಿದ ರಾಜ್ ಕುಂದ್ರಾ ಪತ್ನಿ
ಶಿಲ್ಪಾ ಶೆಟ್ಟಿ (Credits: Shilpa Shetty /Instagram)
Follow us on

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಬಂಧನದ ನಂತರ ಮೊದಲ ಬಾರಿಗೆ ತಮ್ಮ ಚಿತ್ರವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಅಶ್ಲೀಲ ಚಿತ್ರ ತಯಾರಿಕೆ ಹಾಗೂ ಹಂಚಿಕೆಯ ಆರೋಪದ ಮೇಲೆ ರಾಜ್ ಕುಂದ್ರಾರನ್ನು ಮುಂಬೈ ಪೊಲೀಸರು ಬಂಧಿಸಿದ್ದು, ಸದ್ಯ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ. ಪತಿಯ ಬಂಧನದಿಂದ ಆಘಾತಗೊಂಡಿದ್ದ ಶಿಲ್ಪಾ ಶೆಟ್ಟಿ, ಸಾಮಾಜಿಕ ಜಾಲತಾಣಗಳಿಂದ ದೂರ ಉಳಿದಿದ್ದರು. ಇತ್ತೀಚೆಗೆ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಶುಭಾಶಯಗಳನ್ನಷ್ಟೇ ಹಂಚಿಕೊಂಡಿದ್ದರು. ಪ್ರಕರಣಕ್ಕೂ ಮೊದಲು ಜಾಲತಾಣಗಳಲ್ಲಿ ಸಾಕಷ್ಟು ಆಕ್ಟೀವ್ ಇರುತ್ತಿದ್ದ ಅವರು, ಇದ್ದಕ್ಕಿದ್ದಂತೆ ಮೌನವಾಗಿದ್ದರು. ಈಗ ಶಿಲ್ಪಾ ಕಮ್​ಬ್ಯಾಕ್ ಮಾಡಿದ್ದು, ಆತ್ಮವಿಶ್ವಾಸದ ನುಡಿಗಳ ಮೂಲಕ ಟೀಕಾಕಾರರಿಗೆ ಉತ್ತರ ನೀಡಿದ್ದಾರೆ.

ಶಿಲ್ಪಾ ಹಂಚಿಕೊಂಡ ಪೋಸ್ಟ್​ನಲ್ಲೇನಿದೆ?
ಶಿಲ್ಪಾ ಶೆಟ್ಟಿ ಫೊಟೊ ಶೂಟ್ ಮಾಡಿಸಿಕೊಂಡ ಚಿತ್ರಗಳನ್ನು ಹಂಚಿಕೊಂಡಿದ್ದು, ಅದರಲ್ಲಿ ಅವರು ಸೀರೆಯುಟ್ಟು ಮಿಂಚುತ್ತಿದ್ದಾರೆ. ಇದಕ್ಕೆ ಸುಂದರ ಕ್ಯಾಪ್ಶನ್ ನೀಡಿರುವ ಶಿಲ್ಪಾ, ‘ಅಡೆತಡೆಗಳನ್ನು ಎದುರಿಸಿ ಎತ್ತರಕ್ಕೇರಲು ನಿರ್ಧರಿಸುವ ಮಹಿಳೆಗಿಂತ ಶಕ್ತಿಶಾಲಿಯಾದುದು ಮತ್ತೊಂದಿಲ್ಲ’ ಎಂದು ಬರೆದುಕೊಂಡಿದ್ದಾರೆ. ಪತಿಯ ಬಂಧನದ ಘಟನೆಯಿಂದ ಹೊರಬರಲು ನಿರ್ಧರಿಸಿದ ಅವರು ಖ್ಯಾತ ರಿಯಾಲಿಟಿ ಶೋ ‘ಸೂಪರ್ ಡಾನ್ಸರ್ 4’ರ ಜಡ್ಜ್ ಆಗಿ ಮುಂದುವರೆಯಲು ಒಪ್ಪಿಕೊಂಡಿದ್ದರು.

ಶಿಲ್ಪಾ ಹಂಚಿಕೊಂಡ ಪೋಸ್ಟ್ ಇಲ್ಲಿದೆ:

ಸೂಪರ್ ಡಾನ್ಸರ್ 4ರಲ್ಲಿ ಸಿಕ್ಕ ಸ್ವಾಗತ ನೋಡಿ ಶಿಲ್ಪಾ ಕಣ್ಣೀರು:

ಒಂದು ವಿರಾಮದ ನಂತರ ಶಿಲ್ಪಾ ಅವರು ಸೂಪರ್ ಡಾನ್ಸರ್ 4ಗೆ ಮರುಪ್ರವೇಶ ಮಾಡಿದಾಗ ತಮಗೆ ಸಿಕ್ಕ ಸ್ವಾಗತ ನೋಡಿ ಭಾವುಕರಾದರು. ಆಗ ಸಹ ನಿರ್ಣಾಯಕರಾದ ನಿರ್ದೇಶಕ ಅನುರಾಗ್ ಬಸು ಹಾಗೂ ಗೀತಾ ಕಪೂರ್ ಶಿಲ್ಪಾ ಅವರನ್ನು ಸಮಾಧಾನಪಡಿಸಿದರು. ಈ ಮೊದಲು ಅನುರಾಗ್ ಬಸು ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ‘‘ಶಿಲ್ಪಾ ಅವರ ಅನುಪಸ್ಥಿತಿ ಬಹಳ ಕಾಡುತ್ತದೆ’’ ಎಂದಿದ್ದರು.

ಇತ್ತೀಚೆಗೆ ಶೋದ  ಪ್ರೊಮೊ ಒಂದರಲ್ಲಿ ಶಿಲ್ಪಾ ಝಾನ್ಸಿ ರಾಣಿ ಲಕ್ಷ್ಮೀ ಬಾಯಿ ಅವರ ಕಥೆ ಆಧರಿಸಿ ಬಾಲಕಿಯೊಬ್ಬಳು ನೃತ್ಯ ಪ್ರದರ್ಶನ ಮಾಡಿದ್ದಕ್ಕೆ ಶಿಲ್ಪಾ ಅವರ ಪ್ರತಿಕ್ರಿಯೆಯನ್ನು ತೋರಿಸಲಾಗಿತ್ತು. ಶಿಲ್ಪಾ ಶೆಟ್ಟಿ ಝಾನ್ಸಿ ರಾಣಿಯ ಬಗ್ಗೆ ಮಾತನಾಡುತ್ತಾ, ‘‘ನಾನು ಪ್ರತಿ ಬಾರಿ ಝಾನ್ಸಿ ರಾಣಿಯ ಬಗ್ಗೆ ಕೇಳಿದಾಗ ಸಾಕಷ್ಟು ವಿಚಾರಗಳು ತಲೆಯಲ್ಲಿ ಬರುತ್ತವೆ. ಇಂದಿಗೂ ಮಹಿಳೆಯರು ತಮ್ಮ ಹಕ್ಕುಗಳಿಗಾಗಿ ಹೋರಾಡಬೇಕಿದೆ. ಗಂಡ ಸತ್ತ ನಂತರದಲ್ಲಿ, ತಮ್ಮ ಅಸ್ತಿತ್ವಕ್ಕಾಗಿ ಮಹಿಳೆಯರು ಹೋರಾಡಬೇಕಾದ ಪರಿಸ್ಥಿತಿ ಇದೆ. ಎಲ್ಲವನ್ನೂ ಧೈರ್ಯದಿಂದ ಎದುರಿಸಿದ ಸಾಕಷ್ಟು ಮಹಿಳೆಯರು ಭಾರತದ ಇತಿಹಾಸದಲ್ಲಿ ಸಿಗುತ್ತಾರೆ. ಅಂಥ ರಾಷ್ಟ್ರದಿಂದ ನಾವು ಬಂದಿದ್ದೇವೆ ಎನ್ನುವ ಹೆಮ್ಮೆ ನನಗಿದೆ. ಯಾವುದೇ ಸನ್ನಿವೇಶವಿದ್ದರೂ, ನಾವು ಮಹಿಳೆಯರು ಹೋರಾಡಬಲ್ಲ ಶಕ್ತಿಯನ್ನು ಹೊಂದಿದ್ದೇವೆ’ ಎಂದಿದ್ದರು. ಅವರ ಈ ಮಾತು ಪ್ರಸ್ತುತದ ಘಟನೆಗಳಿಗೆ ತಳುಕು ಹಾಕಿಕೊಂಡು ಸಂಚಲನ ಮೂಡಿಸಿತ್ತು.

ಇದನ್ನೂ ಓದಿ:

ಅಕ್ಷರಾ- ಜೀಶಾನ್ ನಡುವೆ ಕಿತ್ತಾಟ; ಪಕ್ಕದಲ್ಲೇ ಇದ್ದರೂ ತಲೆಕೆಡಿಸಿಕೊಳ್ಳದೇ ರೊಟ್ಟಿ ತಟ್ಟಿದ ಶಮಿತಾ ಶೆಟ್ಟಿ

ಕುತೂಹಲ ಮೂಡಿಸಿದ ‘ಮೇಡ್ ಇನ್ ಬೆಂಗಳೂರು’ ಟೀಸರ್; ಹೊಸಬರ ಪ್ರಯತ್ನಕ್ಕೆ ಅನಂತ್‌ನಾಗ್, ಸಾಯಿಕುಮಾರ್ ಸಾಥ್

(Shipa Shetty shared her new photos with inspirational caption praised by fans)