ಚಿತ್ರರಂಗಕ್ಕೆ ಡ್ರಗ್ಸ್ ಎಂಬುದು ಕಪ್ಪುಚುಕ್ಕೆ ಆಗಿದೆ. ಪ್ರತಿ ಬಾರಿ ರೇವ್ ಪಾರ್ಟಿ ಮೇಲೆ ದಾಳಿ ನಡೆದಾಗ ಯಾರಾದರೊಬ್ಬರು ಸೆಲೆಬ್ರಿಟಿಗಳು ಸಿಕ್ಕಿ ಬೀಳುತ್ತಾರೆ. ಈಗ ಬಾಲಿವುಡ್ನ ಖ್ಯಾತ ನಟಿ ಶ್ರದ್ಧಾ ಕಪೂರ್ (Shraddha Kapoor) ಅವರ ಸಹೋದರ ಸಿದ್ಧಾಂತ್ ಕಪೂರ್ ಅವರು ಈ ಕೇಸ್ನಲ್ಲಿ ಸಿಲುಕಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಡ್ರಗ್ಸ್ ಪಾರ್ಟಿ (Bengaluru Drugs Bust) ಬಯಲಿಗೆ ಬಂದಿದ್ದು, ಅನೇಕರನ್ನು ವಶಕ್ಕೆ ಪಡೆಯಲಾಗಿದೆ. ಸ್ಟಾರ್ ಹೋಟೆಲ್ವೊಂದರಲ್ಲಿ ಪಾರ್ಟಿ ನಡೆಯುತ್ತಿದ್ದಾಗ ಪೊಲೀಸರು ದಾಳಿ ಮಾಡಿದ್ದಾರೆ. ಈ ಪಾರ್ಟಿಯಲ್ಲಿ ಸಿದ್ಧಾಂತ್ ಕಪೂರ್ ಇರುವುದು ತಿಳಿದುಬಂದಿದೆ. ಅವರನ್ನು ಕೂಡ ವಶಕ್ಕೆ ಪಡೆಯಲಾಗಿದ್ದು, ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ. ಈ ವಿಚಾರ ಕೇಳಿ ಶ್ರದ್ಧಾ ಕಪೂರ್ ಫ್ಯಾನ್ಸ್ ಅಚ್ಚರಿಪಟ್ಟಿದ್ದಾರೆ. ಸಿದ್ಧಾಂತ್ ಕಪೂರ್ ಡ್ರಗ್ಸ್ ಕೇಸ್ (Siddhanth Kapoor Drugs Case) ಯಾವ ಮಟ್ಟಕ್ಕೆ ಹೋಗಲಿದೆ ಎಂಬ ಕೌತುಕ ಮೂಡಿದೆ.
ಬೆಂಗಳೂರು ಡ್ರಗ್ಸ್ ಪಾರ್ಟಿಯಲ್ಲಿ ಸಿಕ್ಕಿಬಿದ್ದಿರುವ ಸಿದ್ಧಾಂತ್ ಕಪೂರ್ ಅವರದ್ದು ಫಿಲ್ಮಿ ಹಿನ್ನೆಲೆಯ ಕುಟುಂಬ. ಅವರ ತಂದೆ ಶಕ್ತಿ ಕಪೂರ್ ಅವರು ಬಾಲಿವುಡ್ನಲ್ಲಿ ಜನಪ್ರಿಯ ನಟ. ಚಿತ್ರರಂಗದಲ್ಲಿ ಶಕ್ತಿ ಕಪೂರ್ ಅವರ ಅನುಭವ ಅಪಾರ. ಸಿದ್ಧಾಂತ್ ಅವರ ಸಹೋದರಿ ಶ್ರದ್ಧಾ ಕಪೂರ್ ಅವರು ಈಗಾಗಲೇ ಹಿಂದಿ ಚಿತ್ರರಂಗದಲ್ಲಿ ತಮ್ಮ ಸಾಮರ್ಥ್ಯ ಏನು ಎಂಬುದನ್ನು ಸಾಬೀತುಪಡಿಸಿದ್ದಾರೆ. ಬಣ್ಣದ ಲೋಕದಲ್ಲಿ ಸಿದ್ಧಾಂತ್ ಕಪೂರ್ ಕೂಡ ಸಕ್ರಿಯರಾಗಿದ್ದಾರೆ. ಅದರ ನಡುವೆ ಅವರು ಡ್ರಗ್ಸ್ ಸಹವಾಸ ಮಾಡಿರುವುದರಿಂದ ಸಂಕಷ್ಟ ಎದುರಾಗಿದೆ.
ನಟನೆ ಮತ್ತು ನಿರ್ದೇಶನದಲ್ಲಿ ಸಿದ್ಧಾಂತ್ ಕಪೂರ್ಗೆ ಆಸಕ್ತಿ:
ಶಕ್ತಿ ಕಪೂರ್ ಅವರ ಮಗ ಎಂಬ ಕಾರಣಕ್ಕೆ ಸಿದ್ಧಾಂತ್ ಕಪೂರ್ ಅವರಿಗೆ ಬಣ್ಣದ ಲೋಕದಲ್ಲಿ ಸುಲಭವಾಗಿ ಅವಕಾಶ ಸಿಕ್ಕಿತು. ಆದರೆ ನಟನೆಗಿಂತಲೂ ಮೊದಲು ಅವರು ಆಯ್ಕೆ ಮಾಡಿಕೊಂಡಿದ್ದು ನಿರ್ದೇಶನದ ವಿಭಾಗವನ್ನು. 2006ರಲ್ಲಿ ಬಂದ ‘ಭಾಗಂ ಭಾಗ್’ ಚಿತ್ರಕ್ಕೆ ಅವರು ಸಹಾಯಕ ನಿರ್ದೇಶಕನಾಗಿದ್ದರು. ‘ಚುಪ್ ಚುಪ್ಕೇ’, ‘ಭೂಲ್ ಭುಲಯ್ಯ’, ‘ಡೋಲ್’ ಮುಂತಾದ ಸಿನಿಮಾಗಳಿಗೂ ಅವರು ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದರು.
ನಟನಾಗಿಯೂ ಸಿದ್ಧಾಂತ್ ಕಪೂರ್ ಅವರು ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ ದೊಡ್ಡ ಮಟ್ಟದಲ್ಲಿ ಅವರಿಗೆ ಜನಪ್ರಿಯತೆ ಸಿಕ್ಕಿಲ್ಲ. ‘ಹೆಲೋ ಚಾರ್ಲಿ’, ‘ಅಗ್ಲಿ’, ‘ಜಝ್ಬಾ’, ‘ಹಸೀನಾ ಪಾರ್ಕರ್’ ಸೇರಿ ಹಲವು ಸಿನಿಮಾಗಳಲ್ಲಿ ಅವರು ಬಣ್ಣ ಹಚ್ಚಿದ್ದಾರೆ. ವೆಬ್ ಸಿರೀಸ್ ಹಾಗೂ ಮ್ಯೂಸಿಕ್ ವಿಡಿಯೋದಲ್ಲೂ ಕಾಣಿಸಿಕೊಂಡ ಅನುಭವ ಅವರಿಗೆ ಇದೆ. ಆಗೆಲ್ಲ ಹೆಚ್ಚು ಸುದ್ದಿಯಾಗದ ಅವರು ಈಗ ಡ್ರಗ್ಸ್ ಕೇಸ್ ವಿಚಾರದಲ್ಲಿ ಕುಖ್ಯಾತಿ ಪಡೆಯುವಂತಾಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.